
ಬೆಂಗಳೂರು(ಫೆ.23): ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಹೇಗೆ ರಾಶಿ ರಾಶಿ ರನ್ ಕಲೆಹಾಕುತ್ತಿದ್ದಾರೋ, ಭಾರತೀಯ ದೇಸಿ ಕ್ರಿಕೆಟ್'ನಲ್ಲಿ ಕೊಹ್ಲಿಯಷ್ಟೇ ಸೊಗಸಾಗಿ ಆಡುತ್ತಿರುವ ಆಟಗಾರ ಕರ್ನಾಟಕದ ಮಯಾಂಕ್ ಅಗರ್'ವಾಲ್. ಶತಕ ಬಾರಿಸುವುದನ್ನು ಹವ್ಯಾಸ ಮಾಡಿಕೊಂಡಿರುವ ಮಯಾಂಕ್, 2017-18ರ ಋತುವನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಂಡಿದ್ದಾರೆ. ಪ್ರತಿ ಇನ್ನಿಂಗ್ಸ್ ನಂತರ ಟೀಂ ಇಂಡಿಯಾ ಕದ ತಟ್ಟುತ್ತಿದ್ದಾರೆ.
ಒಂದು ಋತುವಿನಲ್ಲಿ ಈ ಮಟ್ಟಿಗಿನ ಯಶಸ್ಸು ಸಾಧಿಸಲು ಕೇವಲ ಅದೃಷ್ಟವೊಂದು ಜತೆಗಿದ್ದರೆ ಸಾಲದು, ಅಪಾರ ಪ್ರಮಾಣದ ಪರಿಶ್ರಮವೂ ಬೇಕು. ಯಶಸ್ಸಿನ ಗುಟ್ಟೇನು ಎನ್ನುವುದನ್ನು ಸ್ವತಃ ಮಯಾಂಕ್ ಹಾಗೂ ಅವರ ವೈಯಕ್ತಿಕ ಕೋಚ್ ಮುರಳೀಧರ್ ಬಿಚ್ಚಿಟ್ಟಿದ್ದಾರೆ. ‘ಕನ್ನಡಪ್ರಭ’ದೊಂದಿಗೆ ಮಾಹಿತಿ ಹಂಚಿಕೊಂಡಿರುವ ಮಯಾಂಕ್ ಹಾಗೂ ಮುರಳಿಧರ್, ನಾಗಾಲೋಟದ ಹಿಂದಿರುವ ಪರಿಶ್ರಮ, ತಯಾರಿ ಎಂತದ್ದು ಎನ್ನುವುದನ್ನು ವಿವರಿಸಿದ್ದಾರೆ.
ವೈಫಲ್ಯವೇ ಸ್ಫೂರ್ತಿ: ಭಾರತ ತಂಡದಲ್ಲಿ ಮಯಾಂಕ್'ಗಿನ್ನೂ ಅವಕಾಶ ಸಿಗದಿದ್ದರೂ, ಭಾರತೀಯ ಕ್ರಿಕೆಟ್'ನಲ್ಲಿ ಮಯಾಂಕ್ ಹೆಸರು ಹೊಸದೇನಲ್ಲ. ಅಂಡರ್-19 ದಿನಗಳಿಂದಲೂ ಸದ್ದು ಮಾಡುತ್ತಿರುವ ಆಟಗಾರ ಆತ. ಐಪಿಎಲ್'ನಲ್ಲಿ ಆರ್'ಸಿಬಿ ಪರ ಆಡುವಾಗ ಗೇಲ್'ರನ್ನೇ ಮೀರಿಸುವಂತೆ ಬ್ಯಾಟ್ ಮಾಡಿದ್ದನ್ನು ಅಭಿಮಾನಿಗಳು ಮರೆತಿಲ್ಲ. ಮಯಾಂಕ್ ಮೇಲೆ ನಿರೀಕ್ಷೆಗಳು ಹೆಚ್ಚಾದ್ದಾಗ, ಅದನ್ನು ಉಳಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ‘ಬ್ಯಾಟಿಂಗ್ ತಂತ್ರದ ಬಗ್ಗೆ ಮಯಾಂಕ್ ಅತಿಯಾಗಿ ಗಮನ ಹರಿಸಲು ಆರಂಭಿಸಿದರು. ದಿಢೀರ್ ಯಶಸ್ಸಿನ ಬಳಿಕ, ಅದನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದು ಎಲ್ಲರಿಗೂ ನೋವು ನೀಡಿತು. ಆ ಸಂದರ್ಭದಲ್ಲಿ ಕೇವಲ ತಾಂತ್ರಿಕತೆಯೊಂದೇ ಅಗತ್ಯವಲ್ಲ. ಇದನ್ನು ಮೀರಿದ ಅಂಶಗಳಿವೆ. ಅದರ ಹುಡುಕಾಟದಲ್ಲಿ ನಾವು ತೊಡಗಿದೆವು’ ಎಂದು ಮುರಳೀಧರ್ ಹೇಳಿದರು.
‘ಒಂದೆರಡು ಋತುಗಳಲ್ಲಿ ಉತ್ತಮ ಆಟವಾಡದಿದ್ದರೆ ಆತ ಕೆಟ್ಟ ಆಟಗಾರನಾಗುವುದಿಲ್ಲ. ಅದೇ ರೀತಿ ಒಮ್ಮೆ ಉತ್ತಮವಾಗಿ ಆಡಿದರೆ ಶ್ರೇಷ್ಠ ಕ್ರಿಕೆಟಿಗ ಎನಿಸಿಕೊಳ್ಳಲು ಸಹ ಆಗದು. ದೈಹಿಕ ಕ್ಷಮತೆ ಜತೆ ಮಾನಸಿಕ ಸಮತೋಲನ ಸಹ ಮುಖ್ಯ. ತಾಂತ್ರಿಕತೆ ಜತೆ ಮನಸನ್ನು ಹತೋಟಿಗೆ ತೆಗೆದುಕೊಳ್ಳುವತ್ತ ಹೆಚ್ಚಿನ ಗಮನ ಹರಿಸಿದ್ದು ನೆರವಾಯಿತು. ಪ್ರತಿ ಬಾರಿಯೂ ತನಗೆ ತಾನೇ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ, ಅದಕ್ಕೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಸಫಲರಾಗಿದ್ದೇ ಯಶಸ್ಸಿಗೆ ಕಾರಣ’ ಎಂದು ಮುರಳೀಧರ್ ವಿವರಿಸಿದರು.
ಸ್ಥಿರತೆಗೆ ಮೊದಲ ಆದ್ಯತೆ: ‘ನಾನು ಕಳೆದ ಋತುಗಳಲ್ಲಿ ರನ್ ಗಳಿಸುತ್ತಿದ್ದೆ. ಆದರೆ ಸ್ಥಿರತೆ ಇರಲಿಲ್ಲ. ಭಾರತ ‘ಎ’ ತಂಡದೊಂದಿಗೆ ನ್ಯೂಜಿಲೆಂಡ್'ಗೆ ತೆರಳಿದ್ದಾಗ ಕೋಚ್ ದ್ರಾವಿಡ್ ನನಗೆ ಮಾನಸಿಕವಾಗಿ ಸದೃಢನಾಗಲು ಸಲಹೆ ನೀಡಿದ್ದರು. ಈ ಬಾರಿ ಅವಕಾಶ ಕಳೆದು ಕೊಳ್ಳಬಾರದು ಎಂದು ಋತುವಿಗೂ ಮುನ್ನ ನಿರ್ಧರಿಸಿದೆ. ಅದೇ ನಿಟ್ಟಿನಲ್ಲಿ ನನ್ನ ಕೋಚ್ ಮುರಳೀಧರ್ ಜತೆ ಕಾರ್ಯ ಆರಂಭಿಸಿದೆ’ ಎಂದು ಮಯಾಂಕ್ ತಿಳಿಸಿದರು.
ಧ್ಯಾನ, ಓಟದ ಸಹಾಯ: ಮಾನಸಿಕ ಸಮತೋಲನ ಕಂಡುಕೊಳ್ಳಲು ಧ್ಯಾನ ಮಾಡುತ್ತೇನೆ. ಜತೆಗೆ ಕ್ರೀಡಾಂಗಣದಲ್ಲಿ ಗಂಟೆಗಳ ಕಾಲ ಓಡುತ್ತೇನೆ. ಏಕಾಂಗಿಯಾಗಿ ಓಡುತ್ತಿರುವಾಗ ಮನಸನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯ. ನನ್ನ ಸಾಮರ್ಥ್ಯಕ್ಕೆ ನಾನೇ ಸವಾಲು ಹಾಕಿಕೊಳ್ಳುತ್ತೇನೆ. ಪ್ರತಿ ಬಾರಿ ಹೆಚ್ಚಿನ ಯಶಸ್ಸು ಕಾಣಬೇಕು ಎನ್ನುವ ಛಲ ನನ್ನನ್ನು ಇಲ್ಲಿವರೆಗೂ ಕರೆದು ಎಂದು ಮಯಾಂಕ್ ಹೇಳಿದರು.
2017-18 ಋತುವಿನಲ್ಲಿ ಮಯಾಂಕ್:
ರಣಜಿ ಟ್ರೋಫಿ
ಪಂದ್ಯ: ೦8
ರನ್: 1160
ಮುಷ್ತಾಕ್ ಅಲಿ ಟಿ2೦
ಪಂದ್ಯ: 09
ರನ್: 258
ವಿಜಯ್ ಹಜಾರೆ
ಪಂದ್ಯ: 06
ರನ್: 552
ಮಯಾಂಕ್ ಹೇಳಿದ್ದೇನು?
* ತಾಂತ್ರಿಕತೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ, ನನ್ನ ಸಾಮರ್ಥ್ಯ ನಂಬಿ ಆಡಿದೆ.
* ಪಂದ್ಯಕ್ಕೆ ತೆರಳುವ ಮುನ್ನವೇ ಪಂದ್ಯ ಪರಿಸ್ಥಿತಿಯಲ್ಲಿ ಅಭ್ಯಾಸ ಮಾಡಿದೆ.
* ಆ್ಯಸ್ಟ್ರೋ ಟರ್ಫ್, ಸಿಮೆಂಟ್, ಮಣ್ಣು ಹಾಗೂ ಒದ್ದೆ ಪಿಚ್'ಗಳ ಮೇಲೆ ತಯಾರಿ ನಡೆಸಿದೆ
* ಈ ಹಿಂದೆಯೂ ರನ್ ಗಳಿಸುತ್ತಿದ್ದೆ, ಆದರೆ ಈ ರೀತಿ ಸ್ಥಿರತೆ ಕಾಪಾಡಿಕೊಂಡಿರಲಿಲ್ಲ
ಮುರಳೀಧರ್ ಹೇಳಿದ್ದೇನು?
* ಮಯಾಂಕ್ ತನಗೆ ತಾನೇ ಪ್ರಶ್ನೆಗಳನ್ನು ಕೇಳಿಕೊಂಡು, ಉತ್ತರ ಹುಡುಕುತ್ತಾರೆ
* ತಂಡದೊಂದಿಗೆ ಅಭ್ಯಾಸ ಬಳಿಕ, ಅಕಾಡೆಮಿಯಲ್ಲಿ ಪ್ರತಿ ದಿನ 3 ಗಂಟೆ ಅಭ್ಯಾಸ
* ದೈಹಿಕ ಕ್ಷಮತೆ ಜತೆ ಮಾನಸಿಕ ಸಮತೋಲನ ಕಾಪಾಡಿಕೊಳ್ಳುವ ಪ್ರಯತ್ನ ಸಫಲ
* ಹಿಂದಿನ ವೈಫಲ್ಯವೇ ಈ ಋತುವಿನ ಯಶಸ್ಸಿಗೆ ಮೆಟ್ಟಿಲು
------
- ಸ್ಪಂದನ್ ಕಣಿಯಾರ್, ಕನ್ನಡಪ್ರಭ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.