ಕೆಎಲ್ ರಾಹುಲ್ ಹಾಗೂ ದೀಪಕ್ ಹೂಡ ಹಾಫ್ ಸೆಂಚುರಿಯಿಂದ ಲಖನೌ ಸೂಪರ್ ಜೈಂಟ್ಸ್ 196 ರನ್ ಸಿಡಿಸಿದೆ. ಗೆಲುವಿನ ಅಲೆಯಲ್ಲಿರುವ ರಾಜಸ್ಥಾನ ಈ ಟಾರ್ಗೆಟ್ ಚೇಸ್ ಮಾಡುತ್ತಾ?
ಲಖನೌ(ಏ.27) ಐಪಿಎಲ್ 2024 ಟೂರ್ನಿಯಲ್ಲಿ ಪ್ಲೇ ಆಫ್ ಹಾದಿ ಕಠಿಣವಾಗುತ್ತಿದೆ. ಇದೀಗ ಲಖನೌ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಹೋರಾಟ ಪ್ಲೇ ಆಫ್ ವಿಚಾರದಲ್ಲಿ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಹಾಗೂ ದೀಪಕ್ ಹೂಡ ಹೋರಾಟದಿಂದ 196 ರನ್ ಸಿಡಿಸಿದೆ. ಇದೀಗ 197 ರನ್ ಟಾರ್ಗೆಟ್ ಚೇಸ್ ಮಾಡುವ ವಿಶ್ವಾಸದಲ್ಲಿರುವ ರಾಜಸ್ಥಾನ ರಾಯಲ್ಸ್ ಪ್ಲೇ ಆಫ್ ಸ್ಥಾನ ಖಚಿತಪಡಿಸುವ ಉತ್ಸಾಹದಲ್ಲಿದೆ.
ಬ್ಯಾಟಿಂಗ್ ಇಳಿದ ಲಖನೌ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಕ್ವಿಂಟನ್ ಡಿಕಾಕ್ 8 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ನಾಯಕ ಕೆಎಲ್ ರಾಹುಲ್ ಹೋರಾಟ ತಂಡಕ್ಕೆ ನೆರವಾಯಿತು. ರಾಹುಲ್ ಹೋರಾಟ ಆರಂಭಿಸಿದರೆ ಲಖನೌ ತಂಡ ಮಾರ್ಕಸ್ ಸ್ಟೊಯ್ನಿಸ್ ವಿಕೆಟ್ ಕಳೆದುಕೊಂಡಿತು. ಸ್ಟೊಯ್ನಿಸ್ ಶೂನ್ಯಕ್ಕೆ ಔಟಾದರು. 11ರನ್‌ಗೆ ಎಲ್‌ಎಸ್‌ಜಿ ಪ್ರಮುಖ 2 ವಿಕೆಟ್ ಕಳೆದುಕೊಂಡಿತು.
ದೀಪಕ್ ಹೂಡ ಹಾಗೂ ಕೆಎಲ್ ರಾಹುಲ್ ಜೊತೆಯಾಟ ಲಖನೌ ತಂಡದ ಆತಂಕ ದೂರ ಮಾಡಿತು. ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಈ ಜೋಡಿ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿತು. ಕೆಎಲ್ ರಾಹುಲ್ ಹಾಗೂ ಹೂಡ ಇಬ್ಬರೂ ಅರ್ಧಶತಕ ಪೂರೈಸಿದರು. ಹೂಡ 31 ಎಸೆತದಲ್ಲಿ 50 ರನ್ ಸಿಡಿಸಿ ಔಟಾದರು. ಆದರೆ ರಾಹುಲ್ ಹೋರಾಟ ಮುಂದುವರಿಯಿತು.
ರಾಹುಲ್ ಹಾಗೂ ದೀಪಕ್ ಹೂಡ 115 ರನ್ ಜೊತೆಯಾಟ ನೀಡಿದರು. ಈ ಮೂಲಕ ಲಖನೌ ತಂಡದ ಪರ ಗರಿಷ್ಠ ರನ್ ಜೊತೆಯಾಟ ನೀಡಿದ 3ನೇ ಜೋಡಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಲಖನೌ ಸೂಪರ್ ಜೈಂಟ್ಸ್ ಪರ ಗರಿಷ್ಠ ರನ್ ಜೊತೆಯಾಟ
ಕ್ವಿಂಟನ್ ಡಿಕಾಕ್-ಕೆಎಲ್ ರಾಹುಲ್: 210 * ರನ್ vs ಕೆಕೆಆರ್(2022)
ಕ್ವಿಂಟನ್ ಡಿಕಾಕ್-ಕೆಎಲ್ ರಾಹುಲ್: 134 ರನ್ vs ಸಿಎಸ್‌ಕೆ (2024)
ಕೆಎಲ್ ರಾಹುಲ್-ದೀಪಕ್ ಹೂಡ: 115 ರನ್ vs ರಾಜಸ್ಥಾನ(2024)
ರಾಹುಲ್ 76 ರನ್ ಸಿಡಿಸಿ ಔಟಾದರು. ನಿಕೋಲಸ್ ಪೂರನ್ 11 ರನ್ ಸಿಡಿಸಿ ಔಟಾದರು. ಅಯುಷ್ ಬದೋನಿ ಅಜೇಯ 18 ರನ್ ಹಾಗೂ ಕ್ರುನಾಲ್ ಪಾಂಡ್ಯ ಅಜೇಯ 15 ರನ್ ಸಿಡಿಸಿದರು. ಈ ಮೂಲಕ ಲಖನೌ 5 ವಿಕೆಟ್ ನಷ್ಟಕ್ಕೆ 196 ರನ್ ಸಿಡಿಸಿತು.