ಕೆಪಿಎಲ್ 2018: ಗೆಲುವಿನ ಓಟ ಮುಂದುವರಿಸಿತು ರಾಬಿನ್ ಉತ್ತಪ್ಪ ಸೈನ್ಯ

By Web DeskFirst Published Aug 17, 2018, 10:35 PM IST
Highlights

ಕೆಪಿಎಲ್ ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಗೆಲುವಿನ ಓಟ ಮುಂದುವರಿಸಿದೆ. ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಬಳ್ಳಾರಿ ಟಸ್ಕರ್ಸ್ ನಡುವಿನ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಬೆಂಗಳೂರು(ಆ.17): ಬಳ್ಳಾರಿ ಟಸ್ಕರ್ಸ್ ವಿರುದ್ಧ ಕೆಪಿಎಲ್ ಲೀಗ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ 7 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ರಾಬಿನ್ ಉತ್ತಪ್ಪ ಸೈನ್ಯ ಗೆಲುವಿನ ಓಟ ಮುಂದುವರಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಬೆಂಗಳೂರು ಬ್ಲಾಸ್ಟರ್ಸ್, ಉದ್ಘಾಟನಾ ಪಂದ್ಯದ ರೀತಿಯ ಆರಂಭ ಪಡೆಯಲಿಲ್ಲ. ಕೆಬಿ ಪವನ್ ಹಾಗೂ ನಾಯಕ ರಾಬಿನ್ ಉತ್ತಪ್ಪ ಕೇವಲ 1 ರನ್‌ಗೆ ಔಟಾದರು. ಪವನ್ ದೇಶಪಾಂಡೆ ಶೂನ್ಯ ಸುತ್ತಿದರೆ, ಎಂ ವಿಶ್ವಾನಾಥನ್ 14 ರನ್ ಸಿಡಿಸಿ ಔಟಾದರು.

ಮನೋಜ್ ಎಸ್ 17 ಹಾಗೂ ಚೇತನ್ ವಿಲಿಯಮ್ 22 ರನ್ ಸಿಡಿ ನಿರ್ಗಮಿಸಿದರು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಅರ್ಶದೀಪ್ ಸಿಂಗ್ ಆಸರೆಯಾದರು. ಅರ್ಶದೀಪ್ 68 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಭರತ್ ದೇವರಾಜ್ 19, ಅಭಿಷೇಕ್ ಭಟ್ ಹಾಗೂ ಮಿತ್ರಕಾಂತ್ ಯಾದವ್ ಅಜೇಯ 6 ರನ್ ಸಿಡಿಸಿದರು. ಹೀಗಾಗಿ ಬೆಂಗಳೂರು ಬ್ಲಾಸ್ಟರ್ಸ್ 8 ವಿಕೆಟ್ ನಷ್ಟಕ್ಕೆ 168 ರನ್ ಸಿಡಿಸಿತು. 

169 ರನ್ ಗುರಿ ಬೆನ್ನಟ್ಟಿದ ಬಳ್ಳಾರಿ ಟಸ್ಕರ್ಸ್ ದಿಟ್ಟ ಹೋರಾಟ ನೀಡಿತು. ಆರಂಭಿಕ ರೋಹನ್ ಕದಮ್ 31 ರನ್‌ಗಳ ಕಾಣಿಕೆ ನೀಡಿದರು.  ಆದರೆ ಸ್ವಪ್ನಿಲ್ ಯಲವೆ, ದೇವದತ್ ಪಡಿಕಲ್, ನಾಯಕ ಸಿಎಂ ಗೌತಮ್ ಆಸರೆಯಾಗಲಿಲ್ಲ. ಅಭಿನವ್ ಮನೋಹರ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬಳ್ಳಾರಿ ಟಸ್ಕರ್ಸ್ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿತು. ಅಭಿನವ್ 61 ರನ್ ಸಿಡಿಸಿ ಔಟಾಗುತ್ತಿದ್ದಂತೆ ಬಳ್ಳಾರಿ ಮತ್ತೆ ಕುಸಿತ ಕಂಡಿತು. 

ನಿಗಧಿತ 20 ಓವರ್‌ಗಳಲ್ಲಿ ಬಳ್ಳಾರಿ ಟಸ್ಕರ್ಸ್ 8 ವಿಕೆಟ್ ನಷ್ಟಕ್ಕೆ 161 ರನ್ ಸಿಡಿಸಿತು. ಈ ಮೂಲಕ 7 ರನ್‌ಗಳ ಸೋಲು ಕಂಡಿತು. ಸತತ 2ನೇ ಗೆಲುವು ಸಾಧಿಸಿದ ಬೆಂಗಳೂರು ತಂಡ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡಿದೆ.
 

click me!