ಪುರುಷರ ಹಾಕಿ ಟೀಂ ಮುಖ್ಯ ಕೋಚ್ ಹರೇಂದ್ರ ಸಿಂಗ್ ಅವರಿಗೆ ಹಾಕಿ ಇಂಡಿಯಾ ಕೊಕ್ ನೀಡಿದೆ. ಹಾಗಾದ್ರೆ ಈಗ ಹಾಕಿ ಟೀಂ ಕೋಚ್ ಯಾರು..?
ನವದೆಹಲಿ, [ಜ.09]: ರಾಷ್ಟ್ರೀಯ ಪುರುಷರ ಹಾಕಿ ತಂಡದ ಮುಖ್ಯ ಕೋಚ್ ಸ್ಥಾನದಿಂದ ಹರೇಂದ್ರ ಸಿಂಗ್ ಅವರನ್ನು ಕೆಳಗಿಳಿಸಲಾಗಿದೆ ಎಂದು ಹಾಕಿ ಇಂಡಿಯಾ ಬುಧವಾರ ಘೋಷಿಸಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ಅಂದಿನ ಕೋಚ್ ಆಗಿದ್ದ ಜೋರ್ಡ್ ಮರಿಜ್ನೆ ಅವರು ಮಹಿಳಾ ಹಾಕಿ ತಂಡದ ಕೋಚ್ ಆಗಿ ನೇಮಕವಾದಾಗ ಹರೇಂದ್ರ ಸಿಂಗ್ ಅವರನ್ನು ಪುರಷರ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು.
ಆದರೆ ಈಗ ಅವರನ್ನು ಮತ್ತೆ ರಾಷ್ಟ್ರೀಯ ಜೂನಿಯರ್ ತಂಡದ ಕೋಚ್ ಆಗಿ ನೇಮಿಸಲಾಗಿದೆ ಎಂದು ಆಡಳಿತ ಮಂಡಳಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ್ದು ಮುಂದಿನ ಕೋಚ್ ನೇಮಕವಾಗುವವರೆಗೂ ಮಧ್ಯಂತರ ಕೋಚ್ ಆಗಿ ಹಾಕಿ ಇಂಡಿಯಾ ಹೈ ಪರ್ಫಾಮೆನ್ಸ್ ನಿರ್ದೇಶಕ ಡೇವಿಡ್ ಆನ್ ಮತ್ತು ಪ್ರಸ್ತುತ ವಿಶ್ಲೇಷಣಾ ಕೋಚ್ ಕ್ರಿಸ್ ಸಿರಿಯಲ್ಲೊ ಕಾರ್ಯ ನಿರ್ವಹಿಸಲಿದ್ದಾರೆ.
ಹರೇಂದ್ರ ಸಿಂಗ್ ಅವರು ಯುವ ಆಟಗಾರರಿಗೆ ಅತ್ಯುತ್ತಮ ತರಬೇತಿ ನೀಡುತ್ತಾರೆ. ಹಾಗಾಗಿ ಅವರನ್ನು ಮತ್ತೆ ಜೂನಿಯರ್ ತಂಡದ ಕೋಚ್ ಆಗಿ ನೇಮಿಸಲಾಗಿದೆ ಎಂದು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.