
ಲಂಡನ್(ಮೇ.04): ಇಂಗ್ಲೆಂಡ್ ಕೌಂಟಿ ಚಾಂಪಿಯನ್‌ಶಿಪ್ ಟೂರ್ನಿಯ ವರ್ಸೆಸ್ಟರ್‌ಶೈರ್ ತಂಡದ ಪ್ರತಿಭಾನ್ವಿತ ಸ್ಪಿನ್ನರ್ ಜೋಶ್ ಬೇಕರ್ ತಮ್ಮ 20ನೇ ವಯಸ್ಸಿಗೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಮೇ 2ರ ಗುರುವಾರ ಈ ದುರಂತ ಸಂಭವಿಸಿದೆ. ತಮ್ಮ ಸಾವಿನ ಮುನ್ನ ದಿನ ನಡೆದ ಸೋಮರ್‌ಸೆಟ್ ವಿರುದ್ದದ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಜೋಶ್ ಬೇಕರ್ ವರ್ಸೆಸ್ಟರ್‌ಶೈರ್ ಸೆಕೆಂಡ್ ಇಲೆವನ್ ಪರ 3 ವಿಕೆಟ್ ಕಬಳಿಸಿ ಮಿಂಚಿದ್ದರು.
ಪ್ರತಿಭಾನ್ವಿತ ಸ್ಪಿನ್ನರ್ ಜೋಶ್ ಬೇಕರ್ ನಿಧನಕ್ಕೆ ಇಡೀ ಇಂಗ್ಲೆಂಡ್ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿದ್ದು, ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ವ್ಯಕ್ತಪಡಿಸಿದೆ. ಈ ಸಂಬಂಧ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಕೌಂಟಿ ಕ್ಲಬ್‌ಗಳು ಹಾಗೂ ಹಲವು ಮಾಜಿ ಕ್ರಿಕೆಟಿಗರು ಈ ಯುವ ಕ್ರಿಕೆಟ್ ಪ್ರತಿಭೆಯ ನಿಧನಕ್ಕೆ ಕಂಬನಿ ಮಿಡಿದಿವೆ.
ಕೇವಲ 20 ವರ್ಷದ ಜೋಶ್ ಬೇಕರ್ ಅವರು ನಮ್ಮನ್ನು ಅಗಲಿರುವ ಸುದ್ಧಿ ವರ್ಸೆಸ್ಟರ್‌ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಪಾಲಿಗೆ ತುಂಬಾ ಆಘಾತಕಾರಿಯಾದದ್ದು. ಅವರ ನಿಧನಕ್ಕೆ ಸಂತಾಪಗಳು ಎಂದು ವರ್ಸೆಸ್ಟರ್‌ಶೈರ್ 'ಎಕ್ಸ್' ಮಾಡಿದೆ.
ICC Test Rankings: ಆಸೀಸ್‌ಗೆ ನಂ.1 ಸ್ಥಾನ, 2ನೇ ಸಾನಕ್ಕೆ ಕುಸಿದ ಭಾರತ..!
ಜೋಶ್ ಬೇಕರ್ ತಮ್ಮ 17ನೇ ವಯಸ್ಸಿಗೆ ವರ್ಸೆಸ್ಟರ್‌ಶೈರ್ ಕ್ಲಬ್ ತಂಡವನ್ನು ಕೂಡಿಕೊಂಡಿದ್ದರು. ಪ್ರತಿಭಾನ್ವಿತ ಸ್ಪಿನ್ನರ್ ಆಗಿದ್ದ ಬೇಕರ್ ಈಗಾಗಲೇ 22 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 43 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು 25 ಬಾರಿ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯವನ್ನಾಡಿ 27 ವಿಕೆಟ್ ಕಬಳಿಸಿದ್ದರು. ಇನ್ನು ಜೋಶ್ ಬೇಕರ್ ಕಳೆದ ಏಪ್ರಿಲ್‌ನಲ್ಲಿ ಡುರ್ರಾಮ್ ವಿರುದ್ದ ಕೊನೆಯ ಬಾರಿಗೆ ಪ್ರಥಮ ದರ್ಜೆ ಪಂದ್ಯವನ್ನಾಡಿದ್ದರು.
"ಜೋಶ್ ಬೇಕರ್ ಅವರ ನಿಧನದ ಸುದ್ದಿ ದಿಗ್ಬ್ರಮೆಯನ್ನುಂಟು ಮಾಡಿತು. ಅವರೊಬ್ಬ ಒಳ್ಳೆಯ ಟೀಮ್‌ಮೇಟ್ ಎನ್ನುವುದಕ್ಕಿಂತ ಕ್ರಿಕೆಟ್ ಕುಟುಂಬದ ಸಕ್ರಿಯ ಸದಸ್ಯರಾಗಿದ್ದರು ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಆಶ್ಲೆ ಗಿಲ್ಸ್ ಕಂಬನಿ ಮಿಡಿದಿದ್ದಾರೆ.
"ನಾವು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಈ ಸಂಕಷ್ಟದ ಸಮಯದಲ್ಲಿ ನಮ್ಮೆಲ್ಲರ ಪ್ರೀತಿ ಹಾಗೂ ಪ್ರಾರ್ಥನೆ ಅವರ ಕುಟುಂಬದ ಜತೆಗಿದೆ" ಎಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಹಾಗೂ ವರ್ಸೆಸ್ಟರ್‌ಶೈರ್ ಸಿಇಒ ಆಗಿರುವ ಗಿಲ್ಸ್ ಹೇಳಿದ್ದಾರೆ
ಜೋಶ್‌ಗೆ ಮೆಸೇಜ್ ಮಾಡಿದ್ದ ಬೆನ್ ಸ್ಟೋಕ್ಸ್..!
2022ರ ಮೇ ತಿಂಗಳಿನಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನೂತನ ನಾಯಕರಾಗಿದ್ದ ಬೆನ್ ಸ್ಟೋಕ್ಸ್ ಹಾಗೂ ಜೋಶ್ ಬೇಕರ್ ಪಂದ್ಯವೊಂದರಲ್ಲಿ ಮುಖಾಮುಖಿಯಾಗಿದ್ದರು. ಆ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ 88 ಎಸೆತಗಳಲ್ಲಿ 161 ರನ್ ಸಿಡಿಸಿದ್ದರು. ಇನ್ನು ಜೋಶ್ ಬೇಕರ್ ಒಂದೇ ಓವರ್‌ನಲ್ಲಿ ಸ್ಟೋಕ್ಸ್ 5 ಸಿಕ್ಸರ್ ಹಾಗೂ ಒಂದು ಬೌಂಡರಿ ಚಚ್ಚಿದ್ದರು. ಈ ಪಂದ್ಯದ ಬಳಿಕ ಬೆನ್ ಸ್ಟೋಕ್ಸ್ ವಾಟ್ಸ್‌ಅಪ್‌ನಲ್ಲಿ ಜೋಶ್ ಬೇಕರ್‌ಗೆ ಮೆಸೇಜ್ ಮಾಡಿ ಚಿಯರ್‌ಅಪ್ ಮಾಡಿದ್ದರು.
"ನಿನ್ನಲ್ಲಿ ತುಂಬಾ ಒಳ್ಳೆಯ ಪ್ರತಿಭೆ ಇದೆ. ನನ್ನ ಪ್ರಕಾರ ನೀನು ಇನ್ನು ತುಂಬಾ ಉನ್ನತ ಹಂತಕ್ಕೆ ಬೆಳೆಯುತ್ತೀಯ ಎನ್ನುವ ವಿಶ್ವಾಸವಿದೆ. ನಿನ್ನ ತಂಡದಲ್ಲಿರುವ ಎಲ್ಲರೂ ನಿನ್ನ ಬೆಂಬಲಕ್ಕೆ ನಿಲ್ಲುತ್ತಾರೆ" ಎಂದು ಮೆಸೇಜ್ ಮಾಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.