Jesse Sandesh: ವೇಗಿಯಾಗಬೇಕಿದ್ದವ ಈಗ ದೇಶದ ಅಗ್ರ ಹೈಜಂಪ್ ಪಟು

By Kannadaprabha NewsFirst Published Jun 25, 2023, 9:19 AM IST
Highlights

ವೇಗದ ಬೌಲರ್ ಆಗುವ ಕನಸು ಹೊತ್ತಿದ್ದ ಜೆಸ್ಸಿ ಸಂದೇಶ ಈಗ ದೇಶದ ಪ್ರಮುಖ ಹೈಜಂಪ್ ಪಟು
ಜೆಸ್ಸಿ ಸಂದೇಶ್ ಮೂಲತಃ ಬೆಂಗಳೂರಿನವರು
ಸಂದೇಶ್‌ 2018ರಲ್ಲಿ ರೈಲ್ವೆ ಇಲಾಖೆಯ ಉದ್ಯೋಗಕ್ಕೆ ಆಯ್ಕೆಯಾದರು

- ಸ್ಪಂದನ್‌ ಕಣಿಯಾರ್‌, ಕನ್ನಡಪ್ರಭ

ಬೆಂಗಳೂರು(ಜೂ.25): ಪ್ರಾಥಮಿಕ ಶಾಲೆಯಲ್ಲಿ ಈತನಿಗೆ ಕ್ರಿಕೆಟ್ ಮೇಲೆ ಅತೀವ ಆಸಕ್ತಿ. ವೇಗದ ಬೌಲಿಂಗ್ ಅಂದರೆ ಪ್ರೀತಿ. 7ನೇ ಕ್ಲಾಸಿನಲ್ಲಿ ಶಾಲೆಯ ದೈಹಿಕ ಶಿಕ್ಷಕರ ಒತ್ತಾಯಕ್ಕೆ ಅಥ್ಲೆಟಿಕ್ಸ್‌ ಕಣಕ್ಕಿಳಿದದ್ದೇ ಇಳಿದದ್ದು. ಅಲ್ಲಿಂದ ತಿರುಗಿ ನೋಡಿದ್ದೇ ಇಲ್ಲ. ಒಂದೇ ತಿಂಗಳಲ್ಲಿ ವಲಯ ಮಟ್ಟದಿಂದ ರಾಜ್ಯ ಮಟ್ಟದವರೆಗಿನ ಹೈಜಂಪ್‌ ಸ್ಪರ್ಧೆಗಳಲ್ಲಿ ಪದಕ ಗೆದ್ದ ಈತ, ಲಾಂಗ್‌ ಜಂಪ್‌, ಟ್ರಿಪಲ್ ಜಂಪ್‌, ಹರ್ಡಲ್ಸ್‌ನಲ್ಲೂ ತಮ್ಮನ್ನು ಪರೀಕ್ಷೆಗೊಡ್ಡಿದರು. ಅವು ಅಷ್ಟಾಗಿ ಫಲ ನೀಡದಿದ್ದಾಗ ಹೈಜಂಪ್‌ಗೆ ಮರಳಿದ ಇವರಿಗೆ ಅದೃಷ್ಟದ ಜತೆಗೆ ಯಶಸ್ಸು ಕೈಹಿಡಿಯಿತು. ಮುಂಬರುವ ಏಷ್ಯಾಡ್‌ಗೆ ಆಯ್ಕೆಯಾಗಿರುವ ಈ ಕನ್ನಡಿಗನ ಹೆಸರು ಜೆಸ್ಸಿ ಸಂದೇಶ್‌.

Latest Videos

ಇತ್ತೀಚೆಗೆ ಭುವನೇಶ್ವರದಲ್ಲಿ ನಡೆದ ಅಂತಾರಾಜ್ಯ ಅಥ್ಲೆಟಿಕ್ಸ್‌ ಕೂಟದ ಹೈಜಂಪ್‌ನಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ 2.24 ಮೀಟರ್‌ (7.34 ಅಡಿ) ಎತ್ತರಕ್ಕೆ ಜಿಗಿದು ಬೆಳ್ಳಿ ಪದಕ ಗೆಲ್ಲುವ ಮೂಲಕ ಸೆಪ್ಟೆಂಬರ್‌ನಲ್ಲಿ ಚೀನಾದ ಹಾಂಗ್ಝೂನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದರು. ಇದೇ ಮೊದಲ ಬಾರಿಗೆ ಹಿರಿಯರ ವಿಭಾಗದ ಅಂತಾರಾಷ್ಟ್ರೀಯ ಕೂಟದಲ್ಲಿ ಸ್ಪಧಿಸಲು ಅಣಿಯಾಗಿರುವ ಸಂದೇಶ್‌, "ಕನ್ನಡಪ್ರಭ"ದೊಂದಿಗೆ ತಮ್ಮ ಅಥ್ಲೆಟಿಕ್ಸ್ ಬದುಕಿನ ಪಯಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

12ನೇ ವರ್ಷಕ್ಕೇ ರಾಷ್ಟ್ರೀಯ ಮಟ್ಟಕ್ಕೆ

ಸಂದೇಶ್ ಮೂಲತಃ ಬೆಂಗಳೂರಿನವರು. ಅಥ್ಲೆಟಿಕ್ಸ್‌ಗೆ ಕಾಲಿಟ್ಟ ವರ್ಷದಲ್ಲೇ ರಾಜ್ಯವನ್ನು ಪ್ರತಿನಿಧಿಸುವ ಅರ್ಹತೆ ಪಡೆದ ಸಂದೇಶ್‌, 2005ರಲ್ಲಿ ತಮಗೆ 12 ವರ್ಷವಿದ್ದಾಗ ಮೈಸೂರಲ್ಲಿ ನಡೆದ ರಾಷ್ಟ್ರೀಯ ಕೂಟದಲ್ಲಿ ಸ್ಪರ್ಧಿಸಿದರು. ಆ ಬಳಿಕ ಅವರು ಹಿಂದಿರುಗಿ ನೋಡಲಿಲ್ಲ. 2012ರಲ್ಲಿ ಅಂಡರ್‌-18 ಕೂಟದಲ್ಲಿ ಚಿನ್ನ ಗೆದ್ದರೂ ಚೀನಾದಲ್ಲಿ ನಡೆದ ಏಷ್ಯನ್ ಕಿರಿಯರ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಗಲಿಲ್ಲ. "ಚಿನ್ನ ಗೆದ್ದಿದ್ದ ನನಗೆ ಅವಕಾಶ ಸಿಗಲಿಲ್ಲ. ಬೆಳ್ಳಿ ಗೆದ್ದ ಅಥ್ಲೀಟ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಬೇಸರವಾದರೂ, ಕ್ರೀಡೆಯೊಳಗಿನ ರಾಜಕೀಯ ಆಗಲೇ ಅರ್ಥವಾಗಿತ್ತು. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ನನ್ನ ಪ್ರದರ್ಶನದ ಕಡೆಗಷ್ಟೇ ಗಮನ ನೀಡುತ್ತಾ ಸಾಗಿದೆ" ಎಂದು ಸಂದೇಶ್ ತಮಗಾದ ಅನುಭವವನ್ನು ಹಂಚಿಕೊಂಡರು.

ಟ್ರಿಪಲ್ ಜಂಪ್‌ನಲ್ಲೂ ಭಾಗಿ!

2016ರಲ್ಲಿ ಮಂಡಿ ಗಾಯಕ್ಕೆ ತುತ್ತಾದ ಬಳಿಕ ಸಂದೇಶ್, ಫ್ರಾನ್ಸ್‌ನ ಕೋಚ್‌ ಒಬ್ಬರ ಸಲಹೆಯ ಮೇರೆಗೆ ಟ್ರಿಪಲ್‌ ಜಂಪ್‌ನತ್ತ ವಾಲಿದರು. ಆ ಕ್ರೀಡೆಯಲ್ಲೂ ರಾಷ್ಟ್ರೀಯ ಕೂಟದಲ್ಲಿ ಸ್ಪರ್ಧಿಸಿದರು. ಕೆಲ ಕಾಲ ಹರ್ಡಲ್ಸ್‌ ಸ್ಪರ್ಧೆಯನ್ನೂ ಟ್ರೈ ಮಾಡಿದ್ದಾಗಿ ಹೇಳಿಕೊಂಡ ಸಂದೇಶ್‌, ಕೆಲ ವರ್ಷಗಳ ಹಿಂದೆ ತಮ್ಮಿಚ್ಚೆಯಂತೆ ಹೈಜಂಪ್‌ಗೆ ಮರಳಿದರು.

IIS athlete Jesse Sandesh lauded the role of PT teachers in the growth of young athletes, having bagged a silver in the High Jump event at the the Inter-State Nationals in Chennai last month.🔥 Watch! 🗣️ pic.twitter.com/4oT3gEp033

— Inspire Institute of Sport (@IIS_Vijayanagar)

ಹಾಕಿ ಕೋಚ್ ಲೊಂಬಾರ್ಡ್‌ ನೆರವು

ಸಂದೇಶ್‌ ಹೈಜಂಪ್‌ಗೆ ಮರಳಲು ದ.ಆಫ್ರಿಕಾದ ವೇಯ್ನ್ ಲೊಂಬಾರ್ಡ್ ಕೂಡ ಪ್ರಮುಖ ಕಾರಣ. ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಸಂದೇಶ್ ತರಬೇತಿ ನಡೆಸುತ್ತಿದ್ದ ವೇಳೆ ಲೊಂಬಾರ್ಡ್‌ ಭಾರತ ಹಾಕಿ ತಂಡದ ಸ್ಟ್ರೆಂಥ್‌ ಅಂಡ್ ಕಂಡೀಷನಿಂಗ್‌ ಕೋಚ್‌ ಆಗಿದ್ದರು. ಗಾಯಾಳು ಸಂದೇಶ್‌ಗೆ ಹೆಚ್ಚೂ ಕಡಿಮೆ ಒಂದು ವರ್ಷ ಕಾಲ ಸೂಕ್ತ ಚಿಕಿತ್ಸೆ ಸೂಚಿಸಿ, ಪುನಶ್ಚೇತನ ಶಿಬಿರ ಕೈಗೊಂಡು ಸಂಪೂರ್ಣ ಫಿಟ್ನೆಸ್‌ ಕಾಯ್ದುಕೊಳ್ಳಲು ನೆರವಾದರು.

SAFF Cup 2023: ನೇಪಾಳವನ್ನು ಮಣಿಸಿ ಸೆಮೀಸ್‌ಗೇರಿದ ಭಾರತ

ಜಿಂದಾಲ್‌ ತೆಕ್ಕೆಗೆ ಸೇರಿ ಬೆಳವಣಿಗೆ

2019ರಲ್ಲೇ ಸಂದೇಶ್‌ರನ್ನು ಜೆಎಸ್‌ಡಬ್ಲ್ಯು ಸಂಸ್ಥೆಯು ತನ್ನ ತೆಕ್ಕೆಗೆ ಸೇರಿಸಿಕೊಂಡು ಬಳ್ಳಾರಿ ಸಮೀಪದ ಇನ್‌ಸ್ಪೈರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌(ಐಐಎಸ್‌) ನಲ್ಲಿ ತರಬೇತಿ ನೀಡುತ್ತಿದೆ. "ಜೆಎಸ್‌ಡಬ್ಲ್ಯು ಸೇರಿದ ಮೇಲೆ ನನ್ನ ಪ್ರದರ್ಶನ ಗುಣಮಟ್ಟ ವೃದ್ಧಿಸಿದೆ. ಮಂಡಿ ನೋವಿನ ಸಮಸ್ಯೆ ಈಗಲೂ ಇದೆ. ಆದರೆ ನನ್ನ ಕೋಚ್‌, ಟ್ರೈನರ್‌ಗಳು ಕೆಲಸದ ಒತ್ತಡ ನಿರ್ವಹಣೆ ಮಾಡುತ್ತಿದ್ದಾರೆ. ಕ್ರೀಡಾಪಟುಗಳಿಗೆ ರಿಕವರಿ ಬಹಳ ಮುಖ್ಯ. ಇದು ಆಹಾರ ಪದ್ಧತಿ ಹಾಗೂ ನಿದ್ದೆಯಿಂದ ಮಾತ್ರ ಸಾಧ್ಯ. ಐಐಎಸ್‌ನಲ್ಲಿ ಪ್ರತಿ ಅಥ್ಲೀಟ್‌ಗೂ ಅವರ ದೇಹಕ್ಕೆ ಅಗತ್ಯವಿರುವ ಡಯೆಟ್‌, ವರ್ಕೌಟ್, ರಿಕವರಿ ಪದ್ಧತಿಗಳನ್ನು ರೂಪಿಸಲಾಗಿದೆ. ಇದರಿಂದ ನಾನು ಯಾವುದರ ಬಗ್ಗೆಯೂ ಯೋಚಿಸದೆ ನನ್ನ ಪ್ರದರ್ಶನದ ಕಡೆಗಷ್ಟೇ ಗಮನ ಹರಿಸಲು ಅನುಕೂಲವಾಗುತ್ತಿದೆ" ಎಂದು ಸಂದೇಶ್ ಆತ್ಮವಿಶ್ವಾಸದೊಂದಿಗೆ ಹೇಳಿದರು.

ನೈಋತ್ಯ ರೈಲ್ವೆ ಉದ್ಯೋಗಿ

ಸಂದೇಶ್‌ 2018ರಲ್ಲಿ ರೈಲ್ವೆ ಇಲಾಖೆಯ ಉದ್ಯೋಗಕ್ಕೆ ಆಯ್ಕೆಯಾದರು. ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ ಟಿಕೆಟ್ ಪರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಸಂದೇಶ್‌, ತಮ್ಮ ಇಲಾಖೆ ಪರವಾಗಿಯೂ ಹಲವು ಪದಕ ಜಯಿಸಿದ್ದಾರೆ.

ಭಾರತದ ಪರ ಸ್ಪರ್ಧಿಸಲು ಉತ್ಸುಕ

ಮೊದಲ ಬಾರಿಗೆ ಹಿರಿಯರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಉತ್ಸುಕನಾಗಿದ್ದೇನೆ. ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವುದರ ಜೊತೆಗೆ 2024ರ ಒಲಿಂಪಿಕ್ಸ್‌ಗೂ ಅರ್ಹತೆ ಪಡೆಯುವುದು ನನ್ನ ಮುಂದಿರುವ ಗುರಿ. ಇದಕ್ಕಾಗಿ ಹಗಲು-ರಾತ್ರಿ ಅಭ್ಯಾಸ ನಡೆಸುತ್ತಿದ್ದೇನೆ. ಭಾರತ, ಕರ್ನಾಟಕಕ್ಕೆ ಹೆಮ್ಮೆ ತರಬೇಕು ಎನ್ನುವ ನನ್ನ ಕನಸು ಈಡೇರುತ್ತದೆ ಎಂಬ ನಂಬಿಕೆ ಇದೆ.

- ಜೆಸ್ಸಿ ಸಂದೇಶ್, ಅಥ್ಲೀಟ್

click me!