ಭಜರಂಗ್‌, ಪೂನಿಯಾ ನೇರ ಆಯ್ಕೆ: ಇಂದು ಕೋರ್ಟ್‌ ತೀರ್ಪು

By Kannadaprabha NewsFirst Published Jul 22, 2023, 12:01 PM IST
Highlights

ಭಜರಂಗ್‌ ಪೂನಿಯಾ ಹಾಗೂ ವಿನೇಶ್‌ ಫೋಗಟ್‌ರನ್ನು ಏಷ್ಯನ್‌ ಗೇಮ್ಸ್‌ಗೆ ನೇರ ಆಯ್ಕೆ
ಆಯ್ಕೆ ಟ್ರಯಲ್ಸ್‌ನಿಂದ ಈ ಇಬ್ಬರು ಕುಸ್ತಿಪಟುಗಳಿಗೆ ವಿನಾಯಿತಿ
ಈ ಎರಡು ವಿಭಾಗಗಳಲ್ಲಿ ಆಯ್ಕೆ ನಿರೀಕ್ಷೆಯಲ್ಲಿದ್ದ ಯುವ ಕುಸ್ತಿಪಟುಗಳು ಹೈಕೋರ್ಟ್‌ ಮೊರೆ 
 

ನವದೆಹಲಿ(ಜು.22): ಭಜರಂಗ್‌ ಪೂನಿಯಾ ಹಾಗೂ ವಿನೇಶ್‌ ಫೋಗಟ್‌ರನ್ನು ಏಷ್ಯನ್‌ ಗೇಮ್ಸ್‌ಗೆ ನೇರ ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಶನಿವಾರ ತೀರ್ಪು ಪ್ರಕಟಿಸಲಿದೆ ಎಂದು ದೆಹಲಿ ಹೈಕೋರ್ಟ್‌ ತಿಳಿಸಿದೆ.

ಕಳೆದ ಹಲವು ತಿಂಗಳುಗಳಿಂದ ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಐ) ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಭಜರಂಗ್‌ ಹಾಗೂ ವಿನೇಶ್‌ಗೆ ಏಷ್ಯನ್‌ ಗೇಮ್ಸ್‌ನ ಕ್ರಮವಾಗಿ ಪುರುಷರ 65 ಕೆ.ಜಿ. ಹಾಗೂ ಮಹಿಳೆಯರ 53 ಕೆ.ಜಿ. ವಿಭಾಗಕ್ಕೆ ಆಯ್ಕೆ ಟ್ರಯಲ್ಸ್‌ ಇಲ್ಲದೇ ನೇರವಾಗಿ ಆಯ್ಕೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ, ಈ ಎರಡು ವಿಭಾಗಗಳಲ್ಲಿ ಆಯ್ಕೆ ನಿರೀಕ್ಷೆಯಲ್ಲಿದ್ದ ಅಂಡರ್‌-23 ಏಷ್ಯನ್‌ ಚಾಂಪಿಯನ್‌ ಸುಜೀತ್‌ ಕಲ್ಕಲ್‌, ಅಂಡರ್‌-20 ವಿಶ್ವ ಚಾಂಪಿಯಮ್‌ ಅಂತಿಮ್ ಪಂಘಲ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಕುಸ್ತಿ ಒಕ್ಕೂಟ ಚುನಾವಣೆ ಕೊನೆಗೂ ಆ.12ಕ್ಕೆ ನಿಗದಿ

ನವದೆಹಲಿ: ಹಲವು ಬಾರಿ ಮುಂದೂಡಿಕೆಯಾಗಿರುವ ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಚುನಾವಣೆ ಕೊನೆಗೂ ಆ.12ಕ್ಕೆ ನಿಗದಿಯಾಗಿದೆ. ಈ ಬಗ್ಗೆ ಶುಕ್ರವಾರ ಚುನಾವಣಾ ಅಧಿಕಾರಿ ನ್ಯಾಯಾದೀಶ ಎಂ.ಎಂ.ಕುಮಾರ್‌ ಪ್ರಕಟನೆ ನೀಡಿದರು. ಆ.1ರಂದು ನಾಮಪತ್ರ ಸಲ್ಲಿಸಬೇಕಿದ್ದು, ಚುನಾವಣೆ ಅಗತ್ಯವಿದ್ದರೆ ಆ.12ಕ್ಕೆ ನಡೆಸಲಾಗುವುದು. ಚುನಾವಣೆಯಲ್ಲಿ 24 ರಾಜ್ಯ ಸಂಸ್ಥೆಗಳ 48 ಮಂದಿ ಮತದಾನ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಶ್ರೇಯಸ್ ಗೋಪಾಲ್ ಸೇರಿದಂತೆ ಕರ್ನಾಟಕದ 3 ಆಟಗಾರರು ಬೇರೆ ರಾಜ್ಯಗಳಿಗೆ ವಲಸೆ!

ಈ ಮೊದಲು ಜು.6ಕ್ಕೆ ಚುನಾವಣೆ ನಿಗದಿಯಾಗಿತ್ತು. ಬಳಿಕ ಜು.11ಕ್ಕೆ ಮುಂದೂಡಿಕೆಯಾಗಿತ್ತು. ಆದರೆ ತನಗೂ ಮತದಾನದ ಹಕ್ಕು ನೀಡಬೇಕೆಂದು ಅಸ್ಸಾಂ ಕುಸ್ತಿ ಸಂಸ್ಥೆ ಗುವಾಹಟಿ ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದ ಚುನಾವಣೆಗೆ ತಡೆ ನೀಡಲಾಗಿತ್ತು. ಬಳಿಕ ಸುಪ್ರೀ ಕೋರ್ಟ್‌ ಗುವಾಹಟಿ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿ, ಚುನಾವಣೆಗೆ ಅನುವು ಮಾಡಿಕೊಟ್ಟಿತ್ತು.

ಕಿರಿಯರ ವಿಶ್ವ ಶೂಟಿಂಗ್‌: ಬೆಳ್ಳಿ ಗೆದ್ದ ಭಾರತ ತಂಡ

ಚಾಂಗ್ವಾನ್‌(ಕೊರಿಯಾ): ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವ ಕಿರಿಯರ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮತ್ತೊಂದು ಪದಕ ಗೆದ್ದಿದೆ. ಶುಕ್ರವಾರ ಪುರುಷರ 25 ಮೀ. ರ್‍ಯಾಪಿಡ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಸಮೀರ್‌, ರಾಜ್‌ಕನ್ವಾರ್‌ ಸಿಂಗ್‌ ಸಂಧು ಹಾಗೂ ಮಹೇಶ್‌ ಆನಂದ್‌ಕುಮಾರ್‌ ಅವರನ್ನೊಳಗೊಂಡ ತಂಡ ಬೆಳ್ಳಿ ಪದಕ ಪಡೆಯಿತು. ಫೈನಲ್‌ನಲ್ಲಿ ಭಾರತ ತಂಡ 1730 ಅಂಕ ಪಡೆದರೆ, 1747 ಅಂಕ ಸಂಪಾದಿಸಿದ ಚೀನಾ ತಂಡ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಇದೇ ವೇಳೆ ಮಹೇಶ್‌ ವೈಯಕ್ತಿಕ 25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಲೈಂಗಿಕ ಕಿರುಕುಳ ಕೇಸ್‌:ಬ್ರಿಜ್‌ಭೂಷಣ್‌ ಸಿಂಗ್‌ಗೆ ಜಾಮೀನು..!

2024ರಿಂದ ಅಂಡರ್‌-20 ಫುಟ್ಬಾಲ್‌ ಟೂರ್ನಿ ಆರಂಭ

ನವದೆಹಲಿ: ಯುವ ಪ್ರತಿಭೆಗಳನ್ನು ಬೆಳೆಸುವ ಉದ್ದೇಶದಿಂದ ಭಾರತ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌) ಮುಂದಿನ ವರ್ಷದಿಂದ ಅಂಡರ್‌-20 ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಆರಂಭಿಸುವುದಾಗಿ ಘೋಷಿಸಿದೆ. ಚೊಚ್ಚಲ ಆವೃತ್ತಿ ಟೂರ್ನಿ 2024ರ ಜನವರಿ-ಫೆಬ್ರವರಿ ತಿಂಗಳಿನಲ್ಲಿ ನಡೆಸುವುದಾಗಿ ತಿಳಿಸಿದೆ. ಯುವ ಆಟಗಾರರಿಗೆ ಮತ್ತಷ್ಟು ಅವಕಾಶಗಳನ್ನು ನೀಡಿ, ಅವರನ್ನು ಬೆಳೆಸುವುದು ನಮ್ಮ ಮುಖ್ಯ ಗುರಿ ಎಂದು ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್‌ ಚೌಬೆ ತಿಳಿಸಿದ್ದಾರೆ.

ಕೊರಿಯಾ ಓಪನ್‌: ಸೆಮಿಗೆ ಸಾತ್ವಿಕ್‌-ಚಿರಾಗ್‌ ಪ್ರವೇಶ

ಸೋಲ್‌(ಕೊರಿಯಾ): ಭಾರತದ ತಾರಾ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಶುಕ್ರವಾರ ಪುರುಷರ ಡಬಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.3 ಭಾರತೀಯ ಜೋಡಿ, 5ನೇ ಶ್ರೇಯಾಂಕಿತ ಜಪಾನ್‌ನ ಟಕುರೊ ಹೊಕಿ-ಯುಗೊ ಕೊಬಯಶಿ ವಿರುದ್ಧ 21-14, 21-17 ನೇರ ಗೇಮ್‌ಗಳಲ್ಲಿ ಜಯಭೇರಿ ಭಾರಿಸಿತು. ಇವರಿಗೆ ಸೆಮಿಫೈನಲ್‌ನಲ್ಲಿ 2021ರ ವಿಶ್ವ ಚಾಂಪಿಯನ್‌ ಜೋಡಿ, ಚೀನಾದ ಲಿಯಾಂಗ್‌ ಕೆಂಗ್‌-ವ್ಯಾಂಗ್‌ ಚಾಂಗ್‌ ಸವಾಲು ಎದುರಾಗಲಿದೆ. ಪುರುಷರ ಡಬಲ್ಸ್‌ ಹೊರತುಪಡಿಸಿ ಉಳಿದೆಲ್ಲಾ ವಿಭಾಗಗಳಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

click me!