ಮರಳಿ ಮಣ್ಣಿಗೆ: ಪ್ರಕಾಶ್‌ ರೈ ಲಾಕ್‌ಡೌನ್‌ ದಿನಗಳನ್ನು ಹೀಗೆ ಕಳೆಯುತ್ತಿದ್ದಾರೆ ನೋಡಿ!

By Kannadaprabha NewsFirst Published Apr 15, 2020, 10:05 AM IST
Highlights
ನನಗೆ ಲಾಕ್‌ಡೌನ್‌ ಅಂತಾನೇ ಅನ್ನಿಸುತ್ತಿಲ್ಲ. ತೋಟದಲ್ಲಿದ್ದೇನೆ, ಹತ್ತು ವರ್ಷಗಳ ಹಿಂದಿನಿಂದ ನಾನು ಹೇಳುತ್ತಿದ್ದ ಮಾತು ಇವತ್ತು ನಿಜವಾಗಿದೆ. ಬದುಕು ಪ್ರಕೃತಿ ಜೊತೆ ಇರಬೇಕು. ಹತ್ತು ವರ್ಷದಲ್ಲಿ ನಾನು ಬೆಳೆಸಿದ ಮಕ್ಕಳು ಅಂದ್ರೆ ಮರಗಿಡಗಳ ಜೊತೆ ಬದುಕುತ್ತಿದ್ದೇನೆ : ಪ್ರಕಾಶ್ ರೈ 

ನನಗೆ ಲಾಕ್‌ಡೌನ್‌ ಅಂತಾನೇ ಅನ್ನಿಸುತ್ತಿಲ್ಲ. ತೋಟದಲ್ಲಿದ್ದೇನೆ, ಹತ್ತು ವರ್ಷಗಳ ಹಿಂದಿನಿಂದ ನಾನು ಹೇಳುತ್ತಿದ್ದ ಮಾತು ಇವತ್ತು ನಿಜವಾಗಿದೆ. ಬದುಕು ಪ್ರಕೃತಿ ಜೊತೆ ಇರಬೇಕು. ಹತ್ತು ವರ್ಷದಲ್ಲಿ ನಾನು ಬೆಳೆಸಿದ ಮಕ್ಕಳು ಅಂದ್ರೆ ಮರಗಿಡಗಳ ಜೊತೆ ಬದುಕುತ್ತಿದ್ದೇನೆ.

ಮರಗಳ ಜತೆ ಮಾತುಕತೆ

ಭೂಮಿ ಬೇಸಿಗೆಯಲ್ಲಿ ಜಾಸ್ತಿ ಮಾತನಾಡುತ್ತದೆ. ನೆಲ್ಲಿಕಾಯಿ, ಸಪೋಟ, ಬದನೆಕಾಯಿ, ರಾಮಫಲ ಮರಗಳು ಹಣ್ಣುಗಳನ್ನು ಕೊಡುವ ಮೂಲಕ ಮಾತನಾಡುತ್ತಿದೆ. ಎಲ್ಲೆಲ್ಲಿಂದಲೋ ತಂದಿರುವ ಮರಗಳ ಹೂವುಗಳನ್ನು ನೋಡಲು ಸಾಧ್ಯವಾಗುತ್ತಿದೆ. ಯಾವುದೋ ಊರಿಂದ ಬರುವ ಹಕ್ಕಿಗಳನ್ನು ನೋಡುತ್ತಿದ್ದೇನೆ. ಇಲ್ಲಿಗೆ ಬಂದ ಮೇಲೆ ನಾನೂ ನನ್ನ ಮಗ ಮಗಳೂ ಸೂರ್ಯೋದಯ ಮತ್ತು ಸೂರ್ಯಾಸ್ತ ಎರಡನ್ನೂ ನೋಡುತ್ತಿದ್ದೇವೆ. ಬೆಳಿಗ್ಗೆ ಆರೂವರೆ ಗಂಟೆಗೆ ನಡೆಯುವುದರಲ್ಲಿ ಇರುವ ಸುಖ ಇದೆಯಲ್ಲ, ಅದು ಬೇರೆಯೇ ಪ್ರಪಂಚ.

1000 ಮಂದಿಗೆ ತಿಂಗಳಿಗಾಗುವಷ್ಟುಊಟದ ವ್ಯವಸ್ಥೆ

ನಮ್ಮದು ಹತ್ತೆಕರೆ ತೋಟ. ಮೊನ್ನೆ ಹೈವೇ ಕಡೆಗೆ ಹೋದೆ. ಪಾಂಡಿಚೇರಿಯ ಹೊರಟು ಸಿಕ್ಕಿ ಹಾಕಿಕೊಂಡ 11 ಜನ, ತಮಿಳುನಾಡಿಗೆ ಹೋಗಬೇಕಾಗಿದ್ದ 7 ಜನ, ಆಂಧ್ರಪ್ರದೇಶಕ್ಕೆ ಹೋಗುತ್ತಿದ್ದ ಒಂದಷ್ಟುಜನ, ತೆಲಂಗಾಣ ಕಮ್ಮಂಗೆ ಹೋಗುತ್ತಿದ್ದ ಕೆಲವರು ಹೀಗೆ ಒಟ್ಟು ಸೇರಿ ಮೂವತ್ತು ಜನ ಸಿಕ್ಕರು. ಅವರನ್ನು ನಮ್ಮ ಫಾಮ್‌ರ್‍ಗೆ ಕರೆದುಕೊಂಡು ಬಂದೆ. ಫಾಮ್‌ರ್‍ನಲ್ಲಿ ನಮ್ಮ ಜತೆ ಐವತ್ತು ಮಂದಿಗೆ ಊಟ ಹಾಕುತ್ತಿದ್ದೇನೆ. ನಮ್ಮಲ್ಲಿ ತೋಟ, ಪ್ರೊಡಕ್ಷನ್‌ ಹೌಸ್‌ ಅಂತ ಸುಮಾರು 60 ಜನ ಕೆಲಸ ಮಾಡುತ್ತಾರೆ.

ಅಕ್ಷಯ್‌ ಕುಮಾರ್‌ #DilSe ಥ್ಯಾಂಕ್ಯೂ ಅಭಿಯಾನಕ್ಕೆ ಸ್ಟಾರ್‌ಗಳ ಸಾಥ್‌

ಅವರ ಎರಡು ತಿಂಗಳ ಸಂಬಳವನ್ನು ಮೊದಲೇ ಕೊಟ್ಟೆ. ಅವರ ಬಗ್ಗೆಯೂ ಈ ಸಂದರ್ಭದಲ್ಲಿ ಯೋಚಿಸೋಕೆ ಅವಕಾಶ ಸಿಕ್ಕಿತು. ಪ್ರಕಾಶ್‌ ರಾಜ್‌ ಫೌಂಡೇಷನ್‌ ಮೂಲಕ ಹಸಿರು ದಳ ತಂಡದ ಜತೆ ಸೇರಿ ಒಂದು ತಿಂಗಳಿಗೆ ಐವತ್ತು ಕುಟುಂಬಗಳನ್ನು ದತ್ತು ತೆಗೆದುಕೊಂಡೆ. ಆಮೇಲೆ ತಮಟೆ ಸಂಸ್ಥೆ ಮೂಲಕ 25 ಕುಟುಂಬಗಳಿಗೆ, ಸ್ಕೋಪ್‌ ಎಂಟರ್‌ ಪ್ರೈಸಸ್‌ ಅಂತ ಚೆನ್ನೈನಲ್ಲಿ ತಂಡದ ಮೂಲಕ ಮೀನುಗಾರರ ಕಾಲನಿಯವರಿಗೆ ಜತೆಯಾಗಿದ್ದೇನೆ. ಹೀಗೆ ಸುಮಾರು ಒಂದು ಸಾವಿರ ಜನರಿಗೆ ಒಂದು ತಿಂಗಳ ಮಟ್ಟಿಗಾಗುವಷ್ಟುಊಟ, ವಸತಿ ನೀಡುವಷ್ಟುನನ್ನ ಬಳಿ ಇದೆ. ಮಾನವೀಯತೆ ಮೆರೆಯುವ ಒಂದು ಅವಕಾಶ ಸಿಕ್ಕಿದ್ದಕ್ಕೆ ಸಮಾಧಾನವಿದೆ.

ತೋಟದಲ್ಲಿ ಸಾವಿರ ಕತೆಗಳು

ತೋಟದಲ್ಲಿ ಕುಳಿತುಕೊಂಡು ಮಗನಿಗೆ, ಮಗಳಿಗೆ ಹಾಡು ಕಲಿಸುತ್ತಾ ಮರ ಗಿಡಗಳ ಜತೆ ಮಾತನಾಡುತ್ತಿದ್ದೇನೆ. ಅದರ ಜತೆ ಹೀಗೆ ಹೈವೆಯಲ್ಲಿ ಸಿಕ್ಕವರಿದ್ದಾರಲ್ಲ ಅವರ ಕತೆಗಳನ್ನು ಕೇಳುತ್ತಿದ್ದೇನೆ. ಅವನೊಬ್ಬ ರಾಜಸ್ಥಾನದವನು, ಮತ್ತೊಬ್ಬ ರಾಜಮಂಡ್ರಿಯವನು, ಕಮ್ಮಂ, ಪಾಂಡಿಚೇರಿಯವರು ಹೀಗೆ ಎಲ್ಲರ ಕತೆಗಳನ್ನು ಕೇಳುತ್ತಾ ಎಲ್ಲರೂ ತೋಟದ ಕೆಲಸ ಮಾಡುತ್ತಿದ್ದೇವೆ. ಒಬ್ಬನಿಂದ ಪೇಂಟಿಂಗ್‌ ಕಲಿತುಕೊಂಡೆ. ಮೂರು ಮಂದಿ ಫ್ಯಾಬ್ರಿಕೇಷನ್‌ ಕೆಲಸ ಮಾಡುವವರು. ಮತ್ತೊಬ್ಬನಿಂದ ಸಿಮೆಂಟ್‌ ಬಗ್ಗೆ ತಿಳಿದುಕೊಂಡೆ. ಕೆಲವರು ಕುಸುರಿ ಕೆಲಸದವರು, ಭಾರಿ ಪ್ರತಿಭೆಗಳು ಅವರು. ಒಬ್ಬ ಬಿಹಾರದವನಿದ್ದಾನೆ. ಅವನು ಅದ್ಭುತವಾಗಿ ಅಡುಗೆ ಮಾಡುತ್ತಾನೆ. ಅವರ ಪಯಣಗಳು, ಅವರ ಜೀವನ ಹೀಗೆ ಸಾವಿರ ಕತೆಗಳನ್ನು ಕೇಳಿಸಿಕೊಳ್ಳುತ್ತಿದ್ದೇನೆ.

ಸ್ಕ್ರಿಪ್ಟ್ ಬಗ್ಗೆ ಯೋಚಿಸುವುದಲ್ಲ, ಮನುಷ್ಯತ್ವ ಮೆರೆಯಬೇಕು

ಪ್ರಕೃತಿಯನ್ನು ನೋಡುತ್ತಿದ್ದೇನೆ. ಮನುಷ್ಯ ಜೀವನದ ಬಗ್ಗೆ ಯೋಚಿಸುತ್ತಿದ್ದೇನೆ. ಮೊನ್ನೆ ಯಾರೋ ಒಬ್ಬರು ಫೋನ್‌ ಮಾಡಿ ನೀವು ಮುಂದಿನ ಸ್ಕಿ್ರಪ್ಟ್‌ ಬಗ್ಗೆ ಯೋಚನೆ ಮಾಡಬೇಕು ಎಂದರು. ಸ್ಕಿ್ರಪ್ಟ್‌, ಸಿನಿಮಾ ಬಗ್ಗೆ ನಾನು ಯಾಕೆ ಯೋಚನೆ ಮಾಡಬೇಕು? ಬದುಕಿನ ಬಗ್ಗೆ ಯೋಚಿಸುವುದಕ್ಕೆ ಪ್ರಕೃತಿಯೇ ಒಂದು ಅವಕಾಶ ಕೊಟ್ಟಿರುವಾಗ ನಮ್ಮ ಈ ಕ್ಷಣದ ಬದುಕಿನ ಬಗ್ಗೆ, ನಾವು ಬಾಳಿದ ಬದುಕಿನ ಬಗ್ಗೆ ಯೋಚನೆ ಮಾಡಬೇಕೇ ಹೊರತು ಸ್ಕಿ್ರಪ್ಟ್‌ ಮಾಡ್ತೀನಿ, ಆ್ಯಕ್ಟಿಂಗ್‌ ಬೆಟರ್‌ ಮಾಡ್ಕೋಳೋಕೆ ಯೋಚ್ನೆ ಮಾಡ್ತೀನಿ ಅಂತ ಸ್ವಾರ್ಥಿಗಳಂತೆ ಯೋಚನೆ ಮಾಡಬಾರದು. ಮನುಷ್ಯತ್ವ ಮೆರೆಯಬೇಕು. ಮನುಷ್ಯತ್ವ ಸಂಭ್ರಮಿಸಬೇಕು.

ತೇಜಸ್ವಿ, ಲಂಕೇಶ್‌, ಭೈರಪ್ಪರ ಮಾತು ಕೇಳಿಸಿಕೊಳ್ಳುತ್ತಿದ್ದೇನೆ

ಬೆಳಿಗ್ಗೆಯಿಂದ ಸಂಜೆವರೆಗೆ ತೋಟದ ಕೆಲಸ. ಸಾಯಂಕಾಲ ಚಂದ್ರನನ್ನು ನೋಡಿ ಪುಸ್ತಕದ ಕಪಾಟು ತೆರೆದರೆ ದಿಢೀರ್‌ ಅಂತ ಭೈರಪ್ಪರ ಮತದಾನ ಓದೋಕೆ ಸಿಗುತ್ತದೆ. ಅಡಿಗರ ಪದ್ಯ ಸಿಗುತ್ತದೆ. ನರಸಿಂಹಸ್ವಾಮಿಯವರನ್ನು ಮತ್ತೆ ನೋಡುತ್ತೇನೆ. ತೇಜಸ್ವಿ, ಲಂಕೇಶರು, ಚಿತ್ತಾಲರು ಏನೋ ಹೇಳುತ್ತಿದ್ದಾರೆ. ಅದನ್ನೆಲ್ಲಾ ನಾನು ಕೇಳಿಸಿಕೊಳ್ಳುತ್ತೇನೆ. ಯಾವಾಗಲೋ ಓದಿದ್ದನ್ನು ಮತ್ತೆ ಓದಿದಾಗ ಇನ್ನೊಂದೇನೋ ಹೇಳುತ್ತದೆ ಪುಸ್ತಕಗಳು.

ನಾವು ನಮಗೆ ಮಾಡಿಕೊಂಡಿರುವ ಗಾಯದ ಬಗ್ಗೆ ಯೋಚಿಸುವ ಸಮಯ

ನಾವು ಪ್ರಕೃತಿಗೆ ಮಾಡಿದ ಗಾಯಗಳನ್ನು ಮಾಗಿಸೋಕೆ, ಆ ಗಾಯಗಳನ್ನು ಒಣಗಿಸೋಕೆ ಪ್ರಕೃತಿಗೆ ಟೈಮ್‌ ಕೊಡುತ್ತಾ ನಾವು ನಮಗೆ ಮಾಡಿಕೊಂಡಿರುವ ಗಾಯಗಳ ಬಗ್ಗೆ ಯೋಚನೆ ಮಾಡಬೇಕಾಗಿದೆ. ನಾನು ಅದನ್ನು ಯೋಚನೆ ಮಾಡುತ್ತಿದ್ದೇನೆ. ಇಡೀ ಭಾರತ ದೇಶದಲ್ಲಿ ಅಷ್ಟೊಂದು ಆಸ್ಪತ್ರೆಗಳು, ನರ್ಸಿಂಗ್‌ ಹೋಮ್‌ ಗಳು, ಕ್ಲಿನಿಕ್‌ ಗಳು ಅವೆಲ್ಲಕ್ಕೂ ಮುಗಿ ಬೀಳುತ್ತಿದ್ದರು ಜನ. ಈಗ ಯಾರೂ ಹೋಗುತ್ತಿಲ್ಲವಲ್ಲ. ಮೂರು ದಿನ ಕಾದರೆ ಬಂದ ಜ್ವರ ಹೋಗುತ್ತದೆ ಎಂದು ಈಗ ಅರ್ಥವಾಗುತ್ತಿದೆಯಲ್ಲ. ಇಸಿಜಿಗಳು ಬೇಕಾಗಿಲ್ಲ, ಔಷಧಿಗಳು ಬೇಕಾಗಿಲ್ಲ. ಮಾಫಿಯಾ ಅರ್ಥವಾಗುತ್ತಿದೆಯಲ್ಲ ನಿಮಗೆ. ಮಾಲ್‌ ಗಳು, ಥೇಟರ್‌ಗಳು ಎಲ್ಲಾ ಬಂದಾಗಿದೆ. ಇವ್ಯಾವುದೂ ಇಲ್ಲದೆಯೂ ಬದುಕಬಹುದು ಎಂದು ಅರಿವಾಗುತ್ತಿದೆ. ಸುಮ್ಮನೆ ಗಾಡಿ ಇದೆ ಅಂತ ಪೆಟ್ರೋಲ್‌ ಖರ್ಚು ಮಾಡಿಕೊಂಡು ಹೋಗುತ್ತಿದ್ದಿರಲ್ಲ, ಅದಿಲ್ಲದೆ ಬದುಕೋದಿಕ್ಕೆ ಸಾಧ್ಯವಾಗುತ್ತಿದೆಯಲ್ಲ ಈಗ. ಅನವಶ್ಯಕವಾಗಿ ನಾವು ಪ್ರಕೃತಿಯಲ್ಲಿ ಓಡುವುದನ್ನು ನಿಲ್ಲಿಸಿದಾಗ ಎಷ್ಟುಆಯಾಸವಾಗುತ್ತಿತ್ತು ಅಂತ ತಿಳಿಯಿತಲ್ಲ, ಇದು ಸುಧಾರಿಸಿಕೊಳ್ಳುವ ಸಮಯ.

ಗೇರು ಬೀಜ ಸುಟ್ಟೆ, ಬಾಲ್ಯಕ್ಕೆ ಹೋದೆ

ನನ್ನ ನಾಲ್ಕು ವರ್ಷದ ಮಗ ಈಗ ಮಾವಿನ ಹಣ್ಣು ಯಾವಾಗ ಆಗುತ್ತದೆ ಎಂದು ಕೇಳುತ್ತಿದ್ದಾನೆ. ಅವನಿಗೆ ಮಾವಿನ ಚಿಗುರು ತೋರಿಸಿದೆ, ಹೂವು ತೋರಿಸಿದೆ, ಹೂವು ಕಾಯಾಗುವುದನ್ನು ಕಾಯಿ ಬೆಳೆಯುವುದನ್ನು ತೋರಿಸಿದೆ. ಇನ್ನು ಇಪ್ಪತ್ತು ದಿನ ಕಾದರೆ ಹಣ್ಣಾಗುವುದನ್ನು ನೋಡುತ್ತಾನೆ. ಅಷ್ಟನ್ನು ನೋಡುವ ಕರುಣ ಸಿಕ್ಕಿದೆ ನಮಗೆ. ಉದುರಿಬಿದ್ದ ಮಾವಿನ ಮಿಡಿಗಳಿಂದ ಉಪ್ಪಿನಕಾಯಿ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ.

ಮೊನ್ನೆ ಕುಳಿತು ನೆಲ್ಲಿಕಾಯಿ ಉಪ್ಪಿನಕಾಯಿ ಮಾಡಿದೆವು. ಯಾವಾಗಲೋ ನೆಟ್ಟಗೇರುಬೀಜದ ಗಿಡ ಹಣ್ಣು ಕೊಡಲು ಶುರುವಾದ ಕ್ಷಣ ಆ ಹಣ್ಣಿನ ಜ್ಯೂಸ್‌ ಮಾಡಿ ಕುಡಿದೆ. ಆ ಗೇರು ಬೀಜವನ್ನು ಫ್ರೈ ಮಾಡಿ ತಿಂದೆ. ಬಾಲ್ಯಕ್ಕೆ ಹೋದೆ. ಮಂಗಳೂರಿನಲ್ಲಿ ನಮ್ಮ ತಂದೆಯ ಊರಿಗೆ ಹೋದಾಗ ಗೇರು ಬೀಜ ತರಬೇಕಾದರೆ ಗುಡ್ಡಕ್ಕೆ ಹೋಗಬೇಕಾಗಿತ್ತು ನಾವು. ಹೋಗುವಾಗ ಉದ್ದದ ಕೋಲು ಕೊಡುತ್ತಿದ್ದರು. ಅದರ ತುದಿಗೆ ಕತ್ತಿ ಕಟ್ಟಿರುತ್ತಿತ್ತು. ಅಲ್ಲಿ ಗೇರು ಹಣ್ಣು ತಿನ್ನುತ್ತಿದ್ದೆವು. ಸೊನೆ ತಾಗಿ ಮುಖ ಎಲ್ಲಾ ಉರಿಯುತ್ತಿತ್ತು. ಗೇರು ಬೀಜ ತೆಗೆದುಕೊಂಡು ಬಂದು ಬಚ್ಚಲುಮನೆಯ ಕೆಂಡಕ್ಕೆ ಹಾಕಿ ಸುಟ್ಟು ತಿನ್ನುತ್ತಿದ್ದೆವು. ಅದನ್ನು ಈಗ ಮತ್ತೆ ಮಾಡೋಕೆ ಸಾಧ್ಯವಾಯಿತು.

ಭೂಮಿ ನನಗೆ ಪರಿಚಯವಾಗುತ್ತಿದೆ

ತೋಟದಲ್ಲಿ ಹತ್ತು ವರ್ಷದಲ್ಲಿ ಬಂಡಿಪುರದಿಂದ, ನಾಗರಹೊಳೆಯಿಂದ, ಕೇರಳದಿಂದ ಹೀಗೆ ಬೇರೆ ಬೇರೆ ಕಡೆಗಳಿಂದ ತಂದ ಹತ್ತಿರ ಹತ್ತಿರ ಎಂಟು ಸಾವಿರ ಮರಗಳಿವೆ. ಅವುಗಳೆಲ್ಲಾ ಕಾಣಿಸೋಕೆ ಶುರುವಾಗಿದೆ. ಪಿಕ್ಚರ್‌ ಮೀ ಅಂತ ಒಂದು ಆ್ಯಪ್‌ ಇದೆ. ಅದರಲ್ಲಿ ಮರದ ಫೋಟೋ ತೆಗೆದರೆ ಆ ಮರದ ಜಾತಿ ಇತ್ಯಾದಿ ಎಲ್ಲಾ ವಿವರ ಹೇಳುತ್ತದೆ. ಸುಮಾರು ಐವತ್ತರಷ್ಟುಗಿಡಮೂಲಿಕೆಗಳನ್ನು ಹುಡುಕಿದೆ ನಾನು ನಮ್ಮ ತೋಟದಲ್ಲೇ. ನನಗೆ ಗೊತ್ತಿಲ್ಲದೆ ಯಾವುದೇ ಹಕ್ಕಿ ತಂದು ಹಾಕಿದ ಬೀಜದಿಂದ ಬೆಳೆದ ಗಿಡಗಳು ಅವು. ನನ್ನ ಭೂಮಿ ನನಗೆ ಈಗ ಪರಿಚಯವಾಗುತ್ತಿದೆ.

ಸಾವಿನ ಭಯ ಮತ್ತು ವಿಷಾದ

ಸಾವಿನ ಭಯ ಯಾವಾಗಲೂ ವಿಷಾದ ಉಂಟು ಮಾಡುತ್ತದೆ. ಬದುಕುತ್ತಿರುವವನಿಗೆ ಬರಲ್ಲ. ಬದುಕಿನ ಬಗ್ಗೆ ಗೊತ್ತಿಲ್ಲದವನಿಗೆ ಭಯ. ಅದು ಜಗತ್ತನ್ನು, ಪ್ರಕೃತಿಯನ್ನು ಡಿಸ್ಟರ್ಬ್‌ ಮಾಡಿದ ಯಾವುದೇ ಜೀವಿಗೆ ಬರಬೇಕಾದ ಭಯ. ಹಾಗಾಗಿ ಆತ್ಮಾವಲೋಕನ ನಾವೀಗ ಮಾಡಿಕೊಳ್ಳಬೇಕು.

ದುರಂತ ಜೀವನೋತ್ಸಾಹ ಕೊಡಬೇಕು

ಒಂದು ದುರಂತ ಯಾವಾಗಲೂ ಜೀವನೋತ್ಸಾಹವನ್ನು ಕೊಡಬೇಕು. ದುರಂತದ ಕಾರಣಗಳನ್ನು ಹುಡುಕಬೇಕು. ಅದು ಹೊರಗಿನ ದುರಂತ ಅಂತ ಮಾತ್ರ ನೋಡಬಾರದು. ನಮ್ಮ ಒಳಗೆ ನೊಡದೇ ಇರುವುದನ್ನು ನೋಡಲು ಶುರು ಮಾಡಬೇಕು.

ಕಣ್ಣಿಗೆ ಕಾಣದ್ದು ತುಂಬಾ ಇದೆ

ಎಲ್ಲರಿಗೂ ಒಂದು ಜವಾಬ್ದಾರಿ ಇದೆ ಈಗ. ಕೊರೋನಾ ವೈರಸ್‌ ತನ್ನಿಂತಾನೇ ಹರಡುವುದಿಲ್ಲ. ಮನುಷ್ಯರಿಂದಾಗಿ ಹರಡುತ್ತದೆ. ಹಾಗಾಗಿ ನಾವು ಉಳಿದುಕೊಳ್ಳಬೇಕಾದರೆ ನಾವು ಅದನ್ನು ಹರಡಬಾರದು. ದೂರ ಇರಬೇಕು.

ಕೊರೋನಾ ಕಣ್ಣಿಗೆ ಕಾಣಿಸುವುದಿಲ್ಲ. ಕಾಣದೆ ಇರುವುದು ಅಂದ್ರೆ ಅದು ನಮ್ಮ ಕಣ್ಣಿಗೆ ಮಾತ್ರ ಕಾಣಿಸುತ್ತಿಲ್ಲ ಅಂತರ್ಥ. ನಮ್ಮ ಕಣ್ಣಿಗೆ ಕಾಣದೇ ಇರುವುದು ಜಗತ್ತಲ್ಲಿ ಬಹಳ ಇದೆ. ಕಾಣದೆ ಇರುವುದರ ಕುರಿತೂ ಜಾಗೃತರಾಗಿರಬೇಕು. ಅದರ ಇರುವಿಕೆಯನ್ನು ಕೂಡ ಗಮನಿಸುವಂತಹ ಸೂಕ್ಷ್ಮತೆ ನಮ್ಮಲ್ಲಿ ಬೆಳೆಯಬೇಕು ಈಗ. ಬದುಕಿನಲ್ಲಿ ನಾವು ನಮ್ಮ ಸಾವಿಗೆ ಅಲ್ಲ ಇನ್ನೊಬ್ಬರ ಸಾವಿಗೆ ಕಾರಣರಾಗಬಾರದು.

ಮನುಕುಲದ ಬಗ್ಗೆ ಆಲೋಚಿಸಬೇಕು

ನಾನು ದುರಂತವನ್ನು ಪಾಸಿಟಿವ್‌ ಆಗಿಯೇ ನೋಡುತ್ತೇನೆ. ಅದು ನನ್ನ ಜೀವನ್ಮುಖಿಯಾಗಿ ಇರಿಸುತ್ತದೆ. ಎಲ್ಲಾ ವೇದಗಳೂ ಅದನ್ನೇ ಹೇಳಿದ್ದು. ಕರ್ಮಣ್ಯೇ ವಾಧಿಕಾರಸ್ತೆ ಅನ್ನುವುದು ಕೂಡ ಅದೇ ಅಲ್ಲವೇ. ಈ ಕ್ಷಣಗಳಲ್ಲಿ ನಮ್ಮ ಸ್ವಾರ್ಥ, ನಮ್ಮ ಸಾವಿನ ಬಗ್ಗೆ ಆಲೋಚಿಸದೆ ಮನುಕುಲದ ಬಗ್ಗೆ ಆಲೋಚಿಸಬೇಕು.

ನಮಗಿಂತ ಕಷ್ಟದಲ್ಲಿರುವವರ ಏಕಾಂತ ಅರ್ಥವಾಗಿದೆಯೇ?

ಯಾವುದೋ ಒಂದು ದೇಶದಲ್ಲಿ ಕೆಲವು ಹೆಣ್ಣು ಮಕ್ಕಳನ್ನು ಕಿಡ್ನಾಪ್‌ ಮಾಡಿ ಮೂರು ವರ್ಷದ ನಂತರ ಬಿಟ್ಟರು. ಆ ವರ್ಷಗಳಲ್ಲಿ ಅರ ಮೇಲೆ ನಿರಂತರ ಅತ್ಯಾಚಾರ ಆಗಿತ್ತು. ಅವರ ಏಕಾಂತ ನಮಗೆ ಅರ್ಥವಾಗಿದೆಯಾ? ಬಾಂಗ್ಲಾದೇಶ ಗಡಿಯಲ್ಲಿ ಎಷ್ಟೋ ಜನರನ್ನು ಸುಟ್ಟು ಕೊಲ್ಲುತ್ತಾರೆ, ಆ ರೋಹಿಂಗ್ಯಾಗಳ ಏಕಾಂತ ಅರ್ಥವಾಗಿದೆಯಾ? ಕಾಶ್ಮೀರದ ಏಕಾಂತ ಗೊತ್ತಿದೆಯಾ? ಅವರ ಮುಂದೆ ನಮ್ಮದು ಏಕಾಂತವೇ? ಇದನ್ನು ಮನೆಯಲ್ಲಿರಲು ಕಷ್ಟಎನ್ನುವವರು ಯೋಚಿಸಬೇಕು.

ಸಿಯಾಚಿನ್‌ನಲ್ಲಿ ಇರುವವರಿಗಿಂತ ನಿಮಗೆ ಕಷ್ಟವೇ?

ಏಕಾಂತ ಒಂದು ಅದ್ಭುತ ವರ. ನಾಲ್ಕು ವಾರ ಸುಮ್ಮನೆ ಇರಕಾಗಲ್ವಾ. ಸಿಯಾಚಿನ್‌ನಲ್ಲಿ ಒಂದು ಲೀಟರ್‌ ಸೀಮೆ ಎಣ್ಣೆ ತೆಗೆದುಕೊಂಡು ಹೋಗಬೇಕಾದರೆ ಎಷ್ಟೋ ಲಕ್ಷ ಖರ್ಚು ಮಾಡಬೇಕು ನಾವು. ಅಲ್ಲಿ ಇರುವವರ ಏಕಾಂತಕ್ಕಿಂತ ನಮ್ಮ ಏಕಾಂತ ಎಷ್ಟುದೊಡ್ಡದು? ಈ ಸಂದರ್ಭದಲ್ಲಿ ನಿಮ್ಮ ಜತೆ ಇರುವವರನ್ನು ನೋಡಿ. ಮಾತಾಡಿ. ಪ್ರೀತಿಸಿ. ಈ ಜಗತ್ತಲ್ಲಿರುವ ಸಹಸ್ರಾರು ಜೀವಿಗಳಲ್ಲಿ ನೀವೂ ಒಬ್ಬರು ಅನ್ನುವುದನ್ನು ಅರ್ಥ ಮಾಡಿಕೊಳ್ಳಿ. ಕೊರೋನಾದ ಈ ಕಾಲದಲ್ಲಿ ಕರುಣೆಯಿಂದ ಬದುಕನ್ನು ನೋಡಿ. ಕರುಳಿನಿಂದ ಬದುಕು ನೋಡಿ. ಕರುಳಿನ ಮಾತನ್ನು ಕೇಳಿ.

ನೋವಿನ ಜತೆ ಸಾಂತ್ವನವೂ ಇದೆ

ಕೊರೋನಾಗೆ ಜಾತಿ, ಅಂತಸ್ತು ಭೇದವಿಲ್ಲ, ಆದರೆ ಜನ ಅದಕ್ಕೂ ಕೋಮುವಾದ ಕಲ್ಪಿಸಿ ಜಗಳಾಡುತ್ತಿದ್ದಾರಲ್ಲ ಅಂತ ತುಂಬಾ ನೋವಾಗುತ್ತಿದೆ. ಅದೇ ಸಂದರ್ಭದಲ್ಲಿ ಎಷ್ಟೋ ಜನ ಮಾನವೀಯತೆ ಸಂಭ್ರಮಿಸುತ್ತಿರುವುದನ್ನು ನೋಡಿ ಮಾನತೆಯ ಮೇಲೆ ನಂಬಿಕೆ ಕೂಡ ಬರುತ್ತಿದೆ. ನೋವಿನ ಜತೆ ಸಾಂತ್ವನವೂ ಇದೆ.

click me!