ಲಾಕ್‌ಡೌನ್‌ ನಂತರ ಮುಚ್ಚಲಿವೆ 150 ಪ್ಲಸ್‌ ಚಿತ್ರಮಂದಿರಗಳು; ಕೊರೋನಾ ತಂದಿಟ್ಟಕೋಟಿ ನಷ್ಟ!

By Kannadaprabha NewsFirst Published May 15, 2020, 9:06 AM IST
Highlights

ಲಾಕ್‌ಡೌನ್‌ ಸಂಕಷ್ಟದಿಂದ ತಾತ್ಕಾಲಿಕವಾಗಿ ಬಾಗಿಲು ಹಾಕಿರುವ ಏಕಪರದೆಯ ಚಿತ್ರಮಂದಿರಗಳ ಪೈಕಿ ಬಹಳಷ್ಟುಥಿಯೇಟರ್‌ಗಳು ಖಾಯಂ ಆಗಿ ಬಾಗಿಲು ಮುಚ್ಚಲಿವೆ. ಹಾಗೆ ಪ್ರದರ್ಶಕರ ಕಷ್ಟಗಳು, ಕಾರ್ಮಿಕರ ಸ್ಥಿತಿಗಳ ಕುರಿತಾದ ಸಂಪೂರ್ಣ ಗ್ರೌಂಡ್‌ ರೀಪೋರ್ಟ್‌ ಇಲ್ಲಿದೆ.

ಆರ್‌ ಕೇಶವಮೂರ್ತಿ

ಚಿತ್ರಮಂದಿರಗಳ ಸಂಖ್ಯೆ: 600 ರಿಂದ 615

ವರ್ಷದ ವಹಿವಾಟು: 24 ಕೋಟಿ

ವರ್ಷದ ಖರ್ಚು: 16 ಕೋಟಿಗೂ ಹೆಚ್ಚು

ಕಾರ್ಮಿಕರ ಸಂಖ್ಯೆ: 10 ಸಾವಿರ

ಲಾಕ್‌ಡೌನ್‌ ತಂದ ಅಂದಾಜು ನಷ್ಟ: 20 ರಿಂದ 22 ಕೋಟಿ

ಎಲ್ಲರಿಗೂ ಕೊರೋನಾ, ಲಾಕ್‌ಡೌನ್‌ ಬಿಸಿ. ಬಹುತೇಕ ಕ್ಷೇತ್ರಗಳು, ಅಲ್ಲಿನ ಕೆಲಸಗಾರರು ಈ ಸಂಕಷ್ಟದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ನೆರವು ಪಡೆದುಕೊಳ್ಳುತ್ತಿದ್ದರೆ, ಸಿನಿಮಾ ಪ್ರದರ್ಶಕರು ಯಾರಿಗೂ ಬೇಡವಾಗಿದ್ದಾರೆ. ಹಾಗೆ ಈ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕೂಡ. ಲಾಕ್‌ಡೌನ್‌ ನಂತರ 150ಕ್ಕೂ ಹೆಚ್ಚು ಚಿತ್ರಮಂದಿರಗಳು ಖಾಯಂ ಆಗಿ ಬಾಗಿಲು ಮುಚ್ಚುವ ಆತಂಕದಲ್ಲಿವೆ.

ಕೋಟಿ ಕೋಟಿ ವಹಿವಾಟು ನಡೆಸುತ್ತ, ಬಹು ದೊಡ್ಡ ಉದ್ಯಮಗಳು ಎನಿಸಿಕೊಂಡಿರುವ ಪೈಕಿ ಮನರಂಜನೆ ಕ್ಷೇತ್ರವೂ ಒಂದು. ಪ್ರತಿ ವರ್ಷ ಸುಮಾರು 450 ಕೋಟಿ ತೆರಿಗೆ ನೀಡುತ್ತಿರುವ ಮನರಂಜನೆ ಕ್ಷೇತ್ರ ಎಂದ ಕೂಡಲೇ ನಾಯಕ, ನಾಯಕಿ ಮಾತ್ರ ಲೆಕ್ಕಕ್ಕೆ ಸಿಗುತ್ತಾರೆ. ಆದರೆ, ಇವರು ಮಾಡುವ ಸಿನಿಮಾಗಳನ್ನು ಪ್ರದರ್ಶಿಸುವ ಪ್ರದರ್ಶಕರು, ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಕಷ್ಟಗಳು ಯಾರಿಗೂ, ಯಾವ ರೀತಿಯಲ್ಲೂ ಲೆಕ್ಕಕ್ಕೆ ಬರುತ್ತಿಲ್ಲ ಯಾಕೆ ಎಂಬುದು ಚಿತ್ರ ಪ್ರದರ್ಶಕರು ಕೇಳುತ್ತಿರುವ ಪ್ರಶ್ನೆ. ಹಾಗಾದರೆ ರಾಜ್ಯದಲ್ಲಿ ಪ್ರದರ್ಶಕರು ಎದುರಿಸುತ್ತಿರುವ ಸಂಕಷ್ಟಗಳೇನು?

ಲಾಕ್‌ಡೌನ್‌ ನಂತರದ ಸಂಕಷ್ಟ

ಸದ್ಯ ರಾಜ್ಯದ ಎಲ್ಲ ಚಿತ್ರಮಂದಿರಗಳು ಸಂಪೂರ್ಣವಾಗಿ ಬಂದ್‌ ಆಗಿವೆ. ಪ್ರದರ್ಶಕರು ಯಾವ ರೀತಿಯಲ್ಲೂ ವಹಿವಾಟು ನಡೆಸುತ್ತಿಲ್ಲ. ಚಿತ್ರಮಂದಿರ, ಸಿನಿಮಾ ಪ್ರದರ್ಶನದ ಹೊರತಾಗಿ ಬೇರೆ ಏನೂ ಉದ್ಯೋಗ ಮಾಡದವರಿಗೆ ಈಗ ವರಮಾನ ಇಲ್ಲ. ಆದರೂ ಕಾರ್ಮಿಕರಿಗೆ ಸಂಬಳ ಕೊಡಬೇಕು. ಈಗಾಲೇ ಮಾಚ್‌ರ್‍ ಹಾಗೂ ಏಪ್ರಿಲ್‌ ತಿಂಗಳ ಸಂಬಳ ನೀಡಿದ್ದಾರೆ. ಮುಂದೇನು ಗೊತ್ತಿಲ್ಲ.

ಲಾಕ್‌ಡೌನ್‌ ಇದ್ದರೂ ಕಾರ್ಮಿಕರಿಗೆ ಕಡ್ಡಾಯವಾಗಿ ಸಂಬಳ ಕೊಡಬೇಕು ಎನ್ನುವ ಸರ್ಕಾರ, ರನ್ನಿಂಗ್‌ನಲ್ಲಿ ಇಲ್ಲದ ಥಿಯೇಟರ್‌ಗಳಿಂದ ಆಸ್ತಿ ತೆರಿಗೆ, ವಿದ್ಯುತ್‌, ನೀರು, ಒಳಚರಂಡಿ ವೆಚ್ಚವನ್ನು ಮಾತ್ರ ವಸೂಲಿ ಮಾಡುತ್ತಿದೆ. ವರಮಾನ ಇಲ್ಲದಿದ್ದರೂ ಖರ್ಚು ಮಾತ್ರ ಮಾಡಬೇಕಾದ ಪರಿಸ್ಥಿತಿ ಪ್ರದರ್ಶಕರದ್ದು.

ಚಿತ್ರಮಂದಿರಗಳು ಮತ್ತು ಪ್ರೇಕ್ಷಕರು

ರಾಜ್ಯದಲ್ಲಿ ಒಟ್ಟು 600 ರಿಂದ 615 ಚಿತ್ರಮಂದಿರಗಳು ಇವೆ. 240 ರಿಂದ 250 ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ ಗಳು ಇವೆ. ಇಷ್ಟೂಚಿತ್ರಮಂದಿರಗಳಲ್ಲಿ ಒಂದು ಪ್ರದರ್ಶನಕ್ಕೆ ಅಂದರೆ ಒಂದು ಶೋಗೆ 4 ಲಕ್ಷ 10 ಸಾವಿರ ಸೀಟುಗಳು ಸಿಗುತ್ತವೆ. ಇದರಲ್ಲಿ ಮಲ್ಟಿಪ್ಲೆಕ್ಸ್‌ ಸೀಟುಗಳೇ 56 ಸಾವಿರ ಇದೆ. ಉಳಿದಂತೆ 3 ಲಕ್ಷಕ್ಕೂ ಹೆಚ್ಚು ಸೀಟುಗಳು ಏಕಪರದೆಯ ಚಿತ್ರಮಂದಿರಗಳದ್ದು. ಒಂದು ದಿನಕ್ಕೆ 16 ಲಕ್ಷ ಜನ ಸಿನಿಮಾ ನೋಡುತ್ತಾರೆ. ಈ ಲೆಕ್ಕದಲ್ಲಿ ಒಂದು ವರ್ಷಕ್ಕೆ 18 ಕೋಟಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ಹೋಗುತ್ತಾರೆ.

ಥಿಯೇಟರ್‌ಗಳ ಕಾರ್ಮಿಕರು

ರಾಜ್ಯದಲ್ಲಿರುವ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಒಟ್ಟು ಕಾರ್ಮಿಕರ ಸಂಖ್ಯೆ 8 ರಿಂದ 10 ಸಾವಿರ. ನಗರ ಕೇಂದ್ರಿತ ಪ್ರತಿ ಚಿತ್ರಮಂದಿರದಲ್ಲೂ 20 ರಿಂದ 25 ಜನ ಕೆಲಸ ಮಾಡುತ್ತಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಕೇಂದ್ರದ ಚಿತ್ರಮಂದಿರಗಳಲ್ಲಿ 10 ರಿಂದ 15 ಜನ ಕಾರ್ಮಿಕರಿದ್ದಾರೆ.

ಕಲೆಕ್ಷನ್‌ ಹಾಗೂ ವಹಿವಾಟು

ಕೋಟಿಗಳ ಲೆಕ್ಕದಲ್ಲಿ ವಹಿವಾಟು ನಡೆಸುವ ಚಿತ್ರಮಂದಿರಗಳಿಗೆ ಕಲೆಕ್ಷನ್‌ ವಿಚಾರದಲ್ಲಿ ಮಾತ್ರ ಯಾವ ಗ್ಯಾರಂಟಿಯೂ ಇಲ್ಲ. ಶೇ.20 ಭಾಗದಂತೆ ಅಂದಾಜು ಒಂದು ವಾರಕ್ಕೆ 3 ಲಕ್ಷ ರುಪಾಯಿ ಕಲೆಕ್ಷನ್‌ ಮಾಡುತ್ತವೆ. ಈ ಲೆಕ್ಕದಲ್ಲಿ ಹೇಳುವುದಾದರೆ ಏಕಪರದೆಯ ಚಿತ್ರಮಂದಿರಗಳ ಗಳಿಕೆ ಒಂದು ತಿಂಗಳಿಗೆ 15 ಲಕ್ಷ ರುಪಾಯಿ. ಆದರೆ, ಇಲ್ಲಿ ನಾಲ್ಕು ವಿಭಾಗಗಳ ಚಿತ್ರಮಂದಿರಗಳಿವೆ. ಎ ಕೆಟಗರಿ ಚಿತ್ರಮಂದಿರಗಳ ಗಳಿಕೆ ಒಂದು ವಾರಕ್ಕೆ 3 ಲಕ್ಷ, ಬಿ ಕೆಟಗರಿಯಲ್ಲಿ 2 ಲಕ್ಷ, ಸಿ ಕೆಟಗರಿಯಲ್ಲಿ 1.5 ಲಕ್ಷ, ಡಿ ಕೆಟಗರಿಯಲ್ಲಿ 1 ಲಕ್ಷ ಹಾಗೂ ಇ ಕೆಟಗರಿ ಚಿತ್ರಮಂದಿರಗಳ ಗಳಿಕೆ 40 ರಿಂದ 50 ಸಾವಿರ. 600 ಚಿತ್ರಮಂದಿರಗಳ ಒಂದು ವರ್ಷದ ಸರಾಸರಿ ವಹಿವಾಟು 24 ಕೋಟಿ. ಬಿಡುಗಡೆಯಾದ ಎಲ್ಲ ಸಿನಿಮಾಗಳು ಸೂಪರ್‌ ಹಿಟ್‌ ಆದರೆ ಮಾತ್ರ ಪ್ರದರ್ಶಕರು ಕೂಡ ಕೋಟಿ ಒಡೆಯರಾಗಲು ಸಾಧ್ಯ.

ಕೊರೋನಾ ವೈರಸ್‌ ನಿಯಂತ್ರಿಸಲು ಹುಚ್ಚಾ ವೆಂಕಟ್‌ ಕೊಟ್ಟ ಐಡಿಯಾ; ಕೇಳುತ್ತಾ ಸರ್ಕಾರ ?

ಖರ್ಚು, ವೆಚ್ಚ, ನಿರ್ವಹಣೆ ಮತ್ತು ಸಂಬಳ

ಒಂದು ವರ್ಷದಲ್ಲಿ 24 ಕೋಟಿ ವಹಿವಾಟು ಮಾಡುವ ಚಿತ್ರಮಂದಿರಗಳ ಒಂದು ವರ್ಷದ ಖರ್ಚು 16 ಕೋಟಿಗೂ ಹೆಚ್ಚು. ಒಂದು ಚಿತ್ರಮಂದಿರ ತಿಂಗಳಿಗೆ 30 ಸಾವಿರ ವೆಚ್ಚ ಮಾಡುತ್ತದೆ. 10 ಸಾವಿರ ಮಂದಿಯ ಕಾರ್ಮಿಕರ ಸಂಬಳವೇ ಮಾಸಿಕ 10 ಕೋಟಿ. ಇದು ಪ್ರತ್ಯೇಕ. ಈಗಾಗಲೇ ಯಾವುದೇ ರೀತಿಯ ಆದಾಯ ಇಲ್ಲದೆ ಹೋದರೂ ಎರಡು ತಿಂಗಳು ಸಂಬಳ ನೀಡಲಾಗಿದೆ. ಅಂದರೆ ಒಂದು ರುಪಾಯಿ ವರಮಾನ ಇಲ್ಲದಿದ್ದರೂ ಪ್ರದರ್ಶಕರು ಕಾರ್ಮಿಕರ ಸಂಬಳವೇ 20 ಕೋಟಿ ಭರಿಸಿದ್ದಾರೆ. ಇನ್ನೂ ಚಿತ್ರಮಂದಿರ ಚಾಲನೆಯಲ್ಲಿ ಇರಲಿ, ಬಿಡಲಿ ಒಂದು ಚಿತ್ರಮಂದಿರ ಕನಿಷ್ಠ ತಿಂಗಳಿಗೆ 15 ರಿಂದ 20 ಸಾವಿರ ಮಿನಿಮ್‌ ಶುಲ್ಕ ಕೊಡಲೇಬೇಕಾಗಿದೆ.

ಕೋಟಿಗಳ ಲೆಕ್ಕದಲ್ಲಿ ನಷ್ಟ

ಕಳೆದ 60 ದಿನಗಳಿಂದ ಚಿತ್ರಮಂದಿರಗಳು ಬಂದ್‌ ಆಗಿವೆ. ಆದರೂ ಕೋಟಿ ಕೋಟಿ ವೆಚ್ಚ ಹಾಗೂ ಪಾವತಿಯ ನಷ್ಟದ ಭಾರವನ್ನು ಪ್ರದರ್ಶಕರು ಹೊತ್ತುಕೊಳ್ಳಬೇಕಿದೆ. ಚಿತ್ರಮಂದಿರಗಳು ಚಾಲನೆ ಇಲ್ಲದೆ ಬಂದ್‌ ಆಗಿರುವ ಕಾರಣ ಅವುಗಳ ಸರ್ವಿಸ್‌ ಮಾಡಲು 3 ಕೋಟಿ ವೆಚ್ಚವಾಗಲಿದೆ. ಒಂದು ವೇಳೆ ಸೀಟು, ಪರದೆ ಇತ್ಯಾದಿಗಳು ದುರಸ್ಥಿ ಆಗಿದ್ದರೆ ಅದಕ್ಕೆ ಪ್ರತ್ಯೇಕ ವೆಚ್ಚ ಭರಿಸಬೇಕಿದೆ.

ಏಕಪರದೆ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಬಳ ನೀಡಲೇಬೇಕು ಎನ್ನುವ ಸರ್ಕಾರದ ಅದೇಶದಿಂದ ಮಾಸಿಕ 10 ಕೋಟಿ, ವಿದ್ಯುತ್‌ ಹಾಗೂ ಒಳಚರಂಡಿ ನಿರ್ವಹಣೆಗೆ ವಿಧಿಸಿರುವ ಮಿನಿಮ್‌ ಶುಲ್ಕದಿಂದ 1 ಕೋಟಿ, ಆಸ್ತಿ ತೆರಿಗೆ ಪಾವತಿಯಿಂದ 5 ಕೋಟಿ, ಸರ್ಕಾರದ ನೀತಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಿನಿಮಾ ಮಂದಿರಗಳು ಪುನರಾರಂಭ ಮಾಡಿದರೆ ಈಗ ಬರುತ್ತಿರುವ ವರಮಾನದಲ್ಲಿ ಶೇ.60 ಭಾಗ ಕಡಿತ ಆಗಿ, ಒಂದು ವಾರಕ್ಕೆ ಅಂದಾಜು 2 ಕೋಟಿ... ಹೀಗೆ ಕೋಟಿ ಕೋಟಿಗಳ ಲೆಕ್ಕದಲ್ಲಿ ಪ್ರದರ್ಶಕರು ನಷ್ಟಅನುಭವಿಸಬೇಕಾಗುತ್ತದೆ ಎಂಬುದು ಪ್ರದರ್ಶಕರೇ ಕೊಡುವ ಲೆಕ್ಕ.

150 ಚಿತ್ರಮಂದಿರಗಳು ಬಾಗಿಲು ಮುಚ್ಚಲಿವೆ!?

1980ರಲ್ಲಿ 1200 ಚಿತ್ರಮಂದಿರಗಳು ಇದ್ದವು. 1984 ನಂತರ ಒಂದೊಂದೇ ಚಿತ್ರಮಂದಿರ ಬಾಗಿಲು ಹಾಕುತ್ತ ಬಂದು ಈಗ 600 ರಿಂದ 615 ಚಿತ್ರಮಂದಿರಗಳು ಇವೆ. ಸದ್ಯದ ಪರಿಸ್ಥಿತಿ ಮುಂದುವರಿದು, ಸರ್ಕಾರ ಯಾವುದೇ ರೀತಿಯಲ್ಲೂ ಸ್ಪಂದಿಸದೆ ಹೋದರೆ ರಾಜ್ಯದಲ್ಲಿ ಹೆಚ್ಚು ಕಮ್ಮಿ 150ಕ್ಕೂ ಹೆಚ್ಚು ಚಿತ್ರಮಂದಿರಗಳು ಬಾಗಿಲು ಹಾಕಿಕೊಳ್ಳುವ ಅಪಾಯದಲ್ಲಿವೆ. ಕೋಟಿ ಕೋಟಿ ತೆರಿಗೆ ಕಟ್ಟು, ಮನರಂಜನೆಯನ್ನೂ ನೀಡುತ್ತ ಬಂದಿರುವ ಚಿತ್ರಮಂದಿರಗಳು ತೆರೆ ಮರೆಗೆ ಸರಿಯುವ ಮುನ್ನ ಪ್ರದರ್ಶಕರ ಬೇಡಿಕೆಗಳನ್ನೂ ಪರಿಗಣಿಸಿ ಎಂಬುದು ರಾಜ್ಯದ ಚಿತ್ರಮಂದಿರಗಳ ಮನವಿ.

ನಮ್ಮದು ನಾಲ್ಕೇ ಬೇಡಿಕೆಗಳು

ಕೆ ವಿ ಚಂದ್ರಶೇಖರ್‌ , ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ

1. ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಬಳ ನೀಡಲು ಪ್ರದರ್ಶಕರು ಅಶಕ್ತರಾಗಿರುವ ಕಾರಣ, ಸರ್ಕಾರವೇ ಇವರಿಗೆ ಸಂಬಳ ನೀಡಲು ಅನುದಾನ ನೀಡಬೇಕು.

2. ವಿದ್ಯುತ್‌, ಒಳಚರಂಡಿ ಇಲಾಖೆಯ ಮಾಸಿಕ ಕನಿಷ್ಠ (ಮಿನಿಮ್‌) ಶುಲ್ಕ ಪಾವತಿಯಲ್ಲಿ ರಿಯಾಯಿತಿ ನೀಡಬೇಕು.

3. ಲಾಕ್‌ಡೌನ್‌ ಕಾರಣದಿಂದ ಎಲ್ಲ ಚಿತ್ರಮಂದಿರಗಳು ಬಂದ್‌ ಆಗಿವೆ. ಹೀಗಾಗಿ ಈ ಸಾಲಿನ ಆಸ್ತಿ ತೆರಿಗೆಯಲ್ಲಿ ಚಿತ್ರಮಂದಿರಗಳಿಗೆ ವಿನಾಯಿತಿ ನೀಡಬೇಕು.

4. ಚಿತ್ರಮಂದಿರಗಳಿಗೆ ನಿರೀಕ್ಷಿತ ಆದಾಯ ಇಲ್ಲ. ಹೀಗಾಗಿ ಪುನಶ್ಚೇತನಕ್ಕೆ ಒಂದು ಟಿಕೆಟ್‌ ಮಾರಾಟದಲ್ಲಿ ತೆರಿಗೆ ರಹಿತ 5 ರುಪಾಯಿ ನಿರ್ವಾಹಣ ಶುಲ್ಕ ಪಡೆದುಕೊಳ್ಳಲು ಅನುಮತಿ ಕೊಡಬೇಕು.

ಲಕ್ಷ್ಮಿಯೂ ಒಲಿದಿದ್ದಾಳೆ ವಿಜಯಲಕ್ಷ್ಮಿಗೆ: ದರ್ಶನ್‌ಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ!

ಸರ್ಕಾರದ ನಿಯಮ ಏನು?

ಚಿತ್ರಮಂದಿರಗಳು ಹಾಗೂ ಸಿನಿಮಾ ಪ್ರದರ್ಶಕರ ವಿಚಾರದಲ್ಲಿ ಸರ್ಕಾರದ ನಿಯಮ ಹಾಗೂ ನಿಲುವು ಬೇರೆ. ಬೇರೆ ಉದ್ಯಮಗಳಿಗೆ ಕೊಡುವ ತೆರಿಗೆ ರಿಯಾಯಿತಿ ಸೇರಿದಂತೆ ಯಾವುದೇ ಸೌಲಭ್ಯಗಳಿಂದ ಚಿತ್ರಮಂದಿರಗಳನ್ನು ದೂರ ಇಡಲಾಗಿದೆ. ಯಾಕೆಂದರೆ ಚಿತ್ರಮಂದಿರಗಳು ಕಮರ್ಷಿಯಲ್‌ ಹಣೆಪಟ್ಟಿಕಟ್ಟಿಕೊಂಡಿವೆ. ವಾಣಿಜ್ಯ ಕಾಯ್ದೆಗಳ ಅಡಿಯಲ್ಲಿ ಬರುವ ಚಿತ್ರಮಂದಿರಗಳನ್ನು ಎಂಥದ್ದೇ ವಿಪತ್ತುಗಳ ಸಂದರ್ಭದಲ್ಲೂ ರಿಯಾಯಿತಿಗಳಿಗೆ ಪರಿಗಣಿಸುತ್ತಿಲ್ಲ. ಪ್ರದರ್ಶಕರ ವಲಯ, ಸರ್ಕಾರದ ಮುಂದಿಟ್ಟಿರುವ ನಾಲ್ಕೈದು ಬೇಡಿಕೆಗಳು ಕಾನೂನುಬದ್ಧವಾಗಿದ್ದು, ಇಂಥ ಸಂಕಷ್ಟದ ಕಾಲದಲ್ಲಾದರೂ ಇವುಗಳ ಕಡೆಗೆ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟಸಚಿವರು, ಅಧಿಕಾರಿಗಳು ಗಮನ ಕೊಡಬೇಕು ಎಂಬುದು ಕರ್ನಾಟಕ ಚಿತ್ರ ಪ್ರದರ್ಶಕರ ಅಂಬೋಣ.

click me!