ಲಾಕ್‌ಡೌನ್‌ ಎಂಬ ನಿಜ ಜೀವನದ ಬಿಗ್‌ಬಾಸ್‌ ಆಟದಲ್ಲಿ ಗೆಲ್ಲೋಣ: ರೂಪಾ ಅಯ್ಯರ್‌

By Kannadaprabha NewsFirst Published Apr 9, 2020, 9:12 AM IST
Highlights

ಕೊರೋನಾ ಭೀತಿ ಕಾರಣಕ್ಕೆ ಉಂಟಾಗಿರುವ ಲಾಕ್‌ಡೌನ್‌ ದಿನಗಳನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥೈಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿರ್ದೇಶಕಿ ರೂಪಾ ಅಯ್ಯರ್‌ ಲಾಕ್‌ಡೌನ್‌ ಜೀವನ ಹೇಗೆ ನೋಡುತ್ತಿದ್ದಾರೆ ಎಂದು ಅವರ ಮಾತುಗಳಲ್ಲೇ ಕೇಳಿ.

ಅಧ್ಯಾತ್ಮದ ನೆರಳಿನಲ್ಲಿ

ಈ ಸಮಯದಲ್ಲೇ ನಾವು ಅಧ್ಯಾತ್ಮಿಕವಾಗಿ ಯೋಚಿಸುವ ಅಗತ್ಯ ಇದೆ. ಅಧ್ಯಾತ್ಮ ಅಂದರೆ ಮೂಢನಂಬಿಕೆ ಅಲ್ಲ. ಮನೆ ಮುಂದೆ ರಂಗೋಲಿ ಹಾಕುವುದು, ಸೆಗಣಿಯಿಂದ ಸಾರಿಸುವುದು ಎಷ್ಟುವೈಜ್ಞಾನಿಕವೋ ಅಧ್ಯಾತ್ಮವೂ ಅಷ್ಟೇ ವೈಜ್ಞಾನಿಕ. ನಾನು ಲಾಕ್‌ಡೌನ್‌ ಶುರುವಾದಾಗ ಐದು ದಿನಗಳ ಕಾಲ ಮಹಾ ಸುದರ್ಶನ ಹೋಮ ಮಾಡಿದೆ. ಇದು ಶತ್ರು ಸಂಹಾರ ಮಾಡುವ ಕ್ರಿಯೆ. ಜತೆಗೆ ರೋಗ ನಿರೋಧಕ ಶಕ್ತಿಯನ್ನು ನೀಡುವ ಕಾರ್ಯ. ಆನ್‌ಲೈನ್‌ನಲ್ಲಿ ಮುದ್ರಾ ವಿಜ್ಞಾನದ ತರಗತಿ ನಡೆಸುತ್ತಿದ್ದೇನೆ. ಇದರಿಂದ ಹೇಗೆ ಮನುಷ್ಯ ಎನರ್ಜಿಟಿಕ್‌ಆಗಿ, ಪಾಸಿಟಿವ್‌ ಆಗಿ ಯೋಚಿಸುತ್ತಾನೆ ಎಂಬುದು ತಿಳಿಯಬಹುದು.

ಸಿನಿಮಾ ಕಾರ್ಮಿಕರಿಗೆ ನೆರವು

ಲಾಕ್‌ಡೌನ್‌ ದಿನಗಳನ್ನು ಕೇವಲ ಅಧ್ಯಾತ್ಮಿಕವಾಗಷ್ಟೇ ಕಳೆಯುತ್ತಿಲ್ಲ. ಜೊತೆಗೆ ಸಿನಿಮಾ ರಂಗದಲ್ಲಿ ದಿನಗೂಲಿ ಕಾರ್ಮಿಕರು ತುಂಬಾ ಕಷ್ಟದಲ್ಲಿದ್ದಾರೆ. ಅವರಿಗೆ ನೆರವಾಗುವ ಕೆಲಸಗಳನ್ನು ಮಾಡುತ್ತಿದ್ದೇವೆ. ಯಾರು ಕಷ್ಟದಲ್ಲಿ ಇದ್ದಾರೆ ಅಂತ ಗೊತ್ತಾದರೆ ಫೋನ್‌ ಮೂಲಕವೇ ಒಂದೊಂದು ಸಾವಿರ ರುಪಾಯಿಗಳನ್ನು ನೀಡುವ ಕೆಲಸ ಮಾಡುತ್ತಿದ್ದೇವೆ.

ವೇದ ಮಂತ್ರಗಳನ್ನು ಪಠಿಸುವ ನಟಿ ನಿರ್ದೇಶಕಿ !

ನಿರ್ದೇಶಕರಾದ ಎಂ ಡಿ ಕೌಶಿಕ್‌, ನಾಗನಾಥ್‌ ಜೋಶಿ, ನಾಗೇಶ್‌ ಕುಮಾರ್‌ ನನಗೆ ಜತೆಯಾಗಿದ್ದಾರೆ. ಇದು ವೃತ್ತಿಬಾಂಧವರ ಜತೆಗೆ ನಿಲ್ಲುವಂತಹ ಸಮಯ ಮತ್ತು ಜವಾಬ್ದಾರಿ ಅಂದುಕೊಂಡಿದ್ದೇನೆ.

ಸಾಮಾಜಿಕ ಜವಾಬ್ದಾರಿ

ನನಗೆ ವೈರಾಣು ಹರಡಿದರೂ ಪರ್ವಾಗಿಲ್ಲ, ಬೇರೆಯವರಿಗೆ ಇದರಿಂದ ತೊಂದರೆ ಆಗಬಾರದು. ನನ್ನ ಆರೋಗ್ಯದಷ್ಟೇ ಬೇರೆಯವರ ಆರೋಗ್ಯ ಮತ್ತು ಪ್ರಾಣ ಮುಖ್ಯ ಎನ್ನುವ ಸಾಮಾಜಿಕ ಜವಾಬ್ದಾರಿ ಇದ್ದರೆ ಖಂಡಿತ ಲಾಕ್‌ಡೌನ್‌ ದಿನಗಳು ಒತ್ತಡ ಅಂತ ಅನಿಸಲ್ಲ.

ಡಾಕ್ಟರ್ಸ್‌, ಪೊಲೀಸರಿಗೂ ಕುಟುಂಬಗಳಿವೆ. ನಮ್ಮ ಹಾಗೆ ಅವರಿಗೂ ಆರೋಗ್ಯ ಮುಖ್ಯ ಎನ್ನುವ ತಿಳುವಳಿಕೆ ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಬರಬೇಕಿದೆ. ಹಾಗೆ ಬಂದರೆ ಲಾಕ್‌ಡೌನ್‌ ಅನ್ನೋದು ಶಾಪ, ಒತ್ತಡ ಅಥವಾ ಬಂಧನ ಅನಿಸಲ್ಲ. ಅದೊಂದು ಸಾಮಾಜಿಕ ಜವಾಬ್ದಾರಿ ಎನ್ನುವ ಭಾವನೆ ಮೂಡುತ್ತದೆ.

ಹೊರಗೆ ಹೋಗಿ ಮಾಡುವುದೇನು?

ಲಾಕ್‌ಡೌನ್‌ ಜೀವನ ಬಂಧನ, ಮನೆಯಿಂದ ಹೊರಗೆ ಹೋಗಲು ಆಗುತ್ತಿಲ್ಲ ಎನ್ನುವವರಿಗೆ ನನ್ನದೊಂದು ಪ್ರಶ್ನೆ. ಹೊರಗೆ ಹೋಗುವ ಅವಕಾಶ ಸಿಕ್ಕರೆ ಏನು ಮಾಡುತ್ತಿದ್ದಿರಿ ಎಂಬುದನ್ನು ಒಂದು ಪಟ್ಟಿಮಾಡಿ. ಆ ಎಲ್ಲ ಕೆಲಸಗಳನ್ನು ಮನೆಯಲ್ಲೇ ಇದ್ದೇ ಮಾಡಬಹುದು ಅಂತ ನಿಮಗೇ ಅನಿಸುತ್ತದೆ. ಯಾಕೆಂದರೆ ಮೊಬೈಲ್‌ ರೂಪದಲ್ಲಿ ಇಡೀ ಜಗತ್ತೇ ನಮ್ಮ ಕೈಯಲ್ಲಿದೆ. ಎಲ್ಲರ ಜತೆಗೆ ಸಂಪರ್ಕ ಮಾಡಬಹುದು. ಎಲ್ಲರ ಜತೆಗೂ ಮಾತನಾಡಬಹುದು. ಮೊಬೈಲ್‌, ಇಂಟರ್‌ನೆಟ್‌ ಇದ್ದರೆ ಕೂತಲ್ಲೇ ಜೀವನದ ಮುಕ್ಕಾಲು ಪಾಲು ಕೆಲಸಗಳನ್ನು ಮಾಡಬಹುದು. ಹಾಗಾದರೆ ಲಾಕ್‌ಡೌನ್‌ ನಮಗೆ ಬಂಧನ ಹೇಗಾಗುತ್ತದೆ ಹೇಳಿ.

ಲಾಕ್‌ಡೌನ್‌ ಸಂದರ್ಭದಲ್ಲಿ ದುನಿಯಾ ಸೂರಿ ಹೇಳಿದ 7 ಸಂಗತಿಗಳು!

ಮತ್ತೆ ಇಂಥ ಅವಕಾಶ ಸಿಗಲ್ಲ

ನಿಮ್ಮ ಮಕ್ಕಳ ಆಟ-ಪಾಠ ನೋಡಲಿಕ್ಕೆ ಆಗಿರಲ್ಲ. ನಿಮ್ಮ ಹೆತ್ತವರ ಜತೆ ಒಂದು ಗಂಟೆ ಕೂತು ಮಾತನಾಡಿರಲ್ಲ, ಬಿಟ್ಟು ಬಂದ ಊರಿನ ಸ್ನೇಹಿತರನ್ನು ನೆನಪಿಸಿಕೊಂಡಿರಲ್ಲ, ಸಂಪಾದನೆಯ ಹಿಂದೆ ಹೊರಟ ನಮ್ಮ ದೇಹಕ್ಕೆ ವಿರಾಮ ಸಿಕ್ಕಿರಲ್ಲ... ಈ ಎಲ್ಲ ಅಸಾಧ್ಯಗಳನ್ನು ಈಗ ಸಾಧ್ಯ ಮಾಡಿಕೊಳ್ಳಿ. ಮಕ್ಕಳು, ಅಪ್ಪ-ಅಮ್ಮನ ಜತೆಗೆ ಕಾಲ ಕಳೆಯಿರಿ. ಮರೆತು ಹೋದ ಸ್ನೇಹಿತರಿಗೆ ಒಂದು ಫೋನ್‌ ಮಾಡಿ ಮಾತನಾಡಿ, ನಿಮ್ಮ ಊರಿನ ವಿಚಾರಗಳನ್ನು ಕೇಳಿ. ಯಾವಾಗಲೋ ನೋಡಬೇಕು ಎಂದುಕೊಂಡಿದ್ದ ಸಿನಿಮಾ, ಇನ್ನೊಂದು ದಿನ ಓದೋಣ ಅಂದುಕೊಂಡಿದ್ದ ಪುಸ್ತಕ, ಏನಾದರೂ ಬರೆಯಬೇಕೆಂಬ ಮೂಡಿದ ಆಲೋಚನೆ, ಮನೆಯವರಿಗೆ ಏನಾದರೂ ಸಹಾಯ ಮಾಡೋಣ ಅಂದುಕೊಂಡಿದ್ದನ್ನು ಈಗ ಜಾರಿಗೆ ತನ್ನಿ. ಹೀಗೆ ನಾವು ಯೋಚಿಸಲು ಶುರು ಮಾಡಿದರೆ ಲಾಕ್‌ಡೌನ್‌ ಶಾಪ ಅಲ್ಲ, ವರ ಅನಿಸುತ್ತದೆ. ನೀವಾಗಿ ನೀವೇ ಕೇಳಿಕೊಂಡರೂ ಸಿಗದ ಜೀವನದ ವಿರಾಮ ಈಗ ಸಿಕ್ಕಿದೆ. ನಮ್ಮನ್ನು ನಾನೇ ನಿಭಾಯಿಸುವ ಮತ್ತು ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳುವ ಅಪೂರ್ವ ಅವಕಾಶ ಇದು ಎಂಬುದು ಲಾಕ್‌ ಡೌನ್‌ ದಿನಗಳಲ್ಲಿ ನನಗೆ ಆದ ಅನುಭವ. ಬಿಗ್‌ ಬಾಸ್‌ನಂತಹ ರಿಯಾಲಿಟಿ ಶೋಗಳನ್ನು ಕುತೂಹಲದಿಂದ ನೋಡಿ ಗೆಲ್ಲಿಸುವ ನಮಗೆ, ಈಗ ಲಾಕ್‌ಡೌನ್‌, ಬಿಗ್‌ಬಾಸ್‌ನಂತೆ ಅಷ್ಟೆ. ಹೀಗಾಗಿ ನಮ್ಮ ನಿಜ ಜೀವನದ ಬಿಗ್‌ಬಾಸ್‌ ಆಟದಲ್ಲಿ ಗೆಲ್ಲೋಣ.

"

click me!