ತೆರೆಯುವುದೇ ಬೆಳ್ಳಿತೆರೆಯ ಮುಚ್ಚಿದ ಬಾಗಿಲು; ಅನುಮತಿಗೆ ಕಾದು ಕುಳಿತಿರುವ ಚಿತ್ರೋದ್ಯಮ!

By Kannadaprabha NewsFirst Published Jun 1, 2020, 8:50 AM IST
Highlights

ಪರಿಸ್ಥಿತಿ ಮೂರು ತಿಂಗಳ ನಂತರ ತಕ್ಕ ಮಟ್ಟಿಗಾದರೂ ಸಹಜಗೆ ಮರಳುತ್ತೆ ಎನ್ನುವ ನಿರೀಕ್ಷೆಯಲ್ಲಿತ್ತು ಚಿತ್ರರಂಗ. ಆದರೆ ಸದ್ಯದ ಮಟ್ಟಿಗೆ ಕೊರೋನಾ ಬಿಸಿ ತಣ್ಣಗೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಕಿರುತೆರೆ ಶೂಟಿಂಗ್‌ ಆರಂಭವಾದ ಬೆನ್ನಲ್ಲೇ, ಚಿತ್ರರಂಗಕ್ಕೂ ಸ್ಟುಡಿಯೋಗಳಲ್ಲಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಅವಕಾಶ ಸಿಕ್ಕಿತು. ಹೀಗಾಗಿ ಜೂನ್‌ 1 ರಿಂದ ಶೂಟಿಂಗ್‌ ಸೇರಿದಂತೆ ಚಿತ್ರಮಂದಿರ ಪ್ರಾರಂಭಕ್ಕೂ ಅವಕಾಶ ಸಿಗುತ್ತದೆಂದು ಚಿತ್ರರಂಗ ನಿರೀಕ್ಷೆ ಮಾಡಿತ್ತು. ಆದರೆ, ಈಗ ಎಲ್ಲ ಲೆಕ್ಕಾಚಾರಗಳು ಉಲ್ಟಾಆಗುತ್ತಿದೆ. ಹಾಗಾದರೆ ಚಿತ್ರೋದ್ಯಮದಲ್ಲಿ ಮುಂದುವರೆದ ಕೊರೋನಾ ಸಂಕಷ್ಟದಿಂದ ಏನೆಲ್ಲ ವಿದ್ಯಾಮಾನಗಳು ನಡೆಯುತ್ತಿವೆ.

1.ಅಡಕತ್ತರಿಯಲ್ಲಿ ಶೂಟಿಂಗ್‌

ಲಾಕ್‌ಡೌನ್‌ನಿಂದ ಎಲ್ಲ ಕ್ಷೇತ್ರಗಳು ಸ್ತಬ್ದಗೊಂಡಂತೆ ಚಿತ್ರೋದ್ಯಮವೂ ತನ್ನ ಕಾರ್ಯಚಟುವಟಿಕೆಗಳನ್ನು ಬಂದ್‌ ಮಾಡಿತ್ತು. ಕಿರುತೆರೆ ಶೂಟಿಂಗ್‌ನಲ್ಲಿ ಸದ್ದು ಮಾಡುತ್ತಿದೆ. ಹೊಸ ಧಾರಾವಾಹಿಗಳು, ಹೊಸ ಕಾರ್ಯಕ್ರಮಗಳು ಪ್ರಸಾರಗೊಳ್ಳಲು ಶುರುವಾಗಿದೆ. ಚಿತ್ರೀಕರಣವನ್ನು ಹೊರತುಪಡಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಸೀಮಿತವಾಗಿದ್ದ ಚಿತ್ರರಂಗಕ್ಕೂ ಈಗ ಶೂಟಿಂಗ್‌ ಅಖಾಡಕ್ಕೆ ಇಳಿಯುವ ಕಾತುರ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮುಂದೆ ಬೇಡಿಕೆಗಳನ್ನು ಮುಂದಿಟ್ಟಿದ್ದು, ಆದಷ್ಟುಬೇಗ ಶೂಟಿಂಗ್‌ಗೆ ಅನುಮತಿ ಕೋರಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಾರಥ್ಯದಲ್ಲಿ ಕನ್ನಡ ಚಿತ್ರರಂಗದ ನಿಯೋಗ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಸದ್ಯಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಸಕಾರಾತ್ಮಕ ಹೇಳಿಕೆ ಬಂದಿಲ್ಲ. ಕಾದು ನೋಡುವ ತಂತ್ರದಲ್ಲಿರುವ ಚಿತ್ರರಂಗ, ಜೂನ್‌.1ರ ನಂತರ ತನ್ನ ನಡೆಯನ್ನು ನಿರ್ಧರಿಸಲಿದೆ.

ಚಿತ್ರರಂಗದ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಅಪಾರ ನಷ್ಟಅನುಭವಿಸಿದ್ದಾರೆ. ಈಗಾಗಲೇ ಅರ್ಧಕ್ಕೆ ನಿಂತಿರುವ ಚಿತ್ರಗಳ ಚಿತ್ರೀಕರಣವೂ ಪೂರ್ಣವಾಗಬೇಕಿದೆ. ಹೊಸ ಚಿತ್ರಗಳನ್ನೂ ನಿರ್ಮಾಪಕರು ಕೈಗೆತ್ತಿಕೊಳ್ಳಬೇಕು. ಹೀಗಾಗಿ ಚಿತ್ರೀಕರಣ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಬಹುದೆಂಬ ಆಸೆಯಲ್ಲಿ ಕಾಯುತ್ತಿದ್ದೇವೆ.-ಜೈರಾಜ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

'Dear Sathya'ಚಿತ್ರದಲ್ಲಿ ಮಿಂಚುತ್ತಿರುವ ರಂಗಭೂಮಿ ಕಲಾವಿದೆ ಅರ್ಚನಾ! 

2. ಚಿತ್ರಮಂದಿರ ತೆರೆಯಲು ಬಿಗಿಪಟ್ಟು

ಬಿಡುಗಡೆಯ ಬಾಗಿಲಲ್ಲಿ ಹಲವು ಚಿತ್ರಗಳು ಕಾಯುತ್ತಿವೆ. ಆದರೆ, ರಾಜ್ಯದ ಚಿತ್ರಮಂದಿರಗಳು ಬಾಗಿಲು ಹಾಕಿಕೊಂಡಿವೆ. ಹೀಗಾಗಿ ಶೂಟಿಂಗ್‌, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗಿಂತ ಚಿತ್ರಮಂದಿರಗಳ ಬಾಗಿಲು ತೆರೆಯುವುದಕ್ಕೆ ಮೊದಲಿನಿಂದಲೂ ಚಿತ್ರರಂಗ ಪಟ್ಟು ಹಿಡಿದಿದೆ. ಬೇರೆ ಬೇರೆ ಕ್ಷೇತ್ರಗಳಿಗೆ ರಿಯಾಯಿತಿ ಕೊಟ್ಟಂತೆ ಚಿತ್ರಮಂದಿರಗಳಿಗೂ ರಿಯಾಯಿತಿ ಕೊಟ್ಟು, ಬಾಗಿಲು ತೆರೆಯಲು ಅವಕಾಶ ಕೋರುತ್ತಿರುವುದು ನಿರ್ಮಾಪಕರು, ಪ್ರದರ್ಶಕರು ಹಾಗೂ ವಿತರಕರು. ಈಗಾಗಲೇ ದೇವಸ್ಥಾನಗಳು ಬಾಗಿಲು ತೆರೆಯಲು ಅವಕಾಶ ಕೊಡುವುದಕ್ಕೆ ಸರ್ಕಾರ ಮನಸು ಮಾಡುತ್ತಿದೆ. ದೇವಸ್ಥಾನಗಳಿಗೆ ಓಕೆ ಎನ್ನಬಹುದಾಗಿದ್ದರೆ, ಚಿತ್ರಮಂದಿರಗಳ ಪ್ರಾರಂಭಕ್ಕೂ ಸರ್ಕಾರ ಗ್ರೀನ್‌ ಸಿಗ್ನಲ್‌ ಕೊಡಲಿ ಎಂಬುದು ಚಿತ್ರರಂಗದ ವಾದ.

ಏನೇ ಕಷ್ಟಗಳು ಬಂದರೂ ಎಲ್ಲರಂತೆ ನಿರ್ಮಾಪಕರು ಬೀದಿಯಲ್ಲಿ ಕೈ ಒಡ್ಡಿ ಸಾಲಿನಲ್ಲಿ ನಿಲ್ಲಲು ಆಗದು. ಕೋಟಿ ಕೋಟಿ ರುಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡುವ ನಿರ್ಮಾಪಕರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಆದರೂ ಚಿತ್ರರಂಗದ ಮುಖ್ಯ ಪಿಲ್ಲರ್‌ ಎನಿಸಿಕೊಂಡಿರುವ ನಿರ್ಮಾಪಕ ಕಷ್ಟದಲ್ಲಿದ್ದಾನೆ. ಅವನ ಕೈ ಹಿಡಿಯುವ ಜವಾಬ್ದಾರಿಯನ್ನು ಸರ್ಕಾರ ತೋರಬೇಕಿದೆ.-ಪ್ರವೀಣ್‌ ಕುಮಾರ್‌, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ

3.ಪರಿಹಾರ ನಿಧಿ ಅವಕಾಶಕ್ಕೆ ಮನವಿ

ಸಿನಿಮಾ ನಿರ್ಮಾಪಕರು ಸರ್ಕಾರದ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ. ಕಳೆದ ಮೂರು ತಿಂಗಳಿಂದ ಚಿತ್ರರಂಗದ ಬಂದ್‌ ಆಗಿದೆ. ಚಿತ್ರೀಕರಣ ಮುಗಿಸಿಕೊಂಡ ಚಿತ್ರಗಳ ನಿರ್ಮಾಪಕರು, ಅರ್ಧಕ್ಕೆ ಶೂಟಿಂಗ್‌ ಮಾಡಿ ನಿಲ್ಲಿಸಿರುವ ನಿರ್ಮಾಪಕರು, ಚಿತ್ರಗಳನ್ನು ಬಿಡುಗಡೆ ಮಾಡಿ ಲಾಕ್‌ಡೌನ್‌ ಕಾರಣಕ್ಕೆ ವಾಪಸ್ಸು ಪಡೆದ ನಿರ್ಮಾಪಕರು ಹೀಗೆ ಎಲ್ಲರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರಗಳ ನಿರ್ಮಾಣ ಹೊರತಾಗಿ ಬೇರೆ ಏನೂ ಗೊತ್ತಿಲ್ಲದ ನಿರ್ಮಾಪಕರಿಗೆ ಈ ಸಂದರ್ಭದಲ್ಲಿ ಆರ್ಥಿಕ ನೆರವು ಬೇಕಿದೆ. ಈ ನಿಟ್ಟಿನಲ್ಲಿ ನಿರ್ಮಾಪಕರಿಗೆ ನೆರವಾಗುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಚಿತ್ರರಂಗವನ್ನು ವಾಣಿಜ್ಯೋದ್ಯಮ ಕ್ಷೇತ್ರ ಎಂದು ಪರಿಗಣಿಸಬೇಕು, ರಾಜ್ಯದಲ್ಲಿ ಬಿಡುಗಡೆಯಾಗುವ ಎಲ್ಲ ಚಿತ್ರಗಳ ಮಾರಾಟಗೊಳ್ಳುವ ಪ್ರತಿ ಟಿಕೆಟ್‌ ಬೆಲೆಯನ್ನು 5 ರುಪಾಯಿಗೆ ಹೆಚ್ಚಿಸಿ, ಈ ಹೆಚ್ಚುವರಿ ದರವನ್ನು ತೆರಿಗೆ ರಹಿತ ಎಂದು ಘೋಷಿಸಬೇಕು. ಹೀಗೆ ತೆರಿಗೆ ರಹಿತವಾಗಿ ಟಿಕೆಟ್‌ಗಳ ಮೇಲೆ ಬರುವ ಹಣವನ್ನು ಕಷ್ಟದಲ್ಲಿರುವ ನಿರ್ಮಾಪಕರಿಗೆ ನೀಡಲು ಆರ್ಥಿಕ ಸಂಕಷ್ಟಪರಿಹಾರ ನಿಧಿ ಹೆಸರಿನಲ್ಲಿ ಸಂಗ್ರಹಿಸುವುದಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ನಾವು ಯಾರಿಗೂ ಬೇಡವಾಗಿದ್ದೇವೆ. ಮೊದಲೇ ಹಿರಿಯ ಕಲಾವಿದರಿಗೆ ಪ್ರಾಮುಖ್ಯತೆ ಇಲ್ಲ. ಪಾತ್ರ ಕೊಡುವುದೇ ಕಷ್ಟ, ಈಗ ಮನೆಯಿಂದ ಆಚೆನೇ ಬರಬೇಡಿ ಅಂದರೆ ಜೀವನ ಮಾಡುವುದು ಹೇಗೆ, ನಾವು ಊಟ ಮಾಡಬೇಕು, ಬಾಡಿಗೆ ಮನೆಯಲ್ಲಿದ್ದೇವೆ, ಬಾಡಿಗೆ ಕಟ್ಟಬೇಕು. ಆದರೆ, ಕೆಲಸ ಇಲ್ಲ. ದಯವಿಟ್ಟು ನಮ್ಮ ಜೀವನಕ್ಕೆ ನೆರವಾಗಿ.-ಡಾ. ಡಿಂಗ್ರಿ ನಾಗರಾಜ್‌, ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಅಧ್ಯಕ್ಷ

4.ಹಿರಿಯ ಕಲಾವಿದರ ಅಳಲು

ಕನ್ನಡ ಚಿತ್ರರಂಗದ ಹಾಗೂ ಕಿರುತೆರೆ ಸೇರಿದಂತೆ 250 ರಿಂದ 300 ಮಂದಿ ಹಿರಿಯ ಕಲಾವಿದರು ಇದ್ದಾರೆ. ಸದ್ಯಕ್ಕೆ ಇವರನ್ನು ಯಾರು ಕೇಳುತ್ತಿಲ್ಲ. 50-60 ವರ್ಷ ಮೇಲ್ಪಟ್ಟಹಿರಿಯ ಕಲಾವಿದರನ್ನು ಶೂಟಿಂಗ್‌ಗೆ ಕರೆಸಬಾರದೆಂಬ ಸರ್ಕಾರದ ಸೂಚನೆಯಿಂದ ಅವಕಾಶ ವಂಚಿತರಾಗಿರುವ ಹಿರಿಯ ಕಲಾವಿದರ ಜೀವನ ಕಷ್ಟಕ್ಕೆ ಸಿಲುಕಿದೆ. ಮೊದಲೇ ಹಿರಿಯ ಕಲಾವಿದರಿಗೆ ಅವಕಾಶಗಳು ಸಿಗುತ್ತಿಲ್ಲ. ಹೆಚ್ಚಿನ ದುಡಿಮೆ ಇಲ್ಲ. ಈಗ ಕೊರೋನಾ ಕಾರಣಕ್ಕೆ ಅವರು ಶೂಟಿಂಗ್‌ನಲ್ಲಿ ಭಾಗವಹಿಸುವಂತಿಲ್ಲ. ಮನೆ ಬಾಡಿಗೆ ಸೇರಿದಂತೆ ಎಲ್ಲವನ್ನೂ ನಿಭಾಯಿಸುವುದು ಹೇಗೆ, ಜೀವನ ಸಾಗಿಸುವುದು ಹೇಗೆ ಎಂಬುದು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಅಳಲು. 50-60 ವರ್ಷ ಚಿತ್ರರಂಗದಲ್ಲೇ ಜೀವನ ಕಳೆದವರು ಈಗ ಅವಕಾಶಗಳು ಇಲ್ಲದೆ, ಜೀವನ ಸಾಗಿಸುವುದಕ್ಕೂ ಕಷ್ಟವಾಗಿದೆ. ತಮಗೆ ಈಗ ಅತ್ಯಹತ್ಯೆಯೇ ದಾರಿ ಎಂಬುದು ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್‌ ಅವರ ಆತಂಕದ ಮಾತು. ಸರ್ಕಾರ ಅಥವಾ ಚಿತ್ರರಂಗ ತಮಗೆ ತಿಂಗಳಿಗೆ ಇಂತಿಷ್ಟುಆರ್ಥಿಕ ನೆರವು ಕೊಡಲಿ ಎಂಬುದು ಅವರ ಮನವಿ.

ಶೂಟಿಂಗ್‌ ಗೈಡ್‌ಲೈನ್ಸ್‌

ಭಾರತೀಯ ಸಿನಿಮಾ ನಿರ್ಮಾಪಕರ ಸಂಘ 37 ಪುಟಗಳ ಹೊಸ ಶೂಟಿಂಗ್‌ ಮಾರ್ಗಸೂಚಿಗಳನ್ನು ರೂಪಿಸಿದೆ. ಒಂದು ವೇಳೆ ಶೂಟಿಂಗ್‌ಗೆ ಅನುಮತಿ ಸಿಕ್ಕರೂ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.

-ಚುಂಬಿಸುವ, ತಬ್ಬಿಕೊಳ್ಳುವಂತಹ ಯಾವುದೇ ರೀತಿಯ ರೋಮ್ಯಾಂಟಿಕ್‌ ದೃಶ್ಯಗಳ ಚಿತ್ರೀಕರಣಕ್ಕೆ ಅವಕಾಶ ಇಲ್ಲ.

-ಎಲ್ಲರೂ ಮುಖಕ್ಕೆ ಮೂರು ಪದರಗಳ ವೈದ್ಯಕೀಯ ಮಾಸ್ಕ್‌, ಕೈಗವಸು ಧರಿಸಬೇಕು.

-ಚುಂಬನ, ಆಲಿಂಗನ, ಕೈ ಕುಲುಕುವುದು ಸೇರಿದಂತೆ ಯಾವುದೇ ರೀತಿಯ ದೈಹಿಕ ಶುಭಾಷಯಗಳ ವಿನಿಮಯಕ್ಕೆ ಅವಕಾಶ ಇಲ್ಲ.

-ಶೂಟಿಂಗ್‌ ಸೆಟ್‌ನಲ್ಲಿ ಸಹದ್ಯೋಗಿಗಳ ನಡುವೆ ಕನಿಷ್ಟಎರಡು ಮೀಟರ್‌ ಅಂತರ ಕಾಯ್ದುಕೊಳ್ಳಬೇಕು.

-ಚಿತ್ರೀಕರಣದ ಸೆಟ್‌, ಸ್ಟುಡಿಯೋಗಳಲ್ಲಿ ಸಿಗರೇಟು ಶೇರ್‌ ಮಾಡುವಂತಿಲ್ಲ.

-60 ವರ್ಷ ಮೇಲ್ಪಟ್ಟಹಿರಿಯ ಕಲಾವಿದರನ್ನು ಕನಿಷ್ಠ ಮೂರು ತಿಂಗಳು ಶೂಟಿಂಗ್‌ಗೆ ಕರೆಸುವಂತಿಲ್ಲ.

-ಶೂಟಿಂಗ್‌ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆಲದ ಮೇಲೆ ಮಾರ್ಕ್ ಹಾಕಿಕೊಳ್ಳಬೇಕು.

-ಸ್ನಾನ, ಕೈ ತೊಳೆಯುವುದು, ಮಾಸ್ಕ್‌, ಸ್ಯಾನಿಟೈಸರ್‌ ಸೇರಿದಂತೆ ಸ್ವಚ್ಛತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

-ಒಮ್ಮೆ ಬಳಸಿದ ಮೇಕಪ್‌ ಉತ್ಪನ್ನಗಳನ್ನು ಮತ್ತೆ ಬಳಸುವಂತಿಲ್ಲ. ಸ್ವಂತ ಮೇಕಪ್‌ ಕಿಟ್‌ ಹೊಂದಿರಬೇಕು.

- ವಿಗ್‌ಗಳನ್ನು ಬಳಸುವ ಮುನ್ನ, ಬಳಸಿದ ನಂತರ ಸ್ವಚ್ಚಗೊಳಿಸಬೇಕು.

-ಮೇಕಪ್‌ ಆರ್ಟಿಸ್ಟ್‌ಗಳು ಕಲಾವಿದರಿಗೆ ಮೇಕಪ್‌ ಮಾಡುವಾಗ ಮಾಸ್ಕ್‌ ಬದಲು ಫೇಸ್‌ಶೀಲ್ಡ್‌ಗಳನ್ನು ಧರಿಸಬೇಕು.

 

click me!