ತಂದೆ – ಮಕ್ಕಳ ಸಂಬಂಧ ಗಟ್ಟಿಯಾಗ್ಬೇಕೆಂದ್ರೆ ತಂದೆಯಾದವನು ತನ್ನ ಜವಾಬ್ದಾರಿ ಅರಿತಿರಬೇಕು. ಮಕ್ಕಳ ಜೊತೆ ಸಾಕಷ್ಟು ಸಮಯ ಕಳೆಯಬೇಕು. ಮಕ್ಕಳ ತಪ್ಪುಗಳನ್ನು ಅವರ ಅರಿವಿಗೆ ಬಾರದಂತೆ ತಿದ್ದಬೇಕು. ಕೆಲಸದ ಮಧ್ಯೆಯೂ ಮಕ್ಕಳನ್ನು ಮರೆಯಬಾರದು.
ಮಕ್ಕಳಿಗೆ ಯಾವಾಗ್ಲೂ ತಂದೆಯೇ ಮೊದಲ ಹಿರೋ ಆಗಿರ್ತಾನೆ. ಮಕ್ಕಳಿಗೆ ತಂದೆಯ ಮೇಲೆ ಒಂದು ಭಯವಿದ್ರೂ ತಂದೆಯಿಂದ ಅವರು ಸಾಕಷ್ಟು ವಿಷ್ಯಗಳನ್ನು ಕಲಿಯುತ್ತಾರೆ. ಮಕ್ಕಳಿಗೆ ತಾಯಿ ಪ್ರೀತಿ ನೀಡಿದ್ರೆ ತಂದೆ ಧೈರ್ಯ ನೀಡುತ್ತಾನೆ. ತಂದೆಯಾದವನು ಮಕ್ಕಳಿಗೆ ಇಷ್ಟವಾದ ವಸ್ತುಗಳನ್ನು ತಂದುಕೊಟ್ಟರೆ ಸಾಲದು. ತಂದೆ ಸ್ಥಾನ ಒಂದು ಜವಾಬ್ದಾರಿಯುತ ಸ್ಥಾನ. ದುಡಿಮೆ ಜೊತೆ ಮಕ್ಕಳ ಜೊತೆ ವಿಶೇಷ ಸಂಬಂಧವನ್ನು ಹೊಂದಿರಬೇಕಾಗುತ್ತದೆ. ತಂದೆ ಅಂದ್ರೆ ಮಕ್ಕಳು, ಮನೆಗೆ ಬೇಕಾದ್ದನ್ನು ತಂದು ಹಾಕುವುದು, ಅವರು ಕೇಳಿದ್ದನ್ನು ಕೊಡಿಸುವುದು, ಅವರಿಗೆ ಆರ್ಥಿಕ ಭದ್ರತೆ ನೀಡುವುದು ಎಂದುಕೊಂಡಿದ್ದಾರೆ. ಇದು ಸಂಪೂರ್ಣ ತಪ್ಪು. ತಂದೆ ಕೂಡ ಮಕ್ಕಳ ಜೊತೆ ಬೆರೆಯಬೇಕು. ಮಕ್ಕಳ ಜೊತೆ ಸಮಯ ಕಳೆಯಬೇಕು. ಆದ್ರೆ ಕೆಲ ಪುರುಷರು ಕೆಲಸದ ಮೇಲೆ ಪ್ರವಾಸ ಹೋಗ್ತಿರುತ್ತಾರೆ. ಅವರು ಮನೆಯಲ್ಲಿರೋದು ಅಪರೂಪ ಅಂದ್ರೆ ತಪ್ಪಾಗಲಾರದು. ಅಂಥವರು ಮಕ್ಕಳ ಜೊತೆ ತಮ್ಮ ಸಂಬಂಧವನ್ನು ಹೇಗೆ ಗಟ್ಟಿಗೊಳಿಸಬೇಕು ಎಂಬುದನ್ನು ನಾವು ಹೇಳ್ತೇವೆ.
ಬೆಳಿಗ್ಗೆ ಏಳುವ ಮೊದಲೇ ಮನೆ ಬಿಡುವ ತಂದೆ (Father) ರಾತ್ರಿ ಮಕ್ಕಳು (Children) ಮಲಗಿದ್ರೂ ಮನೆಗೆ ಬರುವುದಿಲ್ಲ. ಇನ್ನು ಕೆಲವರು 15 – 20 ದಿನಗಳ ಕಾಲ ಮನೆಯಿಂದ ದೂರವಿರ್ತಾರೆ. ಆಗ ಮಕ್ಕಳಿಗೆ ತಂದೆಯೇ ಗೆಸ್ಟ್ ಆಗಿಬಿಡ್ತಾರೆ. ನಿಮ್ಮ ಮಕ್ಕಳಿಗೆ ನೀವು ಗೆಸ್ಟ್ ಬದಲು ತಂದೆಯಾಗಿಯೇ ಇರಬೇಕೆಂದ್ರೆ ಕೆಲ ನಿಯಮಗಳನ್ನು ಪಾಲಿಸ್ಬೇಕು.
ವ್ಯಾಪಾರ (Business) ಅಥವಾ ಕೆಲಸಕ್ಕೆಂದು ಮನೆಯಿಂದ ಹೊರಡುವ ಮೊದಲು ಮಕ್ಕಳಿಗೆ ಹೇಳುವುದು ತಂದೆಯ ಕರ್ತವ್ಯ. ಇದು ನಿಮ್ಮಿಬ್ಬರ ಮಧ್ಯೆ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಪ್ರತಿ ಬಾರಿ ವಾರಗಟ್ಟಲೆ ಮನೆಯಿಂದ ಹೊರಗೆ ಹೋಗ್ತಿದ್ದೀರಿ ಎಂದಾದ್ರೆ ಮಕ್ಕಳಿಗೆ ಇದನ್ನು ತಿಳಿಸಿ. ನಾನು ನಿನ್ನನ್ನು ಮಿಸ್ ಮಾಡಿಕೊಳ್ತೇನೆ, ಕೆಲವೇ ಕೆಲವು ದಿನದಲ್ಲಿ ವಾಪಸ್ ಬರ್ತೇನೆ ಎಂದು ಮಕ್ಕಳಿಗೆ ಹೇಳಿ. ಆದ್ರೆ ಒಂದು ವಾರದ ಮೊದಲೇ ಈ ವಿಷ್ಯ ಹೇಳ್ಬೇಡಿ. ಮನೆ ಬಿಡುವ ಒಂದು ದಿನ ಮೊದಲು ಹೇಳಿ.
ನಿಮ್ಮ ಪತ್ನಿಯಿಂದ ಈ ವಿಷ್ಯ ಮಕ್ಕಳಿಗೆ ಗೊತ್ತಾಗುವುದು ಒಳ್ಳೆಯದಲ್ಲ. ಹಾಗಾಗಿ ನೀವೇ ಈ ಸಂಗತಿಯನ್ನು ಮಕ್ಕಳಿಗೆ ಹೇಳ್ಬೇಕು. ಮಕ್ಕಳ ಜೊತೆ ನಿಮಗೆ ಪ್ರತ್ಯೇಕ ಸಂಬಂಧವಿದೆ ಎಂಬುದನ್ನು ಮರೆಯಬೇಡಿ. ಪತ್ನಿ ಅಥವಾ ಬೇರೆಯವರಿಂದ ನೀವು ಈ ವಿಷ್ಯ ಹೇಳಿದ್ರೆ ಮಕ್ಕಳ ದೃಷ್ಟಿಯಲ್ಲಿ ನೀವು ಬೇರೆಯವರಾಗ್ತೀರಿ. ಮಕ್ಕಳಿಗೆ ಯಾವ ಕಾರಣಕ್ಕೆ ನೀವು ಮನೆ ಬಿಟ್ಟು ಹೋಗ್ತಿದ್ದೀರಿ ಮತ್ತು ಎಲ್ಲಿ ಹೋಗ್ತಿದ್ದೀರಿ ಎಂಬುದನ್ನು ಹೇಳಲು ಮರೆಯಬೇಡಿ.
ಇದನ್ನೂ ಓದಿ: ಈ ಮಹಿಳೆ ಮಕ್ಕಳನ್ನು ಶಾಲೆಗೆ ಕಳಿಸೋದೆ ಇಲ್ಲ!
ಕೆಲ ಮಕ್ಕಳು ತಂದೆಯನ್ನು ಅತಿಯಾಗಿ ಪ್ರೀತಿ ಮಾಡ್ತಾರೆ. ತಂದೆ ಬಿಟ್ಟಿರುವುದು ಅವರಿಗೆ ಕಷ್ಟವಾಗುತ್ತದೆ. ಆ ಸಂದರ್ಭದಲ್ಲಿ ತಂದೆ ಕೂಡ ಮಕ್ಕಳಿಗೆ ತನ್ನ ಪ್ರೀತಿಯನ್ನು ಹೇಳ್ಬೇಕು. ಬಿಟ್ಟಿರುವುದು ಅನಿವಾರ್ಯವಾಗಿದೆ ಎಂಬುದನ್ನು ಅವರಿಗೆ ಅರ್ಥ ಮಾಡಿಸಬೇಕು. ಕೆಲ ಬಾರಿ ತಂದೆ ಮನೆಯಿಂದ ಹೊರಗೆ ಹೋಗಲು ಮಗು ಬಿಡುವುದಿಲ್ಲ. ಆ ಸಂದರ್ಭದಲ್ಲಿ ಮಕ್ಕಳಿಗೆ ಕೆಲ ಭರವಸೆ ನೀಡ್ಬೇಕು. ಮೂರು ರಾತ್ರಿ ಸುಖವಾಗಿ ನಿದ್ರೆ ಮಾಡಿದ್ರೆ ನಾನು ಬರ್ತೇನೆಂದು ನೀವು ಹೇಳ್ಬಹುದು. ಅಂದ್ರೆ ಮೂರು ರಾತ್ರಿ ಮಗು ನೀವಿಲ್ಲದೆ, ನಿಮ್ಮ ನಿರೀಕ್ಷೆಯಲ್ಲಿ ಮಲಗುತ್ತದೆ.
ಇದನ್ನೂ ಓದಿ: ಮಕ್ಕಳು ಸುಳ್ಳು ಹೇಳುತ್ತಾರೆಯೆ? ಈ ಅಭ್ಯಾಸ ಹೀಗೆ ಬದಲಾಯಿಸಿ
ಮಕ್ಕಳ ಮನಸ್ಸನ್ನು ಕದಿಯಲು ನೀವು ಹೋಗ್ತಿರುವ ಸ್ಥಳದ ಬಗ್ಗೆ ಹೇಳ್ಬಹುದು. ಅಲ್ಲಿ ಏನೇನು ಪ್ರಸಿದ್ಧವಾಗಿದೆ ಎಂಬುದನ್ನು ಹೇಳ್ಬಹುದು. ಹಾಗೆ ಅವರಿಗೆ ಏನು ಬೇಕು ಎಂಬುದನ್ನು ಕೇಳಬೇಕು. ಅವರು ಹೇಳಿದ್ದನ್ನು ಹಾಗೇ ಹೇಳದೆ ಇರುವ ಕೆಲ ವಸ್ತುಗಳನ್ನು ಅವರಿಗೆ ನೀಡ್ಬೇಕು. ಹಾಗೆಯೇ ಪ್ಯಾಕಿಂಗ್ ನಲ್ಲಿ ಮಕ್ಕಳಿಗೆ ಸಹಾಯ ಮಾಡುವಂತೆ ಕೇಳ್ಬೇಕು. ಈ ಎಲ್ಲ ಸಂದರ್ಭದಲ್ಲಿ ಮಕ್ಕಳು ನಿಮ್ಮ ಜೊತೆಗಿರುವ ಕಾರಣ ನಿಮ್ಮಿಬ್ಬರ ಮಧ್ಯೆ ಸಂಬಂಧ ಮತ್ತಷ್ಟು ಬಲಪಡೆಯುತ್ತದೆ. ತಿಳಿಯದೆಯೇ ಮಕ್ಕಳು ಅನೇಕ ಸಂಗತಿಯನ್ನು ಕಲಿತಿರುತ್ತಾರೆ. ಹಾಗೆಯೇ ಪ್ರವಾಸದಲ್ಲಿರುವಾಗ ಕೂಡ ಮಕ್ಕಳನ್ನು ಮರೆಯಬಾರದು. ಆಗಾಗ ಕರೆ ಮಾಡಿ ಅವರ ಜೊತೆ ಮಾತನಾಡ್ಬೇಕು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆಯೂ ವಿಚಾರಿಸಿ.