Parenting Tips: ಸಮಾಜದಲ್ಲಿ ಲಿಂಗ ಸಮಾನತೆ ಬೇಕಂದ್ರೆ ಮನೇಲಿ ಮಕ್ಕಳನ್ನು ಹೀಗೆ ಬೆಳೆಸಿ

By Suvarna NewsFirst Published Aug 27, 2022, 5:34 PM IST
Highlights

ಸಮಾಜದಲ್ಲಿ ಗಂಡು-ಹೆಣ್ಣುಗಳ ನಡುವೆ ಸಮಾನತೆ ಬರಬೇಕೆಂದರೆ ಆ ಸಂಸ್ಕೃತಿ ಮನೆಯಲ್ಲೇ ದೊರೆಯಬೇಕು. ಗಂಡು-ಹೆಣ್ಣು ಮಕ್ಕಳನ್ನು ಸಮಾನವಾಗಿ ಬೆಳೆಸಿದರೆ ಅವರು ಮುಂದೆ ಸಮಾಜಕ್ಕೂ ಅದೇ ಕೊಡುಗೆ ನೀಡಬಲ್ಲರು. ಹೀಗಾಗಿ, ಪಾಲಕರು ಮಕ್ಕಳನ್ನು ಸಮಾನವಾಗಿ ಬೆಳೆಸಲು ಆದ್ಯತೆ ನೀಡಬೇಕಾದ ಅಗತ್ಯವಿದೆ.
 

“ನೀನೂ ಅಡುಗೆ ಮಾಡೋದು ಕಲಿತ್ಕೊ, ಆಮೇಲೆ ನಿನ್ನ ಹೆಂಡ್ತಿಯಿಂದ ನಂಗೆ ಬೈಸಬೇಡ, ಗಂಡು ಅಂತ ಧಿಮಾಕು ಮಾಡ್ಬೇಡ, ನಿಂಗೆ ಚೂರು ಅಡುಗೆ, ಮನೆಕೆಲಸ ಬಂದಿಲ್ಲ ಎಂದಾದ್ರೆ ಮುಂದೆ ಕಷ್ಟ ಆಗುತ್ತೆ ನೋಡುʼ…. ಇತ್ಯಾದಿ ಎಚ್ಚರಿಕೆ ಮಾತುಗಳು ಆಗಾಗ ಅಮ್ಮಂದಿರಿಂದ ಹೊರಬರುತ್ತವೆ. ತಮ್ಮ ಗಂಡುಮಕ್ಕಳಿಗೆ ಇಂತಹ ಕಿವಿಮಾತುಗಳನ್ನು ಹೇಳುವ ಅಮ್ಮಂದಿರ ಸಂಖ್ಯೆ ಇಂದು ಹೆಚ್ಚಾಗಿದೆ. ಆದರೂ ನಮ್ಮ ಸಮಾಜದಲ್ಲಿ ಬೇರೂರಿರುವ ಗಂಡು-ಹೆಣ್ಣಿನ ಅಸಮಾನತೆಯನ್ನು ಕಿತ್ತೊಗೆಯುವುದು ಸುಲಭವಲ್ಲ.  ಹೆಣ್ಣಿನ ಬಗ್ಗೆ ಅಗೌರವ, ಕೀಳು ಭಾವನೆ ಹೊಂದಿರುವವರಿಂದಲೇ ಸಮಾಜದಲ್ಲಿ ಆಗಾಗ ಆಗಭಾರದ ದುರ್ಘಟನೆಗಳು ಸಂಭವಿಸುತ್ತವೆ. ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳನ್ನು ಸಮಾನವಾಗಿ ಬೆಳೆಸುವ ಕುರಿತು ಹೆಚ್ಚಿನ ಪ್ರಚಾರ ನಡೆಯುತ್ತಿದೆ. ಇತ್ತೀಚೆಗೆ ನಮ್ಮ ಪ್ರಧಾನಿಯೇ “ಹೆಣ್ಣುಮಕ್ಕಳಿಗೆ ಗೌರವ ನೀಡಿʼ ಎಂದು ಸ್ಪಷ್ಟವಾದ ಸಂದೇಶ ನೀಡಿದ್ದಾರೆ. ಹೌದು, ಇದು ಸಮಾನವಾದ ಸಮಾಜ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕಡಿಮೆಯಲ್ಲ. ಆದರೆ, ಗಂಡು ಮತ್ತು ಹೆಣ್ಣು ಮಕ್ಕಳನ್ನು ಸಮಾನವಾಗಿ ಬೆಳೆಸುವ ವಿಚಾರದಲ್ಲಿ ಮಾತ್ರ ಇಂದಿಗೂ ನಮ್ಮ ಪಾಲಕರು ಎಡವುವ ಸಾಧ್ಯತೆ ಅಧಿಕ. ಏಕೆಂದರೆ, ಅವರಿಗೆ ದೊರೆತ ಟ್ರೇನಿಂಗ್‌ ಹಾಗಿದೆ. ಅವರ ಪಾಲಕರು ಅವರನ್ನು ಹೇಗೆ ಬೆಳೆಸಿದ್ದಾರೋ ಹಾಗೆಯೇ ಅವರು ತಮ್ಮ ಮಕ್ಕಳನ್ನು ಬೆಳೆಸಲು ಯತ್ನಿಸುತ್ತಾರೆ. ಆದರೆ, ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಮಕ್ಕಳನ್ನು ಸಮಾನವಾಗಿ ಬೆಳೆಸಲು ಪ್ರಾಮಾಣಿಕವಾಗಿ ಯತ್ನಿಸುವ ಪಾಲಕರೂ ನಮ್ಮ ನಡುವೆ ಇದ್ದಾರೆ ಎನ್ನುವುದೇ ಸಮಾಧಾನ. ಅಸಲಿಗೆ, ಮಕ್ಕಳ ಲಾಲನೆ-ಪಾಲನೆ ಪ್ರತಿ ಪಾಲಕರಿಗೂ ಸವಾಲು. ಮಧುರವಾದ ಅನುಭೂತಿಯಿದ್ದರೂ ಪ್ರತಿದಿನವೂ ಹೊಸ ಹೊಸ ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಸವಾಲು ಗಂಡು ಮತ್ತು ಹೆಣ್ಣು ಮಗುವನ್ನು ಸಮಾನವಾಗಿ ಬೆಳೆಸುವುದು. ಮನೆಯಲ್ಲೇ ಅಂಥದ್ದೊಂದು ಸಂಸ್ಕಾರ ದೊರೆತ ಗಂಡುಮಕ್ಕಳು ಮುಂದೆ ಸಮಾಜದಲ್ಲಿ ತನಗೆ ಎದುರಾಗುವ ಮಹಿಳೆಯರಿಗೆ ಗೌರವ ನೀಡುವ ಪರಿಪಾಠ ಬೆಳೆಸಿಕೊಳ್ಳುತ್ತಾರೆ. 

ಮನೆಯಲ್ಲಿ ಸಮಾನ ವಾತಾವರಣ ಕಲ್ಪಿಸುವ ಬಗ್ಗೆ ಪಾಲಕರು ದೃಢ ಸಂಕಲ್ಪ ಕೈಗೊಂಡರೆ ಹಲವಾರು ಮಾರ್ಗಗಳ ಮೂಲಕ ಅದನ್ನು ಸಾಕಾರಗೊಳಿಸಬಹುದು. ಅದಕ್ಕಾಗಿ ಕೆಲವು ಟಿಪ್ಸ್‌.

•    ಮನೆಯಲ್ಲಿರಲಿ ಲಿಂಗ ತಟಸ್ಥ ವಾತಾವರಣ (Gender-Neutral Environment)
ನೀನು ಗಂಡುಮಗು (Boy) ಹೀಗ್ಮಾಡು, ನೀನು ಹೆಣ್ಣು (Girl) ಹೀಗ್ಮಾಡು ಎನ್ನುವ ಸಂದೇಶವನ್ನು ಯಾವುದೇ ಕಾರಣಕ್ಕೂ ನೀಡಬೇಡಿ. ಸಮಾನ ಧೋರಣೆಯಿಂದ ಮಕ್ಕಳನ್ನು ಕಾಣಿ. ಲಿಂಗಾಧಾರಿತ ಕರ್ತವ್ಯಗಳ (Responsibility) ಬಗ್ಗೆ ಎಂದಿಗೂ ಮಾತನಾಡಬೇಡಿ. ಆ ರೀತಿಯ ವಾತಾವರಣ ಮನೆಯಲ್ಲಿ ಇರಿಸಬೇಡಿ. ಪತಿ-ಪತ್ನಿ ಇಬ್ಬರೂ ಸೇರಿ ಅಡುಗೆ (Cooking), ಕ್ಲೀನಿಂಗ್‌ (Cleaning) ಮಾಡುವುದರಲ್ಲಿ ಭಾಗಿಯಾಗಿ. ಹೊರಗೆ ಹೋಗುವಾಗಲೂ ಅಷ್ಟೆ. ಬೆಳಗ್ಗಿನ ವಾಕಿಂಗ್‌ ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ಬೇಕು. ಸಾಧ್ಯವಾದರೆ ಇಬ್ಬರೂ ಹೋಗಿ, ಇಲ್ಲವಾದರೆ ಯಾರೂ ಹೋಗಬೇಡಿ. 

ಇದನ್ನೂ ಓದಿ: Womens Equality Day 2022: ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯ ಹೋಗಲಾಡಿಸುವುದು ಹೇಗೆ ?

•    ಸೂಕ್ತ ಭಾಷೆ ಬಳಕೆ (Correct Language) 
ಬಾಯಿ ತೆರೆದರೆ ಹೆಣ್ಣುಮಕ್ಕಳ ಬಗ್ಗೆ ಕೆಟ್ಟ ಮಾತನಾಡುವ ಪಾಲಕರು ನಮ್ಮಲ್ಲಿದ್ದಾರೆ. ಇಂತಹ ಭಾಷೆಗಳನ್ನು ಮಕ್ಕಳು ಬಹುಬೇಗ ಗ್ರಹಿಸುತ್ತಾರೆ. ಇಂತಹ ಪದಭಾಷೆ ಮನೆಯಲ್ಲಿ ಇರದಂತೆ ನೋಡಿಕೊಳ್ಳಿ. ಗಂಡು ಮಗು ಅತ್ತರೆ “ಗಂಡಾಗಿ ಅಳ್ತಾರಾ?ʼ ಎನ್ನುವ ಪ್ರಶ್ನೆಯನ್ನು ಎಂದಿಗೂ ಕೇಳಬೇಡಿ. ಹಾಗೆಯೇ, ಹೆಣ್ಣಿನಂತೆ ಇರು ಎನ್ನುವ ಉಪದೇಶವನ್ನು ಹೆಣ್ಣುಮಗುವಿಗೆ ನೀಡಬೇಡಿ.

•    ಹೆಣ್ಣುಮಗುವಿನ ಶ್ಲಾಘನೆಗೆ (Compliment) ಸರಿಯಾದ ಪದ
ಸಾಮಾನ್ಯವಾಗಿ ಹೆಣ್ಣುಮಕ್ಕಳನ್ನು ಹೊಗಳುವಾಗ ಪ್ರೆಟ್ಟಿ (Pretty) ಎನ್ನುವ ಶಬ್ದವನ್ನೋ, ಕ್ಯೂಟ್‌ (Cute) ಎನ್ನುವ ಪದವನ್ನೋ ಬಳಸುತ್ತೇವೆ. ಇವು ದೈಹಿಕ ಸೌಂದರ್ಯಕ್ಕೆ ಬೆಲೆ ನೀಡುವ ಪದ. ಹೀಗಾಗಿ, ಇವುಗಳ ಬದಲಿಗೆ, ಸ್ಟ್ರಾಂಗ್‌ (Strong), ಸ್ಮಾರ್ಟ್‌ (Smart) ಇಂತಹ ಪದಗಳನ್ನು ಬಳಕೆ ಮಾಡಿ. ಇದರಿಂದಾಗಿ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ (Confident) ಮೂಡುತ್ತದೆ. ಆಗ ದೈಹಿಕ ಸೌಂದರ್ಯದ ಬಗ್ಗೆ ಮಾತ್ರ ಯೋಚಿಸುವುದಿಲ್ಲ.

ಇದನ್ನೂ ಓದಿ: Gender Equality ನ್ಯೂಜಿಲೆಂಡ್‌ ಪುರುಷ-ವನಿತಾ ಕ್ರಿಕೆಟಿಗರಿಗಿನ್ನು ಸಮಾನ ವೇತನ

•    ಇಬ್ಬರಿಗೂ ಮನೆಕೆಲಸ ಸೇಮ್‌ (Daily Chores)
ಹೆಣ್ಣುಮಗುವಿಗೆ ಟೀ ಮಾಡುವುದನ್ನೋ, ಅಡುಗೆ ಮಾಡುವುದನ್ನೋ ಕಲಿಸಲು ಆಸಕ್ತಿ ತೋರುವ ಅಮ್ಮಂದಿರು ಗಂಡು ಮಕ್ಕಳ ವಿಚಾರದಲ್ಲಿ ಒಂದು ಹೆಜ್ಜೆ ಹಿಂದಕ್ಕಿಡುತ್ತಾರೆ. ಇದು ಸರಿಯಲ್ಲ. ಮನೆಕೆಲಸದಲ್ಲಿ ಇಬ್ಬರೂ ಸಮಾನರು (Same) ಎನ್ನುವ ಧೋರಣೆ ಅನುಸರಿಸಿ. ಹೆಣ್ಣುಮಕ್ಕಳನ್ನು ಕ್ರೀಡೆಗೆ ಕಳುಹಿಸುತ್ತೀರಿ ಎಂದಾದರೆ ಗಂಡು ಮಕ್ಕಳಿಗೂ ಪಾತ್ರೆ ತೊಳೆಯುವುದನ್ನು, ಅಡುಗೆ ಮಾಡುವುದನ್ನು, ಕ್ಲೀನಿಂಗ್‌ ಅನ್ನು ಕಲಿಸಿ. ಯಾವುದೇ ಕೆಲಸ ಲಿಂಗಾಧಾರಿತವಾಗಿ ಇಲ್ಲ ಎನ್ನುವ ಸಂದೇಶ ಮನೆಯಲ್ಲಿ ಇರಲಿ. 

click me!