Relationship Tips: ಸಂಗಾತಿ ಜೊತೆ ಸಂಬಂಧ ಸಾಕೆನಿಸಲು ಈ ಗುಣಗಳೇ ಸಾಕು

By Suvarna NewsFirst Published Dec 11, 2021, 5:01 PM IST
Highlights

ಯಾವುದೇ ಕಾರಣಕ್ಕೂ ಕೆಟ್ಟ ಸಂಬಂಧದಲ್ಲಿ ಸಿಲುಕಿಕೊಳ್ಳದೆ ಖುಷಿಖುಷಿಯಾಗಿ ಸ್ನೇಹಿತರೊಂದಿಗೆ ಯೌವನದ ಬದುಕನ್ನು ಅನುಭವಿಸಬೇಕು. ಒಂದೊಮ್ಮೆ ಅಂಥದ್ದೊಂದು ಸಂಬಂಧವನ್ನು ಹೇಗೋ ಗಂಟುಹಾಕಿಕೊಂಡಿದ್ದೀರಿ ಎಂದಾದರೆ ಕುಟುಂಬ, ಹಿತೈಷಿಗಳ ನೆರವು ಪಡೆದುಕೊಂಡು ಅದರಿಂದ ಆಚೆಗೆ ಬನ್ನಿ. ಜೀವನ ಅಮೂಲ್ಯ, ಕೆಟ್ಟ ಸಂಬಂಧದಲ್ಲಿ ಬದುಕುವ ಅನಿವಾರ್ಯತೆ ನಿಮಗಿಲ್ಲ.
 

“ನಾನಿದ್ದರೆ ಸಾಕು, ಅವನಿಗೆ ಇನ್ಯಾರೂ ಬೇಡ. ನಾನು ಬೇರೆಯವರೊಂದಿಗೆ ಒಡನಾಡಿದರೂ ಮುನಿಸು, ನಾನೆಂದರೆ ಅಷ್ಟು ಇಷ್ಟ’ ಎಂದು ಬೀಗುತ್ತಿದ್ದ  ಹುಡುಗಿ (girl) ಇತ್ತೀಚೆಗೆ ಬಿಕ್ಕುತ್ತಿದ್ದಾಳೆ. ಅವಳ ಕಣ್ಣುಗಳಲ್ಲಿ ಮೊದಲಿನ ಕಾಂತಿಯಿಲ್ಲ. ಹಿತವೆನಿಸುತ್ತಿದ್ದ ಅವನ ಪೊಸೆಸಿವ್ ನೆಸ್ (possessiveness) ಈಗ ಕತ್ತು ಹಿಸುಕುವಂತೆ ಭಾಸವಾಗುತ್ತದೆ. ಕುಳಿತರೂ ತಪ್ಪು, ನಿಂತರೂ ತಪ್ಪು, ಯಾರೊಂದಿಗೆ ಮಾತನಾಡಿದರೂ ತಪ್ಪು, ನಗುನಗುತ್ತಿದ್ದರಂತೂ ಏನಾದರೊಂದು ಕೊಂಕು ಮಾತನಾಡುತ್ತಿದ್ದ. “ಯಾಕೆ ಹೀಗೆ ಮಾಡ್ತೀಯ’ ಎಂದರೆ, “ನಿನ್ನ ಕಂಡ್ರೆ ನಂಗೆ ತುಂಬ ತುಂಬ ಇಷ್ಟ, ಅದಕ್ಕೆ ಹಾಗಾಗುತ್ತೆ, ಬೇಸರ ಮಾಡ್ಕೋಬೇಡ’ ಅಂತಿದ್ದ. “ಇದೆಂಥ ಪ್ರೀತಿ (love)’ ಎಂದು ಅನಿಸುತ್ತಿತ್ತು. ಅದರೆ, ಅವನೊಬ್ಬನಿಂದಾಗಿ ಉಳಿದೆಲ್ಲ ಪ್ರಪಂಚದಿಂದ ದೂರವಿರುವುದು ಅವಳಿಗೆ ಬೇಕಾಗಿರಲಿಲ್ಲ. ಹಿತೈಷಿಗಳ ಸಹಕಾರ ಪಡೆದು ಆತನಿಂದ ದೂರವಾಗಿದ್ದಳು.

ಹೌದು, ಎಷ್ಟೇ ಪ್ರೀತಿ ಮಾಡುವವರಾಗಿದ್ದರೂ ಕಿರಿಕಿರಿ ನೀಡಲು, ಮಾನಸಿಕವಾಗಿ ಹಿಂಸೆ ನೀಡಲು ಆರಂಭಿಸಿದರೆ ಜತೆಗಿರುವುದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ. ಸ್ನೇಹಿತನ ಮನಸ್ಥಿತಿಯನ್ನು ಮೊದಲೇ ಒರೆಗಲ್ಲಿಗೆ ಹಚ್ಚಿ ಅರ್ಥೈಸಿಕೊಂಡರೆ ಆಯ್ಕೆ ಮಾಡಿಕೊಳ್ಳುವಾಗಲೇ ಎಚ್ಚರಿಕೆ ವಹಿಸಬಹುದು. ಪ್ರೀತಿ-ಪ್ರೇಮದ ಮೋಹದಲ್ಲಿ ಸಿಲುಕಿದರೆ ಜೀವನ (life)ಕ್ಕೆ ಆಘಾತ ಗ್ಯಾರೆಂಟಿ. ಸಂಬಂಧವೊಂದು ಚೆನ್ನಾಗಿರಬೇಕು ಎಂದಾದರೆ ಕೆಲವು ಗುಣಗಳು ಹುಡುಗ ಅಥವಾ ಹುಡುಗಿ ಯಾರಲ್ಲೂ ಇರಬಾರದು.

•    ವಿಶ್ವಾಸದ ಕೊರತೆ (shortage of trust)
ಪರಸ್ಪರ ವಿಶ್ವಾಸವಿಲ್ಲದಿದ್ದರೆ ಒಬ್ಬರನ್ನೊಬ್ಬರು ನಂಬುವುದು ದೂರದ ಮಾತಾಗುತ್ತದೆ. ಆಗ ಸಂಬಂಧದಲ್ಲಿ ಭದ್ರತೆ ಇರುವುದಿಲ್ಲ. ಪರಸ್ಪರ ವಿಶ್ವಾಸದ ನಡೆನುಡಿಯಿದ್ದರೆ ಅನುಮಾನ ಕಾಡದು. 
•    ಅವಾಚ್ಯ ಶಬ್ದದಿಂದ ಬೈಯುವುದು (scolding)
ಕೆಲವರು ಗರ್ಲ್ ಫ್ರೆಂಡ್ ಎಂದಾಕ್ಷಣ ಆಕೆಯ ಸಂಪೂರ್ಣ ಹಕ್ಕು ತಮ್ಮದೆನ್ನುವ ಭ್ರಮೆಗೆ ಬೀಳುತ್ತಾರೆ. ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಅದರಿಂದಲಾದರೂ ಆಕೆ ತಾನು ಹೇಳಿದಂತೆ ಕೇಳಬೇಕು ಎನ್ನುವ ಭಾವನೆ ಹೊಂದಿರುತ್ತಾರೆ. ದೈಹಿಕವಾಗಿ ಹಿಂಸೆ ನೀಡುತ್ತಾರೆ, ಭಾವನೆಗಳಿಗೆ ಬೆಲೆ ನೀಡುವುದಿಲ್ಲ. ತನ್ನನ್ನು ಪ್ರೀತಿಸುತ್ತಾಳೆ ಎಂದ ಮೇಲೆ ಮುಗಿಯಿತು, ಅದನ್ನು ಬಿಟ್ಟು ಆಕೆಗೆ ಇನ್ನೇನೂ ಬೇಕಾಗಿಲ್ಲ ಎನ್ನುವಂತೆ ವರ್ತಿಸುತ್ತಾರೆ. ಇಂಥ ಸ್ನೇಹಕ್ಕೆ ಬಹುಬೇಗ ವಿದಾಯ ಹೇಳುವುದು ಉತ್ತಮ.
•     ಹೇಳಿದಂತೆ ಕೇಳಬೇಕೆನ್ನುವ ನಿಯಂತ್ರಣ (controling)
ಬಹುತೇಕ ಪುರುಷರಲ್ಲಿ ಈ ಗುಣ ಕಂಡುಬರುತ್ತದೆ. ಇಂದಿನ ನವಪೀಳಿಗೆಯ ಯುವಕರಲ್ಲೂ ಈ ಭಾವನೆ ಇದ್ದೇ ಇದೆ. ಆದರೂ ಇತ್ತೀಚೆಗೆ ಸ್ವಲ್ಪ ಬದಲಾವಣೆ ಕಾಣಬಹುದು. ಸಾಮಾನ್ಯ ಕುಟುಂಬಗಳಲ್ಲಿ ತಂದೆ ಹೇಳಿದಂತೆ ತಾಯಿ ಕೇಳುತ್ತಾಳೆ. ಇದನ್ನೇ ಕಂಡು ಬೆಳೆದಿರುವ ಗಂಡುಮಕ್ಕಳು ತಮ್ಮ ಹೆಂಡತಿ ಅಥವಾ ಸ್ನೇಹಿತೆಯಿಂದಲೂ ಈ ಗುಣ ನಿರೀಕ್ಷೆ ಮಾಡುತ್ತಾರೆ. ತಾನು ಹೇಳಿದಂತೆ ಕೇಳಬೇಕು ಎಂದು ಬಯಸುತ್ತಾರೆ. ಸ್ನೇಹಿತೆಯ ಹಣ ನಿಭಾಯಿಸಲು ಮುಂದಾಗುವುದು, ಉಳಿದ ಸ್ನೇಹಿತರೊಂದಿಗೆ ಹೇಗಿರಬೇಕು ಎಂದು ಲೆಕ್ಚರ್ ಬಿಗಿಯುವುದು, ಬೇರೆ ಸ್ನೇಹಿತರೊಂದಿಗೆ ನೀವಿದ್ದರೆ ತಾನೂ ಅಲ್ಲಿಯೇ ಇರುವುದು, “ನಾನ್ ಹೇಳ್ತಾ ಇದ್ದೀನಲ್ಲಾ, ಹೀಗೆಯೇ ಮಾಡೋಣ’ ಎನ್ನುವ ಮಾತುಗಳು...ಈ ಧೋರಣೆಯನ್ನು ಬಿಂಬಿಸುತ್ತವೆ. ಎಚ್ಚರಿಕೆಯಿಂದಿರಿ. 
•    ಸುಳ್ಳು ಹೇಳುವುದು (lying)
ಸಂಬಂಧದಲ್ಲಿ ಯಾವಾಗಲಾದರೊಮ್ಮೆ ಸುಳ್ಳು ಹೇಳುವುದು ಸಾಮಾನ್ಯ. ಆದರೆ, ಪದೇ ಪದೆ ಸುಳ್ಳು ಹೇಳುವುದು ನಿಮಗೆ ಗೊತ್ತಾದರೆ ತೀವ್ರ ಎಚ್ಚರಿಕೆ ವಹಿಸಿ. ಏಕೆಂದರೆ, ನಿಮ್ಮಿಂದ ಮುಚ್ಚಿಡುವಂಥದ್ದು ಆತನಲ್ಲಿ ಏನೋ ಇದೆ ಎಂದರ್ಥ. ಸಾಲ ಮಾಡಿಕೊಂಡಿರಬಹುದು, ಮನೆಯಲ್ಲಿ ಸಂಬಂಧ ಹಾಳು ಮಾಡಿಕೊಂಡಿರಬಹುದು, ಉದ್ಯೋಗದ ಸ್ಥಳದಲ್ಲಿ ಹೆಸರು ಕೆಡಿಸಿಕೊಂಡಿರಬಹುದು...ಹೀಗೆ ಏನಾದರೊಂದು ವ್ಯಕ್ತಿತ್ವಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದೇ ಇರುವ ಸಾಧ್ಯತೆ ಹೆಚ್ಚಿರುತ್ತದೆ. 
•    ಮಾನಸಿಕವಾಗಿ ಬತ್ತಿಹೋದಂತೆ (drain) ಅನಿಸುವುದು 
ಸಂಬಂಧವೊಂದು ಯಾವಾಗಲೂ ಖುಷಿ ನೀಡಬೇಕು. ಪ್ರೀತಿ-ಸ್ನೇಹದಲ್ಲಿ ಮನಸ್ಸು ಅರಳಬೇಕು. ನೇರವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಅವರಿಗಾಗಿಯೇ ಎಲ್ಲವನ್ನೂ ಮಾಡುತ್ತ, ನಿಮ್ಮ ಕುರಿತಾದ ಕಾಳಜಿ ಕಡಿಮೆ ಮಾಡುತ್ತಿದ್ದೀರಿ, ಹೀಗೆ ಮಾಡುತ್ತ ಮಾಡುತ್ತ ನಿಮಗೆ ಒಲವು, ಗೆಲುವು ಮರೆತುಹೋಗಿದೆ ಎಂದಾದರೆ ಅದು ಖಂಡಿತವಾಗಿ ಕೆಟ್ಟ ಸ್ಥಿತಿ. ಅದರಿಂದ ಆಚೆಗೆ ಬಂದುಬಿಡಿ. 

click me!