ಹೆಚ್ಚಿದ ಮಳೆ, ಒಣಗುತ್ತಿದೆ ತೊಗರಿ ಬೆಳೆ| ಅನ್ನದಾತರ ಆತಂಕ| ತೊಗರಿ ಬೆಳೆಗೆ ರೋಗ ಬಾಧೆಗೆ ರೈತರು ಕಂಗಾಲು| ನಿರಂತರ ಮಳೆಯಿಂದ ತಗ್ಗು ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ಬೆಳೆ ಒಣಗಲಾರಂಭಿಸಿದೆ| ರೋಗ, ಕ್ರಿಮಿಕೀಟಗಳ ಹತೋಟಿ ಮಾಡಲು ಹೈರಾಣ ರೈತರಿಗೆ ತೇವಾಂಶ ಹೆಚ್ಚಾಗಿ ತೊಗರಿ ಬೆಳೆ ಒಣಗುತ್ತಿರುವು ಚಿಂತೆ ಉಂಟು ಮಾಡಿದೆ|
ಲಿಂಗಸುಗೂರು[ಅ.25]: ಕಳೆದೊಂದು ವಾರದಿಂದ ಎಡೆ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಭೂಮಿಯ ತೇವಾಂಶ ಹೆಚ್ಚಾಗಿ ತೊಗರಿ ಬೆಳೆ ಒಣಗುತ್ತಿರುವುದಲ್ಲದೇ ಹಿಂಗಾರು ಜೋಳ ಬಿತ್ತನೆಗೂ ಮಳೆ ಅಡ್ಡಿಯಾಗಿರುವುದರಿಂದಾಗಿ ರೈತರಲ್ಲಿ ಚಿಂತೆಗೆ ಕಾರಣವಾಗಿದೆ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ತೊಗರಿ ಬೆಳೆ ಇತ್ತೀಚೆಗೆ ಸುರಿಯುವುತ್ತಿರುವ ಮಳೆಯಿಂದ ಉತ್ತಮವಾಗಿ ಬೆಳೆದು ಹೂಬಿಟ್ಟಿದೆ. ಇನ್ನೂ ಕೆಲವು ಕಡೆ ಕಾಯಿ ಕಟ್ಟುವ ಹಂತದಲ್ಲಿದೆ. ಆದರೆ, ಮಳೆ ನಿತ್ಯ ಸುರಿಯುತ್ತಿರುವ ಕಾರಣ ಹೂವು ಉದರುತ್ತಿರುವುದಲ್ಲದೇ ತೊಗರಿಗೆ ಕೀಟಬಾಧೆ ಉಂಟಾಗಿದೆ. ನಿಯಂತ್ರಣಕ್ಕೆ ಕ್ರಿಮಿಕೀಟನಾಶಕ ಸಿಂಪಡಿಸಿದಾಗ ಸಂಜೆ ಮಳೆಯಾಗಿ ಕ್ರಿಮಿನಾಶಕಗಳು ತೊಳೆದು ಹೋಗುತ್ತಿರುವುದರಿಂದ ಕೀಟಬಾಧೆ ನಿಯಂತ್ರಣ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಸಾವಿರಾರು ರೂಪಾಯಿ ವ್ಯಯಿಸಿ ಕ್ರಿಮಿನಾಶಕ ಪಡೆದು ಬೆಳೆಗೆ ಸಿಂಪಡನೆ ಮಾಡಿದರೂ ರೋಗ, ಕೀಟಗಳ ಮೇಲೆ ಪರಿಣಾಮ ಬೀರುತ್ತಿಲ್ಲ.
undefined
ಇನ್ನೂ ನಿರಂತರ ಮಳೆ ಸುರಿಯುವ ಪರಿಣಾಮ ತಗ್ಗು ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ಬೆಳೆ ಒಣಗಲಾರಂಭಿಸಿದೆ. ತೇವಾಂಶ ಹೆಚ್ಚಾಗಿ ಕೆಲವು ಜಮೀನುಗಳಲ್ಲಿ ಈಗಾಗಲೆ ಊಟೆ ಆರಂಭವಾಗಿದೆ. ರೋಗ, ಕ್ರಿಮಿಕೀಟಗಳ ಹತೋಟಿ ಮಾಡಲು ಹೈರಾಣ ರೈತರಿಗೆ ತೇವಾಂಶ ಹೆಚ್ಚಾಗಿ ತೊಗರಿ ಬೆಳೆ ಒಣಗುತ್ತಿರುವು ಚಿಂತೆ ಉಂಟು ಮಾಡಿದೆ.
ಹಿಂಗಾರು ಬಿತ್ತನೆಗೆ ಹಸ್ತ, ಚಿತ್ತಿ ಮಳೆಗಳು ಉತ್ತಮ ತತಿಯಾಗಿದೆ. ಆದರೆ, ಉತ್ತರೆ ಮಳೆಯಿಂದಲೂ ನಿರಂತರ ಮಳೆಯಾಗುತ್ತಿರುವ ಪರಿಣಾಮ ಬಿತ್ತನೆಗೆ ಮಳೆ ಅವಕಾಶ ನೀಡುತ್ತಿಲ್ಲ. ಸ್ವಾತಿ ಮಳೆಗೆ ಬಿತ್ತಿದರೆ ಜೋಳ ಕಾಳು ಕಟ್ಟುವ ಹಂತದಲ್ಲಿ ವಿವಿಧ ರೋಗಗಳಿಗೆ ತುತ್ತಾಗುವ ಜೊತೆಗೆ ಕಾಳು ಕಟ್ಟದೇ ಕೇವಲ ಸೊಪ್ಪೆಯ ಬೆಳವಣಿಗೆಯಾಗುತ್ತಿದೆ. ಇದರಿಂದ ಹಿಂಗಾರು ಬಿತ್ತನೆಗೆ ಮಳೆ ಅವಕಾಶ ನೀಡದೇ ಇರುವುದು ರೈತರಲ್ಲಿ ದುಗುಡ ಹೆಚ್ಚಿಸಿದೆ.
ಈಗಾಗಲೇ ರೈತರು ಹಿಂಗಾರು ಬಿತ್ತನೆ ಅಗತ್ಯದ ಬಿತ್ತನೆ ಬೀಜಗಳಾದ ಜೋಳ, ಕಡಲೆ, ಕುಸುಬಿ ಸೇರಿದಂತೆ ಬೀಜಗಳ ಸಂಗ್ರಹಿಸುವ ಜೊತೆಗೆ ರಸಗೊಬ್ಬರಗಳನ್ನು ಖರೀದಿ ಮಾಡಿದ್ದಾರೆ ಆದರೆ ಮಳೆ ಬಿತ್ತನೆ ಅವಕಾಶ ನೀಡದೇ ಇರುವುದು ಜೋಳದ ಬಿತ್ತನೆ ಪ್ರದೇಶ ಕುಂಠಿತಗೊಂಡು ಕಡಲೆ ಬೆಳೆ ಹೆಚ್ಚಾಗುವ ಸಂಭವವಿದೆ. ನಿರಂತರ ಮಳೆ ಸುರಿಯುತ್ತಿರುವ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ತೊಗರಿ ಬೆಳೆ ಒಣಗುತ್ತಿದೆ. ಅಲ್ಲದೇ ಮೋಡ ಕವಿದ ವಾತಾವರಣ ಹಾಗೂ ಮಳೆಯಿಂದ ರೋಗವು ಹೆಚ್ಚಿದೆ. ಮಳೆಯ ಪರಿಣಾಮ ಹಿಂಗಾರು ಬಿತ್ತನೆ ಸಾಧ್ಯವಾಗುತ್ತಿಲ್ಲ ಎಂದು ಕಸಬಾಲಿಂಗಸುಗೂರು ರೈತ ಕುಪ್ಪಣ್ಣ ಅವರು ಹೇಳಿದ್ದಾರೆ.