ಯುಪಿಯಲ್ಲಿ ಯಾದವರಿಗೆ ಅಖಿಲೇಶ್ ಮುಖ್ಯಮಂತ್ರಿ ಆಗಬೇಕು. ಇತರ ಹಿಂದುಳಿದವರಿಗೆ ಮೋದಿ ಮೇಲೆ ಪ್ರೀತಿ ಕಡಿಮೆ ಆಗಿಲ್ಲ. ಮುಸಲ್ಮಾನರಿಗೆ ಮಾಯಾವತಿ ಮರಳಿ ಬಿಜೆಪಿ ಜೊತೆ ಹೋಗಿಬಿಟ್ಟರೆ ಎಂಬ ಸಂದೇಹವಿದೆ.
ನವದೆಹಲಿ (ಜು. 02): 35 ವರ್ಷಗಳ ಹಿಂದೆ ಯುಪಿಯ ದಲಿತ ಕೇರಿಗಳಲ್ಲಿ ರಾಜಕೀಯ ಗುರು ಕಾನ್ಶಿರಾಮ್ ಜೊತೆ ಸೈಕಲ್ ಹತ್ತಿ ಬರುತ್ತಿದ್ದ ಮಾಯಾವತಿ ಮೇಲ್ಜಾತಿಗಳ ವಿರುದ್ಧ ಬೆಂಕಿ ಉಗುಳುವುದನ್ನು ನೋಡಿ ಶತಮಾನಗಳಿಂದ ಶೋಷಿತ, ವಂಚಿತ, ದಲಿತ ಸಮಾಜ ನಿಬ್ಬೆರಗಾಗಿ ಆಸೆಗಣ್ಣಿನಿಂದ ನೋಡುತ್ತಿತ್ತು. ಮಾಯಾ ಮತ್ತು ಕಾನ್ಶಿರಾಮ್ ಹಿಂದೆ ಸುತ್ತುತ್ತಿದ್ದ ಬಾಂಸೆಫ್‌ನ ಕಾರ್ಯಕರ್ತರು ‘ತಿಲಕ್ ತರಾಜು ಔರ್ ತಲ್ವಾರ್, ಇನ್ ಕೋ ಮಾರೋ ಜೂತೆ ಚಾರ್’ ಅಂದರೆ ‘ಬ್ರಾಹ್ಮಣರು ವೈಶ್ಯರು ಮತ್ತು ಕ್ಷತ್ರಿಯರನ್ನು ಹೊಡೆಯಿರಿ’ ಎಂದು ಘೋಷಣೆ ಕೂಗುತ್ತಿದ್ದರು.
ಆದರೆ ಪೂರ್ಣ ಬಹುಮತ ಬೇಕೆಂದರೆ ದಲಿತರ ಜೊತೆ ಇನ್ನೊಬ್ಬರು ಸೇರಿಕೊಳ್ಳಬೇಕು ಎಂದು ಅನ್ನಿಸಿದಾಗ ನೋಡನೋಡುತ್ತಿದ್ದಂತೆ 2006-07ರ ಆಸುಪಾಸು ಅದೇ ಮಾಯಾವತಿ ‘ಹಾಥಿ ನಹೀ ಗಣೇಶ್ ಹೈ, ಬ್ರಹ್ಮ ವಿಷ್ಣು ಮಹೇಶ್ ಹೈ’ ಅಂದರೆ ‘ನನ್ನ ಗುರುತು ಆನೆ ಅಲ್ಲ ಅದು ಗಣಪತಿ, ಮೂರು ಮೇಲ್ಜಾತಿಗಳು ತ್ರಿಮೂರ್ತಿಗಳು ಇದ್ದ ಹಾಗೆ’ ಎಂದು ಹೇಳಿ ಹೇಳಿ ಯಾರೂ ಊಹಿಸದೇ ಇರುವ ರೀತಿಯಲ್ಲಿ ದಲಿತರು ಮತ್ತು ಬ್ರಾಹ್ಮಣರನ್ನು ಒಟ್ಟಿಗೆ ತಂದು ಅಧಿಕಾರ ಹಿಡಿದಿದ್ದರು.
undefined
ಈಗ ಮರಳಿ ಅದೇ ಕವಲು ದಾರಿಯಲ್ಲಿ ಮಾಯಾವತಿ ನಿಂತಿದ್ದಾರೆ. ಅದೇನೋ ಗೊತ್ತಿಲ್ಲ, ದೇಶದಲ್ಲಿ ನರೇಂದ್ರ ಮೋದಿ ಉಚ್ಛ್ರಾಯ ಶುರುವಾದ ನಂತರ ಮಾಯಾವತಿ ವನವಾಸ ನಡೆಯುತ್ತಿದೆ. ಯುಪಿಯಲ್ಲಿ ದಲಿತರ ಅದರಲ್ಲೂ ಜಾಟವರಲ್ಲಿ ಮಾಯಾವತಿ ಪ್ರಭಾವ ಕಡಿಮೆ ಆಗಿಲ್ಲ. ಹೀಗಾಗಿ ಯಾವುದೇ ಕ್ಷೇತ್ರದಲ್ಲಿ 20 ರಿಂದ 25 ಪ್ರತಿಶತ ಮತ ಪಡೆಯುವ ಮಾಯಾವತಿಗೆ ತ್ರಿಕೋನ ಸ್ಪರ್ಧೆಯಲ್ಲಿ ಗೆಲ್ಲಲು ಉಳಿದ 10ರಿಂದ 12 ಪ್ರತಿಶತ ಮತಗಳು ಬೇಕು. ಯಾದವರಿಗೆ ಅಖಿಲೇಶ್ ಯಾದವ್ ಮುಖ್ಯಮಂತ್ರಿ ಆಗಬೇಕು.
ಇತರ ಹಿಂದುಳಿದವರಿಗೆ ಮೋದಿ ಮೇಲೆ ಪ್ರೀತಿ ಕಡಿಮೆ ಆಗಿಲ್ಲ. ಬ್ರಾಹ್ಮಣರಿಗೆ ಯೋಗಿ ಮೇಲೆ ಪ್ರೀತಿ ಇಲ್ಲ, ಆದರೆ ಹಿಂದುತ್ವ ಬಿಟ್ಟು ಬರಲು ಆಗುತ್ತಿಲ್ಲ. ಮುಸಲ್ಮಾನರಿಗೆ ಮಾಯಾವತಿ ಮರಳಿ ಬಿಜೆಪಿ ಜೊತೆ ಹೋಗಿಬಿಟ್ಟರೆ ಎಂಬ ಸಂದೇಹವಿದೆ. ಮಾಯಾವತಿಗೆ ದಲಿತರ ಜೊತೆ ವೋಟು ಹಾಕುವ ಒಂದು ಮುಖ್ಯ ಜಾತಿ ಬೇಕು. ಇಲ್ಲವಾದಲ್ಲಿ ಆಕೆಯ ಹಡಗು ಈ ಬಾರಿ ಕೂಡ ತಳದಿಂದ ಎದ್ದು ಬರುವುದು ಕಷ್ಟಕಷ್ಟ. ಒಂದು ಜಾತಿಯ ದಂಡಿ ಮತಗಳು ಸಾಮರ್ಥ್ಯದ ಜೊತೆ ದೌರ್ಬಲ್ಯವು ಹೌದು.
ಎಸ್‌ಪಿ-ಬಿಎಸ್‌ಪಿ ಒಟ್ಟಿಗೆ ಬಂದರೆ?
ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮಂಡಲ ರಾಜಕಾರಣದ ಫಲವಾದರೆ, ಬಿಜೆಪಿ ಬೆಳೆದಿದ್ದು ಕಮಂಡಲದಿಂದ. ಬಿಜೆಪಿ ಮತ್ತು ಬಿಎಸ್‌ಪಿ ಬೆಳೆದಿದ್ದು ಕಾಂಗ್ರೆಸ್‌ನ ಶಿಥಿಲತೆಯ ಮಧ್ಯೆ. ಆದರೆ ಮುಲಾಯಂ ಸಿಂಗ್ ಯಾದವ್ ಜಾಗ ಕಂಡುಕೊಂಡಿದ್ದು ಗುರು ಚೌಧರಿ ಚರಣ್ ಸಿಂಗ್‌ರ ನಂತರದಲ್ಲಿ. ಯುಪಿಯ ಒಂದು ವಿಶೇಷ ಎಂದರೆ ಯಾವಾಗ ಬಿಜೆಪಿ ಪ್ರಬಲವಾಗಿ ಬೆಳೆಯುತ್ತದೆಯೋ ಯಾದವರ ಎಸ್‌ಪಿ ಮತ್ತು ದಲಿತರ ಬಿಎಸ್‌ಪಿ ಒಟ್ಟಿಗೆ ಬರುತ್ತವೆ. 1993ರಲ್ಲಿ ಮಾಯಾವತಿ ಮತ್ತು ಮುಲಾಯಂ ಒಟ್ಟಿಗೆ ಬಂದಿದ್ದರು.
ಎರಡೂ ಪಕ್ಷಗಳು ಭರ್ಜರಿ ಲಾಭ ಪಡೆದಿದ್ದವು. ಆದರೆ 2019ರಲ್ಲಿ ಮೈತ್ರಿ ಆದರೂ ಕೂಡ ಯಾದವರ ಮತಗಳು ಮಾಯಾವತಿಗೆ ಶಿಫ್ಟ್ ಆಗಲಿಲ್ಲ. ಆಗ ಲೋಕಸಭಾ ಚುನಾವಣೆ ಇತ್ತು. ಮಾಯಾವತಿ ಪ್ರಧಾನಿ ಅಭ್ಯರ್ಥಿ ಎಂದು ಅಖಿಲೇಶ್ ಒಪ್ಪಿಕೊಂಡಿದ್ದರು. ಈಗ ಅಖಿಲೇಶ್ ಯಾದವ್ ನಾನೇ ಮುಖ್ಯಮಂತ್ರಿ ಆಗಬೇಕು ಎಂದು ಕನಸು ಕಾಣುತ್ತಿದ್ದರೆ ಮಾಯಾವತಿಗೆ ಸ್ವಯಂ ಮುಖ್ಯಮಂತ್ರಿ ಆಗುವ ತವಕ. ಹೀಗಾಗಿ ಇಬ್ಬರ ನಡುವೆ ಮೈತ್ರಿ ಆಗುವುದರ ಬದಲು ಪರಸ್ಪರರ ಬೆಂಬಲಿಗರನ್ನು ಸೆಳೆದುಕೊಳ್ಳುವ ಪೈಪೋಟಿ ನಡೆಯುತ್ತಿದೆ. ಸದ್ಯಕ್ಕಿರುವ ತಳಮಟ್ಟದ ಅನಿಸಿಕೆ ಪ್ರಕಾರ ಇಬ್ಬರು ಪ್ರತ್ಯೇಕವಾಗಿ ಹೋದರೆ ಬಿಜೆಪಿಗೆ ಲಾಭ ಹೆಚ್ಚು.
ಬಿಜೆಪಿ ‘ಜಾತಿ’ ಮರು ಸಮೀಕರಣ
ಮೇಲ್ನೋಟಕ್ಕೆ ಯುಪಿಯಲ್ಲಿ ಬಿಜೆಪಿಯ ಉಚ್ಛ್ರಾಯಕ್ಕೆ ಹಿಂದುತ್ವ ಕಾರಣ ಎಂದು ಅನ್ನಿಸಿದರೂ ಕೂಡ ಅದರ ಹಿಂದಿರುವ ಇನ್ನೊಂದು ವಿಷಯ ಎಂದರೆ ಯಾದವ ಬಿಟ್ಟು ಉಳಿದ ಸಣ್ಣ ಸಣ್ಣ ಹಿಂದುಳಿದ ಜಾತಿಗಳು ಮತ್ತು ಚಮ್ಮಾರ ಬಿಟ್ಟು ಉಳಿದ ದಲಿತರು ಒಟ್ಟಾಗಿ ಬಿಜೆಪಿಗೆ ಮರು ವಲಸೆ ಬಂದಿದ್ದು. ಇದಕ್ಕೆ ಮುಖ್ಯ ಕಾರಣ ಅತಿ ಹಿಂದುಳಿದವರಿಗೆ ‘ಮೋದಿ ಎಂಬ ನಮ್ಮವನೊಬ್ಬ’ ಪ್ರಧಾನಿ ಆಗುತ್ತಾನೆ ಅನ್ನಿಸಿದರೆ, ಬ್ರಾಹ್ಮಣ ಬನಿಯಾ ಠಾಕೂರರಿಗೆ ಯಾದವರ ರಾಜ್ಯ ಮುಗಿದು ಹಿಂದುತ್ವದ ವ್ಯಕ್ತಿ ಬರುತ್ತಾನಲ್ಲ ಎಂದು ಅನ್ನಿಸಿದ್ದು.
ಯಾವುದೇ ರಾಜ್ಯದಲ್ಲಿ ಧ್ವನಿ ಮತ್ತು ಅಧಿಕಾರ ಎರಡೂ ಇರದ ಅತಿ ಹಿಂದುಳಿದ ಸಣ್ಣ ಸಣ್ಣ ಜಾತಿಗಳನ್ನು ಓಲೈಸಿ ಜೊತೆಗೆ ತರುವುದು ಮೋದಿ ಮತ್ತು ಅಮಿತ್ ಶಾರ ತಂತ್ರಗಾರಿಕೆಯ ಮುಖ್ಯ ಭಾಗ. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಮರಳಿ ಅದನ್ನೇ ಮಾಡುತ್ತಿದೆ. ಮೊನ್ನೆಯಷ್ಟೇ ಅಮಿತ್ ಶಾ ನಿಷಾದ ಜಾತಿಯ ನಾಯಕರು, ಕುರ್ಮಿ ಪಟೇಲ್ ಸಮುದಾಯದ ನಾಯಕರು, ಲೋಧ್, ಮೌರ್ಯ ಸಮುದಾಯಗಳ ನಾಯಕರನ್ನು ಕರೆದು ಗಾಳ ಹಾಕಿದ್ದಾರೆ. ಉತ್ತರ ಪ್ರದೇಶದ ಇವತ್ತಿನ ತಳಮಟ್ಟದ ಸ್ಥಿತಿ ಎಂದರೆ ಅತಿ ಹಿಂದುಳಿದವರ ವೋಟು ಯಾರು ಪಡೆಯುತ್ತಾರೋ ಅವರಿಗೆ ಲಾಭ ಜಾಸ್ತಿ. ತುಂಬಾ ಹಿಂದೆ ಚಂಬಲ್‌ನ ಫೂಲನ್ ದೇವಿಯನ್ನು ಮುಲಾಯಂ ಮಿರ್ಜಾಪುರಕ್ಕೆ ಒಯ್ದು ಭಾರೀ ಲಾಭ ಪಡೆದಿದ್ದರು. ಫೂಲನ್ ದೇವಿ ದೋಣಿ ನಡೆಸುವ ಅತಿ ಹಿಂದುಳಿದ ಮಲ್ಹಾ ಜಾತಿಯವಳು.
ಮಾಯಾವತಿ-ಕಾನ್ಶಿರಾಮ್ ಭೇಟಿ ಪ್ರಸಂಗ
ಡಾ. ಅಂಬೇಡ್ಕರ್, ಜ್ಯೋತಿಬಾ ಫುಲೆ ದಲಿತರ ಅಸ್ಮಿತೆ ಮತ್ತು ಉದ್ಧಾರಕ್ಕಾಗಿ ಎಷ್ಟೆಲ್ಲ ಕೆಲಸ ಮಾಡಿದರೂ ಕೂಡ ಆಗಿನ ಕಾಂಗ್ರೆಸ್‌ನ ಎದುರು, ಅದರಲ್ಲೂ ಮಹಾತ್ಮಾ ಗಾಂಧಿ ಇದ್ದುದ್ದರಿಂದ ಚುನಾವಣಾ ರಾಜಕೀಯದಲ್ಲಿ ಇವರಿಗೆ ಯಶಸ್ಸು ದೊಡ್ಡ ಮಟ್ಟದಲ್ಲಿ ಸಿಗಲಿಲ್ಲ. ಆದರೆ ದಲಿತರು ಕೂಡ ಒಂದು ವೋಟ್ ಬ್ಯಾಂಕ್ ಎಂದು ತೋರಿಸಿ ಯಶಸ್ವಿ ಆಗಿದ್ದು ಮಾತ್ರ ಕಾನ್ಶಿರಾಮ್ ಒಬ್ಬರೇ. ಕಾನ್ಶಿರಾಮ್ ಪಂಜಾಬ್‌ನ ಹೊಷಿಯಾರಪುರದ ದಲಿತ ಸಿಖ್ ಮನೆತನದವರು. ಸರ್ಕಾರಿ ಕೆಲಸ ಸಿಕ್ಕಿದ್ದು ಪುಣೆಯಲ್ಲಿ. ರಾಜಕೀಯ ಯಶಸ್ಸು ಸಿಕ್ಕಿದ್ದು ಯುಪಿಯಲ್ಲಿ.
78 ರಲ್ಲಿ ದಿಲ್ಲಿಯ ಪ್ರಸಿದ್ಧ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಆಗ ಇಂದಿರಾ ಗಾಂಧಿಯನ್ನು ಸೋಲಿಸಿದ್ದ ರಾಜ್ ನಾರಾಯಣ ದಲಿತರನ್ನು ಹರಿಜನರು ಎಂದು ಕರೆದಾಗ ಎದ್ದು ನಿಂತ ಸಾಮಾನ್ಯ ಯುವತಿ ಮಾಯಾವತಿ ಮಾಡಿದ ಭಾಷಣ ಕಾನ್ಶಿರಾಮ್ ಕಿವಿಗೆ ತಲುಪುತ್ತದೆ. ಒಂದೆರಡು ದಿನ ಬಿಟ್ಟು ದಿಲ್ಲಿಯ ದಲಿತ ಕೇರಿಯಲ್ಲಿದ್ದ ಮಾಯಾವತಿ ಮನೆಗೆ ಕಾನ್ಶಿರಾಮ್ ಹೋದಾಗ ಮಾಯಾ ಐಎಎಸ್ ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದರಂತೆ. ಆಗ ಕಾನ್ಶಿರಾಮ್ ‘ನನ್ನ ಜೊತೆ ಬಾ, ಐಎಎಸ್ ಓದಿದ ಕಲೆಕ್ಟರ್‌ಗಳು ನಿನ್ನೆದುರು ಲೈನ್ ಹಚ್ಚುತ್ತಾರೆ’ ಎಂದರು. ನಂತರ ಮಾಯಾವತಿ ಲಕ್ಷ್ಯ ರಾಜಕೀಯದ ಕಡೆ ಹೊರಳಿತು. ಒಬ್ಬ ಸಾಮಾನ್ಯ ದಲಿತ ನೌಕರನ ಮಗಳು ಅಷ್ಟುದೊಡ್ಡ ಯುಪಿಗೆ ಮುಖ್ಯಮಂತ್ರಿ ಆದದ್ದು ಇತಿಹಾಸ. ಆದರೆ ಈಗ ಮಾಯಾವತಿ ಮಾತ್ರ ದಲಿತರ ಜೊತೆಗೆ ಉಳಿದವರನ್ನು ತರಲಾಗದೆ ಒದ್ದಾಡುತ್ತಿದ್ದಾರೆ.
ಮಾಯಾವತಿಯ ಸರಿ-ತಪ್ಪುಗಳು
ಯಾರು ಏನೇ ಹೇಳಲಿ ಮಾಯಾವತಿ ಒಳ್ಳೆಯ ಆಡಳಿತಗಾರ್ತಿ. ಆಕೆಗೆ ಕಾನೂನು ಸುವ್ಯವಸ್ಥೆ ಮೇಲೆ ಹಿಡಿತ ಇತ್ತು. ಯಾರೇ ನಿಯಮ ಉಲ್ಲಂಘಿಸಿದರೂ ಸಹಿಸುತ್ತಿರಲಿಲ್ಲ. ಅದರಾಚೆಗೆ ಮಾಯಾವತಿ ಮಾಡಿದ ಕೆಲಸ ಎಂದರೆ ದೊಡ್ಡ ದೊಡ್ಡ ಪಾರ್ಕ್ ನಿರ್ಮಿಸಿ ತನ್ನ ಫೋಟೋ ಹಾಕಿಕೊಂಡಿದ್ದು. ಜೊತೆಗೆ ಒಂದಿಷ್ಟು ಜಿಲ್ಲೆಗಳ ಹೆಸರು ಬದಲಾಯಿಸಿದ್ದು. ಸಾಮಾಜಿಕ ನ್ಯಾಯದ ಆಚೆಗೆ ಮಾಯಾವತಿ ಏನನ್ನಾದರೂ ಅಭಿವೃದ್ಧಿ ಮಾಡಿ ತೋರಿಸಬೇಕೆಂಬ ಇಚ್ಛಾಶಕ್ತಿ ತೋರಲಿಲ್ಲ. ದಲಿತನ ಮಗಳು ಮುಖ್ಯಮಂತ್ರಿ ಆದಳು ಎಂಬ ಖುಷಿ ಬಿಟ್ಟರೆ ತಳ ವರ್ಗಗಳ ಆಕಾಂಕ್ಷೆಗೆ ಪೂರಕವಾಗಿ ಏನೂ ಕೆಲಸ ಮಾಡಲಿಲ್ಲ. ಹಿಂದುತ್ವ ಇರಲಿ, ದಲಿತ ಇರಲಿ, ಮುಸ್ಲಿಂ ಇರಲಿ, ಹಿಂದುಳಿದ ವರ್ಗ ಇರಲಿ ಅಸ್ಮಿತೆಯ ರಾಜಕಾರಣ ಒಂದು ಬಾರಿ, ಎರಡು ಬಾರಿ ಫಲ ಕೊಡುತ್ತದೆ. ಆದರೆ ಅದರ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಇರದಿದ್ದರೆ ಸ್ಥಿರವಾಗಿ ಉಳಿಯುವುದು ಕಷ್ಟಬಿಡಿ.
ಭೀಮ್ ಆರ್ಮಿ ಪೈಪೋಟಿ
ಹಳೆಯ ಮತ್ತು ನಡು ತಲೆಮಾರಿನ ಜನರ ಮಧ್ಯೆ ಮಾಯಾವತಿ ಹೆಸರು ಓಡುತ್ತದೆ. ಆದರೆ ಹೊಸ ತಲೆಮಾರಿನ ದಲಿತ ಯುವಕರಲ್ಲಿ ಅಷ್ಟೊಂದು ಮಾಯಾವತಿ ಕ್ರೇಜ್ ಇಲ್ಲ. ಬದಲಾಗಿ ಹೊಸ ತಲೆಮಾರಿನ ನಡುವೆ ಭೀಮ್ ಆರ್ಮಿಯ ಚಂದ್ರಶೇಖರ ಆಜಾದ್‌ರ ಕ್ರೇಜ್ ಜಾಸ್ತಿ ಆಗುತ್ತಿದೆ. ಬಹುತೇಕ ಅಖಿಲೇಶ್ ಯಾದವ್ ಭೀಮ್ ಆರ್ಮಿ ಜೊತೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಜಾಸ್ತಿ ಇದೆ. ಇವತ್ತಿನ ಸ್ಥಿತಿಯಲ್ಲಿ ದಲಿತ ಜಾಟವರನ್ನು ಬಿಟ್ಟು ಉಳಿದ ಜಾತಿಗಳು ಮಾಯಾವತಿ ಹತ್ತಿರ ಬರುತ್ತಿಲ್ಲ. ಹೀಗಾಗಿ ಏಕಾಂಗಿಯಾಗಿ ಅಧಿಕಾರಕ್ಕೆ ಬರುವುದು ಮಾಯಾವತಿಗೆ ಕಷ್ಟ. ಒಂದು ವೇಳೆ ಬಿಜೆಪಿ ಸೀಟು ಕಡಿಮೆ ಆಗಿ ಅತಂತ್ರ ಏನಾದರೂ ಆದರೆ ಮಾಯಾವತಿ ಅವರ ಬೇಡಿಕೆ ಏರಬಹುದು ಅಷ್ಟೆ.
ಪಿಕೆ ರಣತಂತ್ರಗಳ ಹಿಂದೆ...
ರಾಜನ ಸಾಮರ್ಥ್ಯ, ದೌರ್ಬಲ್ಯದ ಗುಟ್ಟುಗಳು ಗೊತ್ತಿರುವುದು ಆತನ ಜೊತೆ ಇರಲು ಅವಕಾಶ ಸಿಕ್ಕವರಿಗೆ ಮಾತ್ರ. 2012ರಿಂದ 14ರ ವರೆಗೆ ಈಗಿನ ಮೋದಿ ವಿರೋಧಿಗಳ ರಣನೀತಿಕಾರ ಪ್ರಶಾಂತ ಕಿಶೋರ್ ಗಾಂಧಿನಗರದಲ್ಲಿ ಮೋದಿ ನಿವಾಸದಲ್ಲೇ ವಾಸ್ತವ್ಯ ಹೂಡಿದ್ದರು. ಹೀಗಾಗಿಯೇ ಏನೋ ಮೋದಿ ಎದುರು ಲಾಲು, ಅಖಿಲೇಶ್, ಮಾಯಾವತಿ, ಚೌಟಾಲಾ, ಜಯಂತ ಚೌಧರಿ, ದೇವೇಗೌಡರ ತರಹದ ಜಾತಿ ಬಲ ಇರುವ ನಾಯಕರು ಅಪ್ಪಚ್ಚಿ ಆಗಿರುವಾಗ ಸಾಹಸ ಮಾಡಿ ಕೆಲವು ಕಡೆ ಮೋದಿ ಮತ್ತು ಬಿಜೆಪಿಯನ್ನು ಕಟ್ಟಿಹಾಕಿರುವ ಪಿಕೆ ದಿಲ್ಲಿ ಮಟ್ಟದಲ್ಲಿ ವಿರೋಧ ಪಕ್ಷಗಳನ್ನು ಒಟ್ಟಾಗಿ ತರಲು ವೇದಿಕೆ ಸಿದ್ಧಪಡಿಸುತ್ತಿದ್ದಾರೆ. ಕೇಜ್ರಿವಾಲ್, ಜಗನ್ ರೆಡ್ಡಿ, ಎಂ.ಕೆ.ಸ್ಟಾಲಿನ್ ಮತ್ತು ಮಮತಾ ಬ್ಯಾನರ್ಜಿ ಪಿಕೆಯ ಹಳೆ ಗ್ರಾಹಕರು. ಅವರನ್ನು ಒಟ್ಟಿಗೆ ತಂದು ಸದ್ಯಕ್ಕೆ ಕಾಂಗ್ರೆಸ್ ಹೊರಗಿಟ್ಟು ಒಂದು ವಿಶ್ವಾಸಾರ್ಹ ತೃತೀಯ ರಂಗ ರಚಿಸಲು ಶರದ್ ಪವಾರ್ ಪಿಕೆ ಸಹಾಯ ಪಡೆಯುತ್ತಿದ್ದಾರೆ. ತೃತೀಯ ರಂಗ ವಿಫಲ ಪ್ರಯೋಗ ಆದರೂ ಅದಕ್ಕೆ ಸುದ್ದಿ ಮೌಲ್ಯ ಮತ್ತು ಕರೆನ್ಸಿ ಎರಡೂ ಇದೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ಪ್ರತಿನಿಧಿ
'ಇಂಡಿಯಾ ಗೇಟ್' ದೆಹಲಿಯಿಂದ ಕಂಡ ರಾಜಕಾರಣ