ಯಡಿಯೂರಪ್ಪ ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ಕೊಟ್ಟ ಸಿದ್ದರಾಮಯ್ಯ, ಡಿಕೆಶಿ

By Kannadaprabha NewsFirst Published Dec 12, 2020, 11:12 AM IST
Highlights

ಅನುತ್ಪಾದಕ ಜಾನುವಾರುಗಳನ್ನು ಸಾಕಿ ಇಲ್ಲವೇ ಸಾಕುವ ಖರ್ಚನ್ನು ರೈತರಿಗೆ ಕೊಡಲಿ| ದೇಶಕ್ಕೊಂದು ಕಾಯ್ದೆ ತಂದು ದೇಶಾದ್ಯಂತ ಗೋಮಾಂಸ ರಫ್ತು ನಿಲ್ಲಿಸಿ| ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ, ಡಿಕೆಶಿ ಖಡಕ್‌ ಎಚ್ಚರಿಕೆ| 

ಬೆಂಗಳೂರು(ಡಿ.12): ಗೋಹತ್ಯೆ ನಿಯಂತ್ರಣ ಕಾಯ್ದೆ ಜಾರಿ ಮುನ್ನ ಸರ್ಕಾರವೇ ಎಲ್ಲ ಅನುತ್ಪಾದಕ ಜಾನುವಾರುಗಳನ್ನು ಖರೀದಿಸಬೇಕು. ಇಲ್ಲವೇ ಅವುಗಳನ್ನು ಸಾಕಲು ತಗಲುವ ವೆಚ್ಚವನ್ನು ರೈತರಿಗೆ ಭರಿಸಬೇಕು. ಇದಕ್ಕೆ ಸಿದ್ಧವಿದ್ದರೆ ಮುಂದಿನ ವಾರವೇ ವಿಧಾನಸಭೆ ವಿಶೇಷ ಅಧಿವೇಶನ ಕರೆಯಲಿ ನಾವು ಭಾಗವಹಿಸುತ್ತೇವೆ. ಇಲ್ಲದಿದ್ದರೆ ಈ ರೈತ ವಿರೋಧಿ ಹಾಗೂ ಚರ್ಮೋದ್ಯಮದ ಬಾಗಿಲು ಹಾಕುವ ಕಾಯ್ದೆಯ ಬಗ್ಗೆ ತಾಲೂಕು ಮಟ್ಟದಲ್ಲಿ ಜನ ಜಾಗೃತಿ ಆಂದೋಲನ ನಡೆಸುತ್ತೇವೆ ಎಂದು ಕಾಂಗ್ರೆಸ್‌ ಎಚ್ಚರಿಕೆ ನೀಡಿದೆ.

ಶುಕ್ರವಾರ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ‘ಪ್ರತಿಪಕ್ಷಗಳ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ತರಾತುರಿಯಲ್ಲಿ ಗೋ ಕಾಯ್ದೆ ಮಂಡಿಸಿ ಚರ್ಚೆ, ಅಭಿಪ್ರಾಯಕ್ಕೆ ಅವಕಾಶ ನೀಡದೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿದೆ’ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಮಾತನಾಡಿ, ‘ಗೋಹತ್ಯೆ ನಿಯಂತ್ರಣ ಕಾಯ್ದೆ ಸಂಪೂರ್ಣ ರೈತ ವಿರೋಧಿಯಾಗಿದ್ದು, ಈ ಕಾಯ್ದೆ ಜಾರಿಯಾದರೆ ರೈತರು ಜಾನುವಾರುಗಳನ್ನು ಸಾಕುವುದು, ಖರೀದಿ, ಮಾರಾಟ ಮಾಡಲು ಕಷ್ಟವಾಗಲಿದೆ. ಇದರಿಂದ ಚರ್ಮೋದ್ಯಮದ ಮೇಲಂತೂ ತೀವ್ರ ಪರಿಣಾಮ ಬೀರಲಿದೆ. ಈ ಕಾಯ್ದೆ ಗೋಸಾಕಣೆದಾರರ ಮೇಲೆ ಸುಳ್ಳು ಆರೋಪ, ದೂರು ಹೊರಿಸಿ ದೌರ್ಜನ್ಯ ನಡೆಸುತ್ತಿರುವವರ ರಕ್ಷಣೆಗಾಗಿಯೇ ಹೊರತು ಗೋವುಗಳ ಮೇಲಿನ ಭಕ್ತಿಗಾಗಲಿ, ರಕ್ಷಣೆಗಾಗಲಿ ಅಲ್ಲ’ ಎಂದು ಆರೋಪಿಸಿದರು.

'ವಿಧೇಯಕ ಅಂಗೀಕಾರಕ್ಕೆ ಅಡ್ಡಿ, ಗೋಹತ್ಯೆ ನಿಷೇಧಕ್ಕೆ ಸುಗ್ರೀವಾಜ್ಞೆ'

‘ಬಿಜೆಪಿಗೆ ಗೋವುಗಳ ಬಗ್ಗೆ ಅಷ್ಟೊಂದು ಭಕ್ತಿ, ಕಾಳಜಿ ಇದ್ದರೆ ಗೋವಾ, ಕೇರಳ, ಈಶಾನ್ಯ ರಾಜ್ಯಗಳನ್ನೂ ಒಳಗೊಂಡಂತೆ ಇಡೀ ದೇಶಕ್ಕೆ ಅನ್ವಯವಾಗುವಂತೆ ಒಂದು ಕಾನೂನು ಜಾರಿಗೆ ತಂದು ವಿದೇಶಗಳಿಗೆ ಭಾರತದಿಂದ ಗೋಮಾಂಸ ರಫ್ತನ್ನು ಸಂಪೂರ್ಣ ನಿಷೇಧಿಸಲಿ’ ಎಂದು ಕೂಡ ಸಿದ್ದರಾಮಯ್ಯ ಸವಾಲು ಹಾಕಿದರು.

ಗಂಡು ಕರು ಏನಾಗ್ತಿವೆ?:

‘ರಾಜ್ಯದಲ್ಲಿ ಒಟ್ಟು 159 ಗೋಶಾಲೆಗಳು ಇವೆ, ಅಲ್ಲಿರುವ ಹಸು, ಹೋರಿಗಳಿಗೆ ಸರ್ಕಾರ ಸರಿಯಾಗಿ ಮೇವು ಒದಗಿಸುತ್ತಿಲ್ಲ. ಅಲ್ಲಿ ಹುಟ್ಟುವ ಗಂಡು ಕರುಗಳು ಎಲ್ಲಿಗೆ ಹೋಗುತ್ತಿವೆ ಎನ್ನುವುದರ ಬಗ್ಗೆ ಸರ್ಕಾರ ಮಾಹಿತಿ ನೀಡಲಿ. ಇನ್ನು ರೈತರು ತಮ್ಮ ಬಳಿಯಿರುವ ಹೋರಿ, ವಯಸ್ಸಾದ ಹಸುಗಳನ್ನು ಕೊಂಡುಹೋಗಿ ಗೋಶಾಲೆಗೆ ಬಿಟ್ಟರೆ ಅವುಗಳಿಗೆ ಮೇವು ಹಾಕೋರು ಯಾರು? ಇದರ ಪರಿಕಲ್ಪನೆಯಾದರೂ ಸರ್ಕಾರಕ್ಕಿದೆಯೇ?’ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

‘2019ರ ಜಾನುವಾರು ಗಣತಿ ಪ್ರಕಾರ ಹಸು, ಹೋರಿ, ಎಮ್ಮೆ ಮತ್ತು ಕೋಣಗಳು ಸೇರಿ ರಾಜ್ಯದಲ್ಲಿ ಒಟ್ಟು 84,69,004 ಜಾನುವಾರುಗಳಿವೆ. ಇವುಗಳ ಸಾಕಾಣಿಕೆಗೆ ವಾರ್ಷಿಕ 2.76 ಕೋಟಿ ಟನ್‌ ಮೇವಿನ ಅಗತ್ಯವಿದೆ. ಆದರೆ ನಮ್ಮಲ್ಲಿ ಲಭ್ಯವಿರುವ ಮೇವಿನ ಪ್ರಮಾಣ 1.49 ಕೋಟಿ ಟನ್‌ ಮಾತ್ರ. ಕಳೆದ 20 ವರ್ಷಗಳಲ್ಲಿ ಕನಿಷ್ಠ 15 ವರ್ಷ ರಾಜ್ಯ ಬರಗಾಲ ಎದುರಿಸಿದೆ. ರೈತರು ಬೆಳೆದ ಬೆಳೆ ಕೈ ಸೇರದೆ, ಜಾನುವಾರುಗಳಿಗೆ ಮೇವು ಒದಗಿಸಲು ಅಸಾಧ್ಯ ಎಂಬ ಪರಿಸ್ಥಿತಿ ಎದುರಾದಾಗ ಸಹಜವಾಗಿಯೇ ಅವರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಾರೆ. ಆದರೆ ಹೊಸ ಕಾಯ್ದೆ ಇದಕ್ಕೆ ಅವಕಾಶ ನೀಡದಿದ್ದಾಗ ಸಹವಾಗಿಯೇ ಸಂಘರ್ಷ ಉಂಟಾಗುತ್ತದೆ’ ಎಂದರು.

ಗೋಹತ್ಯೆ ನಿಷೇಧ ಕಾಯ್ದೆ ಏಕೆ ಬೇಕು?

ಗೋವನ್ನು ಬಿಜೆಪಿ ಸಚಿವರ ಮನೆಗೆ ಕಟ್ಟಿ: ಡಿಕೆಶಿ

‘ಅನುತ್ಪಾದಕ ಅಥವಾ ರೈತರಿಗೆ ಅನುಕೂಲವಾಗದ ಜಾನುವಾರುಗಳನ್ನು ರಾಜ್ಯ ಸರ್ಕಾರವೇ ದರ ನಿಗದಿ ಮಾಡಿ ಖರೀದಿಸಬೇಕು. ಅವುಗಳನ್ನು ಸರ್ಕಾರದ ಪ್ರತಿನಿಧಿಗಳೇ ಪಡೆದು ಸಚಿವರು, ಬಿಜೆಪಿ ಮುಖಂಡರ ಮನೆಯಲ್ಲೋ, ಜಮೀನಿನಲ್ಲೋ ಬಿಟ್ಟು ಬರಲಿ. ಅವುಗಳನ್ನು ಬಿಜೆಪಿ ನಾಯಕರೇ ಸಾಕಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸವಾಲೆಸೆದರು. ‘ಕಾಂಗ್ರೆಸ್‌ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಲ್ಲ ಜನ ವಿರೋಧಿ ಕಾಯ್ದೆಗಳನ್ನೂ ಮುಲಾಜಿಲ್ಲದೆ ರದ್ದುಪಡಿಸುತ್ತೇವೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಚುನಾವಣೆ ನಂತರ ರಾಜ್ಯದ ಉದ್ದಗಲಕ್ಕೂ ಪ್ರತಿ ತಾಲೂಕು ಮಟ್ಟದಲ್ಲಿ ಈ ಕಾಯ್ದೆಯ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಮಾಡುತ್ತೇವೆ. ಇದು ಒಂದು ಸಮುದಾಯದ ಮೇಲೆ ಬಣ್ಣ ಹಚ್ಚಲು, ಅವರನ್ನು ಟಾರ್ಗೆಟ್‌ ಮಾಡಲು ನಡೆದಿರುವ ಹುನ್ನಾರ. ಆದರೆ, ಇದು ಒಂದು ಸಮುದಾಯಕ್ಕೆ ಸಂಬಂಧಿಸಿದ ವಿಚಾರವಲ್ಲ. ಈ ರಾಜ್ಯದ ರೈತರು, ಎಲ್ಲಾ ಸಮಾಜದ ವಿಚಾರ. ಅವರ ರಕ್ಷಣೆಗೆ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂದು ಪಕ್ಷ ಚಿಂತನೆ ನಡೆಸಿದೆ ಎಂದು ತಿಳಿಸಿದರು.

ಈ ಕಾಯ್ದೆ ಚರ್ಮೋದ್ಯಮದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಲಿದೆ. ಇಡೀ ಪ್ರಪಂಚದ ಶೇ.11 ರಷ್ಟು ಚರ್ಮೊದ್ಯಮದ ಉತ್ಪಾದನೆ ಭಾರತದಲ್ಲಿದೆ. ಈಗ ಇಡೀ ಉದ್ಯಮ ಮುಚ್ಚಲಿದೆ. ಈ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಳ್ಳುವವರ ಪರ್ಯಾಯ ಬದುಕಿನ ವ್ಯವಸ್ಥೆ ಕಲ್ಪಿಸಲು ಯಾವ ಯೋಜನೆ ರೂಪಿಸಲಾಗಿದೆ? ಎಂದು ಪ್ರಶ್ನಿಸಿದರು.
 

click me!