ಜಿ.ಪಂ, ತಾ.ಪಂ ಚುನಾವಣೆಗೆ ಕೊನೆಗೂ ಕೂಡಿ ಬಂತು ಮುಹೂರ್ತ, ಸರ್ಕಾರಕ್ಕೆ ಹೈಕೋರ್ಟ್ ಗಡುವು

Published : May 24, 2022, 06:40 PM IST
ಜಿ.ಪಂ, ತಾ.ಪಂ ಚುನಾವಣೆಗೆ ಕೊನೆಗೂ ಕೂಡಿ ಬಂತು ಮುಹೂರ್ತ, ಸರ್ಕಾರಕ್ಕೆ ಹೈಕೋರ್ಟ್ ಗಡುವು

ಸಾರಾಂಶ

* ಕರ್ನಾಟಕದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ * ಕೊನೆಗೂ ಕೂಡಿಬಂತು  ಮುಹೂರ್ತ * ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು, (ಮೇ.24): ಕರ್ನಾಟಕದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.

ಹೌದು....ಕರ್ನಾಟಕ ಹೈಕೋರ್ಟ್ ಇಂದು(ಮಂಗಳವಾರ) ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ಸರ್ಕಾರಕ್ಕೆ 12 ವಾರಗಳ ಗಡುವು ನೀಡಿದ್ದು, ಅಷ್ಟರಲ್ಲಿ ಕ್ಷೇತ್ರ ಪುನರ್ವಿಂಗಡಣೆ,  ಮೀಸಲಾತಿ ನೀಡಲು ಸಮಯಾವಕಾಶ ನೀಡಿದೆ.

ಹಿಂದುಳಿದ ವರ್ಗಗಳಿಗೆ ಮೀಸಲು ಕಲ್ಪಿಸಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ. ಇದೀಗ ಕೋರ್ಟ್, ಸಹ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರಕ್ಕೆ ಹೈಕೋರ್ಟ್ 3 ತಿಂಗಳ ಗಡುವು ನೀಡಿದೆ. ಜತೆಗೆ, ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಂಡ ನಂತರದ ಒಂದು ವಾರದ ಬಳಿಕ ಚುನಾವಣಾ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ನಿರ್ದೇಶಿಸಿದೆ. ಅಲ್ಲದೆ, ಯಾವುದೇ ಕಾರಣಕ್ಕೂ ಮತ್ತೆ ಹೆಚ್ಚಿನ ಕಾಲಾವಕಾಶ ಕೇಳದಂತೆ ತಾಕೀತು ಮಾಡಿದೆ. 

ZP-TP Election: ಆಯೋಗದ ವರದಿ ಬಳಿಕ ಜಿಪಂ, ತಾಪಂ ಚುನಾವಣೆ: ಈಶ್ವರಪ್ಪ

ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠ ಈ ಆದೇಶ  ನೀಡಿದೆ.  ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮೆಮೋ ಸಲ್ಲಿಸಿ, ಕ್ಷೇತ್ರ ಪುನರ್ವಿಂಗಡಣೆ, ಮೀಸಲಾತಿಗೆ 12 ವಾರ ಸಮಯಾವಕಾಶ ನೀಡಬೇಕು. ನಿವೃತ್ತ ನ್ಯಾಯಮೂರ್ತಿ ಡಾ.ಕೆ.ಭಕ್ತವತ್ಸಲ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಮೀಸಲು ನಿಗದಿಗೆ ಆಯೋಗ ರಚಿಸಲಾಗಿದೆ ಅದರ ವರದಿಗಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿತ್ತು.

 ಸರ್ಕಾರದ ಪರ ವಾದ ಮಂಡಿಸಿದ ಎಜಿ ಪ್ರಭುಲಿಂಗ್ ನಾವದಗಿ ಸಮಯಾವಕಾಶ ಕೋರಿದರು.  ಚುನಾವಣೆ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದ ಮಂಡಿಸಿ 12 ವಾರಕ್ಕಿಂತ ಹೆಚ್ಚಿನ ಕಾಲಾವಕಾಶ ನೀಡದಂತೆ ಮನವಿ ಮಾಡಿದರು. 

ವಾದ-ಪ್ರತಿವಾದ ಆಲಿಸಿದ ಪೀಠ, 12 ವಾರಗಳ ಒಳಗೆ ಸರ್ಕಾರ ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಬೇಕು. ಅದಾದ ಒಂದು ವಾರದೊಳಗೆ ಆಯೋಗ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು. ಸರ್ಕಾರ ಮತ್ತೆ ಯಾವುದೇ ಕಾರಣ ನೀಡಿ ಮತ್ತೆ ಸಮಯ ವಿಸ್ತರಣೆಗೆ ಕೋರುವಂತಿಲ್ಲ ಎಂದು ಹೇಳಿದೆ.

ಜಿ.ಪಂ, ತಾ.ಪಂ ಗಡಿ ನಿಗದಿಗೆ ಮಾರ್ಗಸೂಚಿ
ತಾ.ಪಂ. ಹಾಗೂ ಜಿ.ಪಂ.ಗಳ ಕ್ಷೇತ್ರಗಳ ಸೀಮೆಗಳನ್ನು ನಿಗದಿಪಡಿಸುವ ಸಂಬಂಧ ಕರ್ನಾಟಕ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ ಮಾರ್ಗಸೂಚಿಗಳನ್ನು ಹೊರಡಿಸಿದೆ.

– ತಾಲೂಕಿನಲ್ಲಿರುವ ನಗರ ಸ್ಥಳೀಯ ಸಂಸ್ಥೆಗೆ ಸೇರ್ಪಡೆಯಾಗಿರುವ, ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಿರುವ ಗ್ರಾಮಾಂತರ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಗ್ರಾಮೀಣ ಪ್ರದೇಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.

ಇದೇ ಜಿ.ಪಂ. ಕ್ಷೇತ್ರಗಳ ನಿಗದಿಗೂ ಅನ್ವಯವಾಗುತ್ತದೆ.
– ಒಂದು ಜಿ.ಪಂ. ಕ್ಷೇತ್ರದೊಳಗೆ ಎಷ್ಟು ತಾ.ಪಂ. ಕ್ಷೇತ್ರಗಳನ್ನು ರಚಿಸಬಹುದೋ ಅಷ್ಟು ಕ್ಷೇತ್ರಗಳನ್ನು ಆ ಜಿ.ಪಂ. ಕ್ಷೇತ್ರದ ವ್ಯಾಪ್ತಿಯೊಳಗೆ ಅಳವಡಿಸಿರಬೇಕು.
– ಜಿ.ಪಂ. ಕ್ಷೇತ್ರದೊಳಗೆ ಬರುವ ಪೂರ್ಣ ಗ್ರಾ.ಪಂ.ಗಳನ್ನು ಸಾಧ್ಯವಾದಷ್ಟು ಒಟ್ಟುಗೂಡಿಸಿ, ತಾ.ಪಂ. ಕ್ಷೇತ್ರಗಳನ್ನು ನಿರ್ಧರಿಸಬೇಕು. ಸಾಧ್ಯವಾಗದಿದ್ದರೆ ಗ್ರಾಮಗಳನ್ನು ಗುಂಪು ಮಾಡುವುದು, ಈ ಸಂದರ್ಭದಲ್ಲಿ ಮೂಲ ಗ್ರಾಮವನ್ನು ವಿಭಜಿಸತಕ್ಕದ್ದಲ್ಲ. ಕಂದಾಯ ಗ್ರಾಮದ ದಾಖಲೆ ಗ್ರಾಮಗಳನ್ನು ಬೇರೆಯಾಗಿ ವಿಂಗಡಿಸಬಾರದು.
– ತಾ.ಪಂ., ಜಿ.ಪಂ. ಕ್ಷೇತ್ರದೊಳಗೆ ಒಟ್ಟುಗೂಡಿಸುವ ಸಂದರ್ಭ ಒಂದು ತಾ.ಪಂ. ಕ್ಷೇತ್ರ ಎರಡು ಜಿ.ಪಂ. ಕ್ಷೇತ್ರಗಳಿಗೆ ವಿಭಜಿಸತಕ್ಕದ್ದಲ್ಲ.

-ಪ್ರತೀ ಚುನಾವಣ ಕ್ಷೇತ್ರಗಳ ಜನಸಂಖ್ಯೆಯಲ್ಲಿ ಸಾಧ್ಯವಾಗುವಷ್ಟರ ಮಟ್ಟಿಗೆ ಹೆಚ್ಚಿನ ವ್ಯತ್ಯಾಸವಿರದಂತೆ ನೋಡಿಕೊಳ್ಳಬೇಕು. ಇದೇ ನಿಯಮ ಜಿ.ಪಂ. ಕ್ಷೇತ್ರ ನಿಗದಿಗೂ ಅನ್ವಯವಾಗುತ್ತದೆ.

– ಹೊಸ ಕ್ಷೇತ್ರ ರಚನೆ ಮಾಡಬೇಕಾದ ಸಂದರ್ಭ ಮಾತ್ರ ಆ ಕ್ಷೇತ್ರದಲ್ಲಿನ ಅತೀ ಹೆಚ್ಚು ಜನಸಂಖ್ಯೆಯಿರುವ ಗ್ರಾಮದ ಹೆಸರನ್ನು ಕ್ಷೇತ್ರದ ಹೆಸರಾಗಿ ಪರಿಗಣಿಸಬೇಕು. ಇದೇ ನಿಯಮ ಜಿ.ಪಂ. ಕ್ಷೇತ್ರಗಳ ನಿಗದಿಗೂ ಅನ್ವಯಿಸುತ್ತದೆ.

– ತಾಲೂಕಿನಲ್ಲಿರುವ ಗ್ರಾ.ಪಂ.ಗಳನ್ನು ವಿಭಜಿಸದೆ ಪೂರ್ಣ ಗ್ರಾ.ಪಂ.ಗಳನ್ನು ಒಟ್ಟುಗೂಡಿಸಿ ಜಿ.ಪಂ. ಕ್ಷೇತ್ರ ರಚನೆಯಾಗುವಂತೆ ನೋಡಿಕೊಳ್ಳಬೇಕು.

– ಗ್ರಾ.ಪಂ.ಗಳನ್ನು ಒಟ್ಟುಗೂಡಿಸುವಾಗ ಅಕ್ಕ-ಪಕ್ಕದ ಗ್ರಾ.ಪಂ.ಗಳನ್ನು ಒಟ್ಟುಗೂಡಿಸಬೇಕು. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚಾರ ಮತ್ತು ಸಂಪರ್ಕ ವ್ಯವಸ್ಥೆ ಇರುವುದನ್ನು ಖಾತರಿಪಡಿಸಿಕೊಳ್ಳಬೇಕು. ಬೆಟ್ಟಗುಡ್ಡ, ಅರಣ್ಯ, ಜಲಾಶಯ, ನದಿ ಇತ್ಯಾದಿ ಅಡಚಣೆಗಳು ಇರಬಾರದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ