ಕೋಟೆನಾಡು ಚಿತ್ರದುರ್ಗದಲ್ಲಿ ಬಿಜೆಪಿ ಕೋಟೆ ವಶಕ್ಕೆ ಕಾಂಗ್ರೆಸ್ ರಣತಂತ್ರ ಹೂಡಿದೆ. ಇಲ್ಲಿ ಚಿತ್ರದುರ್ಗ ಜಿಲ್ಲೆಯ 6 ಕ್ಷೇತ್ರಗಳ ಸಮೀಕ್ಷೆಯ ಸಂಪೂರ್ಣ ವಿವರ ನೀಡಲಾಗಿದೆ.
ಚಿಕ್ಕಪ್ಪನಹಳ್ಳಿ ಷಣ್ಮುಖ
ಚಿತ್ರದುರ್ಗ (ಮೇ.2): ಬುಡಕಟ್ಟು ಸಂಸ್ಕೃತಿ ತೂಗು ತೊಟ್ಟಿಲು ಎಂದೇ ಖ್ಯಾತಿ ಪಡೆದ ಚಿತ್ರದುರ್ಗ ಜಿಲ್ಲೆ ಬರೊಬ್ಬರಿ ಅರ್ಧದಷ್ಟುಮೀಸಲು ಕ್ಷೇತ್ರ ಪಡೆದಿದೆ. ಆರು ವಿಧಾನಸಭೆ ಕ್ಷೇತ್ರಗಳ ಪೈಕಿ ಚಳ್ಳಕೆರೆ, ಮೊಳಕಾಲ್ಮುರು ಪರಿಶಿಷ್ಟಪಂಗಡ ಹಾಗೂ ಹೊಳಲ್ಕೆರೆ ಪರಿಶಿಷ್ಟಜಾತಿಗೆ ಮೀಸಲಾಗಿದೆ. ಮೊದಲಿನಿಂದಲೂ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಜಿಲ್ಲೆ ಕಳೆದ ಬಾರಿ ಬಿಜೆಪಿ ವಶವಾಗಿತ್ತು. ಆರರಲ್ಲಿ ಚಳ್ಳಕೆರೆ ಹೊರತುಪಡಿಸಿ ಉಳಿದ ಕಡೆ ಬಿಜೆಪಿ ಗೆದ್ದಿತ್ತು. ಕೋಟೆ ವಶಕ್ಕೆ ಕಾಂಗ್ರೆಸ್ ಅವಿರತ ಯತ್ನ ನಡೆಸುತ್ತಿದೆ.
undefined
ಚಿತ್ರದುರ್ಗದಲ್ಲಿ ತಿಪ್ಪಾರೆಡ್ಡಿ ಗೆಲವಿನ ಓಟಕ್ಕೆ ಬ್ರೇಕ್ ಬೀಳುತ್ತಾ?: ವಿಧಾನಸಭೆ ಚುನಾವಣೆ ಎದುರಾದಾಗಲೆಲ್ಲ ಚಿತ್ರದುರ್ಗ ಕ್ಷೇತ್ರದಲ್ಲಿ ತಿಪ್ಪಾರೆಡ್ಡಿ ಗೆಲವಿನ ಓಟಕ್ಕೆ ಈ ಬಾರಿ ಬ್ರೇಕ್ ಬೀಳುತ್ತಾ ಎಂಬ ಪ್ರಶ್ನೆ ಎದುರಾಗುತ್ತದೆ. ಸತತ ಆರು ಬಾರಿ ಗೆದ್ದಿರುವ ಬಿಜೆಪಿಯ ತಿಪ್ಪಾರೆಡ್ಡಿ ಏಳನೇ ಬಾರಿಗೆ ತಮ್ಮ ರಾಜಕೀಯ ಭವಿಷ್ಯ ಒರೆಗಲ್ಲಿಗೆ ಹಚ್ಚಿದ್ದಾರೆ. ಈ ಬಾರಿ ತಿಪ್ಪಾರೆಡ್ಡಿಗೆ ಸಂಕಷ್ಟಎಂಬ ಮಾತುಗಳು ಪ್ರತಿ ಸಲ ಹರಿದಾಡುತ್ತಿದ್ದಾದರೂ ಕಡೇಗಳಿಗೆಯಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಿ ಜಯದ ನಗೆ ಬೀರುತ್ತಿದ್ದರು. ಕಳೆದ ಬಾರಿ ಯಡಿಯೂರಪ್ಪ ಅವರ ಅಲೆಯಲ್ಲಿ ತೇಲಿದ್ದ ತಿಪ್ಪಾರೆಡ್ಡಿ ನಿರಾಯಾಸದ ಜಯ ದಾಖಲಿಸಿದ್ದರು. ಎರಡನೇ ಸ್ಥಾನದಲ್ಲಿ ಜೆಡಿಎಸ್‌ನ ವೀರೇಂದ್ರ ಪಪ್ಪಿ ಇದ್ದರು. ಆದರೆ ಈ ಬಾರಿ ವೀರೇಂದ್ರ ಪಪ್ಪಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರೆ, ಕಾಂಗ್ರೆಸ್ ಟಿಕೆಟ್ ವಂಚಿತ ರಘು ಆಚಾರ್ ಜೆಡಿಎಸ್ ಹಾಗೂ ಸೌಭಾಗ್ಯ ಬಸವರಾಜನ್ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಚಿತ್ರದುರ್ಗದಲ್ಲಿ ಮುಸ್ಲಿಮರ ಮತಗಳು ನಿರ್ಣಾಯಕವಾಗಿದ್ದು, ಅವೇನಾದರೂ ಹಂಚಿ ಹೋದಲ್ಲಿ ತಿಪ್ಪಾರೆಡ್ಡಿಗೆ ಅನುಕೂಲವಾಗಬಹುದು. ಲಿಂಗಾಯತರ ಮತಕ್ಕೆ ಸೌಭಾಗ್ಯ ಬಸವರಾಜನ್ ಮತ್ತು ವೀರೇಂದ್ರ ಪಪ್ಪಿ ಮುಗಿಬಿದ್ದಿದ್ದಾರೆ. ಸೌಭಾಗ್ಯ ಮಹಿಳಾ ಪ್ರತಿನಿಧಿ ಎಂಬ ಟ್ರಂಪ್ ಕಾರ್ಡ್ ಬಳಸುತ್ತಿದ್ದಾರೆ. ರಘು ಆಚಾರ್, ಸೌಭಾಗ್ಯ ಯಾವ ವೋಟ್ ಬ್ಯಾಂಕ್‌ಗೆ ಕೈ ಹಾಕುವರೋ ಎಂಬುದರ ಮೇಲೆ ಫಲಿತಾಂಶ ನಿರ್ಣಾಯಕವಾಗಲಿದೆ. ಜಿಲ್ಲಾ ಕೇಂದ್ರ ವಶಕ್ಕೆ ಪಡೆಯಲು ಕಾಂಗ್ರೆಸ್ ಯತ್ನಿಸಿದ್ದು ಯಾರಿಗೂ ಗೆಲುವು ಸುಲಭವಾಗಿಲ್ಲ.
ಹೊಳಲ್ಕೆರೆ: ಆಂಜನೇಯ, ಚಂದ್ರಪ್ಪ ಜಿದ್ದಾಜಿದ್ದಿ: ಎಸ್ಸಿಗೆ ಮೀಸಲಾಗಿರುವ ಹೊಳಲ್ಕೆರೆ ವಿಧಾನಸಭೆ ಕ್ಷೇತ್ರ ಮಾಜಿ ಸಚಿವ ಎಚ್.ಆಂಜನೇಯ ಹಾಗೂ ಎಂ.ಚಂದ್ರಪ್ಪ ಅವರ ನಡುವಿನ ಜಿದ್ದಾಜಿದ್ದಿ ಕಣ. ಹೆಂಚಿನ ಮೇಲೆ ರೊಟ್ಟಿತಿರುವಿ ಹಾಕಿದಂತೆ ಒಮ್ಮೆ ಇವರು ಮತ್ತೊಮ್ಮೆ ಅವರು ಎನ್ನುವಂತೆ ಕ್ಷೇತ್ರದ ಜನ ಆಂಜನೇಯ ಮತ್ತು ಚಂದ್ರಪ್ಪರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ, ಜಿಲ್ಲೆಗೆ ಒಂದಿಷ್ಟುಅಭಿವೃದ್ಧಿ ಕೆಲಸ ಮಾಡಿದರೂ ಮತದಾರ ಮಾತ್ರ ಕೈ ಹಿಡಿಯಲಿಲ್ಲ. ಸಾಧು ಹಾಗೂ ಕುಂಚಿಟಿಗ ಲಿಂಗಾಯತರು ಹೆಚ್ಚಿನ ಪ್ರಮಾಣದಲ್ಲಿರುವ ಹೊಳಲ್ಕೆರೆ ಕ್ಷೇತ್ರದಲ್ಲಿ ಈ ಸಮುದಾಯ ಯಾರ ಬೆಂಬಲಕ್ಕೆ ನಿಲ್ಲುತ್ತದೋ ಅವರು ನಿರಾಯಾಸವಾಗಿ ಗೆಲ್ಲುತ್ತಾರೆ. ಕಳೆದ ಬಾರಿ ಆಂಜನೇಯ ವಿರುದ್ಧ ಸುಮಾರು 40 ಸಾವಿರ ಮತಗಳ ಅಂತರದಿಂದ ಚಂದ್ರಪ್ಪ ಜಯ ಸಾಧಿಸಿದ್ದರು. ಕ್ಷೇತ್ರದಲ್ಲಿ ಬೇರೆ ಪಕ್ಷಗಳು ಗೌಣ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ. ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಜಯಸಿಂಹ ಸ್ಪರ್ಧಿಸಿದ್ದಾರೆ. ಇವರು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು. ನಾಮಪತ್ರ ಸಲ್ಲಿಸುವ ವೇಳೆ ಜಯಸಿಂಹ ನಡೆಸಿದ ರೋಡ್ ಶೋ ಮತದಾರರಲ್ಲಿ »ರವಸೆ ಮೂಡಿಸಿತ್ತು. ಜಯಸಿಂಹ ಸ್ಪರ್ಧೆ ಚಂದ್ರಪ್ಪ ಅವರಿಗೆ ಸಂಕಷ್ಟತರಬಹುದು ಎನ್ನಲಾಗಿದೆ. ಹೊಳಲ್ಕೆರೆ ಕ್ಷೇತ್ರಕ್ಕೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಹೋಬಳಿ ಬರಲಿದ್ದು, ಈ ಭಾಗದ ಮತದಾರ ನಿರ್ಣಾಯಕ. ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಜಿ.ಎಸ್.ಮಂಜುನಾಥ್ ಹಾಗೂ ಸವಿತಾ ರಘು ಬಂಡಾಯದ ಬಾವುಟ ಹಾರಿಸದೆ ಆಂಜನೇಯ ಪರ ಪ್ರಚಾರದಲ್ಲಿ ನಿರತರಾಗಿರುವುದು ಕಾಂಗ್ರೆಸ್‌ನಲ್ಲಿ ಎಲ್ಲ ಸರಿಯಾಗಿದೆ ಎಂಬಂತೆ ಕಾಣಿಸುತ್ತಿದೆ. ಚಂದ್ರಪ್ಪ ಮತ್ತು ಆಂಜನೇಯ ನೇರವಾಗಿ ತೊಡೆ ತಟ್ಟಿಕೊಂಡೇ ಅಖಾಡಕ್ಕಿಳಿದಿದ್ದಾರೆ. ಮಾಜಿ ಶಾಸಕ ಎ.ವಿ.ಉಮಾಪತಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಹೊಳಲ್ಕೆರೆ ಕ್ಷೇತ್ರದಲ್ಲಿ ಸುತ್ತಾಟ ನಡೆಸಿರುವುದು ಕಾಂಗ್ರೆಸ್‌ಗೆ ಚೇತೋಹಾರಿ.
ಹೊಸದುರ್ಗ: ಗೂಳಿ, ಗಾಳಿ ಕಾಳಗದ ನಡುವೆ ಲಿಂಗಮೂರ್ತಿ ಪ್ರವೇಶ: ಹೊಸದುರ್ಗವೆಂದಾಕ್ಷಣ ಗಾಳಿ ಗೋವಿಂದಪ್ಪ, ಗೂಳಿಹಟ್ಟಿಶೇಖರ್(ಗಾಳಿ-ಗೂಳಿ) ನಡುವಿನ ಕಾಳಗವೆಂಬಷ್ಟರ ಮಟ್ಟಿಗೆ ಜಿದ್ದಾಜಿದ್ದಿಗೆ ಕ್ಷೇತ್ರ ಹೆಸರು ಮಾಡಿದೆ. ಕಾಂಗ್ರೆಸ್‌ನ ಬಿ.ಜಿ.ಗೋವಿಂದಪ್ಪ ವಿರುದ್ಧ ಪಕ್ಷೇತರರಾಗಿ ಗೆದ್ದು, ಹೊಸ ಭಾಷ್ಯ ಬರೆದಿದ್ದ ಗೂಳಿಹಟ್ಟಿಶೇಖರ್ ಒಂದೇ ಪಕ್ಷದಲ್ಲಿ ನೆಲೆ ನಿಂತವರಲ್ಲ. ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ನಿರ್ವಹಿಸಿದ್ದ ಗೂಳಿಹಟ್ಟಿಶೇಖರ್‌ರನ್ನು ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಜಿ.ಗೋವಿಂದಪ್ಪ ಸೋಲಿಸಿದ್ದರು. ಕಳೆದ ಚುನಾವಣೆಯಲ್ಲಿ ಗೂಳಿಹಟ್ಟಿಬಿಜೆಪಿಯಿಂದ ಕಣಕ್ಕಿಳಿದು ಗೋವಿಂದಪ್ಪ ಮೇಲೆ ಸೇಡು ತೀರಿಸಿಕೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಗೂಳಿಹಟ್ಟಿಶೇಖರ್‌ಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿಲ್ಲ. ಬದಲಾಗಿ ಖನಿಜ ನಿಗಮದ ಅಧ್ಯಕ್ಷರಾಗಿದ್ದ ವಿಜಯೇಂದ್ರ ಆಪ್ತ ಲಿಂಗಮೂರ್ತಿ ಅವರಿಗೆ ಟಿಕೆಟ್ ನೀಡಿದೆ. ಹೀಗಾಗಿ ಗೂಳಿಹಟ್ಟಿಶೇಖರ್ ಬಂಡೆದ್ದು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆಂಬ ಕಾರಣಕ್ಕೆ ಇಡೀ ಲಿಂಗಾಯತ ಸಮುದಾಯ ಕಳೆದ ಬಾರಿ ಗೂಳಿಹಟ್ಟಿಬೆಂಬಲಕ್ಕೆ ನಿಂತಿತ್ತು. ಸಾಮಾನ್ಯ ಕ್ಷೇತ್ರದಲ್ಲೂ ಪರಿಶಿಷ್ಟಜಾತಿಯ ಗೂಳಿಹಟ್ಟಿಶೇಖರ್ ಗೆಲ್ಲಿಸಿದ್ದರು. ಈ ಬಾರಿ ಬಿಜೆಪಿಯಿಂದ ಲಿಂಗಮೂರ್ತಿ ಕಣಕ್ಕಿಳಿದಿರುವುದರಿಂದ ನೇರ ಹಣಾಹಣಿ ದೃಶ್ಯಗಳು ಗೋಚರಿಸುತ್ತಿಲ್ಲ. ಇದರ ನಡುವೆ ಬಿ.ಜಿ.ಗೋವಿಂದಪ್ಪ ಅವರ ಶಿಷ್ಯ ಮಂಜುನಾಥ್ ಎಂಬಾತ ಪಕ್ಷೇತರರಾಗಿ ಕಣಕ್ಕಿಳಿದಿರುವುದು ಕಾಂಗ್ರೆಸ್ ನಿದ್ದೆಗೆಡಿಸಿದೆ. ದೇವಾಂಗ ಸಮಾಜದವರು ಬಿ.ಜಿ.ಗೋವಿಂದಪ್ಪ ಬೆಂಬಲಕ್ಕಿದ್ದರು. ಈ ಬಾರಿ ಆ ಸಮಾಜದ ಮಂಜುನಾಥ್ ಕಣಕ್ಕಿಳಿದಿರುವುದರಿಂದ ಗೋವಿಂದಪ್ಪಗೆ ಸಂಕಷ್ಟಎದುರಾಗಬಹುದು. ಬಿಜೆಪಿ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಗೂಳಿಹಟ್ಟಿನಾಮಪತ್ರ ಸಲ್ಲಿಸಿದ ನಂತರ ಅಷ್ಟಾಗಿ ಪ್ರಚಾರದಲ್ಲಿ ನಿರತರಾಗಿಲ್ಲ. ಅವರ ನಡೆ ನಿಗೂಢವಾಗಿದೆ.
ಮೊಳಕಾಲ್ಮುರು: ಬಿಜೆಪಿ, ಕಾಂಗ್ರೆಸ್ ಮಧ್ಯೆ ಜಂಗಿ ಕುಸ್ತಿ: ಮೊಳಕಾಲ್ಮುರು ವಿಧಾನಸಭೆ ಕ್ಷೇತ್ರದ ಕಡೆ ಎನ್.ವೈ.ಗೋಪಾಲಕೃಷ್ಣ ಮರಳಿ ಬಂದಿರುವುದು ಈ ಬಾರಿಯ ಚುನಾವಣೆ ವೈಶಿಷ್ಟ. ಬಿಜೆಪಿಯಿಂದ ಶ್ರೀರಾಮುಲು ಸಿಡಿದು ಹೊರ ಬಂದು ಬಿಎಸ್ಸಾರ್ ಕಾಂಗ್ರೆಸ್ ಕಟ್ಟಿದಾಗ ಮೊಳಕಾಲ್ಮುರುವಿನಿಂದ ಬಿಎಸ್ಸಾರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ತಿಪ್ಪೇಸ್ವಾಮಿ ಎನ್.ವೈ.ಗೋಪಾಲಕೃಷ್ಣರನ್ನು ಸೋಲಿಸಿದ್ದರು. ನಂತರ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿದ್ದ ಎನ್.ವೈ.ಗೋಪಾಲಕೃಷ್ಣ ಬಳ್ಳಾರಿ ಗ್ರಾಮೀಣದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದಾದ ಬಳಿಕ ಕೂಡ್ಲಿಗಿಯಿಂದಲೂ ಗೆದ್ದಿದ್ದರು. ಕಳೆದ ಚುನಾವಣೆಯಲ್ಲಿ ಮೊಳಕಾಲ್ಮುರುವಿನಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದ ಗೋಪಾಲಕೃಷ್ಣಗೆ ಶ್ರೀರಾಮುಲು ಅಡ್ಡಗಾಲು ಹಾಕಿದ್ದರು. ಈ ಬಾರಿ ವಾತಾವರಣ, ಪಕ್ಷ, ಸ್ಪರ್ಧೆ ಎರಡೂ ಬದಲಾಗಿದೆ. ರಾಮುಲು ವಿರುದ್ಧ ಮುನಿಸಿಕೊಂಡು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ತಿಪ್ಪೇಸ್ವಾಮಿ ಇನ್ನೇನು ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಬಿಜೆಪಿಗೆ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದರು. ಬಿಜೆಪಿ ತೊರೆದ ಎನ್.ವೈ.ಗೋಪಾಲಕೃಷ್ಣ ಕಾಂಗ್ರೆಸ್‌ಗೆ ಮರಳಿ ಮೊಳಕಾಲ್ಮುರುವಿನಿಂದ ಕಣಕ್ಕಿಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಯೋಗೀಶ್ ಬಾಬು ಈ ಬಾರಿ ಬಂಡಾಯ ಸ್ಪರ್ಧೆ ಮಾಡುತ್ತೇನೆಂದು ಹೇಳಿಕೆ ಕೊಟ್ಟಿದ್ದರು. ಆದರೆ ಇದೀಗ ಅವರ ಸಿಟ್ಟು ಶಮನವಾಗಿದ್ದು, ಗೋಪಾಲಕೃಷ್ಣ ಪರ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಜೆಡಿಎಸ್ ಇಲ್ಲಿ ವೀರಭದ್ರಪ್ಪ ಎನ್ನುವವರಿಗೆ ಟಿಕೆಟ್ ನೀಡಿದ್ದು ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲವೆಂಬಂತೆ ಕಾಣಿಸುತ್ತಿದೆ. ಕ್ಷೇತ್ರ ಪರಿಶಿಷ್ಟಪಂಗಡಕ್ಕೆ ಮೀಸಲಾಗಿದೆ.
ಶಿಕಾರಿಪುರ ವಿಧಾನಸಭಾ ಕ್ಷೇತ್ರ: ವಿಜಯೇಂದ್ರ ಓಟಕ್ಕೆ ನಾಗರಾಜ ಅಡ್ಡಿಯಾಗುವರೇ?
ಚಳ್ಳಕೆರೆ: ಪಕ್ಷೇತರ ಕುಮಾರಸ್ವಾಮಿ ಎಂಟ್ರಿ ಇತರರಿಗೆ ತಲೆನೋವು: ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿಗೆ ವೇದಿಕೆಯೊದಗಿಸುತ್ತಿದ್ದ ಚಳ್ಳಕೆರೆ ಕ್ಷೇತ್ರ ಈ ಬಾರಿ ಪಕ್ಷೇತರ ಎಂಟ್ರಿಯಿಂದ ತುಸು ಗರಂ ಆಗಿದೆ. ಈ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಕಳೆದ ಎರಡು ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಘುಮೂರ್ತಿ ಗೆದ್ದಿದ್ದರು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಅವರಿಗೆ ನಿನ್ನೆ ಮೊನ್ನೆಯವರೆಗೂ ಅಷ್ಟಾಗಿ ಸಮರ್ಥ ಎದುರಾಳಿ ಇರಲಿಲ್ಲ. ಜೆಡಿಎಸ್‌ನ ರವೀಶ್ ಕಳೆದ ಬಾರಿ ಸಡ್ಡು ಹೊಡೆದಿದ್ದು, ಈ ಬಾರಿಯೂ ಅವರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಲಾಗಿದೆ. ಬಿಜೆಪಿಯಿಂದ ನಿವೃತ್ತ ಉಪ ವಿಭಾಗಾಧಿಕಾರಿ ಅನಿಲ್ ಕುಮಾರ್‌ಗೆ ಮಣೆ ಹಾಕಲಾಗಿದೆ. ಆದರೆ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದ ಕೆ.ಟಿ.ಕುಮಾರಸ್ವಾಮಿ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ವಾತಾವರಣ ಸಹಜವಾಗಿ ಬಿಸಿಯಾಗಿದೆ. ಕುಮಾರಸ್ವಾಮಿ ಬಗ್ಗೆ ತುಸು ಅನುಕಂಪ ವ್ಯಕ್ತವಾಗುತ್ತಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ತುಸು ನಡುಗಿಸಿದೆ. ಮಾಜಿ ಶಾಸಕ ಬಸವರಾಜ ಮಂಡಿಮಠ ಬಿಜೆಪಿಯಿಂದ ಜೆಡಿಎಸ್‌ಗೆ ಶಿಫ್‌್ಟಆಗಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಅವಧಿಯಲ್ಲಿ ಉತ್ತಮ ಕೆಲಸ ಮಾಡಿರುವ ರಘುಮೂರ್ತಿ ಸಹಜವಾಗಿಯೇ ಜನ ಬೆಂಬಲ ನಿರೀಕ್ಷಿಸಿದ್ದರು. ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿ ಚಳ್ಳಕೆರೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ತುಂಗಭದ್ರಾ ಹಿನ್ನೀರಿನ ಕುಡಿವ ನೀರಿನ ಯೋಜನೆ ಅನುಷ್ಠಾನದ ದಿಕ್ಕಿನಲ್ಲಿ ಯಶ ಕಂಡಿರುವ ರಘು ಆಚಾರ್ ಹೋಬಳಿ ಜನರ ಬೆಂಬಲ ನಿರೀಕ್ಷಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ರವೀಶ್ ಹಳ್ಳಿ ಸುತ್ತುತ್ತಿರುವುದು ಕಡೆಗಣಿಸುವಂತಿಲ್ಲ. ತ್ರಿಕೋನ ಸ್ಪರ್ಧೆ ನಿರೀಕ್ಷೆಯಲ್ಲಿದೆ ಚಳ್ಳಕೆರೆ.
Karnataka Congress Manifesto 2023: ಸರಕಾರಿ ನೌಕರರಿಗೆ OPS ಸೇರಿ, ಭರಪೂರ ಭರವಸೆ ನೀಡಿದ
ಹಿರಿಯೂರು: ಡಿ.ಸುಧಾಕರ್-ಪೂರ್ಣಿಮಾ ಮಧ್ಯೆ ಮತ್ತೆ ಕದನ: ಮಾಜಿ ಸಚಿವ ಡಿ.ಸುಧಾಕರ್‌ಗೆ ಈ ಚುನಾವಣೆ ಅಳಿವು, ಉಳಿವಿನ ಪ್ರಶ್ನೆ. ಜನತಾ ಪರಿವಾರ ಹಾಗೂ ಕಾಂಗ್ರೆಸ್ ನಡುವೆ ಕ್ಷೇತ್ರದಲ್ಲಿ ಸಹಜ ಸ್ಪರ್ಧೆ ಏರ್ಪಡುತ್ತಿತ್ತು. ಕಾಂಗ್ರೆಸ್‌ನ ಕೆ.ಎಚ್.ರಂಗನಾಥ್, ಜನತಾ ಪರಿವಾರದ ಡಿ.ಮಂಜುನಾಥ್ ಇಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿರುತ್ತಿದ್ದರು. ಒಮ್ಮೆ ಇವರು ಮತ್ತೊಮ್ಮೆ ಅವರು ಎಂಬತ್ತಿತ್ತು ಕ್ಷೇತ್ರ. ರಂಗನಾಥ್ ಹಾಗೂ ಮಂಜುನಾಥ್ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಾಗ ಕಾಂಗ್ರೆಸ್‌ನಿಂದ ಡಿ.ಸುಧಾಕರ್ ಹಾಗೂ ಜೆಡಿಎಸ್‌ನಿಂದ ಯಾದವ ಸಮುದಾಯದ ಎ.ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಲಾಗಿತ್ತು. ಕಡಿಮೆ ಅಂತರದಲ್ಲಿ ಕೃಷ್ಣಪ್ಪ ಸೋಲುಂಡಿದ್ದರು. ನಂತರ ನಡೆದ ಚುನಾವಣೆಯಲ್ಲಿ ಕೃಷ್ಣಪ್ಪ ಅವರ ಮಗಳು ಪೂರ್ಣಿಮಾ ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಚುನಾವಣೆಯಲ್ಲೇ ಯಶ ಕಂಡಿದ್ದರು. ಹಾಗಾಗಿ ಈ ಬಾರಿಯೂ ಡಿ.ಸುಧಾಕರ್ ಮತ್ತು ಪೂರ್ಣಿಮಾ ನಡುವೆ ನೇರ ಸ್ಪರ್ಧೆ ಇದೆ. ಜೆಡಿಎಸ್‌ನಿಂದ ನಿವೃತ್ತ ಮುಖ್ಯ ಎಂಜಿನಿಯರ್ ರವೀಂದ್ರಪ್ಪರಿಗೆ ಟಿಕೆಟ್ ನೀಡಲಾಗಿದೆ. ಹಾಗಾಗಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಇದೆ. ಯಾದವರು ಮತ್ತು ಒಕ್ಕಲಿಗರ ಮತಗಳು ಸಮಾನವಾಗಿವೆ. ಜಾತಿ ಬೆಂಬಲದ ಮತಗಳು ಇಲ್ಲದೇ ಜೈನ ಸಮುದಾಯದ ಸುಧಾಕರ್ 2 ಬಾರಿ ಕ್ಷೇತ್ರದಲ್ಲಿ ಗೆದ್ದಿದ್ದರು. ಹಾಗಾಗಿ ಸುಧಾಕರ್ ಮತ್ತೊಮ್ಮೆ ಪ್ರಯಾಸದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಒಕ್ಕಲಿಗರು ಯಾರನ್ನು ಬೆಂಬಲಿಸುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಣಯವಾಗಲಿದೆ. ಈ ವರ್ಷ ಸುರಿದ ಮಳೆಯಿಂದಾಗಿ ವಿವಿ ಸಾಗರ ಜಲಾಶಯ ಭರ್ತಿಯಾಗಿದ್ದು, ಧರ್ಮಪುರ ಕೆರೆಗೆ ನೀರು ತರುವ ಯೋಜನೆ ಸೇರಿ ಹಲವು ಅಂಶಗಳು ಚುನಾವಣೆ ಅಸ್ತ್ರಗಳಾಗಿ ಬಳಕೆಯಾಗುತ್ತಿವೆ. ಆದರೆ ಯಾದವರು ಮತ್ತು ಒಕ್ಕಲಿಗರಾಚೆ ಮೌನವೀಕ್ಷಕರಾಗಿರುವ ಲಿಂಗಾಯತರು ಸೇರಿ ಇತರೆ ಸಣ್ಣ ಪುಟ್ಟಸಮುದಾಯ, ತಮಿಳರ ನಿಲುವುಗಳೂ ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರಲಿವೆ.