
ಹಾವೇರಿ (ನ.25): ಇತ್ತೀಚೆಗೆ ನಡೆದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ತೆರವಾದ ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಂಡಾಯವಾಗಿ ಸೈಯದ್ ಅಜೀಮ್ ಪೀರ್ ಎಸ್.ಖಾದ್ರಿ (ಅಜ್ಜಂಪೀರ್ ಖಾದ್ರಿ) ನಾಮಪತ್ರ ಸಲ್ಲಿಕೆ ಮಾಡಿದ್ದರು. ಖಾದ್ರಿಯವನ್ನು ಬೆಂಗಳೂರಿಗೆ ಕರೆಸಿ ನಿಗಮ ಮಂಡಳಿ ಸ್ಥಾನಮಾನ ಕೊಡುವುದಾಗಿ ಮನವೊಲಿಕೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಇದೀಗ ಕೊಟ್ಟ ಮಾತಿನಂತೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಬೆನ್ನಲ್ಲಿಯೇ ಹೆಸ್ಕಾಂ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಮಾಜಿ ಶಾಸಕ ಸೈಯದ್ ಅಜೀಮ್ ಪೀರ್ ಖಾದ್ರಿ ಅವರು ಕಾಂಗ್ರೆಸ್‌ನಿಂದ ತಮಗೆ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ, ಇಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ಮಾಡಿದ್ದ ಕಾಂಗ್ರೆಸ್ ಖಾದ್ರಿಗಿಂತ ಯಾಸಿರ್ ಖಾನ್ ಪಠಾನ್‌ಗೆ ಟಿಕೆಟ್ ಕೊಡುವುದು ಸೂಕ್ತವೆಂದು ತಿಳಿದುಬಂದಿತ್ತು. ಹೀಗಾಗಿ, ಅಜೀಮ್ ಪೀರ್ ಖಾದ್ರಿ ಎಷ್ಟೇ ಹೋರಾಟ ಮಾಡಿದರೂ ಟಿಕೆಟ್ ಕೊಡದೇ ಯಾಸಿರ್ ಖಾನ್ ಪಠಾಣ್‌ಗೆ ಟಿಕೆಟ್ ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಅಜೀಮ್ ಪೀರ್ ಖಾದ್ರಿ ಕೊನೇ ಕ್ಷಣದಲ್ಲಿ ಬಂದು ನಾಮಪತ್ರ ಸಲ್ಲಿಕೆ ಮಾಡಿ ಕಾಂಗ್ರೆಸ್‌ಗೆ ಶಾಕ್ ನೀಡಿದ್ದರು.
ಆದರೆ, ಕಾಂಗ್ರೆಸ್‌ನಿಂದ ಬಂಡಾಯ ಅಭ್ಯರ್ಥಿಯಾಗಿದ್ದ ಅಜೀಮ್ ಪೀರ್ ಖಾದ್ರಿ ಅವರಿಗೆ ಬೆಂಬಲವಿದ್ದು, ಮುಸ್ಲಿಂ ಮತಗಳು ಹರಿದು ಹಂಚಿಕೆ ಆಗಬಹುದೆಂಬ ಭಯದಿಂದ ಕಾಂಗ್ರೆಸ್ ನಾಯಕರು ಬೆಂಗಳೂರಿಗೆ ಖಾದ್ರಿಯನ್ನು ಕರೆಸಿಕೊಂಡು ಮೂರು ದಿನಗಳ ಸಚಿವ ಜಮೀರ್ ಅಹಮದ್ ಖಾನ್ ಅವರ ಮನೆಯಲ್ಲಿಟ್ಟುಕೊಂಡು ಮನವೊಲಿಕೆ ಮಾಡಲಾಯಿತು. ಈ ವೇಳೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಅಜೀಮ್ ಪೀರ್ ಖಾದ್ರಿಯನ್ನು ಕರೆಸಿಕೊಂಡು ಮುಖಾಮುಖಿ ಕೂರಿಸಿಕೊಂಡು ಮನವೊಲಿಕೆ ಮಾಡಿದ್ದರು. ಇದೀಗ ನಾಮಪತ್ರ ವಾಪಸ್ ಪಡೆದುಕೊಂಡರೆ ನಿನಗೆ ನಿಗಮ ಮಂಡಳಿಯ ಅಧ್ಯಕ್ಷನನ್ನಾಗಿ ಮಾಡುವುದಾಗಿ, ಪಕ್ಷದಲ್ಲಿ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದರು. ಜೊತೆಗೆ, ಶಿಗ್ಗಾಂವಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ತೆರವಾದ ಕ್ಷೇತ್ರದಲ್ಲಿ ಅವರ ಮಗನದ್ದೇ ಗೆಲುವು ಎಂದು ಹೇಳಲಾಗುತ್ತಿದೆ. ನೀನು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಬೇಕು ಎಂದು ಹೇಳಿದ್ದರು. ಇಷ್ಟೆಲ್ಲಾ ಮಾತುಕತೆ ನಂತರ ಅಜೀಮ್ ಪೀರ್ ಖಾದ್ರಿ ಶಿಗ್ಗಾಂವಿಗೆ ತೆರಳಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದರು.
ಇದನ್ನೂ ಓದಿ: ನಿಖಿಲ್ ಸೋಲಿನ ಬಗ್ಗೆ ಮೊದಲ ಬಾರಿಗೆ ತಾಯಿ ಅನಿತಾ ಮಾತು
ಶಿಗ್ಗಾಂವಿಯಲ್ಲಿ ಮುಸ್ಲಿಂ ಮತಗಳೂ ಹೆಚ್ಚಾಗಿದ್ದರಿಂದ ಅಲ್ಲಿನ ಸ್ಥಳೀಯ ನಾಯಕರಿಗೆ ಇದು ಪ್ಲಸ್ ಪಾಯಿಂಟ್ ಆಗಿತ್ತು. ಇನ್ನು ಹಿಂದೂ ಮತಗಳ ಪೈಕಿ ಸಿಎಂ ಸಿದ್ದರಾಮಯ್ಯ ಅವರ ಸಮುದಾಯದ ಕುರುಬ ಮತಗಳನ್ನು ಸ್ವತಃ ಸಿದ್ದರಾಮಯ್ಯ ಸೆಳೆದುಕೊಂಡರು. ಉಳಿದಂತೆ ಅಹಿಂದ ವರ್ಗದಲ್ಲಿ ಮೂಲ ಕಾಂಗ್ರೆಸ್ಸಿಗರು ಮತ್ತು ದಲಿತ ಮತಗಳು ಕೂಡ ಕಾಂಗ್ರೆಸ್ ಅಭ್ಯರ್ಥಿಗೆ ಬಿದ್ದವು. ಈ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಮಗನಿಗೆ ಸೋಲುಂಟಾಗಿ, ಕೈ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆಲುವು ಸಾಧಿಸಿದರು.
ಇನ್ನು ಚುನಾವಣಾ ಫಲಿತಾಂಶ ಹೊರಬಿದ್ದ ಮೂರು ದಿನ ಕಳೆಯುವ ಮುನ್ನವೇ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ರೆಬೆಲ್ ಕ್ಯಾಂಡಿಡೇಟ್ ಸೈಯದ್ ಅಜೀಮ್ ಪೀರ್ ಖಾದ್ರಿ ಅವರಿಗೆ ಕೊಟ್ಟ ಮಾತಿನಂತೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ಅಧ್ಯಕ್ಷನನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಬೆನ್ನಿಗೆ ನಿಂತು ಗೆಲ್ಲಿಸಿದ್ದ ಖಾದ್ರಿಗೆ ಉತ್ತಮ ಗಿಫ್ಟ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಜೆಡಿಎಸ್ ಪಕ್ಷ ಮುನ್ನಡೆಸೋರಿಲ್ಲದ ಕಾರಣ ದಳ ಶಾಸಕರನ್ನು ಕರೆತರೋದಾಗಿ ಹೇಳಿದೆ: ಶಾಸಕ ಯೋಗೇಶ್ವರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ