ರೇಪ್‌ ಆರೋಪಿ ಹರ್ಯಾಣ ಬಿಜೆಪಿ ಕಿಂಗ್‌ಮೇಕರ್‌!, ಯಾರು ಈ ಕಾಂಡಾ?

By Web DeskFirst Published Oct 26, 2019, 10:31 AM IST
Highlights

ರೇಪ್ ಆರೋಪಿ ಬೆಂಬಲ ಪಡೆದ ಬಿಜೆಪಿ, ಭಾರೀ ಟೀಕೆ| ಗೋಪಾಲ್‌ ಕಾಂಡಾ ಬೆಂಬಲ ಪಡೆವ ಕ್ರಮಕ್ಕೆ ವ್ಯಾಪಕ ಆಕ್ರೋಶ| ಗೆದ್ದಾಕ್ಷಣ ಆರೋಪ ಮುಕ್ತರಾಗಲ್ಲ: ಬಿಜೆಪಿಯ ಉಮಾ ಭಾರತಿ ಕಿಡಿ| ‘ಬೇಟಿ ಬಚಾವೋ’ ಅಭಿಯಾನ ಪ್ರಸ್ತಾಪಿಸಿ ನೆಟ್ಟಿಗರಿಂದ ಚಾಟಿ

ನವದೆಹಲಿ[ಅ.26]:: ಅತಂತ್ರ ವಿಧಾನಸಭೆ ಸೃಷ್ಟಿಯಾಗಿರುವ ಹರಾರ‍ಯಣದಲ್ಲಿ ಸರ್ಕಾರ ರಚಿಸುವ ಧಾವಂತದಲ್ಲಿರುವ ಬಿಜೆಪಿ, ಅತ್ಯಾಚಾರ ಆರೋಪಿಯಾಗಿರುವ ವಿವಾದಾತ್ಮಕ ಪಕ್ಷೇತರ ಶಾಸಕ ಗೋಪಾಲ್‌ ಕಾಂಡಾ ಬೆಂಬಲ ಪಡೆಯಲು ಮುಂದಾಗಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಬಿಜೆಪಿಯ ಉಪಾಧ್ಯಕ್ಷೆಯಾಗಿರುವ ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಅವರೇ ಇದರ ವಿರುದ್ಧ ಸಿಡಿದೆದ್ದಿದ್ದಾರೆ. ಬಿಜೆಪಿ ತನ್ನ ನೈತಿಕ ಉದ್ದೇಶವನ್ನು ಮರೆಯಬಾರದು. ಗೋಪಾಲ್‌ ಕಾಂಡಾರಿಂದ ಬೆಂಬಲ ಪಡೆಯಬಾರದು. ಚುನಾವಣೆಯಲ್ಲಿ ಗೆದ್ದಾಕ್ಷಣ ಕಾಂಡಾ ಆರೋಪ ಮುಕ್ತರಾಗುವುದಿಲ್ಲ ಎಂದು ಚಾಟಿ ಬೀಸಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ವಿರುದ್ಧ ‘ಬೇಟಿ ಬಚಾವೋ ಬೇಟಿ ಪಢಾವೋ’ ಅಭಿಯಾನ ಆರಂಭಿಸಿದ್ದ ಬಿಜೆಪಿಗೆ ರೇಪ್‌ ಆರೋಪಿ ಕಿಂಗ್‌ ಮೇಕರ್‌ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು, ಕುಹಕಗಳು ವ್ಯಕ್ತವಾಗಿವೆ. ಇದು ಬಿಜೆಪಿಯ ಬೂಟಾಟಿಕೆ ಎಂದು ಹಲವು ಕಾಂಗ್ರೆಸ್‌ ನಾಯಕರು ಹರಿಹಾಯ್ದಿದ್ದಾರೆ.

ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅನಿಲ್‌ ಜೈನ್‌, ಈ ವಿಷಯದ ಬಗ್ಗೆ ಪಕ್ಷಕ್ಕೆ ಅರಿವಿದೆ. ಈ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತೇಪೆ ಸಾರಿಸಲು ಯತ್ನಿಸಿದ್ದಾರೆ.

90 ಸದಸ್ಯ ಬಲದ ಹರಾರ‍ಯಣ ವಿಧಾನಸಭೆಯಲ್ಲಿ ಬಹುಮತಕ್ಕೆ 46 ಸ್ಥಾನಗಳು ಬೇಕು. 40 ಸ್ಥಾನ ಗಳಿಸಿರುವ ಬಿಜೆಪಿ 6 ಸದಸ್ಯರ ಕೊರತೆ ಎದುರಿಸುತ್ತಿದೆ. ಹೀಗಾಗಿ 7 ಮಂದಿ ಪಕ್ಷೇತರರನ್ನು ಸಂಪರ್ಕಿಸಿದೆ. ಅದರಲ್ಲಿ ಹರಾರ‍ಯಣ ಲೋಕಹಿತ ಪಕ್ಷದ ನಾಯಕ, ಸಿರ್ಸಾ ಕ್ಷೇತ್ರದ ಶಾಸಕ ಗೋಪಾಲ್‌ ಕಾಂಡಾ ಅವರೂ ಒಬ್ಬರು. ಕಾಂಡಾ ಈಗಾಗಲೇ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಆದರೆ ಕಾಂಡಾರಿಂದ ಬಿಜೆಪಿ ಬೆಂಬಲ ಪಡೆಯುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಯಾರು ಈ ಕಾಂಡಾ?:

ಕಾಂಡಾ ಅವರು ಒಂದು ವಿಮಾನ ಕಂಪನಿ ನಡೆಸುತ್ತಿದ್ದರು. ಅದರಲ್ಲಿ ಗಗನಸಖಿಯಾಗಿದ್ದವರೊಬ್ಬರು, ಕಾಂಡಾ ಅವರಿಂದ ತಮಗೆ ಕಿರುಕುಳವಾಗಿದೆ ಎಂದು ಮರಣ ಪತ್ರ ಬರೆದು 2012ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಂಡಾ ವಿರುದ್ಧ ಅತ್ಯಾಚಾರ, ಆತ್ಮಹತ್ಯೆಗೆ ಕುಮ್ಮಕ್ಕು, ಕ್ರಿಮಿನಲ್‌ ಸಂಚು, ಕ್ರಿಮಿನಲ್‌ ಬೆದರಿಕೆ ಪ್ರಕರಣಗಳನ್ನು ದಾಖಲಿಸಿ ಪೊಲೀಸರು ಬಂಧಿಸಿದ್ದರು. ಕೆಲವೇ ತಿಂಗಳಲ್ಲಿ ಗಗನಸಖಿಯ ತಾಯಿ ಕೂಡ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. 2014ರ ಮಾಚ್‌ರ್‍ನಲ್ಲಿ ಕಾಂಡಾ ಜೈಲಿನಿಂದ ಬಿಡುಗಡೆಯಾಗಿದ್ದರು. ಅವರ ವಿರುದ್ಧ ಅತ್ಯಾಚಾರ ಆರೋಪ ಕೈಬಿಡಲಾಗಿದೆಯಾದರೂ, ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪವನ್ನು ಈಗಲೂ ಎದುರಿಸುತ್ತಿದ್ದಾರೆ.

click me!