ಪಟಾಕಿ ಬಿಟ್ಟಾಕಿ..! ಆಚರಿಸಿ ಹಸಿರು ದೀಪಾವಳಿ!

By Web DeskFirst Published Oct 21, 2019, 5:47 PM IST
Highlights

ದೀಪಾವಳಿ ಹಾಗೂ ಇತರೆ ಹಬ್ಬಗಳಲ್ಲಿ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಹೆಚ್ಚುತ್ತದೆ. ಮುಖ್ಯವಾಗಿ ಗಾಳಿಯಲ್ಲಿ ಪಿಎಂ10 ಹಾಗೂ ಪಿಎಂ2.5 ಪ್ರಮಾಣ ಅಧಿಕವಾಗುತ್ತದೆ. ಹೀಗಾಗಿ ಜನರಲ್ಲಿ ಅಸ್ತಮಾ, ಕೆಮ್ಮು, ನರ ಸಮಸ್ಯೆ ಕಾಣಿಸಿಕೊಳ್ಳಬಹುದು. ಪಟಾಕಿಯಲ್ಲಿರುವ ಅಲ್ಯುಮಿನಿಯಂನಿಂದ ಚರ್ಮದ ತೊಂದರೆ ಹಾಗೂ ಬೇರಿಯಂನಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಹಸಿರು ಪಟಾಕಿಗಳಿಂದ ಈ ಸಮಸ್ಯೆ ತಗ್ಗಬಹುದು. 

ದೀಪಾವಳಿಗೆ ಕೆಲವೇ ದಿನ ಬಾಕಿ ಇದೆ. ದೀಪಗಳ ಹಬ್ಬ ದೀಪಾವಳಿ ಆದರೂ ಪಟಾಕಿ ಇಲ್ಲದೆ ಅದರ ಸಂಭ್ರಮವೇ ಇಲ್ಲ ಎನ್ನುವುದು ಹಲವರ ಭಾವನೆ. ಕಳೆದ ವರ್ಷ ಅಪಾಯಕಾರಿ ಪಟಾಕಿಗೆ ನಿಷೇಧ ಹೇರಿದ್ದ ಸುಪ್ರೀಂಕೋರ್ಟ್‌ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶ ನೀಡಿತ್ತು.

ಈ ಹಿನ್ನೆಲೆಯಲ್ಲಿ ಹಲವು ಸಂಶೋಧನೆ ಬಳಿಕ ಅಭಿವೃದ್ಧಿಪಡಿಸಲಾದ ಹಸಿರು ಪಟಾಕಿಗಳು ಈ ಬಾರಿ ಮಾರುಕಟ್ಟೆಯಲ್ಲಿ ಲಭ್ಯವಿವೆ. ಹಾಗಾಗಿ ಈ ದೀಪಾವಳಿ ಮೊದಲ ಹಸಿರು ದೀಪಾವಳಿ. ಈ ಹಿನ್ನೆಲೆಯಲ್ಲಿ ಹಸಿರು ಪಟಾಕಿ ಕುರಿತ ಒಂದಿಷ್ಟುಮಾಹಿತಿ ಇಲ್ಲಿದೆ.

ಹಸಿರು ಪಟಾಕಿ ಎಂದರೇನು? ನೀವು ಪರೀಕ್ಷಿಸೋದು ಹೇಗೆ?

ಕ್ಯುಆರ್‌ ಕೋಡ್‌ ಇದೆಯೇ ನೋಡಿ (ಸೀಲ್‌)

ಕಡಿಮೆ ಹೊಗೆ ಉಗುಳುವ ಪಟಾಕಿಗಳೇ ಹಸಿರು ಪಟಾಕಿ. ಸಾಮಾನ್ಯ ಪಟಾಕಿಗಳಿಗಿಂತ ಕಡಿಮೆ ಹೊಗೆ ಉಗುಳುವುದರಿಂದ ಪರಿಸರ ಮತ್ತು ಆರೋಗ್ಯದ ಮೇಲೆ ಇವು ಕಡಿಮೆ ದುಷ್ಪರಿಣಾಮ ಬೀರುತ್ತವೆ. ವಿಜ್ಞಾನ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿಯ ಪ್ರಕಾರ ಶೇ.30 ರಿಂದ 35 ರಷ್ಟುಕಡಿಮೆ ಪಾರ್ಟಿಕ್ಯುಲೇಟ್‌ ಮ್ಯಾಟರ್‌ (ಪಿಎಂ10 ಮತ್ತು ಪಿಎಂ2.5) ವಿಸರ್ಜನೆ ಮಾಡುವ ಹಾಗೂ ಶೇ.35ನಿಂದ 40ರಷ್ಟುಕಡಿಮೆ ಎಸ್‌ಒ2 ಹಾಗೂ ನೈಟ್ರೋಜನ್‌ ಆಕ್ಸೈಡ್‌ ಉಗುಳುವ ಪಟಾಕಿಗಳು ಹಸಿರು ಪಟಾಕಿಗಳು.

ಈ ಬಾರಿ ದೀಪಾವಳಿಗೆ ಹಸಿರು ಪಟಾಕಿ!

ಅವುಗಳಲ್ಲಿ ಅಲ್ಯುಮಿನಿಯಂ ಅಂಶ ಕಡಿಮೆ ಇರುತ್ತದೆ. ಬೇರಿಯಂ ಸಾಲ್ಟ್‌ ಮತ್ತು ಆ್ಯಶ್‌ ಇರುವುದಿಲ್ಲ. ಹಾಗೆಯೇ ಪಟಾಕಿಗಳ ಶಬ್ದವನ್ನೂ 160 ಡೆಸಿಬಲ್‌ನಿಂದ 125 ಡೆಸಿಬಲ್‌ಗೆ ಇಳಿಸಲಾಗಿದೆ. (ಆದರೆ ವಾಸ್ತವವಾಗಿ 90 ಡೆಸಿಬಲ್‌ಗೆ ಇಳಿಸಬೇಕಾದ ಅಗತ್ಯವಿದೆ) ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷಾ ಸಂಸ್ಥೆಯು ಪಟಾಕಿಗಳನ್ನು ಪರೀಕ್ಷಿಸಿ ವರದಿ ನೀಡುತ್ತದೆ. ಅಲ್ಲಿ ಅಂಗೀಕೃತಗೊಂಡ ಪಟಾಕಿ ಮಾತ್ರ ಮಾರುಕಟ್ಟೆಗೆ ಬಂದಿದೆ. ಹಸಿರು ಪಟಾಕಿಗಳ ಮೇಲೆ ಹಸಿರು ಲೋಗೋ ಮತ್ತು ಕ್ವಿಕ್‌ ರೆಸ್ಪಾನ್ಸ್‌ (ಕ್ಯುಆರ್‌) ಕೋಡ್‌ ಇರಲಿದೆ. ಈ ಮೂಲಕ ಹಸಿರು ಪಟಾಕಿಗಳನ್ನು ಪತ್ತೆಹಚ್ಚಿ ಕೊಂಡುಕೊಳ್ಳಬಹುದು.

ಪರಿಸರಕ್ಕೆ ಏನು ಪ್ರಯೋಜನ?

ದೀಪಾವಳಿ ಹಾಗೂ ಇತರೆ ಹಬ್ಬಗಳಲ್ಲಿ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಹೆಚ್ಚುತ್ತದೆ. ಮುಖ್ಯವಾಗಿ ಗಾಳಿಯಲ್ಲಿ ಪಿಎಂ10 ಹಾಗೂ ಪಿಎಂ2.5 ಪ್ರಮಾಣ ಅಧಿಕವಾಗುತ್ತದೆ. ಹೀಗಾಗಿ ಜನರಲ್ಲಿ ಅಸ್ತಮಾ, ಕೆಮ್ಮು, ನರ ಸಮಸ್ಯೆ ಕಾಣಿಸಿಕೊಳ್ಳಬಹುದು. ಪಟಾಕಿಯಲ್ಲಿರುವ ಅಲ್ಯುಮಿನಿಯಂನಿಂದ ಚರ್ಮದ ತೊಂದರೆ ಹಾಗೂ ಬೇರಿಯಂನಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಹಸಿರು ಪಟಾಕಿಗಳಿಂದ ಈ ಸಮಸ್ಯೆ ತಗ್ಗಬಹುದು. ಇದರಿಂದ ಶಬ್ದಮಾಲಿನ್ಯವೂ ಇಳಿಕೆಯಾಗಲಿದೆ.

ಹಸಿರು ಪಟಾಕಿ ತಯಾರಾಗಿದ್ದು ಹೇಗೆ?

ವಿಜ್ಞಾನ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿ, ಎನ್ವಿರಾನ್ಮೆಂಟ್‌ ಇಂಜಿನಿಯರಿಂಗ್‌ ರೀಸರ್ಚ್ ಇನ್‌ಸ್ಟಿಟ್ಯೂಷನ್‌ನ (ಎನ್‌ಇಇಆರ್‌) 24 ವಿಜ್ಞಾನಿಗಳು, ಸಂಶೋಧಕರು ಸತತ 9 ತಿಂಗಳ ಕಾಲ ಸಂಶೋಧನೆ ನಡೆಸಿ ಭಾರತದ ಮೊಟ್ಟಮೊದಲ ‘ಹಸಿರು ಪಟಾಕಿ’ ಅಭಿವೃದ್ಧಿಪಡಿಸಿದ್ದಾರೆ. ನಂತರ ಭಾರತದಲ್ಲೇ ಪಟಾಕಿ ಉದ್ಯಮಗಳಿಗೆ ವಿಜ್ಞಾನ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿ ಮತ್ತು ಎನ್ವಿರಾನ್ಮೆಂಟ್‌ ಇಂಜಿನಿಯರಿಂಗ್‌ ರೀಸಚ್‌ರ್‍ ಇನ್‌ಸ್ಟಿಟ್ಯೂಷನ್‌ ತರಬೇತಿ ಕೊಟ್ಟು ಪರವಾನಗಿ ನೀಡುತ್ತಿವೆ.

ಸದ್ಯ ಅವು ಮಾರುಕಟ್ಟೆಗೆ ಬಂದಿವೆ. ಈ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಸೇಫ್‌ ವಾಟರ್‌ ರಿಲೀಸರ್‌ (ಎಸ್‌ಡಬ್ಲ್ಯುಎಎಸ್‌), ಸೇಫ್‌ ಥರ್ಮೈಟ್‌ ಪಟಾಕಿಗಳು ಮತ್ತು ಸೇಫ್‌ ಮಿನಿಮಲ್‌ ಅಲ್ಯುಮಿನಿಯಂ ಎಂದು ಮೂರು ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇವು ಕಡಿಮೆ ಹೊಗೆ ಹೊರಸೂಸುತ್ತವೆ.

ಬೆಲೆ ದುಬಾರಿ, ಪಟಾಕಿ ಪ್ರಿಯರಿಗೆ ‘ಉರಿ’

ಸುಪ್ರೀಂಕೋರ್ಟ್‌ನ ಸಲಹೆ ಮೇರೆಗೆ ಈ ಹಸಿರು ಪಟಾಕಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪಟಾಕಿಗಳ ಬೆಲೆ ಮಾಮೂಲಿ ಪಟಾಕಿಗಳಿಗಿಂತ ಕಡಿಮೆ ಅಥವಾ ಅದಕ್ಕೆ ಸಮನಾಗಿರಬಹುದಷ್ಟೆಎಂದು ಸರ್ಕಾರ ಹೇಳಿತ್ತು. ಆದರೆ ಮಾರುಕಟ್ಟೆಗೆ ಬಂದಿರುವ 5 ಪರಿಸರಸ್ನೇಹಿ ಹಸಿರು ಪಟಾಕಿಗಳನ್ನು ಒಳಗೊಂಡ ಒಂದು ಬಾಕ್ಸ್‌ಗೆ 250 ರು. ಬೆಲೆ ಇದೆ. ಇದು ಮಾಮೂಲಿ ಪಟಾಕಿಗಳಿಗಿಂತ 30-40% ಹೆಚ್ಚು. ಅಲ್ಲದೆ ಕಳೆದ ವರ್ಷದ ನಿಷೇಧದಿಂದ ಪಟಾಕಿ ಉತ್ಪಾದನೆಯಲ್ಲಿ ವ್ಯತ್ಯಯವಾದ ಕಾರಣದಿಂದಲೂ ಈ ಬಾರಿ ಬೆಲೆ ಇನ್ನಷ್ಟುಹೆಚ್ಚಿರುವ ಸಾಧ್ಯತೆಯಿದೆ.

ಸುಪ್ರೀಂಕೋರ್ಟ್‌ ಏನು ಹೇಳಿತ್ತು?

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಂದರೆ ದೀಪಾವಳಿಗೂ ಒಂದು ವಾರ ಮುಂಚೆ ಹಸಿರು ಪಟಾಕಿ ಹೊರತುಪಡಿಸಿ ಬೇರಾವುದೇ ಪಟಾಕಿ ಸಿಡಿಸುವಂತಿಲ್ಲ ಎಂದು ಆದೇಶ ನೀಡಿದ್ದ ಸುಪ್ರೀಂಕೋರ್ಟ್‌, ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿತ್ತು. ಹಾಗೆಯೇ ದೀಪಾವಳಿ ಮತ್ತಿತರ ಹಬ್ಬದ ಸಂದರ್ಭಗಳಲ್ಲಿ ಪಟಾಕಿ ಸಿಡಿಸಲು ಸಮಯ ನಿಗದಿಪಡಿಸಿತ್ತು.

ದೀಪಾವಳಿಗೆ ಖರೀದಿಸಬಹುದಾದ 10 ಲಕ್ಷ ರೂ ಒಳಗಿನ ಟಾಪ್ 5 ಕಾರುಗಳು

ಹಸಿರು ಪಟಾಕಿಗಳು ಆರ್ಸೇನಿಕ್‌, ಬೇರಿಯಂ ಮತ್ತು ಪಾದರಸದಿಂದ ಮುಕ್ತವಾಗಿರಬೇಕೆಂದು ಆದೇಶಿಸಿತ್ತು. ಹಾಗೆಯೇ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷಾ ಸಂಸ್ಥೆಯಿಂದ ಅಂಗೀಕಾರ ಪಡೆಯಬೇಕೆಂದು ಆದೇಶಿಸಿತ್ತು. ಇಷ್ಟೆಲ್ಲಾ ನಿಬಂಧನೆ ವಿಧಿಸಿ 2019 ಮೇನಿಂದ ಹಸಿರು ಪಟಾಕಿ ಉತ್ಪಾದನೆಗೆ ಸುಪ್ರೀಂಕೋರ್ಟ್‌ ಅವಕಾಶ ನೀಡಿತ್ತು.

ಈ ಪಟಾಕಿ ಪೂರೈಕೆ ಕಡಿಮೆ ಜನರಲ್ಲಿ ಅರಿವೂ ಕಡಿಮೆ

ಸದ್ಯ ಹಸಿರು ಪಟಾಕಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಅವುಗಳ ಮಾರಾಟ ಮಾತ್ರ ಕಡಿಮೆಯಿದೆ. ಪಟಾಕಿ ನಿಯಮದ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಹಸಿರು ಪಟಾಕಿಯ ಪೂರೈಕೆಯೂ ಕಡಿಮೆ ಇದೆ. ಭಾರತದಲ್ಲಿ ಪಟಾಕಿ ತಯಾರಿಕೆಗೆ ಹೆಸರಾಗಿರುವುದು ತಮಿಳುನಾಡಿನ ಶಿವಕಾಶಿ. ಆದರೆ ಕಳೆದ ವರ್ಷ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ ಪರಿಣಾಮ ಅದು ತನ್ನ ಹಲವು ಘಟಕಗಳನ್ನು ಮುಚ್ಚಿದೆ. ಅವುಗಳ ಮಾನವಶಕ್ತಿಯ ಒಂದು ಭಾಗ ಮಾತ್ರ ಈಗ ಕಾರ‍್ಯಪ್ರವೃತ್ತವಾಗಿದ್ದು, ಶಿವಕಾಶಿಯಲ್ಲಿ ಹಸಿರು ಪಟಾಕಿಗಳು ಉತ್ಪಾದನೆಯಾಗುತ್ತಿವೆ.

ಈ ವರ್ಷ ಮಾಚ್‌ರ್‍ನಿಂದ ಮಾತ್ರ ಹಸಿರು ಪಟಾಕಿ ಉತ್ಪಾದನೆ ಆರಂಭಗೊಂಡಿದೆ. ಅಲ್ಲದೆ ಶಿವಕಾಶಿಯ 1070 ಘಟಕಗಳಲ್ಲಿ 6 ಘಟಕಗಳು ಮಾತ್ರ ಹಸಿರು ಪಟಾಕಿ ತಯಾರಿಸುವ ಪರವಾನಗಿ ಪಡೆದಿವೆ. ಹಾಗಾಗಿ ಕಡಿಮೆ ಸಂಗ್ರಹವಿದೆ. ಜೊತೆಗೆ ಹೆಚ್ಚು ಪ್ರಕಾರದ ಪಟಾಕಿಗಳೂ ಇಲ್ಲ. ಹಾಗಾಗಿ ಈ ಬಾರಿ 30-40% ಪಟಾಕಿಗಳ ಕೊರತೆ ಉಂಟಾಗಬಹುದೆಂದು ಊಹಿಸಲಾಗುತ್ತಿದೆ. ಇದೇ ಕಾರಣದಿಂದಾಗಿ ಬೆಲೆಯೂ ಹೆಚ್ಚಬಹುದು. ಜೊತೆಗೆ ಹಸಿರು ಪಟಾಕಿ ಬಗ್ಗೆ ಸರ್ಕಾರ ಜನರಲ್ಲಿ ಅರಿವು ಮೂಡಿಸುತ್ತಿಲ್ಲ.

‘ನಕಲಿ’ ಪಟಾಕಿ ಬಂದಿರಬಹುದು, ಎಚ್ಚರ

ಕೆಲವೇ ಕೆಲ ಕಂಪನಿಗಳು ಮಾತ್ರ ಹಸಿರು ಪಟಾಕಿ ಉತ್ಪಾದಿಸುವ ಪರವಾನಗಿ ಪಡೆದಿವೆ. ವಿನಾಯಕ, ಬಾಲಾಜಿ ಮತ್ತು ಕೊರೋನೇಶನ್‌ ಹಾಗೂ ತಮಿಳುನಾಡಿನ ಶಿವಕಾಶಿ ಪಟಾಕಿ ತಯಾರಿಕಾ ಕೈಗಾರಿಕೆ ಹೀಗೆ 348 ಘಟಕಗಳು ಮಾತ್ರ ಹಸಿರು ಪಟಾಕಿ ತಯಾರಿಸಲು ಪರವಾನಗಿ ಪಡೆದಿವೆ. ಆದರೆ ಭಾರತದಲ್ಲಿ 1070 ಪಟಾಕಿ ಕೈಗಾರಿಕೆಗಳು 3,00,000 ಉದ್ಯೋಗಿಗಳಿದ್ದಾರೆ. ಪಟಾಕಿ ಬಾಕ್ಸಿಂಗ್‌ ಮತ್ತಿತರ ಕಾರ‍್ಯ ಮಾಡುವ 5,00,000 ಉದ್ಯೋಗಿಗಳಿದ್ದಾರೆ.

ಹಲವು ಉದ್ಯಮಿಗಳು ಸುಪ್ರೀಂಕೋರ್ಟ್‌ನ ಸ್ಪಷ್ಟಆದೇಶಕ್ಕಾಗಿ ಕಾಯುತ್ತಿದ್ದಾರೆ. ಅಂದರೆ ಕೋರ್ಟ್‌ ಬೇರಿಯಂ ಬಳಕೆ ನಿಷೇಧಿಸಿದೆ. ಆದರೆ ಚಕ್ರ, ರಾಕೆಟ್‌ಗಳಲ್ಲಿ ಇದರ ಬಳಕೆ ಮಾಮೂಲಿ. ಹಲವು ಪಟಾಕಿಗಳನ್ನು ಇದನ್ನು ಬಳಸದೆಯೇ ಉತ್ಪಾದಿಸಬಹುದು, ಆದರೆ ಕೆಲ ವಿಧದ ಪಟಾಕಿಗಳಲ್ಲಿ ಬೇರಿಯಂ ಬಳಕೆ ಅನಿವಾರ್ಯ. ಹಾಗಾಗಿ ಮೊದಲಿನಂತೆಯೇ ಅಪಾಯಕಾರಿ ಪಟಾಕಿಗಳು ಈ ವರ್ಷವೂ ಮಾರುಕಟ್ಟೆಗೆ ಬಂದಿರುವ ಸಾಧ್ಯತೆಗಳು ಹೆಚ್ಚಿವೆ.

ದೇಶದಲ್ಲಿ ಪಟಾಕಿ ಆಕರ್ಷಣೆ ಇಳಿಕೆ?

ಕಳೆದ ವರ್ಷ ಸುಪ್ರೀಂಕೋರ್ಟ್‌ ನಿಷೇಧದ ಆದೇಶದಿಂದಾಗಿ ಪಟಾಕಿ ಮಾರಾಟಗಾರರು ದೊಡ್ಡ ನಷ್ಟಅನುಭವಿಸಿದ್ದರು. ಹಾಗಾಗಿ ಈ ಬಾರಿ ಹೆಚ್ಚು ಸಂಗ್ರಹಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹಾಗೆಯೇ ಪಟಾಕಿ ಬಗ್ಗೆ ಜನಸಾಮಾನ್ಯರ ಆಕರ್ಷಣೆಯೂ ಕಡಿಮೆಯಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಅತಿ ದೊಡ್ಡ ಪಟಾಕಿ ಮಾರುಕಟ್ಟೆಯಾದ ದೆಹಲಿಯ ಸದರ್‌ ಬಜಾರ್‌ ವ್ಯಾಪಾರಿಯೊಬ್ಬರ ಪ್ರಕಾರ ಈ ಹಿಂದೆ ದಸರಾ ಪ್ರಾರಂಭವಾದೊಡನೆಯೇ ಪಟಾಕಿ ಆರ್ಡರ್‌ಗಳು ಬರುತ್ತಿದ್ದವು. ಆದರೆ ಈ ಬಾರಿ ಅಷ್ಟೇನೂ ಆರ್ಡರ್‌ ಬಂದಿಲ್ಲವಂತೆ. ಕಡಿಮೆ ವೆರೈಟಿ ಮತ್ತು ಹೆಚ್ಚು ಬೆಲೆಯ ಕಾರಣ ಹಸಿರು ಪಟಾಕಿ ಕೊಂಡುಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಅಕ್ರಮ ಪಟಾಕಿ ಮಾರಾಟದ ಮೇಲೆ ಹದ್ದಿನ ಕಣ್ಣು

ಪಟಾಕಿ ಮಾರುವವರು ಪೊಲೀಸರಿಂದ ಪರವಾನಗಿ ಪಡೆದಿರಬೇಕು. ಅದನ್ನು ಅಂಗಡಿಗಳ ಮುಂದೆ ಪ್ರಕಟಿಸಬೇಕು. ಪ್ರಮಾಣೀಕೃತ ಪಟಾಕಿ ಮಾರಾಟ ಮಾಡುವವರು ಕ್ಯುಆರ್‌ ಕೋಡ್‌ ಬಳಸಬೇಕಾಗುತ್ತದೆ. ಈ ಬಗ್ಗೆ ನಿಗಾ ಇಡಲು ಪೊಲೀಸ್‌ ಇಲಾಖೆ ಈಗಾಗಲೇ ಸಜ್ಜಾಗಿದೆ. ನಗರಗಳಲ್ಲಿ ನಿಷೇಧಿತ ಪಟಾಕಿ ಮಾರಾಟ ಮಾಡುವವರ ಮೇಲೆ ಹದ್ದಿನ ಕಣ್ಣಿಡಲಾಗುತ್ತದೆ.

ಹಸಿರು ಪಟಾಕಿಯೂ ಅಪಾಯಕಾರಿಯೇ!

ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ವಾಯುಮಾಲಿನ್ಯ ಮಿತಿ ಮೀರಿದೆ. ಇಡೀ ದೇಶದಲ್ಲಿ ಗಾಳಿಯ ಗುಣಮಟ್ಟದಿನೇ ದಿನೇ ಕಡಿಮೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಪಟಾಕಿಗಳ ಬಳಕೆಯೇ ಒಳ್ಳೆಯದಲ್ಲ. ಮಾಮೂಲಿ ಪಟಾಕಿಗಳಿರಲಿ ಅಥವಾ ಹಸಿರು ಪಟಾಕಿಗಳೇ ಆಗಿರಲಿ ಎರಡೂ ಪರಿಸರಕ್ಕೆ ಮಾರಕ. ಇದರಿಂದ ದೊಡ್ಡ ಅಪಾಯ ಕಾದಿದೆ. ವಾಸ್ತವಾಗಿ ಪರಿಸರ ಸ್ನೇಹಿ ಪಟಾಕಿ ಎಂಬುದೇ ಇಲ್ಲ. ಎಲ್ಲವೂ ಹೊಗೆ ಬಿಡುಗಡೆ ಮಾಡುತ್ತವೆ. ಹಸಿರು ಪಟಾಕಿಗಳು ಕಡಿಮೆ ಹೊಗೆ ಬಿಡುಗಡೆ ಮಾಡುತ್ತವೆ ಅಷ್ಟೆಎನ್ನುತ್ತಾರೆ ತಜ್ಞರು. 

click me!