ಡಿ. 31ರಿಂದ ಜನವರಿ 1ವರೆಗೆ ಪ್ರವಾಸಿ ತಾಣಗಳಿಗೆ ನಿಷೇಧ

By Web DeskFirst Published Dec 30, 2018, 9:45 AM IST
Highlights

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಕೆಲವು ಪ್ರದೇಶಗಳಿಗೆ ಭೇಟಿ ನೀಡುವುದಕ್ಕೆ ನಿಷೇಧ ಹೇರಲಾಗಿದೆ. 

ಬೆಂಗಳೂರು : ಹೊಸ ವರ್ಷಾಚರಣೆಗೆ ಹೇಳಿ ಮಾಡಿಸಿದಂತಿದ್ದ ನಗರದ ಸುತ್ತಮುತ್ತಲ ಕೆಲ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಡಿ.31 ಮತ್ತು ಜನವರಿ 1 ರಂದು ಪ್ರವಾಸಿಗರಿಗೆ ನಿಷೇಧ ಹೇರಿರುವ ಸರ್ಕಾರದ ಕ್ರಮಕ್ಕೆ ನಗರದ ನಾಗರಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. 

ಯಾವುದೇ ಅಹಿತಕರ ಘಟನೆಗಳು ನಡೆಯ ಬಾರದು ಎಂಬ ಕಾರಣಕ್ಕೆ ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ, ಆವಲ ಬೆಟ್ಟ, ಸ್ಕಂದಗಿರಿ, ಕನಕಪುರ ತಾಲೂಕಿನ ಮುತ್ತತ್ತಿ ಸೇರಿದಂತೆ ಕೆಲ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಹೊಸ ವರ್ಷಾಚರಣೆಗೆ ಜಿಲ್ಲಾಡಳಿತಗಳು ಡಿ. 31 ಮತ್ತು ಜ. 1 ರಂದೇ ನಿಷೇಧ ಹೇರಿವೆ. ಅಲ್ಲದೆ, ಬಂಡೀಪುರ ಸೇರಿದಂತೆ ವಿವಿಧ ರಾಷ್ಟ್ರೀಯ ಅಭಯಾರಣ್ಯ ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯ ರೆಸಾರ್ಟ್, ಹೋಟೆಲ್, ಫಾರ್ಮ್ ಹೌಸ್‌ಗಳಲ್ಲಿ ಅಬ್ಬರದ ಧ್ವನಿವರ್ಧಕ ಬಳಸದಂತೆ ನಿಷೇಧ ಹೇರಲಾಗಿದೆ.

ಇದು, ಪ್ರತೀ ವರ್ಷ ನಗರದಲ್ಲೇ ಹೊಸ ವರ್ಷಾಚರಣೆ ನಡೆಸಿ ಬೋರಾಗಿದೆ. ಈ ಬಾರಿ ನಗರದಿಂದ ಕೊಂಚ ದೂರ ಎಲ್ಲಾದರೂ ಪ್ರವಾಸಿ ಸ್ಥಳಗಳಿಗೆ ತೆರಳಿ ಹೊಸ ವರ್ಷವನ್ನು ಸಂಭ್ರಮಿಸೋಣ ಎಂದು ಯೋಚಿಸಿದ್ದವರಿಗೆ ತೀವ್ರ ನಿರಾಸೆಯನ್ನುಂಟು ಮಾಡಿದೆ. ಸಾರ್ವಜನಿಕ ವಲಯದಲ್ಲಿ ಅಸಮಾಧಾನ, ಆಕ್ರೋಶಕ್ಕೂ ಕಾರಣವಾಗಿದೆ.

ಅದರಲ್ಲೂ, ನಂದಿಬೆಟ್ಟ, ಮುತ್ತತ್ತಿಯಂತಹ ತಾಣಗಳಿಗೆ ನಿಷೇಧ ಹೇರಿರುವುದು ಪ್ರೇಮಿಗಳ ಪಾಲಿಗಂತೂ ನುಂಗಲಾರದ ತುತ್ತಾಗಿದ್ದು, ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ‘ನಗರದಲ್ಲಿ ಅದೇ ಪಬ್ಬು, ಬಾರು, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ. ಇಲ್ಲಿ ಹೊಸ ವರ್ಷ ಆಚರಿಸಿದರೆ ಡಿ. 31ರ ಮಧ್ಯರಾತ್ರಿ ಕೆಲ ಗಂಟೆಗಳಷ್ಟೇ ಮೋಜು ಮಸ್ತಿ ಮಾಡಬಹುದು. ಕುಣಿದು ಕುಪ್ಪಳಿಸಬಹುದು.

ಈಗಾಗಲೇ ಹಲವು ವರ್ಷಗಳಿಂದ ಸಾಕಷ್ಟು ನಗರದಲ್ಲಿ ಹೊಸ ವರ್ಷಾಚರಣೆ ಮಾಡಿದ್ದೇವೆ. ಹಾಗಾಗಿ ಈ ಬಾರಿ ನಂದಿ ಬೆಟ್ಟಕ್ಕೆ ಹೋಗೋಣ ಎಂದುಕೊಂಡಿದ್ದೆವು. ಅಲ್ಲಿ ರಾತ್ರಿ ಹೊಸ ವರ್ಷವನ್ನು ಬರಮಾಡಿಕೊಳ್ಳುವುದಲ್ಲದೆ, ಮುಂಜಾನೆಯ ಮಂಜಿನ ನಡುವೆ ಹೊಸ ವರ್ಷದ ಸೂರ್ಯನನ್ನು ಬರಮಾಡಿಕೊಳ್ಳುವ ತವಕ ನಮ್ಮದಾಗಿತ್ತು. ಆದರೆ, ಜಿಲ್ಲಾಡಳಿತ ನಂದಿ ಬೆಟ್ಟಕ್ಕೆ ಹೊಸ ವರ್ಷದ ದಿನವೇ ಪ್ರವಾಸಿಗರಿಗೆ ನಿಷೇಧ ಹೇರಿರುವುದು ತೀವ್ರ ಬೇಸರ ಮೂಡಿಸಿದೆ’ ಎನ್ನುತ್ತಾರೆ ಐಟಿ ಉದ್ಯೋಗಿಗಳಾದ ಚಂದ್ರಮೌಳಿ, ಹರೀಶ್ ಮತ್ತು ಸುನಿಲ್ ಕುಮಾರ್. 

ಹೊಸ ವರ್ಷಾಚರಣೆಯಂದು ಪ್ರವಾಸಿ ತಾಣಗಳಲ್ಲಿ ಬರುವ ಸಾರ್ವಜನಿಕರಿಗೆ ಸೂಕ್ತ ಭದ್ರತೆ ಹಾಗೂ ಸೌಲಭ್ಯಗಳನ್ನು ಒದಗಿಸಿ ಸಂಭ್ರಮಾಚರಣೆಗೆ ಅವಕಾಶ ನೀಡುವುದು ಸರ್ಕಾರ ಹಾಗೂ ಅಲ್ಲಿನ ಜಿಲ್ಲಾಡಳಿತಗಳ ಕರ್ತವ್ಯ. ಆದರೆ, ಪ್ರವಾಸಿ ತಾಣಗಳಿಗೆ ಪ್ರವೇಶವನ್ನೇ ನಿಷೇಧಿಸುವುದು ಎಷ್ಟು ಸರಿ? ಚಿಕ್ಕಬಳ್ಳಾಪುರದಲ್ಲಿ ನಂದಿ ಬೆಟ್ಟ ಮಾತ್ರವಲ್ಲದೆ, ಆವಲಬೆಟ್ಟ, ಸ್ಕಂಧಗಿರಿಯಂತಹ ಪ್ರಮುಖ ಟ್ರಕ್ಕಿಂಗ್ ಪ್ರದೇಶಗಳಿಗೂ ಪ್ರವೇಶ  ನಿಷೇಧಿಸಲಾಗಿದೆ. 

ಹಾಗಾದರೆ ಬೆಂಗಳೂರು ನಗರದ ಜನರು ಹೊರಗೆ ಹೋಗುವುದೇ ಬೇಡವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನು, ಬಾಪೂಜಿ ನಗರ ನಿವಾಸಿಗಳಾದ ಸಂತೋಷ್, ದೀಪಕ್ ಕೂಡ ಇದೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಈ ಬಾರಿ ಕುಟುಂಬ ಸಮೇತ ಮುತ್ತತ್ತಿಗೆ ಹೋಗಿ, ಹೊಸ ವರ್ಷಾಚರಿಸುವ ತವಕದಲ್ಲಿದ್ದೆವು. ಆದರೆ, ರಾಮನಗರ ಜಿಲ್ಲಾಡಳಿತ ಹೊಸ ವರ್ಷದ ದಿನವೇ ಪ್ರವೇಶ ನಿಷೇಧಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ರಾಜಧಾನಿ ನಿವಾಸಿಗಳು ಸುತ್ತಮುತ್ತಲ ಪ್ರದೇಶ ಗಳನ್ನು ಬಿಟ್ಟು ದೂರದ ತಾಣಗಳಿಗೆ ಹೋಗಲು ಸಾಧ್ಯವಿಲ್ಲ. ಡಿ. 31ರಂದು ಕೆಲಸ ಮುಗಿಸಿ ಸಂಜೆ ಅಥವಾ ರಾತ್ರಿ ಹೊರಟು ಸಮೀಪದ ಯಾವುದಾರೂ ಪ್ರವಾಸಿ ತಾಣದಲ್ಲಿ ತಂಗಬಹುದು. ಅಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡಿ ಬೆಳಗ್ಗೆ ವೃತ್ತಿಗೆ ಹಿಂತಿರುಗಬಹುದಿತ್ತು. ಆದರೆ, ಸರ್ಕಾರ ಇದಕ್ಕೂ ಕಲ್ಲು ಹಾಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

click me!