27 ವರ್ಷದ ಬಳಿಕ 7 ರಾಜೀವ್ ಹಂತಕರಿಗೆ ಬಿಡುಗಡೆ ಭಾಗ್ಯ?

By Web DeskFirst Published Sep 10, 2018, 8:48 AM IST
Highlights

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ಆಜೀವ ಜೈಲುವಾಸ ಅನುಭವಿಸುತ್ತಿದ್ದ 7 ಅಪರಾಧಿಗಳ ಬಿಡುಗಡೆಗೆ ತಮಿಳುನಾಡು ಸಚಿವ ಸಂಪುಟ ಭಾನುವಾರ ಸಂಜೆ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. 

ಚೆನ್ನೈ : ಮಹತ್ವದ ವಿದ್ಯಮಾನವೊಂದರಲ್ಲಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ಆಜೀವ ಜೈಲುವಾಸ ಅನುಭವಿಸುತ್ತಿದ್ದ 7 ಅಪರಾಧಿಗಳ ಬಿಡುಗಡೆಗೆ ತಮಿಳುನಾಡು ಸಚಿವ ಸಂಪುಟ ಭಾನುವಾರ ಸಂಜೆ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. ರಾಜ್ಯಪಾಲರು ಈ ಶಿಫಾರ ಸನ್ನು ಒಪ್ಪಿಕೊಂಡರೆ ಸುಮಾರು 27 ವರ್ಷ  ಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವ ಈ ಅಪರಾಧಿಗಳಿಗೆ ಬಿಡುಗಡೆ ಭಾಗ್ಯ ಲಭ್ಯವಾಗಲಿದೆ. ಪೆರಾರಿವಾಲನ್, ಮುರುಗನ್, ಶಾಂತನ್, ನಳಿನಿ, ರಾಬರ್ಟ್ ಪಿಯಸ್, ಜಯಕುಮಾರ್ ಹಾಗೂ ರವಿಚಂದ್ರನ್- ಅವರು 1991 ರಲ್ಲಿ ರಾಜೀವ್ ಹತ್ಯೆಗೆ ಸಂಬಂಧಿಸಿದಂತೆ ಆಜೀವ ಕಾರಾಗೃಹವಾಸ ಅನುಭವಿಸುತ್ತಿರುವ ಅಪರಾಧಿಗಳು. 5 ಸಂವಿಧಾನದ  161 ನೇ ಪರಿಚ್ಛೇದದ ಅನ್ವಯ ಇವರ ಬಿಡುಗಡೆಗೆ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಶಿಫಾರಸು ಮಾಡಿದೆ. 

ಇತ್ತೀಚೆಗೆ ಪೆರಾರಿವಾಲನ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ಬಗ್ಗೆ ಕ್ರಮ ಜರುಗಿಸಿ ಎಂದು  ರಾಜ್ಯಪಾಲರಿಗೇ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ತುರ್ತು ಸಂಪುಟ ಸಭೆಯಲ್ಲಿ ತಮಿಳುನಾಡು ಸರ್ಕಾರ ಈ ನಿರ್ಣಯ ತೆಗೆದುಕೊಂಡಿದೆ. ತಮಿಳುನಾಡಿನಲ್ಲಿ ಈ ವಿಷಯ ರಾಜಕೀಯವಾಗಿ ಮಹತ್ವದ್ದಾಗಿದ್ದು ದ್ರಾವಿಡ (ತಮಿಳು) ಮತಗಳನ್ನು ಸೆಳೆಯುವ ‘ಶಕ್ತಿ’ ಹೊಂದಿದೆ. 
ಹೀಗಾಗಿ ಸುಪ್ರೀಂ ಸೂಚನೆ ಬೆನ್ನಲ್ಲೇ ತರಾತುರಿಯಲ್ಲಿ ಅಣ್ಣಾ ಡಿಎಂಕೆ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ವಿಶ್ಲೇಷಿ ಸಲಾಗಿದೆ. 

161 ನೇ ವಿಧಿ ಪ್ರಕಾರ ಬಿಡುಗಡೆ: ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಿ. ಜಯಕುಮಾರ್, ‘ಸಂವಿಧಾನದ 161ನೇ ಪರಿಚ್ಛೇದ ವನ್ನು ಸರ್ವೋಚ್ಚ ನ್ಯಾಯಾಲಯ ವ್ಯಾಖ್ಯಾನಿಸಿದೆ. ನ್ಯಾಯಾಲಯದ ಆದೇಶ ಮಹತ್ವದ್ದಾಗಿದೆ. ಈ ಪರಿಚ್ಛೇದದ ಪ್ರಕಾರ ಅಪರಾಧಿಗಳಿಗೆ ಕ್ಷಮಾದಾನ ನೀಡುವ, ಶಿಕ್ಷೆ ಕಡಿಮೆ ಮಾಡಿಸುವ, ಬಿಡುಗಡೆ ಮಾಡಿಸುವ ಅಧಿಕಾರ ರಾಜ್ಯಗಳಿಗೆ (ರಾಜ್ಯಪಾಲರಿಗೆ) ಮಾತ್ರ ಇದೆ. ಇದೇಕಾರಣಕ್ಕೆ ನಾವು ಬಿಡುಗಡೆಗೆ ಶಿಫಾರಸು ಮಾಡಿದ್ದೇವೆ’ ಎಂದರು. 

ಸಂಪುಟದ ಶಿಫಾರಸನ್ನು ‘ಕಡ್ಡಾಯ’ವಾಗಿ ರಾಜ್ಯಪಾಲರು ಒಪ್ಪಲೇಬೇಕು ಎಂದು ಹೇಳಿದ ಜಯಕುಮಾರ್, ‘ರಾಜ್ಯಪಾಲರು ರಾಜ್ಯದ ಪ್ರತಿನಿಧಿ. ಅವರು ಕಾರ್ಯಾಂಗದ ಮುಖ್ಯಸ್ಥರು. ನಾವೇನು ನಿರ್ಧಾರ ಕೈಗೊಳ್ಳುತ್ತೇವೋ ಅದನ್ನು ಅವರು ಒಪ್ಪುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ‘ರಾಜೀವ್ ಗಾಂಧಿ ಅವರು ಮಾಜಿ ಪ್ರಧಾನಿ. ಅವರ ಹಂತಕರ ಬಿಡುಗಡೆಗೆ ಶಿಫಾರಸು ಸಮಂಜಸವೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಆಗಿದ್ದು ಆಗಿ ಹೋಗಿದೆ. 

ವರ್ತಮಾನ ಏನು ಎಂಬುದು ಮುಖ್ಯ. ತಮಿಳು ಜನರು ಇವರ ಬಿಡುಗಡೆಗೆ ಆಗ್ರಹಿಸುತ್ತಿದ್ದಾರೆ’ ಎಂದು ಸೂಚ್ಯವಾಗಿ ಉತ್ತರಿಸಿದರು. ಕಳೆದ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಪೆರಾರಿವಾಲನ್ ಕ್ಷಮಾದಾನ ಅರ್ಜಿ ವಿಚಾರಣೆ ವೇಳೆ, ಈ ಅರ್ಜಿಯನ್ನು ಪರಿಶೀಲಿಸಬೇಕು ಎಂದು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಗೇ ಸುಪ್ರೀಂ ಕೋರ್ಟ್ ಮನವಿ ಮಾಡಿತ್ತು. ಆದರೆ ಹಂತಕರ ಬಿಡುಗಡೆಗೆ ಕೇಂದ್ರ ಸರ್ಕಾರ ವಿರೋಧಿಸಿತ್ತು. ಇನ್ನು 2014 ರಲ್ಲಿ ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರು ಕೂಡ ಈ ಹಂತಕರ ಬಿಡುಗಡೆ ಮಾಡಿಸುವ ಭರವಸೆ ನೀಡಿದ್ದರು.

ರಾಜೀವ್ ಗಾಂಧಿ ಹತ್ಯೆಯಲ್ಲಿ ಇವರ ಪಾತ್ರ:  ತಮಿಳುನಾಡಿನ ಚೆನ್ನೈ ಬಳಿಯ ಶ್ರೀಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಅವರು 1991 ರ ಮೇ 21 ರಂದು ಎಲ್‌ಟಿಟಿಇ ಭಯೋತ್ಪಾದಕಿ ಧನು ಎಂಬ ಆತ್ಮಹತ್ಯಾ ಬಾಂಬರ್‌ಗೆ ಬಲಿಯಾಗಿದ್ದರು. ಬಳಿಕ ಈ ಕೃತ್ಯಕ್ಕೆ ಸಾಥ್ ನೀಡಿ ಪರಾರಿಯಾಗಿದ್ದ ಎಲ್‌ಟಿಟಿಇ ಉಗ್ರರಾದ ಶಿವರಾಸನ್ ಹಾಗೂ ಶುಭಾರನ್ನು ಬೆಂಗಳೂರಿನ ಕೋಣನಕುಂಟೆಯಲ್ಲಿ ಪೊಲೀಸರು ಹತ್ಯೆ ಮಾಡಿದ್ದರು. ಈ ನಡುವೆ, ರಾಜೀವ್ ಹತ್ಯೆಗೆ ಬಾಂಬ್ ಪೂರೈಸಿದ ಹಾಗೂ ಸಂಚಿನಲ್ಲಿ ಭಾಗಿಯಾದ ಆರೋಪ ಹೊರಿಸಿ ಈಗ ಬಿಡುಗಡೆಗೆ ಕಾಯುತ್ತಿರುವ ಪೆರೆರಿವಾಲನ್ ಸೇರಿ 7 ಮಂದಿಯನ್ನು ಬಂಧಿಸಲಾಗಿತ್ತು.

click me!