
ಬೆಂಗಳೂರು (ಏ.26): ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಕಂಡುಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಂಗಳೂರಿನ ಆರ್.ಟಿ ನಗರದ ಬೋಸ್ಟನ್ ಸ್ಕೂಲ್ ನಲ್ಲಿ ಇಂದು ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದ ಸಚಿವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ತನ್ನ ಭದ್ರಕೋಟೆಯಲ್ಲೂ ನಿಶ್ಚಿತವಾಗಿ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನ ಕಳೆದುಕೊಂಡಿದೆ. ಕರಾವಳಿ ಭಾಗದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ತೀವ್ರ ಪೈಪೋಟಿ ನೀಡಿದ್ದಾರೆ. ದಕ್ಷಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಕಷ್ಟ ಎಂಬ ಪರಿಸ್ಥಿತಿಯಿತ್ತು. ಆದರೆ ಮತಗಟ್ಟೆಗಳಿಂದ ಬರುತ್ತಿರುವ ಮಾಹಿತಿ ನೋಡಿದರೆ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿದೆ. ನಮ್ಮ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಳನ್ನ ತಳ್ಳಿಹಾಕುವಂತಿಲ್ಲ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಚುನಾವಣೆ ಸಮಯದಲ್ಲಿ ಇನ್ನಷ್ಟು ಹೆಚ್ಚಾಗಿರುವುದನ್ನ ಗಮನಿಸಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ್ದ ಖಾಲಿ ಚೊಂಬು ತುಂಬಿಸುವಂತಹ ತೀರ್ಪು ಸುಪ್ರೀಂ ನೀಡಿದೆ - ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರಿನ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಪೈಪೋಟಿ ನೀಡಿದ್ದಾರೆ. ಬೆಂಗಳೂರು ದಕ್ಷಿಣ ಹಾಗೂ ಕೇಂದ್ರ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳಿವೆ. ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಏಲ್ಲಿ ಗೆಲ್ಲುತ್ತೇವೆ ಎಂದು ಖಚಿತವಾಗಿ ಹೇಳಿಕೊಳ್ಳಲು ಬಿಜೆಪಿಗೆ ಸಾಧ್ಯವಾಗ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದ್ದು, ನಮ್ಮ ಕಾರ್ಯಕರ್ತರು ಮತಯಾಚನೆಗೆ ತೆರಳಿದಾಗ ಆತ್ಮೀಯತೆಯಿಂದ ಜನರು ಮಾತನಾಡಿಸಿದ್ದಾರೆ. ರಾಜ್ಯದಲ್ಲಿ 18 ರಿಂದ 20 ಸ್ಥಾನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ದಿನೇಶ್ ಗುಂಡೂರಾವ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
10 ವರ್ಷದಲ್ಲಿ ಅಚ್ಚೇದಿನ್ ತರಲಾಗದವರು ಈಗ 23 ವರ್ಷ ಸಮಯ ಕೇಳುತ್ತಿರುವುದು ಹಾಸ್ಯಾಸ್ಪದ - ಸಚಿವ ದಿನೇಶ್ ಗುಂಡೂರಾವ್
ಮೋದಿಯವರು 10 ವರ್ಷಗಳಲ್ಲಿ ತಾವು ಮಾಡಿದ ಕೆಲಸಗಳನ್ನ ಜನರ ಮುಂದಿಟ್ಟು ಮತ ಕೇಳಬೇಕಿತ್ತು. ಆದರೆ ಅವರ ಬತ್ತಳಿಕೆಯಲ್ಲಿ ಉತ್ತಮ ಕಾರ್ಯ ಮಾಡಿದ ಯಾವ ಅಸ್ತ್ರಗಳು ಇಲ್ಲ. ಹೀಗಾಗಿ ಸಮಾಜದಲ್ಲಿ ಒಡಕು ಮೂಡಿಸುವ ಹೇಳಿಕೆಗಳನ್ನ ನೀಡಿದ್ದಾರೆ. ಪ್ರಧಾನಿಯಾಗಿ ಹಲವು ಸುಳ್ಳುಗಳನ್ನ ಚುನಾವಣೆ ಸಂದರ್ಭದಲ್ಲಿ ಹೇಳಿರುವುದು ಜನರು ಗಮನಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಸುಳ್ಳಿನ ಆಶ್ರಯ ಪಡೆದಿರುವ ಮೋದಿಯವರ ನಡೆ ಬಗ್ಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು. ಆರ್.ಟಿ ನಗರದ ಬೋಸ್ಟನ್ ಸ್ಕೂಲ್ ನಲ್ಲಿ ಸಚಿವರ ಪತ್ನಿ ಟಬು ರಾವ್, ಪುತ್ರಿ ಅನನ್ಯ ರಾವ್ ಅವರು ಕೂಡ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.