ಉಳ್ದಿದ್ದೆಲ್ಲಾ ಬಿಟ್ಹಾಕಿ: ಸಿಡಿಸಿ ಸುಪ್ರೀಂ ಹೇಳಿದ ’ಹಸಿರು ಪಟಾಕಿ’

By Web DeskFirst Published Oct 24, 2018, 12:51 PM IST
Highlights

ಸುಪ್ರೀಂಕೋರ್ಟ್ ಮಹತ್ವದ ತೀರ್ಪು | ದೇಶಾದ್ಯಂತ ಅನ್ವಯ | ಹಬ್ಬಗಳಲ್ಲಿ ಎರಡೇ ತಾಸು ಸಿಡಿಸಲು ಅವಕಾಶ | ಸರಪಟಾಕಿ ನಿಷಿದ್ಧ 

ನವದೆಹಲಿ (ಅ. 24): ದೀಪಾವಳಿ ಸೇರಿ ಇತರೆ ಹಬ್ಬಗಳಂದು ಇಡೀ ದಿನ ಪಟಾಕಿ ಸಿಡಿಸುವ ಸ್ವಾತಂತ್ರ್ಯಕ್ಕೆ ಸುಪ್ರೀಂ ಕೋರ್ಟ್ ಕಡಿವಾಣ ಹಾಕಿದೆ.

ಪಟಾಕಿ ಸಿಡಿತದಿಂದ ಭಾರೀ ಪರಿಸರ ಮಾಲಿನ್ಯ ಆಗುತ್ತಿರುವುದನ್ನು ಪರಿಗಣಿಸಿದ ಸುಪ್ರೀಂಕೋರ್ಟ್, ದೇಶಾದ್ಯಂತ ಮಾಲಿನ್ಯಕಾರಕ ಪಟಾಕಿ ನಿರ್ಬಂಧಿಸಿ, ಕಡಿಮೆ ಮಾಲಿನ್ಯಕಾರಕ ‘ಹಸಿರು’ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿದೆ.

ಇದೇ ವೇಳೆ, ದೀಪಾವಳಿ, ಇತರ ಹಬ್ಬಾಚರಣೆ ವೇಳೆ ಇಡೀ ದೇಶಕ್ಕೆ ಅನ್ವಯವಾಗುವಂತೆ ರಾತ್ರಿ 8 ರಿಂದ 10 ರವರೆಗೆ ಮಾತ್ರ ಪಟಾಕಿ ಹಾರಿಸಬೇಕು ಎಂಬ ನಿಬಂಧನೆ ವಿಧಿಸಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಕೂಡ ಮಧ್ಯರಾತ್ರಿ 11.55 ರಿಂದ ಮಧ್ಯರಾತ್ರಿ 12.30 ರವರೆಗೆ (35 ನಿಮಿಷ) ಮಾತ್ರ ಪಟಾಕಿ ಹಾರಿಸಬೇಕು ಎಂದು ನ್ಯಾಯಾಲಯ ಹೇಳಿದೆ. 

ಯಾವ್ಯಾವ ಪಟಾಕಿ ನಿಷೇಧ? 

- ವಿವಿಧ ಹಬ್ಬಗಳ ಸಂದರ್ಭದಲ್ಲಿ ರಾತ್ರಿ 8 ರಿಂದ 10 ರವರೆಗೆ ಮಾತ್ರ ಸಿಡಿಸಲು ಅನುಮತಿ

-ಹೊಸವರ್ಷ, ಕ್ರಿಸ್‌ಮಸ್‌ಗೆ ರಾತ್ರಿ 11.55 ರಿಂದ 12.30 ರವರೆಗಷ್ಟೇ ಪಟಾಕಿಗೆ ಅವಕಾಶ

- ಸರಪಟಾಕಿಯಂತಹ ಭಾರೀ, ನಿರಂತರ ಸದ್ದು ಮಾಡುವ ಸಿಡಿಮದ್ದು ಉತ್ಪಾದನೆ ನಿಷಿದ್ಧ

- ಕಡಿಮೆ ಶಬ್ದ, ವಾಯು ಮಾಲಿನ್ಯದ ‘ಪರಿಸರ ಸ್ನೇಹಿ ಪಟಾಕಿ’ ಉತ್ಪಾದನೆಗಷ್ಟೇ ಸಮ್ಮತಿ

- ಸುಪ್ರೀಂ ಆದೇಶ ಪಾಲನೆಗೆ ಆಯಾ ಪ್ರದೇಶದ ಪೊಲೀಸ್ ಠಾಣಾಧಿಕಾರಿಯೇ ಹೊಣೆ

- ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ಕಂಪನಿಗಳು ಬೇಕಾಬಿಟ್ಟಿ ಪಟಾಕಿ ಮಾರುವಂತಿಲ್ಲ

- ಹಬ್ಬದ ಸಂದರ್ಭದಲ್ಲಿ ಸಮುದಾಯ ಪಟಾಕಿ ಸಿಡಿತಕ್ಕೆ ಸರ್ಕಾರಗಳು ಪ್ರೇರೇಪಿಸಬೇಕು

 ಆದರೆ ದೇಶಾದ್ಯಂತ ಪಟಾಕಿ ಮಾರಾಟ ಹಾಗೂ ಉತ್ಪಾದನೆ ನಿಷೇಧಿಸಬೇಕೆಂಬ ಬೇಡಿಕೆಯನ್ನು ಅದು ತಿರಸ್ಕರಿಸಿದೆ. ಫ್ಲಿಪ್‌ಕಾರ್ಟ್, ಅಮೆಜಾನ್‌ನಂತಹ ಆನ್‌ಲೈನ್ ಮಾರಾಟ ಕಂಪನಿಗಳು ಶಬ್ದ ಹಾಗೂ ವಾಯುಮಾಲಿನ್ಯ ಮಿತಿಯನ್ನು ಮೀರಿರುವ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕೋರ್ಟು ನಿಷೇಧ ಹೇರಿದೆ.

ಮಾಲಿನ್ಯ ತಡೆಗಟ್ಟಲು ದೇಶಾದ್ಯಂತ ಪಟಾಕಿ ಉತ್ಪಾದನೆ ಹಾಗೂ ಮಾರಾಟ ನಿಷೇಧಿಸಬೇಕು ಎಂಬ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಎ.ಕೆ. ಸಿಕ್ರಿ ಹಾಗೂ ನ್ಯಾ| ಅಶೋಕ್ ಭೂಷಣ್ ಅವರ ನ್ಯಾಯಪೀಠ ಈ ಮಹತ್ತರ ಆದೇಶವನ್ನು ಹೊರಡಿಸಿದೆ. ನ್ಯಾಯಾಲಯದ ಈ ಆದೇಶದೊಂದಿಗೆ ಇದೇ ಮೊದಲ ಬಾರಿ ಇಡೀ ದೇಶವು, ‘ನಿಯಮಬದ್ಧ ವಾತಾವರಣ’ದಲ್ಲಿ ಪಟಾಕಿಗಳ ಹಬ್ಬವನ್ನು ಹಾಗೂ ಇತರ ಹಬ್ಬಗಳನ್ನು ಆಚರಿಸಲಿದೆ.

ಠಾಣಾಧಿಕಾರಿಯೇ ಹೊಣೆ:

‘ಅನುಮತಿ ಇರುವಷ್ಟು  ಶಬ್ದ ಬರುವ ಹಾಗೂ ಹೊಗೆ ಸೂಸುವ ಪಟಾಕಿಗಳನ್ನು ಹೊರತುಪಡಿಸಿದರೆ ಮಿಕ್ಕ ಮಾಲಿನ್ಯಕಾರಕ ಪಟಾಕಿಗಳನ್ನು ಮಾರುಕಟ್ಟೆಯಲ್ಲಿ ಮಾರುವಂತಿಲ್ಲ. ನಮ್ಮ ಆದೇಶ ಪಾಲನೆಯಾಗುವಂತೆ ಆಯಾ ಠಾಣಾಧಿಕಾರಿಗಳು ನೋಡಿಕೊಳ್ಳಬೇಕು. ಒಂದು ವೇಳೆ ಪಾಲನೆಯಾಗದೇ ಹೋದರೆ ಅದಕ್ಕೆ ಠಾಣಾಧಿಕಾರಿಯೇ ಹೊಣೆ. ಆದೇಶ ಉಲ್ಲಂಘನೆ ಮಾಡುವವರು ನ್ಯಾಯಾಂಗ ನಿಂದನೆಗೆ ಗುರಿಯಾಗುತ್ತಾರೆ’ ಎಂದು ಅದು ಎಚ್ಚರಿಸಿತು.

ಅನುಮತಿ ಕಡ್ಡಾಯ:

ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (ಪಿಇಎಸ್‌ಓ), ಪಟಾಕಿಗಳು ಹೊಗೆ-ಶಬ್ದಮಿತಿ ಹೊಂದಿವೆಯೇ ಎಂಬುದನ್ನು ಪರಿಶೀಲಿಸಿ ಅನುಮತಿ ನೀಡಲಿದೆ ಎಂದು ಪೀಠ ಹೇಳಿತು. ಅಲ್ಲದೆ, ಈಗಾಗಲೇ ಉತ್ಪಾದನೆಯಾಗಿರುವ ಪಟಾಕಿಗಳು ‘ಮಾರಾಟಕ್ಕೆ ಅರ್ಹವಲ್ಲ’ ಎಂದಿತು.

ಸರಪಟಾಕಿಗೆ ನಿಷೇಧ:

ಇದೇ ವೇಳೆ ಭಾರೀ ಶಬ್ದ ಮತ್ತು ಘನತ್ಯಾಜ್ಯಕ್ಕೆ ಕಾರಣವಾಗುವ ಸರಪಟಾಕಿ ಮಾರುವಂತಿಲ್ಲ ಎಂದು ಅದು ನಿರ್ಬಂಧ ಹೇರಿತು. ಸಮುದಾಯ ಪಟಾಕಿ ಹಾರಿಸುವಿಕೆಯನ್ನು ಸರ್ಕಾರಗಳು ಪ್ರೋತ್ಸಾಹಿಸಬೇಕು. ಎಂದಿತು. ಪಟಾಕಿ ಮಾರಾಟಗಾರರ ಜೀವಿಸುವ ಮೂಲಭೂತ ಹಕ್ಕು ಹಾಗೂ 130 ಕೋಟಿ ಜನರ ಆರೋಗ್ಯದ ಹಕ್ಕು- ಗಮನದಲ್ಲಿ ಇಟ್ಟುಕೊಂಡು ತಾನು ಈ ತೀರ್ಮಾನಕ್ಕೆ ಬಂದಿದ್ದಾಗಿ ಹೇಳಿತು.

ಹಸಿರು ಪಟಾಕಿ ಎಂದರೇನು?

ಕಡಿಮೆ ಬೆಳಕು ಮತ್ತು ಶಬ್ದ ಹೊರಸೂಸುವ, ಸಿಡಿತದ ಬಳಿಕ ಕಡಿಮೆ ಪ್ರಮಾಣದ ನೈಟ್ರೋಜನ್ ಆಕ್ಸೈಡ್, ಸಲ್ಫರ್ ಡೈ ಆಕ್ಸೆಡ್ ಹೊರಚೆಲ್ಲುವ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಪರಿಗಣಿಸಲಾಗುತ್ತದೆ.

ಯಾವ ಪಟಾಕಿಗೆ ನಿಷೇಧ?

ಪಟಾಕಿ ಸಿಡಿಸಿದ ಪ್ರದೇಶದಿಂದ 4 ಮೀಟರ್ ದೂರದಲ್ಲೂ ಅದರ ಶಬ್ದದ ಪ್ರಮಾಣ 125 ಡೆಸಿಬಲ್ಸ್ ಇದ್ದಲ್ಲಿ ಅಂಥವುಗಳ ಬಳಕೆಗೆ ನಿಷೇಧ ಹೇರಲಾಗುವುದು.

click me!