
ಹೊಸಪೇಟೆ(ಏ.28) ಲೋಕಸಭಾ ಚುನಾವಣಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಇಂದು ಪ್ರಧಾನಿ ಮೋದಿ ಕರ್ನಾಟಕದಲ್ಲಿ ಸತತ ಸಮಾವೇಶ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದ್ದಾರೆ. ಬೆಳಗಾವಿ, ಉತ್ತರ ಕನ್ನಡ, ದಾವಣೆಗೆರೆ ಸಮಾವೇಶದ ಬಳಿಕ ಹೊಸಪೇಟೆಗೆ ಆಗಮಿಸಿದ ಮೋದಿ, ಬಿಜೆಪಿ ಪರ ಭರ್ಜರಿ ಪ್ರಚಾರ ಮಾಡಿದ್ದಾರೆ. ಭಾಷಣದ ವೇಳೆ ಮೋದಿ ವೇದಿಕೆಯಲ್ಲಿದ್ದ ಬಳ್ಳಾರಿ, ಕೊಪ್ಪಳ ಅಭ್ಯರ್ಥಿಗಳ ಹೆಸರು ಉಲ್ಲೇಖಿಸಿ ಮತಯಾಚಿಸಿದ್ದರೆ, ರಾಯಚೂರು ಅಭ್ಯರ್ಥಿ ಅಮರೇಶ್ ನಾಯಕ್ ಹೆಸರು ಮರೆತಿದ್ದಾರೆ. ಆದರೆ ಭಾಷಣ ಮುಗಿಸಿದ ಬಳಿಕ ವೇದಿಕೆಯಲ್ಲಿದ್ದ ಅಮರೇಶ್ ನಾಯಕ್ ಬೆನ್ನು ತಟ್ಟಿದ ಮೋದಿ, ಕೈಹಿಡಿದು ಮತದಾರರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಭಾಷಣಧ ಅಂತ್ಯದಲ್ಲಿ ಮೋದಿ ಬಳ್ಳಾರಿ ಅಭ್ಯರ್ಥಿ ಶ್ರೀರಾಮಲು, ಕೊಪ್ಪಳ ಅಭ್ಯರ್ಥಿ ಬಸವರಾಜ್ ಕ್ಯಾವಟೂರ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಗೆಲ್ಲಿಸಬೇಕು. ನೀವು ನೀಡಿದ ಮತ ನೇರವಾಗಿ ಮೋದಿಗೆ ತಲುಪಲಿದೆ ಎಂದು ಮನವಿ ಮಾಡಿದ್ದರು. ಆದರೆ ರಾಯಚೂರು ಅಭ್ಯರ್ಥಿ ಅಮರೇಶ್ ನಾಯಕ್ ಹೆಸರು ಉಲ್ಲೇಖಿಸಲು ಮರೆತಿದ್ದರು.
ರಾಮಮಂದಿರ ಆಮಂತ್ರಣ ತಿರಸ್ಕರಿಸಿದವರನ್ನು ಹನುಮ ಸ್ಥಳದ ಮತದಾರರು ಕ್ಷಮಿಸುವುದಿಲ್ಲ; ಮೋದಿ!
ಭಾಷಣ ಮುಗಿಸಿ ನಾಯಕರತ್ತ ಆಗಮಿಸಿದ ಪ್ರಧಾನಿ ಮೋದಿಗೆ, ಭಾಷಣದಲ್ಲಿ ರಾಯಚೂರು ಅಭ್ಯರ್ಥಿ ಅಮರೇಶ್ ನಾಯಕ್ ಹೆಸರು ಉಲ್ಲೇಖಿಸಲು ಮರೆತಿದ್ದೀರಿ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ. ತಕ್ಷಣವೇ ಮೋದಿ ಅಮರೇಶ್ ನಾಯಕ್ ಬೆನ್ನು ತಟ್ಟಿದ ಮೋದಿ, ಕೈ ಹಿಡಿದು ವೇದಿಕೆ ಮುಂಬಾಗಕ್ಕೆ ಕರೆ ತಂದಿದ್ದಾರೆ. ಬಳಿಕ ಮೂವರು ಅಭ್ಯರ್ಥಿಗ ಕೈ ಎತ್ತಿ ಹಿಡಿದು ಮತದಾರರಿಗೆ ಸಂದೇಶ ರವಾನಿಸಿದರು.
ಭಾಷಣದಲ್ಲಿ ಮೋದಿ ಕಾಂಗ್ರೆಸ್ ಹಾಗೂ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ಇದೇ ವೇಳೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತ, ಕಾನೂನು ಸವ್ಯವಸ್ಥೆ, ಭ್ರಷ್ಟಾಚಾರ ಕುರಿತು ಉಲ್ಲೇಖಿಸಿದ್ದಾರೆ. ಮೋದಿ ಇರುವುದು ಸ್ವಂತಕ್ಕಾಗಿ ಅಲ್ಲ, ನಿಮಗಾಗಿ. ಬಳ್ಳಾರಿ ಜನ ಬಿಜೆಪಿಯ ವಿಶ್ವಾಸ, ವಿಕಾಸವನ್ನು ನೋಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನೀಡಿದ ವಿಶ್ವಾಸಾಘಾತವನ್ನು ನೋಡಿದ್ದಾರೆ ಎಂದರು.
ಸುಷ್ಮಾ ಸ್ವರಾಜ್ ಬಳ್ಳಾರಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ ಬಳ್ಳಾರಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೆ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಮೇಡಂ ಗೆದ್ದು ಮತ್ತೆ ಬರಲೇ ಇಲ್ಲ. ಇದು ಬಳ್ಳಾರಿ ಜನತೆಗೆ ಕಾಂಗ್ರೆಸ್ ಮಾಡಿದ ವಿಶ್ವಾಸಘಾತ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಬಡತನ ನಿವಾರಣೆ ಮಾಡುತ್ತೇವೆ ಎಂದು ಹೇಳಿತ್ತು. ಇದುವರೆಗೆ ಏನು ಮಾಡಿದೆ? ಸುಳ್ಳು ಹೇಳುವುದೆ ಕಾಂಗ್ರೆಸ್ ಟ್ರಾಕ್ ರೆಕಾರ್ಡ್ ಎಂದು ಮೋದಿ ಹೇಳಿದ್ದಾರೆ.
ನೇಹಾಳಂತ ಕೋಟ್ಯಂತರ ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕಿದೆ, ಹೊಸಪೇಟೆಯಲ್ಲಿ ಕಾಂಗ್ರೆಸ್ ಕುಟುಕಿದ ಮೋದಿ!
ನಿಮ್ಮ ಒಂದೊಂದು ಓಟು ಕಾಂಗ್ರೆಸ್ ನ ತಪ್ಪುಗಳಿಗೆ ಪಾಠ ಕಲಿಸಬೇಕು. ನೀವು ಒತ್ತುವ ಕಮಲದ ಬಟನ್ ನೇರವಾಗಿ ಮೋದಿಗೆ ತಲುಪಲಿದೆ ಎಂದು ಮೋದಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ