ಎಲಿವೇಟೆಡ್‌ ಕಾರಿಡಾರಲ್ಲಿ ಬಸ್‌ಗೆ ಪ್ರತ್ಯೇಕ ಪಥ

By Web DeskFirst Published May 12, 2019, 8:57 AM IST
Highlights

ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸಹಕಾರಿಯಾಗಿಲ್ಲ ಎಂಬ ಆರೋಪಗಳ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ, ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಪಥಗಳ ನಿರ್ಮಾಣ ಮತ್ತು ಪ್ರತಿ ಮೂರು ಕಿ.ಮೀ.ಗೊಂದು ಬಸ್‌ ನಿಲ್ದಾಣ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ.

ಬೆಂಗಳೂರು :  ನಗರದ ವಿವಾದಿತ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸಹಕಾರಿಯಾಗಿಲ್ಲ ಎಂಬ ಆರೋಪಗಳ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ, ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಪಥಗಳ ನಿರ್ಮಾಣ ಮತ್ತು ಪ್ರತಿ ಮೂರು ಕಿ.ಮೀ.ಗೊಂದು ಬಸ್‌ ನಿಲ್ದಾಣ ನಿರ್ಮಿಸಿ, ಪ್ರಯಾಣಿಕರು ಹತ್ತಿ ಇಳಿಯಲು ಲಿಫ್ಟ್‌ ಮತ್ತು ಮೆಟ್ಟಿಲುಗಳನ್ನು ಅಳವಡಿಸಲು ಯೋಜನೆ ಮರು ವಿನ್ಯಾಸಗೊಳಿಸಿದೆ.

ಎಲಿವೇಟೆಡ್‌ ಕಾರಿಡಾರ್‌ ರಸ್ತೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿ ಮೂರು ಕಿ.ಮೀ.ಗೊಂದು ಬಸ್‌ ನಿಲ್ದಾಣ ಸ್ಥಾಪಿಸಿ ಪ್ರಯಾಣಿಕರು ಹತ್ತಿ ಇಳಿಯಲು ಹೈ ಕೆಪಾಸಿಟಿ ಲಿಫ್ಟ್‌ ಮತ್ತು ಸ್ಟೇರ್‌ಕೇಸ್‌ಗಳನ್ನು ಅಳವಡಿಸಲು ಸರ್ಕಾರ ಯೋಜನೆಯನ್ನು ಮರು ವಿನ್ಯಾಸಗೊಳಿಸಿದೆ. ಜೊತೆಗೆ ಈ ಬಸ್‌ ನಿಲ್ದಾಣಗಳಲ್ಲಿ ರಾರ‍ಯಂಪ್‌ಗಳನ್ನು ನಿರ್ಮಿಸುವ ಚಿಂತನೆ ಕೂಡ ಇದ್ದು, ಸಾಧ್ಯಾಸಾಧ್ಯತೆ ಪರಿಶೀಲನೆ ನಡೆಸುತ್ತಿದೆ. ಒಂದು ವೇಳೆ ಎಲ್ಲೆಡೆ ರಾರ‍ಯಂಪ್‌ಗಳ ನಿರ್ಮಾಣ ಸಾಧ್ಯವಾಗದಿದ್ದರೆ ಅಗತ್ಯ ಭೂಮಿ ಲಭ್ಯವಾದ ಕಡೆಯಾದರೂ ಪ್ರಯಾಣಿಕರ ಅನುಕೂಲಕ್ಕಾಗಿ ರಾರ‍ಯಂಪ್‌ಗಳನ್ನು ನಿರ್ಮಿಸುವುದು ಸರ್ಕಾರದ ಆಲೋಚನೆಯಾಗಿದೆ.

ಸಾರ್ವನಿಕ ಬಸ್‌ಗಳ ಸಂಚಾರಕ್ಕೆಂದೇ ಪ್ರತ್ಯೇಕ ಪಥಗಳನ್ನು ನಿರ್ಮಿಸುವ ಯೋಜನೆ ನಾಲ್ಕು ಹಂತಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ಈ ರಸ್ತೆಗಳು ಸಂಚಾರ ಸಮಯ ತಗ್ಗಿಸುವುದರ ಜೊತೆಗೆ ಅಪಘಾತ ಘಟನೆಗಳನ್ನು ನಿಯಂತ್ರಿಸುವ ಕಾರಿಡಾರ್‌ಗಳಾಗಬೇಕು ಎಂಬ ಉದ್ದೇಶವಿದೆ. ಇದಕ್ಕಾಗಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸಲು ತೀರ್ಮಾನಿಸಲಾಗಿದೆ ಎಂದು ಯೋಜನೆ ಕೈಗೆತ್ತಿಕೊಂಡಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್‌) ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಯ ಮೂಲ ನಕ್ಷೆಯಲ್ಲಿ ರೂಪಿಸಲಾಗಿರುವಂತೆ ಪ್ರತಿ ಎಲಿವೇಟೆಡ್‌ ರಸ್ತೆಯಲ್ಲೂ ಬಸ್‌ಗಳು ಹತ್ತಿ ಇಳಿಯಲು ನಿಗದಿತ ಸ್ಥಳಗಳಲ್ಲಿ ಅಪ್‌ ಮತ್ತು ಡೌನ್‌ರಾರ‍ಯಂಪ್‌ಗಳ ನಿರ್ಮಾಣ ಮಾಡಲಾಗುವುದು. ಇದರಲ್ಲಿ ಬದಲಾವಣೆ ಇರುವುದಿಲ್ಲ ಎಂದು ಕೆಆರ್‌ಡಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್‌.ಶಿವಕುಮಾರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ದ್ವಿಚಕ್ರ-ತ್ರಿಚಕ್ರ ವಾಹನಗಳಿಗೆ ನಿರ್ಬಂಧ

ಇನ್ನು, ಎಲಿವೇಟೆಡ್‌ ಕಾರಿಡಾರ್‌ ರಸ್ತೆಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸಲು ಉದ್ದೇಶಿಸಲಾಗಿದೆ. ಸಾಧ್ಯವಾದಷ್ಟುಅಪಘಾತಗಳ ಸಂಖ್ಯೆ ಕಡಿಮೆ ಮಾಡುವ ದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ. ಆದರೆ, ಕಾರುಗಳು ಸೇರಿದಂತೆ ನಾಲ್ಕು ಚಕ್ರ ವಾಹನಗಳು ಸಂಚರಿಸಬಹುದು. ಈ ರಸ್ತೆಗಳಲ್ಲಿ ಸಿಗ್ನಲ್‌ಗಳು ಸೇರಿದಂತೆ ರಸ್ತೆ ತಡೆಗಳು ಕಡಿಮೆ ಇರುತ್ತವೆ. ಹೀಗಾಗಿ ಸಂಚಾರ ಸುಗಮವಾಗಿರುತ್ತದೆ ಹಾಗೂ ದಟ್ಟಣೆ ಉಂಟಾಗುವ ಸಾಧ್ಯತೆಯೂ ಕಡಿಮೆ ಎನ್ನುವುದು ಅಧಿಕಾರಿಗಳ ಹೇಳಿಕೆ.

ಕಾರಿಡಾರ್‌ಗಳಿಂದ ಸಮಯ ಉಳಿತಾಯ

ನಗರದ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಬರೋಬ್ಬರಿ .30 ಸಾವಿರ ಕೋಟಿ ವೆಚ್ಚದ 102 ಕಿ.ಮೀ. ಉದ್ದ ಮಹತ್ವಾಕಾಂಕ್ಷಿ ಪೂರ್ವ-ಪಶ್ಚಿಮ, ಉತ್ತರ -ದಕ್ಷಿಣ, ಕೇಂದ್ರ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ರೂಪಿಸಿದೆ. ಈಗಾಗಲೇ ಹೆಬ್ಬಾಳದ ಬ್ಯಾಪ್ಟಿಸ್ಟ್‌ ಆಸ್ಪತ್ರೆಯಿಂದ ಮೇಕ್ರಿ ವೃತ್ತದ ಮಾರ್ಗವಾಗಿ ಸಿಲ್‌್ಕಬೋರ್ಡ್‌ ವರೆಗೆ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣಕ್ಕೆ ಟೆಂಡರ್‌ ಕರೆದಿದೆ. ಆದರೆ, ಇದರ ನಡುವೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ ಇಡೀ ಯೋಜನೆಗೆ ಸದ್ಯ ತಡೆಯಾಜ್ಞೆ ನೀಡಿದೆ.

ಅದೇನೇ ಇರಲಿ, ಒಟ್ಟಾರೆ ಏಳು ಕಡೆ ಈ ಉದ್ದೇಶಿತ ಎಲಿವೇಟೆಡ್‌ ಕಾರಿಡಾರ್‌ಗಳು ನಿರ್ಮಾಣವಾದರೆ, ನಗರದ ಒಂದು ಭಾಗದಿಂದ ಇನ್ನೊಂದು ಭಾಗದ ಯಾವುದೇ ಸ್ಥಳ ತಲುಪಲು ಕೇವಲ 45 ನಿಮಿಷ ಸಾಕಾಗುತ್ತದೆ. ಮೊದಲ ಹಂತದ ಯೋಜನೆ ಪೂರ್ಣಗೊಂಡರೆ ಹೆಬ್ಬಾಳದಿಂದ ಸಿಲ್‌್ಕಬೋರ್ಡ್‌ಗೆ ಕೇವಲ 35 ನಿಮಿಷದಲ್ಲಿ ತಲುಪಬಹುದು. ಅದೇ ರೀತಿ ಕೆ.ಆರ್‌.ಪುರದಿಂದ ಯಶವಂತಪುರಕ್ಕೆ 30 ನಿಮಿಷದಲ್ಲಿ, ವರ್ತೂರು ಕೋಡಿಯಿಂದ ಲಾಲ್‌ಬಾಗ್‌ಗೆ 20 ನಿಮಿಷದಲ್ಲಿ ತಲುಪಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಎಲಿವೇಟೆಡ್‌ ಕಾರಿಡಾರ್‌ ಬಳಸುವ ಜನರು ಟೋಲ್‌ ಶುಲ್ಕ ಪಾವತಿಸುವ ಅಗತ್ಯವಿಲ್ಲ. ವಾಹನಗಳು ಗಂಟೆಗೆ ಸರಾಸರಿ 50ರಿಂದ 80ಕಿ.ಮೀ ವೇಗದಲ್ಲಿ ಚಲಿಸಲು ಅನುಕೂಲವಾಗುವಂತೆ ಈ ಕಾರಿಡಾರ್‌ಗಳನ್ನು ವಿನ್ಯಾಸಗೊಳಿಸಲಾಗುವುದು. ಈ ಯೋಜನೆ 2021ರೊಳಗೆ ಪೂರ್ಣಗೊಳಿಸಲಾಗುವುದು. ಇದರಿಂದ ವಾಹನ ದಟ್ಟಣೆ ಹಾಗೂ ಕಾರ್ಬನ್‌ ಪ್ರಮಾಣ ತಗ್ಗಲಿದೆ.

ಎಲಿವೇಟೆಡ್‌ ಕಾರಿಡಾರ್‌ನ ಏಳು ಜಾಲಗಳು

ಹೆಬ್ಬಾಳ- ಸೆಂಟ್ರಲ್‌ ಸಿಲ್‌್ಕ ಬೋರ್ಡ್‌ (ಉತ್ತರ- ದಕ್ಷಿಣ ಕಾರಿಡಾರ್‌)

ಕೆ.ಆರ್‌. ಪುರಂ- ಗೊರಗುಂಟೆ ಪಾಳ್ಯ (ಪೂರ್ವ- ಪಶ್ಚಿಮ ಕಾರಿಡಾರ್‌ 1)

ವರ್ತೂರು ಕೋಡಿ- ಮೈಸೂರು ರಸ್ತೆ (ಪೂರ್ವ- ಪಶ್ಚಿಮ ಕಾರಿಡಾರ್‌ 2)

ಸೇಂಟ್‌ ಜಾನ್‌ ಆಸ್ಪತ್ರೆ- ಆಗರ (ಸಂಪರ್ಕ ಕಾರಿಡಾರ್‌ 1)

ಹಲಸೂರು- ಡಿಸೋಜ ವೃತ್ತ (ಸಂಪರ್ಕ ಕಾರಿಡಾರ್‌ 2)

ವೀಲರ್ಸ್‌ ಜಂಕ್ಷನ್‌- ಕಲ್ಯಾಣ ನಗರ ಹೊರ ವರ್ತುಲ ರಸ್ತೆ (ಸಂಪರ್ಕ ಕಾರಿಡಾರ್‌ 3)

ರಾಮಮೂರ್ತಿ ನಗರ- ಐಟಿಪಿಎಲ್‌ (ಹೆಚ್ಚುವರಿ ಕಾರಿಡಾರ್‌)


ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸಹಕಾರಿಯಾಗಿಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದಿದ್ದರಿಂದ ಯೋಜನೆಯ ನಕ್ಷೆಯನ್ನು ಮರು ವಿನ್ಯಾಸಗೊಳಿಸಲಾಗಿದೆ. ಎಲಿವೇಟೆಡ್‌ ಕಾರಿಡಾರ್‌ನ ಎಲ್ಲ ರಸ್ತೆಗಳಲ್ಲೂ ಪ್ರತಿ ಮೂರು ಕಿ.ಮೀ.ಗೊಂದು ಬಸ್‌ನಿಲ್ದಾಣ ನಿರ್ಮಿಸಿ. ಆ ಸ್ಥಳಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೈ ಕೆಪಾಸಿಟಿ ಲಿಫ್‌್ಡ ಮತ್ತು ಸ್ಟೇರ್‌ಕೇಸ್‌ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಜೊತೆಗೆ ರಾರ‍ಯಂಪ್‌ಗಳನ್ನು ನಿರ್ಮಿಸುವ ಚಿಂತನೆ ಇದ್ದು, ಸಾಧ್ಯಾಸಾಧ್ಯತೆ ಪರಿಶೀಲಿಸಲಾಗುತ್ತಿದೆ.

-ಬಿ.ಎಸ್‌.ಶಿವಕುಮಾರ್‌, ಕೆಆರ್‌ಡಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ.

ವರದಿ : ಲಿಂಗರಾಜು ಕೋರಾ

click me!