ವಂಚಕರ ಆಸ್ತಿ ಜಪ್ತಿ ಅಧಿಕಾರ ಪೊಲೀಸರಿಗೆ ಯಾವಾಗ ?

By Web DeskFirst Published Jul 18, 2019, 8:29 AM IST
Highlights

ರಾಜ್ಯದಲ್ಲಿ ವಂಚಕರ ಆಸ್ತಿಯನ್ನು ಜಪ್ತಿ ಮಾಡುವ ಅಧಿಕಾರ ಪೊಲೀಸರಿಗೆ ಸಿಗುವ ಶಿಫಾರಸ್ಸೊಂದು ಇನ್ನೂ ಕೂಡ ಧೂಳು ತಿನ್ನುತ್ತಿದೆ. 

ಬೆಂಗಳೂರು [ಜು.18] :  ಏಳು ತಿಂಗಳ ಹಿಂದೆಯೇ ವಂಚಕ ಹಣಕಾಸು ಸಂಸ್ಥೆಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳಲ್ಲಿ ಆಸ್ತಿ ಜಪ್ತಿ ಸಂಬಂಧ ಪೊಲೀಸರಿಗೆ ಅಧಿಕಾರ ನೀಡುವಂತೆ ಶಿಫಾರಸು ಮಾಡಿ ಸಿಐಡಿ ಡಿಜಿಪಿ ಅಧ್ಯಕ್ಷತೆಯ ಸಮಿತಿ ಸಲ್ಲಿಸಿದ ವರದಿ ಕಾರ್ಯರೂಪಕ್ಕಿಳಿಯದೆ ಸರ್ಕಾರದ ಮಟ್ಟದಲ್ಲಿ ಧೂಳು ತಿನ್ನುತ್ತಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿ ಮಾಲಿಕ ಮಹಮ್ಮದ್‌ ಮನ್ಸೂರ್‌ ಖಾನ್‌ನ ಮಹಾಮೋಸದ ಕೃತ್ಯ ಬಯಲಾದ ಬಳಿಕ ಸರ್ಕಾರವು, ವಂಚಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಪೊಲೀಸರಿಗೆ ಅಧಿಕಾರ ನೀಡುವ ಬಗ್ಗೆ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಹೇಳಿದೆ. ಈ ಸಂಬಂಧ ಉನ್ನತ ಮಟ್ಟದ ಸಮಿತಿ ಸಹ ರಚಿಸುವುದಾಗಿ ಸಹ ಸರ್ಕಾರ ತಿಳಿಸಿದೆ.

ವಾಸ್ತವದಲ್ಲಿ ಇದೇ ವರ್ಷದ ಜನವರಿಯಲ್ಲೇ ರಾಜ್ಯ ಅಪರಾಧ ತನಿಖಾ ದಳದ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ನೇತೃತ್ವದ ಉನ್ನತ ಮಟ್ಟದ ಸಮಿತಿ, ವಂಚಕರ ಆಸ್ತಿ ಜಪ್ತಿಗೆ ಪೊಲೀಸರಿಗೆ ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು. ಸಿಐಡಿ ಡಿಜಿಪಿ ನೇತೃತ್ವದಲ್ಲಿ ಸಮಿತಿಯನ್ನು ಸರ್ಕಾರವೇ ರಚಿಸಿ ವರದಿ ಪಡೆದಿತ್ತು ಎಂಬುದು ಗಮನಾರ್ಹ ಅಂಶವಾಗಿದೆ.

ಎಷ್ಟೇ ಮೋಸದ ಕಂಪನಿಗಳು ಬಯಲಾದರೂ ಸಹ ಆಮಿಷಗಳಿಗೆ ಬಲಿಯಾಗಿ ಜನರು ಹಣ ಕಳೆದುಕೊಳ್ಳುವುದು ತಪ್ಪಿಲ್ಲ. ಹೀಗಾಗಿ ಸರ್ಕಾರದ ಇಚ್ಛಾಶಕ್ತಿ ತೋರಿಸಿದರೆ ಮಾತ್ರ ನಕಲಿ ಕಂಪನಿಗಳಿಗೆ ಲಗಾಮು ಬೀಳಲಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳುತ್ತಾರೆ.

ಕೆಪಿಐಡಿ ಕಾಯ್ದೆಗೆ ಕಂದಾಯ ವ್ಯಾಪ್ತಿ:

ಸದ್ಯ ವಂಚಕ ಕಂಪನಿಗಳ ಆಸ್ತಿ ಜಪ್ತಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತರಕ್ಷಣಾ ಕಾಯ್ದೆ (ಕೆಪಿಐಡಿ)- 2004 ಇದೆ. ಈ ಕಾಯ್ದೆ ನೇರವಾಗಿ ಕ್ರಿಮಿನಲ್‌ ಪ್ರಕರಣಗಳಲ್ಲಿ ಬಳಸಲು ಪೊಲೀಸರಿಗೆ ಅವಕಾಶವಿಲ್ಲ. ಆ ಕಾಯ್ದೆ ಜಾರಿಗೊಳ್ಳಿಸುವ ಸಮಕ್ಷಮ ಪ್ರಾಧಿಕಾರದ ಅಧಿಕಾರವು ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಅಕ್ರಮ ಹಣಕಾಸು ವ್ಯವಹಾರದಲ್ಲಿ ತೊಡಗಿರುವ ಸಂಸ್ಥೆಗಳ ವಿರುದ್ಧ ಕೆಪಿಐಡಿ ಕಾಯ್ದೆ ಪ್ರಯೋಗಿಸಿ ಕಂದಾಯ ಇಲಾಖೆ ಅಧಿಕಾರಿಗಳು ಆಸ್ತಿ ಮುಟ್ಟುಗೋಲಿಗೆ ಕ್ರಮ ಜರುಗಿಸಬಹುದಾಗಿದೆ.

ಈಗ ಐಎಎಂ ಹಗರಣದಲ್ಲಿ ಬಂಧಿತನಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್‌ ಹಾಗೂ ಉಪ ವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ಅವರು, ಕೆಪಿಐಡಿ ಕಾಯ್ದೆಯಡಿ ಕ್ರಮ ಜರುಗಿಸದೆ ಮನ್ಸೂರ್‌ ಪರವಾಗಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ಆರೋಪಕ್ಕೆ ತುತ್ತಾಗಿದ್ದಾರೆ. 2018ರಲ್ಲಿ ಆ್ಯಂಬಿಡೆಂಟ್‌ ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಎಚ್ಚೆತ್ತ ರಾಜ್ಯ ಸರ್ಕಾರವು, ತಮಿಳುನಾಡು ಮಾದರಿಯಲ್ಲಿ ಕೆಪಿಐಡಿ ಕಾಯ್ದೆ ತಿದ್ದುಪಡಿ ಅಥವಾ ನಕಲಿ ಕಂಪನಿಗಳ ಪ್ರಬಲ ಕಾಯ್ದೆ ರೂಪಿಸುವ ಸಲುವಾಗಿ ಸಿಐಡಿ ಡಿಜಿಪಿ ಪ್ರವೀಣ್‌ ಸೂದ್‌ ನೇತೃತ್ವದಲ್ಲಿ ಕಂದಾಯ, ಹಣಕಾಸು ಹಾಗೂ ಗೃಹ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿತ್ತು. ಈ ಸಮಿತಿ, ಪೊಲೀಸರಿಗೆ ಸಮಕ್ಷಮ ಪ್ರಾಧಿಕಾರದ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಜನವರಿಯಲ್ಲಿ ವರದಿ ಸಲ್ಲಿಸಿತ್ತು. ಆದರೆ ಈ ವರದಿ ಕಾರ್ಯರೂಪಕ್ಕಿಳಿಸದ ಪರಿಣಾಮ ಹತ್ತರಲ್ಲಿ ಒಂಭತ್ತು ಎನ್ನುವಂತೆ ಸರ್ಕಾರದ ಕಡತಗಳ ರಾಶಿಯಲ್ಲಿ ಅದೂ ಸೇರಿತು.

 ನೇರವಾಗಿ ಕೇಸ್‌ ದಾಖಲಿಸಲು ಆಗುತ್ತಿಲ್ಲ!

ಹಣಕಾಸು ದುರ್ಬಳಕೆ ಹಾಗೂ ಅಧಿಕ ಲಾಭಾಂಶದ ಆಸೆ ತೋರಿಸಿ ಮೋಸ ಮಾಡುವ ಕಂಪನಿಗಳ ವಿರುದ್ಧ ಐಪಿಸಿ 420 (ವಂಚನೆ) ಹಾಗೂ 405 (ವಿಶ್ವಾಸದ್ರೋಹ) ಆರೋಪದಡಿ ಪೊಲೀಸರು ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತಾರೆ. ಎಫ್‌ಐಆರ್‌ ದಾಖಲಾದ ನಂತರ ಹೆಚ್ಚುವರಿಯಾಗಿ ಕೆಪಿಐಡಿ ಕಾಯ್ದೆಯನ್ನು ಉಲ್ಲೇಖಿಸುತ್ತಾರೆ. ಆದರೆ ಕಾನೂನು ಪ್ರಕಾರ ಕೆಪಿಐಡಿ ಕಾಯ್ದೆಯನ್ನು ಸಿಆರ್‌ಪಿಸಿ ಅಥವಾ ಐಪಿಸಿಯಡಿ ನೇರವಾಗಿ ಪೊಲೀಸರಿಗೆ ಹೂಡಲು ಬರುವುದಿಲ್ಲ. ಬಹುತೇಕ ವಂಚನೆ ಪ್ರಕರಣಗಳಲ್ಲಿ ಪೊಲೀಸರೇ ಕೆಪಿಐಡಿ ದಾಖಲಿಸುತ್ತಾರೆ. ಆನಂತರ ಸದರಿ ಕಂಪನಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ವರದಿ ಕಳುಹಿಸುತ್ತಾರೆ. ಅಲ್ಲಿಂದ ಕಂದಾಯ ಇಲಾಖೆ ಮುಂದಿನ ಕ್ರಮ ತೆಗೆದುಕೊಳ್ಳಬೇಕಿದೆ.

ಉದಾಹರಣೆಗೆ ಐಎಂಎ ವಂಚನೆ ಕೃತ್ಯ ಬೆಳಕಿಗೆ ಬಂದ ನಂತರ ದಾಖಲಾದ ಮೊದಲ ಎಫ್‌ಐಆರ್‌ನಲ್ಲಿ ಐಪಿಸಿ 420 ಮಾತ್ರ ನಮೂದಾಗಿತ್ತು. ಕೊನೆಗೆ ಸರ್ಕಾರದ ಸೂಚನೆ ಮೇರೆಗೆ ಕೆಪಿಐಡಿ ದಾಖಲಿಸಲಾಯಿತು. ಈ ರೀತಿ ಪ್ರಕರಣಗಳಲ್ಲಿ ಫಲಾನುಭವಿಗಳು ವಂಚಕ ಸಂಸ್ಥೆಗಳ ಠೇವಣಿದಾರರು ಎಂದೂ ರುಜುವಾತು ಮಾಡುವ ದಾಖಲೆಗಳು ಸಿಗುವುದಿಲ್ಲ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಅವು ಪತ್ತೆಯಾಗಿದೆ. ಹೀಗಾಗಿ ವಂಚನೆ ಪ್ರಕರಣಗಳಲ್ಲಿ ಆಸ್ತಿ ಜಪ್ತಿಗೆ ಕೆಪಿಐಡಿಗೆ ತಿದ್ದುಪಡಿ ತರುವುದು ಅಗತ್ಯವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ವರದಿ : ಗಿರೀಶ್‌ ಮಾದೇನಹಳ್ಳಿ

click me!