ತಾಯಿ, ತಂಗಿ, ಪತ್ನಿ ರೇಪ್‌ ಮಾಡ್ತೀನಿ ಅಂದಿದ್ದಕ್ಕೆ ಹತ್ಯೆ!

By Web DeskFirst Published Nov 29, 2018, 12:25 PM IST
Highlights

ಸೈಯದ್‌ ಇರ್ಫಾನ್‌ ಅಲಿಯಾಸ್‌ ಮಚ್ಚಿ ಇರ್ಫಾನ್‌ ಕೊಲೆ ಪ್ರಕರಣ ಸಂಬಂಧ ಮೃತನ ಸ್ನೇಹಿತ ಸೇರಿದಂತೆ ಐದು ಮಂದಿಯನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು[ನ.29]: ಕೆಲ ದಿನಗಳ ಹಿಂದೆ ಕ್ವೀನ್ಸ್‌ ವೃತ್ತದ ಸಮೀಪ ನಡೆದಿದ್ದ ಅಕ್ವೇರಿಯಂ ಮಾರಾಟಗಾರ ಸೈಯದ್‌ ಇರ್ಫಾನ್‌ ಅಲಿಯಾಸ್‌ ಮಚ್ಚಿ ಇರ್ಫಾನ್‌ ಕೊಲೆ ಪ್ರಕರಣ ಸಂಬಂಧ ಮೃತನ ಸ್ನೇಹಿತ ಸೇರಿದಂತೆ ಐದು ಮಂದಿಯನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿಯ ಬರ್ಕತ್‌ ಅಹಮ್ಮದ್‌ ಅಲಿಯಾಸ್‌ ಬರ್ಕತ್‌, ತಾವರೆಕೆರೆ ಸಮೀಪದ ಹೊನ್ನಗನಹಟ್ಟಿಗ್ರಾಮದ ಇಲಿಯಾಸ್‌ ಅಲಿಯಾಸ್‌ ಇಲ್ಲು, ಕೆ.ಜಿ.ಹಳ್ಳಿಯ ಮುಬಾರಕ್‌ ಅಲಿಯಾಸ್‌ ರೆಡ್ಡಿ, ಶೇಕ್‌ ಮೊಹಮ್ಮದ್‌ ಸಮಿ ಹಾಗೂ ಶಿವಾಜಿನಗರದ ಇರ್ಫಾನ್‌ ಷರೀಪ್‌ ಬಂಧಿತರು. ಆರೋಪಿಗಳಿಂದ ಮಾರಕಾಸ್ತ್ರ ಹಾಗೂ ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಹಣಕಾಸು ವಿಚಾರವಾಗಿ ನ.19 ರಂದು ರಾತ್ರಿ 11ರ ಸುಮಾರಿಗೆ ಮಚ್ಚಿ ಇರ್ಫಾನ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆರೋಪಿಗಳು ಕೊಂದು ಪರಾರಿಯಾಗಿದ್ದರು.

ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್ಸ್‌ಪೆಕ್ಟರ್‌ ಎಸ್‌.ತಬ್ರೇಜ್‌ ಹಾಗೂ ಪಿಎಸ್‌ಐ ಶೀಲಾ ನೇತೃತ್ವದ ತಂಡವು, ಮೃತನ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ವಿಚಾರಣೆ ನಡೆಸಿದ್ದರು. ಆಗ ಗುತ್ತಿಗೆದಾರ ಇರ್ಫಾನ್‌ ಷರೀಫ್‌ ಮತ್ತು ಮಚ್ಚಿ ಇರ್ಫಾನ್‌ ನಡುವಿನ ಹಣಕಾಸು ವಿವಾದ ಗೊತ್ತಾಗಿದೆ. ತಕ್ಷಣವೇ ಪೊಲೀಸರು, ಷರೀಫ್‌ನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಸತ್ಯ ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ರೇಪ್‌ ಮಾಡ್ತೀನಿ ಅಂದಿದ್ದಕ್ಕೆ ಹತ್ಯೆ!:

ಮೃತ ಸೈಯದ್‌ ಇರ್ಫಾನ್‌ ಅಲಿಯಾಸ್‌ ಮಚ್ಚಿ ಇರ್ಫಾನ್‌, ಶಿವಾಜಿನಗರದಲ್ಲಿ ಅಕ್ವೇರಿಯಂ ಮಾರಾಟ ಮಳಿಗೆ ಇಟ್ಟುಕೊಂಡಿದ್ದ. ಅಲ್ಲದೆ ಬಡ್ಡಿಗೆ ವ್ಯಾಪಾರಿಗಳು ಹಾಗೂ ಗುತ್ತಿಗೆದಾರರು ಸೇರಿದಂತೆ ಸಾರ್ವಜನಿಕರಿಗೆ ಆತ ಸಾಲ ನೀಡುತ್ತಿದ್ದ. ಕೆಲ ತಿಂಗಳ ಹಿಂದೆ ಶಿವಾಜಿನಗರದಲ್ಲಿ ಹೊಸ ಮನೆ ನಿರ್ಮಾಣಕ್ಕೆ ಯೋಜಿಸಿದ್ದ ಮಚ್ಚಿ ಇರ್ಫಾನ್‌, ಅದರ ಗುತ್ತಿಗೆಯನ್ನು ತನ್ನ ಪರಿಚಿತ ಗುತ್ತಿಗೆದಾರ ಇರ್ಫಾನ್‌ ಷರೀಫ್‌ಗೆ ಕೊಟ್ಟಿದ್ದ. ಈ ಸಲುವಾಗಿ ಮುಂಗಡವಾಗಿ .50 ಲಕ್ಷ ಹಣ ಕೊಟ್ಟಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಆದರೆ ಆ ಹಣದಲ್ಲಿ 10 ಲಕ್ಷವು ಶೇ.30 ರಷ್ಟುಬಡ್ಡಿಗೆ ಸಾಲ ರೂಪದಲ್ಲಿ ನೀಡಲಾಗಿತ್ತು. ಇತ್ತೀಚಿಗೆ ಈ ಹಣಕಾಸು ವಿಷಯವಾಗಿ ಅವರಿಬ್ಬರ ಮಧ್ಯೆ ಮನಸ್ತಾಪವಾಗಿತ್ತು. ತಾನು ಹೇಳಿದಂತೆ ಮನೆ ಕಟ್ಟಲಿಲ್ಲ ಹಾಗೂ ಸಕಾಲಕ್ಕೆ ಬಡ್ಡಿ ಕೊಡಲಿಲ್ಲ ಎಂದು ಕೆರಳಿದ್ದ ಮಚ್ಚಿ ಇರ್ಫಾನ್‌, ಬಡ್ಡಿ ಕೊಡದೆ ಹೋದರೆ ನಿನ್ನ ತಾಯಿ, ಪತ್ನಿ ಹಾಗೂ ತಂಗಿಯನ್ನು ರೇಪ್‌ ಮಾಡುವುದಾಗಿ ಷರೀಫ್‌ಗೆ ಬೆದರಿಸಿದ್ದ. ಅಲ್ಲದೆ ಹಲವು ಬಾರಿ ಆತನ ಮನೆ ಹತ್ತಿರ ಹೋಗಿ ಸಹ ಮಚ್ಚಿ ಇರ್ಫಾನ್‌ ಗಲಾಟೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಕುಟುಂಬದ ಮಹಿಳೆಯರ ಕುರಿತು ಹಗುರವಾಗಿ ಮಾತನಾಡಿದ್ದರಿಂದ ಕೆರಳಿದ ಷರೀಫ್‌, ಇರ್ಫಾನ್‌ ಹತ್ಯೆಗೆ ನಿರ್ಧರಿಸಿದ. ಅದರಂತೆ ತನ್ನ ಸ್ನೇಹಿತರಾದ ಬರ್ಕತ್‌, ಇಲಿಯಾಸ್‌, ಮುಬಾರಕ್‌ ಹಾಗೂ ಸಮಿ ಜತೆ ಆತ ಸಂಚು ರೂಪಿಸಿದ್ದ. ಕೊನೆಗೆ ಪೂರ್ವನಿಯೋಜಿತದಂತೆ ನ.19 ರಂದು ಆತನ ಸಂಚು ಕಾರ್ಯಗತಗೊಂಡಿತು.

ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರ ಪತ್ತೆಗೆ ತನಿಖೆ ಮುಂದುವರೆದಿದೆ. ಬನಶಂಕರಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ಬರ್ಕತ್‌ ಹಾಗೂ ನೆಲಮಂಗಲ ಠಾಣೆಯಲ್ಲಿ ಇಲಿಯಾಸ್‌ ರೌಡಿಶೀಟರ್‌ಗಳಾಗಿದ್ದಾರೆ. ಈ ಹಿಂದೆ ಬನಶಂಕರಿಯಲ್ಲಿ ನಡೆದಿದ್ದ ಬಿಬಿಎಂಪಿ ಸದಸ್ಯ ದಿವಾನ್‌ ಅಲಿ ಕೊಲೆ ಪ್ರಕರಣದಲ್ಲಿ ಬಕತ್‌ರ್‍ ಬಂಧಿತನಾಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!