'ಶ್ರೀ ಸಾಮಾನ್ಯನ ಅಧಿಕಾರ' ಪ್ರಶ್ನಿಸಿದ್ದ ಮೋದಿ, ಸೋನಿಯಾ!

By Web DeskFirst Published Jun 6, 2019, 11:30 AM IST
Highlights

ಆಧಾರ್‌ ಘೋಷಣೆ, ಬಣ್ಣದ ಬಗ್ಗೆ ನಿಲೇಕಣಿಗೆ ಮೋದಿ, ಸೋನಿಯಾ ಪ್ರಶ್ನೆ| ಪತ್ರಕರ್ತೆ ಸೋನಿಯಾ ಸಿಂಗ್‌ ಬರೆದಿರುವ ಗಣ್ಯ ನಾಯಕರ ಅನುಭವ ಕಥನವಿರುವ ಪುಸ್ತಕದಲ್ಲಿ ರೋಚಕ ಮಾಹಿತಿ!

ನವದೆಹಲಿ[ಜೂ.06]: ಆಧಾರ್‌ ಯೋಜನೆಗೆ ಸಂಬಂಧಿಸಿದಂತೆ ರೂಪಿಸಲಾಗಿದ್ದ ಘೋಷಣೆ ಕುರಿತು ಹಾಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾರ್ಡ್‌ ಮೇಲಿನ ಬಣ್ಣದ ಕುರಿತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನೆ ಮಾಡಿದ್ದರು ಎಂದು ಯೋಜನೆಯ ರೂವಾರಿ ನಂದನ್‌ ನಿಲೇಕಣಿ ಬಹಿರಂಗಪಡಿಸಿದ್ದಾರೆ.

ಪತ್ರಕರ್ತೆ ಸೋನಿಯಾ ಸಿಂಗ್‌ ಅವರು ಬರೆದಿರುವ ‘ಡಿಫೈನಿಂಗ್‌ ಇಂಡಿಯಾ ಥ್ರೂ ದೇರ್‌ ಐಯ್ಸ್’ ಎಂಬ ಗಣ್ಯ ನಾಯಕರ ಅನುಭವ ಕಥನವಿರುವ ಪುಸ್ತಕದಲ್ಲಿ ಈ ರೋಚಕ ಮಾಹಿತಿ ಇದೆ. ಈ ಬಗ್ಗೆ ಸ್ವತಃ ನಿಲೇಕಣಿ ಅವರು ಈ ರೀತಿ ಹೇಳಿಕೊಂಡಿದ್ದಾರೆ.

ಆಧಾರ್‌ ಯೋಜನೆಗೆ ಪ್ರತಿಪಕ್ಷವಾಗಿದ್ದ ಬಿಜೆಪಿಯ ವಿರೋಧವಿತ್ತು. ಹೀಗಾಗಿ ಪ್ರತಿಪಕ್ಷ ನಾಯಕರಾಗಿದ್ದ ಸುಷ್ಮಾ ಸ್ವರಾಜ್‌ ಹಾಗೂ ಅರುಣ್‌ ಜೇಟ್ಲಿ ಅವರನ್ನು ಭೇಟಿ ಮಾಡಿದೆ. ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವುದು ಸವಾಲಾಗಿತ್ತು. ಅವರನ್ನೂ ಭೇಟಿ ಮಾಡಿ ಯೋಜನೆ ಬಗ್ಗೆ ತಿಳಿಸಿದೆ. ಆಧಾರ್‌ ಯೋಜನೆಯಲ್ಲಿ ‘ಆಮ್‌ ಆದ್ಮಿ ಕಾ ಅಧಿಕಾರ್‌ (ಶ್ರೀಸಾಮಾನ್ಯನ ಅಧಿಕಾರ) ಎಂಬ ಘೋಷಣೆ ಇದೆ. ಆ ಕಾಲಕ್ಕೆ ಅದನ್ನು ಕಾಂಗ್ರೆಸ್‌ ಪಕ್ಷ ಬಳಸುತ್ತಿತ್ತು. ಮೋದಿ ಅವರನ್ನು ಭೇಟಿ ಮಾಡಿದಾಗ ‘ಕಾಂಗ್ರೆಸ್‌ ಘೋಷಣೆಯನ್ನೇಕೆ ಬಳಸಿದ್ದೀರಿ’ ಎಂದು ಕೇಳಿದರು ಎಂದು ನಿಲೇಕಣಿ ಹೇಳಿದ್ದಾರೆ.

ಆಧಾರ್‌ ಕಾರ್ಡ್‌ ಮೇಲೆ ಬಿಜೆಪಿಯ ಬಣ್ಣವನ್ನೇಕೆ ಬಳಸಿದ್ದೀರಿ ಎಂದು ಸೋನಿಯಾ ಗಾಂಧಿ ಪ್ರಶ್ನಿಸಿದ್ದರು. ಅದು ರಾಷ್ಟ್ರ ಧ್ವಜದ ಬಣ್ಣ ಎಂದು ಮನವರಿಕೆ ಮಾಡಿಕೊಟ್ಟಿದ್ದೆ ಎಂದು ಹೇಳಿದ್ದಾರೆ.

2014ರಲ್ಲಿ ಅಧಿಕಾರಕ್ಕೆ ಬಂದರೆ ಆಧಾರ್‌ ರದ್ದುಗೊಳಿಸುವುದಾಗಿ ಬಿಜೆಪಿ ಹೇಳಿತ್ತು. ಹೀಗಾಗಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅವರನ್ನು ಭೇಟಿ ಮಾಡಿ, ಆಧಾರ್‌ನಿಂದ ಆಗುವ ಲಾಭಗಳ ಬಗ್ಗೆ ವಿವರಿಸಿದೆ. ಬಾಂಗ್ಲಾದೇಶಿಗಳು ಆಧಾರ್‌ ಪಡೆದರೆ ಏನು ಮಾಡುವುದು ಎಂದು ಮೋದಿ ಪ್ರಶ್ನಿಸಿದ್ದರು. ಇದು ಪೌರತ್ವ ಸಂಖ್ಯೆ ಅಲ್ಲ. ಗುರುತಿನ ಸಂಖ್ಯೆ ಎಂದು ಅವರಿಗೆ ತಿಳಿಸಿದೆ. ಸರ್ಕಾರಿ ಯೋಜನೆಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸುವಾಗ ಸಾಕಷ್ಟುಹಣವನ್ನು ಈ ಯೋಜನೆ ಉಳಿಸುತ್ತದೆ. ಭ್ರಷ್ಟಾಚಾರ ತಗ್ಗುತ್ತದೆ ಎಂದು ವಿವರಿಸಿದೆ. ಆಗ ತೈಲ ಬೆಲೆ ದುಬಾರಿಯಾಗಿತ್ತು. ಸರ್ಕಾರ ಹಣ ಉಳಿಸಲು ಯತ್ನಿಸುತ್ತಿತ್ತು. ಬಳಿಕ ಮೋದಿ ಅವರೇ ಆಧಾರ್‌ ಯೋಜನೆಯ ಚಾಂಪಿಯನ್‌ ಆದರು ಎಂದು ನಿಲೇಕಣಿ ತಿಳಿಸಿದ್ದಾರೆ.

click me!