ಶಬರಿಮಲೆ: ಅ.16ರಂದು ಮಹಿಳೆ ಪ್ರವೇಶ ಖಚಿತ?

By Web DeskFirst Published Oct 10, 2018, 7:37 AM IST
Highlights

ಸಂಪ್ರದಾಯದ ಅನುಸಾರ ಸದ್ಯ ಮುಚ್ಚಿರುವ ಶಬರಿಮಲೆ ದೇವಾಲಯವು ಆಕ್ಟೋಬರ್‌ 16ರಂದು ತೆರೆಯಲಿದ್ದು, ಅಂದು ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ವೇದಿಕೆ ಸಜ್ಜಾದಂತಾಗಿದೆ.

ನವದೆಹಲಿ :  ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ 10ರಿಂದ 50 ವರ್ಷ ವಯೋಮಾನದ ಮಹಿಳೆಯರ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿದ್ದ ತನ್ನ ಆದೇಶದ ವಿರುದ್ಧ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಗಳ ತ್ವರಿತ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ದಸರಾ ರಜೆ ಮುಗಿಯುವವರೆಗೂ ವಿಚಾರಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಹೀಗಾಗಿ, ಸಂಪ್ರದಾಯದ ಅನುಸಾರ ಸದ್ಯ ಮುಚ್ಚಿರುವ ದೇವಾಲಯವು ಆಕ್ಟೋಬರ್‌ 16ರಂದು ತೆರೆಯಲಿದ್ದು, ಅಂದು ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ವೇದಿಕೆ ಸಜ್ಜಾದಂತಾಗಿದೆ. ಅಲ್ಲದೆ, ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೆಲವು ಅಯ್ಯಪ್ಪ ಭಕ್ತರ ಸಂಘಟನೆಗಳು ಈಗಾಗಲೇ ಎಚ್ಚರಿಕೆ ನೀಡಿದ್ದು, ಅಂದು ಮಹಿಳಾ ಪ್ರವೇಶಾರ್ಥಿಗಳು ಹಾಗೂ ಪ್ರವೇಶ ವಿರೋಧಿಗಳ ನಡುವೆ ‘ಬಲಪ್ರದರ್ಶನ’ ಏರ್ಪಡುವ ಸಾಧ್ಯತೆ ಇದೆ.

ಮುಖ್ಯ ನ್ಯಾಯಾಧೀಶ ರಂಜನ್‌ ಗೊಗೋಯ್‌, ನ್ಯಾ. ಸಂಜಯ್‌ ಕಿಶನ್‌ ಕೌಲ್‌ ಹಾಗೂ ನ್ಯಾ. ಕೆ.ಎಂ. ಜೋಸೆಫ್‌ ಅವರ ಪೀಠದ ಮುಂದೆ ಮಂಗಳವಾರ ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘ ಸಲ್ಲಿಸಿರುವ ಅರ್ಜಿಯು ವಿಚಾರಣೆಗೆ ಬಂತು. ಈ ವೇಳೆ ಪ್ರತಿಕ್ರಿಯೆ ನೀಡಿದ ಪೀಠ, ‘ಸೂಕ್ತ ಸಂದರ್ಭದಲ್ಲಿ ಅರ್ಜಿಯನ್ನು ವಿಚಾರಣೆಗೆ ಪಟ್ಟಿಮಾಡಲಾಗುವುದು’ ಎಂದು ಹೇಳಿತು.

ಅಲ್ಲದೆ, ‘ಇದು ಮರುಪರಿಶೀಲನಾ ಅರ್ಜಿಯಾಗಿರುವ ಕಾರಣ ಇದರ ಮುಕ್ತ ವಿಚಾರಣೆ ನಡೆಯುವುದಿಲ್ಲ. ಬದಲಾಗಿ, ನ್ಯಾಯಾಧೀಶರ ಚೇಂಬರ್‌ನಲ್ಲೇ ವಿಚಾರಣೆ ನಡೆಸಲಾಗುವುದು’ ಎಂದು ಪೀಠ ಹೇಳಿತು.

ಅರ್ಜಿದಾರ ವಕೀಲ ಮ್ಯಾಥ್ಯೂಸ್‌ ಜೆ. ನೆಡುಂಪಾರ ವಾದ ಮಂಡಿಸಿ, ‘ದೇವಾಲಯವು ಅಕ್ಟೋಬರ್‌ 16ರಂದು ತೆರೆಯಲಿದೆ. ಹೀಗಾಗಿ ಹಾಲಿ ಆದೇಶಕ್ಕೆ ತಡೆ ಕೊಡಿ’ ಎಂದು ಕೋರಿದರು. ಆದರೆ ಇದಕ್ಕೆ ಅನುವು ಮಾಡಿಕೊಡದ ನ್ಯಾಯಪೀಠ, ‘ದಸರಾ ರಜೆಯ ನಂತರವಷ್ಟೇ (ಅ.19ರ ನಂತರ) ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿದೆ’ ಎಂದರು.

click me!