ನೋಟು ರದ್ದು: 7 ಕ್ಷೇತ್ರಗಳ ಮೇಲೆ ಏನು ಪರಿಣಾಮ?

By Suvarna Web DeskFirst Published Nov 8, 2017, 11:00 AM IST
Highlights

* ಡೆಬಿಟ್ ಕಾರ್ಡ್ ಬಳಕೆ ಶೇ.165 ಏರಿಕೆ; ತೆರಿಗೆದಾರರು ಹೆಚ್ಚಳ

* ಶೇ.7.6ರಿಂದ ಶೇ.5.7ಕ್ಕೆ ಇಳಿಯಿತು ಅಭಿವೃದ್ಧಿ ದರ

* ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗೆ ಕಡಿವಾಣ

* ಮನೆಗಳ ಮಾರಾಟ ಮೌಲ್ಯ ಶೇ.44ರಷ್ಟು ಇಳಿಕೆ

ಬೆಂಗಳೂರು(ನ. 08): ಕಳೆದ ವರ್ಷ ನ.8ರಂದು ನೋಟು ಅಪನಗದೀಕರಣ ಘೋಷಣೆ ಯಾವೆಲ್ಲಾ ಪರಿಣಾಮಗಳನ್ನು ಬೀರಿತು? ಏನೆಲ್ಲಾ ಬದಲಾವಣೆಗಳಾದವು? ಇದರಿಂದಾದ ಧನಾತ್ಮಕ ಸಂಗತಿಗಳೇನು? ನಕಾರಾತ್ಮಕ ಅಂಶಗಳೇನು ಎಂಬ ಕುರಿತಾದ ಮಾಹಿತಿಗಳು ಇಲ್ಲಿವೆ.

1) ಕ್ಯಾಷ್‌ಲೆಸ್ ವಹಿವಾಟು ಭಾರೀ ಏರಿಕೆ:
ನೋಟ್‌'ಬಂದಿಯಿಂದ ನಗದಿನ ಕೊರತೆ ಉಂಟಾಗಿ ಜನರು ಡಿಜಿಟಲ್ ವಹಿವಾಟಿನ ಮೊರೆ ಹೋದರು. ಜನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಇ-ವಾಲೆಟ್ ಬಳಸತೊಡಗಿದರು. ಪಾಯಿಂಟ್ ಆಫ್ ಸೇಲ್ ಯಂತ್ರಗಳಿಗೆ ಬೇಡಿಕೆ ಹೆಚ್ಚಾಯಿತು. ಡಿಜಿಟಲ್ ವಹಿವಾಟನ್ನು ಉತ್ತೇಜಿಸುವ ಸಲುವಾಗಿಯೇ ಸರ್ಕಾರ ಭೀಮ್ ಮತ್ತು ಯುಪಿಐ ಆ್ಯಪ್‌ಗಳನ್ನು ಪರಿಚಯಿಸಿತು. ತಕ್ಷಣವೇ ಹಣ ರವಾನೆ ಮಾಡುವ ಭೀಮ್ ಆ್ಯಪ್‌ಅನ್ನು 1.5 ಕೋಟಿಗೂ ಹೆಚ್ಚು ಮಂದಿ ಡೌನ್‌'ಲೋಡ್ ಮಾಡಿಕೊಂಡಿದ್ದಾರೆ. ಪೇಟಿಎಂ ಆ್ಯಪ್ ಜನಪ್ರಿಯವಾಯಿತು. ಮೊಬೈಲ್ ಬ್ಯಾಂಕಿಂಗ್ ಶೇ.200ರಷ್ಟು ಏರಿಕೆ ಕಂಡಿದೆ. ಡೆಬಿಟ್ ಮತ್ತು ಕ್ರೆಡಿಟ್‌'ಕಾರ್ಡ್ ಬಳಕೆ ಕ್ರಮವಾಗಿ ಶೇ. 165 ಮತ್ತು ಶೇ.45ರಷ್ಟು ಏರಿಕೆಯಾಗಿದೆ. 2016ರ ನವೆಂಬರ್‌'ವರೆಗೆ 2.8 ಲಕ್ಷ ಡಿಜಿಟಲ್ ವಹಿವಾಟಿನ ಮೂಲಕ 101 ಕೋಟಿ ರು ಹಣ ವರ್ಗ ಆದರೆ, 2017 ಮಾರ್ಚ್ ವೇಳೆಗೆ 63.8 ಲಕ್ಷ ಡಿಜಿಟಲ್ ವಹಿವಾಟಿನ ಮೂಲಕ 2,425 ಕೋಟಿ ರು. ವರ್ಗ ಮಾಡಲಾಗಿದೆ. ತೆರಿಗೆದಾರರ ಸಂಖ್ಯೆಯೂ ಏರಿದೆ.

2) ಜಿಡಿಪಿ ಕುಸಿದು ತಲೆ ಕೆಳಗಾಯಿತು ಲೆಕ್ಕಾಚಾರ:
ಅಪನಗದೀಕರಣದ ಬಳಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ದರ 2015-16ರಲ್ಲಿ ಇದ್ದ ಶೇ.7.6ರಿಂದ 2017-18ರ ಮೊದಲ ತ್ರೈಮಾಸಿಕದ ಅವಧಿಯಲ್ಲಿ ಶೇ.5.7ಕ್ಕೆ ಇಳಿಯಿತು. ಜಿಡಿಪಿಯಲ್ಲಿ ಶೇ.1ರಷ್ಟು ಕುಸಿತವಾದರೂ ಭಾರತದ ಆರ್ಥಿಕತೆಗೆ 1.54 ಲಕ್ಷ ಕೋಟಿ ರು. ನಷ್ಟ ಉಂಟಾಗುತ್ತದೆ. ಆದರೆ, ಅಪನಗದೀಕರಣದ ಬಳಿಕ ಜಿಡಿಪಿ ಶೇ.2ರಷ್ಟು ಇಳಿಕೆ ದಾಖಲಿಸಿದೆ. ಇದರಿಂದ ಮೋದಿ ಸರ್ಕಾರ ವಿಪಕ್ಷಗಳಿಂದ ಭಾರೀ ಟೀಕೆಗೆ ಗುರಿಯಾಯಿತು. ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನಿಸಿದ ಭಾರತ ಇದೀಗ ಚೀನಾಕ್ಕಿಂತಲೂ ಹಿಂದೆಬಿದ್ದಿದೆ. ಭಾರತದ ಜಿಡಿಪಿ ಮೂರು ವರ್ಷದಲ್ಲಿಯೇ ಕನಿಷ್ಠ ದರ ದಾಖಲಿಸಿದೆ. ಹೀಗಾಗಿ ಅಪನಗದೀಕರಣದಿಂದ ಅಲ್ಪಾವಧಿಗೆ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂಬ ಆರ್ಥಿಕ ತಜ್ಞರ ಲೆಕ್ಕಾಚಾರ ನಿಜವಾಗಿದೆ. ಆದರೆ ದೀರ್ಘಾವಧಿಯಲ್ಲಿ ಅಪನಗದೀಕರಣದಿಂದ ಧನಾತ್ಮಕ ಪರಿಣಾಮ ಉಂಟಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

3) ಉಗ್ರರು, ನಕ್ಸಲರಿಗೆ ಸಿಗುತ್ತಿದ್ದ ಹಣಕ್ಕೆ ಬ್ರೇಕ್:
ಅಪನಗದೀಕರಣ ಘೋಷಣೆಯ ಉದ್ದೇಶ ಕಪ್ಪುಹಣವನ್ನು ನಿಗ್ರಹಿಸುವುದು ಮಾತ್ರವಲ್ಲ, ಉಗ್ರಗಾಮಿಗಳ ಕೈಗೆ ಹಣ ಸಿಗದಂತೆ ನೋಡಿಕೊಳ್ಳುವುದೂ ಆಗಿತ್ತು. ಏಕೆಂದರೆ ಹವಾಲಾ ದಂಧೆಯ ಮೂಲಕ ಉಗ್ರರಿಗೆ ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಹಣ ಪೂರೈಕೆಯಾಗುತ್ತಿತ್ತು. ಪಾಕ್‌'ನಿಂದ ಬರುತ್ತಿದ್ದ ನಕಲಿ ನೋಟುಗಳನ್ನು ಉಗ್ರರು ಚಲಾವಣೆ ಮಾಡುತ್ತಿದ್ದರು. ಅಪನಗದೀಕರಣದ ಬಳಿಕ ಉಗ್ರರಿಗೆ ಪಾಕ್'ನಿಂದ ಬರುತ್ತಿದ್ದ ಹಣ ಬಹುತೇಕ ನಿಂತು ಹೋಯಿತು. ಉಗ್ರರಿಗೆ ಡಿಜಿಟಲ್ ಮಾರ್ಗದ ಮೂಲಕ ಹಣ ಪೂರೈಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದವು. ಆದರೆ, ಇದಕ್ಕೆ ಪುರಾವೆಗಳು ಲಭ್ಯವಾಗಿಲ್ಲ. ಜೊತೆಗೆ ಕಾಶ್ಮೀರದಲ್ಲಿ ಹಿಂಸಾತ್ಮಕ ಚಟುವಟಿಕೆ ನಡೆಸಲು ಯುವಕರಿಗೆ ಹಣ ನೀಡುವ ದಂಧೆಗೂ ಕಡಿವಾಣ ಬಿತ್ತು.

ನಕ್ಸಲರಿಗೆ ಭಾರೀ ಹೊಡೆತ: ನೋಟು ರದ್ದತಿ ನಕ್ಸಲರ ಚಟುವಟಿಕೆಗೂ ಕಡಿವಾಣ ಹಾಕಿತು. ಹಳೆಯ ನೋಟುಗಳನ್ನು ಬಚ್ಚಿಟ್ಟುಕೊಂಡಿದ್ದ ನಕ್ಸಲರಿಗೆ ಅವು ಪ್ರಯೋಜನಕ್ಕೆ ಬಾರದಂತೆ ಆದವು. ತಮ್ಮಲ್ಲಿರುವ ಕಪ್ಪುಹಣವನ್ನು ಬ್ಯಾಂಕಿಗೆ ಮರಳಿಸಿ ಹೊಸ ನೋಟುಗಳನ್ನು ಪಡೆಯುವುದು ಸಾಧ್ಯವಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಕ್ಸಲರು ಶರಣಾಗತರಾಗಬೇಕಾಯಿತು. ಅಪನಗದೀಕರಣದ ಬಳಿಕ 700ಕ್ಕೂ ಹೆಚ್ಚು ನಕ್ಸಲರು ಶರಣಾಗತರಾದರು. ನಕ್ಸಲರು ಬಚ್ಚಿಟ್ಟಿದ್ದ ಹಳೆಯ ನೋಟುಗಳು ಪತ್ತೆಯಾದವು.

4) ರಿಯಲ್ ಎಸ್ಟೇಟ್ ಉದ್ಯಮಕ್ಕೆ ನಷ್ಟ:
ನೋಟು ಅಪನಗದೀಕರಣದ ನೇರ ಪರಿಣಾಮ ಉಂಟಾಗಿದ್ದು ರಿಯಲ್ ಎಸ್ಟೇಟ್ ಉದ್ಯಮದ ಮೇಲೆ. ಜನರಿಗೆ ಆಸ್ತಿ, ಜಮೀನು, ಮನೆಗಳನ್ನು ಖರೀದಿಸಲು ಹಣದ ಕೊರತೆ ಎದುರಾಯಿತು. ಗೃಹ ನಿರ್ಮಾಣ ಚಟುವಟಿಕೆಗಳಿಗೆ ಹಿನ್ನಡೆಯಾದವು. ಹೀಗಾಗಿ ರಿಯಲ್ ಎಸ್ಟೇಟ್ ಉದ್ಯಮ ಕುಸಿತ ಅನುಭವಿಸಿತು. 2016ರಲ್ಲಿ ಶೇ.-9ರಷ್ಟು ಕುಸಿತ ಕಂಡಿದ್ದ ರಿಯಲ್ ಎಸ್ಟೇಟ್ ಉದ್ಯಮ, ಅಪನಗದೀಕರಣದ ಬಳಿಕ ನಾಲ್ಕನೇ ತ್ರೈಮಾಸಿಕ (ಜನವರಿಯಿಂದ ಮಾರ್ಚ್) ಅವಧಿಯಲ್ಲಿ ಮಾರಾಟ ಮೌಲ್ಯ ಶೇ.44ರಷ್ಟು ಇಳಿಕೆ ದಾಖಲಿಸಿತು. ಹೊಸ ಯೋಜನೆಗಳ ಘೋಷಣೆ ಶೇ.66ರಷ್ಟು ಭಾರೀ ಕುಸಿತ ಅನುಭವಿಸಿತು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬಳಕೆಯಲ್ಲಿದ್ದ ಕಪ್ಪು ಹಣದ ಹರಿವಿಗೆ ಕಡಿವಾಣ ಬಿದ್ದು, ಪಾರದರ್ಶಕ ವ್ಯವಹಾರ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ಕೂಡ ರಿಯಲ್ ಎಸ್ಟೇಟ್ ಉದ್ಯಮದ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಮನೆ ದರಗಳು, ಗೃಹಸಾಲ ಬಡ್ಡಿ ಇಳಿಯಿತು.

5) ನಕಲಿ ನೋಟಿಗೆ ಬಿತ್ತು ಕಡಿವಾಣ:
ನೋಟು ರದ್ದು ಘೋಷಣೆ ಕಪ್ಪುಹಣವನ್ನು ಮಟ್ಟಹಾಕುವುದಷ್ಟೇ ಅಲ್ಲ, ನಕಲಿ ನೋಟುಗಳ ಮೇಲಿನ ಸರ್ಜಿಕಲ್ ಸ್ಟ್ರೈಕ್ ಎಂದೇ ಹೇಳಲಾಗಿತ್ತು. ನೋಟ್ ರದ್ದತಿಗೂ ಮುನ್ನ 500 ರು. ಮತ್ತು 1000 ರು. ನಕಲಿ ನೋಟುಗಳು ಎಲ್ಲೆಂದರಲ್ಲಿ ಹರಿದಾಡುತ್ತಿದ್ದವು. ಅಪನಗದೀಕರಣದ ಬಳಿಕ 19.53 ಕೋಟಿ ರು. ಮೌಲ್ಯದ ನಕಲಿ ನೋಟುಗಳನ್ನು ಪತ್ತೆಮಾಡಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗವು ನೋಟು ರದ್ದತಿ ಬಳಿಕ 2017 ಜು.14ರವರೆಗೆ 11.23 ಕೋಟಿ ರು. ನಕಲಿ ನೋಟು ಪತ್ತೆಹಚ್ಚಿದೆ. ಪಾಕಿಸ್ತಾನ ಗುಪ್ತಚರ ಸಂಸ್ಥೆಯ ನೋಟು ಮುದ್ರಣಾಲಯದಲ್ಲಿ ಭಾರತದ 500 ರು. ಮತ್ತು 1000 ರು. ನಕಲಿ ನೋಟು ಮುದ್ರಿಸಲಾಗುತ್ತಿತ್ತು. ಇವು ಹವಾಲಾ ಮೂಲಕ ಭಾರತದ ಬ್ಯಾಂಕ್ ನೋಟುಗಳೊಂದಿಗೆ ಚಲಾವಣೆ ಆಗುತ್ತಿದ್ದವು. ನೋಟು ರದ್ದತಿ ಬಳಿಕ ನಕಲಿ ನೋಟುಗಳನ್ನು ಬ್ಯಾಂಕ್‌'ಗೆ ಹಿಂದಿರುಗಿಸುವುದು ಸಾಧ್ಯವಿಲ್ಲದ ಕಾರಣ ಅವುಗಳನ್ನು ನಾಶಪಡಿಸಿದ ಬಗ್ಗೆಯೂ ವರದಿಗಳು ಬಂದಿವೆ.

6) ಚುನಾವಣೆಗಳ ಮೇಲೆ ಅಷ್ಟೇನೂ ಪರಿಣಾಮವಿಲ್ಲ:
ಅಪನಗದೀಕರಣ ಘೋಷಣೆ ಕೇವಲ ಜನಸಾಮಾನ್ಯರಿಗಷ್ಟೇ ಅಲ್ಲ ರಾಜಕೀಯ ಪಕ್ಷಗಳಿಗೂ ಸವಾಲಿನ ವಿಷಯವಾಗಿತ್ತು. 2017ರ ಫೆಬ್ರವರಿಯಲ್ಲಿ ಮಹತ್ವದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ, ಮಣಿಪುರ ರಾಜ್ಯಗಳ ಚುನಾವಣೆ ಎದುರಾಗುವುದಿತ್ತು. ನೋಟು ರದ್ದತಿಗೂ ಮುನ್ನ ಬಹುತೇಕ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. 20 ಕೋಟಿಗೂ ಅಧಿಕ ಜನಸಂಖ್ಯೆ ಇರುವ ಉತ್ತರ ಪ್ರದೇಶ ಚುನಾವಣೆ ಬಿಜೆಪಿ ಪಾಲಿಗೆ ಅಗ್ನಿಪರೀಕ್ಷೆಯಾಗಿತ್ತು. ವಿಪಕ್ಷಗಳು ನೋಟು ರದ್ದತಿಯನ್ನೇ ಚುನಾವಣಾ ಅಸ್ತ್ರವನ್ನಾಗಿ ಪ್ರಯೋಗಿಸಿದವು. ಆದರೆ, ಅಪನಗದೀಕರಣವು ಚುನಾವಣೆಯ ಮೇಲೆ ಅಷ್ಟೇನೂ ಮಹತ್ವದ ಪರಿಣಾಮವನ್ನು ಬೀರಲಿಲ್ಲ. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು.

7) ಕೃಷಿ ಚಟುವಟಿಕೆಗಳಿಗೆ ಹಿನ್ನಡೆ; ಕೂಲಿಗೂ ತತ್ವಾರ:
ಭಾರತೀಯ ಕೃಷಿ ವಲಯ ನಗದು ವ್ಯವಹಾರದ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ನವೆಂಬರ್‌'ನಲ್ಲಿ ಅಪನಗದೀಕರಣ ಘೋಷಣೆ ಮಾಡಿದ್ದರಿಂದ ಹಿಂಗಾರು ಬೆಳೆಗಳಿಗೆ ಬೀಜ, ರಸಗೊಬ್ಬರ, ಕೀಟನಾಶಕ, ಕೃಷಿ ಉಪಕರಣಗಳನ್ನು ಖರೀದಿಸಲು ರೈತರಿಗೆ ನಗದಿನ ಕೊರತೆ ಎದುರಾಯಿತು. ಹಲವೆಡೆ ರೈತರು ಅಪನಗದೀಕರಣದ ವಿರುದ್ಧ ಪ್ರತಿಭಟನೆಗಳನ್ನು ಮಾಡಿದರು. ಜಿಲ್ಲಾ ಸಹಕಾರಿ ಕೇಂದ್ರೀಯ ಬ್ಯಾಂಕುಗಳಲ್ಲಿ ಹಳೆಯ ನೋಟುಗಳ ಸ್ವೀಕಾರಕ್ಕೆ ರಿಸರ್ವ್ ಬ್ಯಾಂಕ್ ನಿಯಂತ್ರಣ ಹೇರಿದ್ದರ ವಿರುದ್ಧ ರೈತರು ಕಿಡಿಕಾರಿದರು. ಕೃಷಿ ಕಾರ್ಮಿಕರಿಗೆ ದಿನಗೂಲಿ ನೀಡಲು 100, 500 ರು. ನೋಟುಗಳ ಕೊರತೆ ಉಂಟಾಯಿತು. ನಂತರ ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಹಣ ಸಿಗಲು ಆರಂಭವಾದ ಬಳಿಕ ಕೃಷಿಕರ ಮೇಲಿನ ಒತ್ತಡ ಕಡಿಮೆಯಾಯಿತು.

ಕನ್ನಡಪ್ರಭ ವಾರ್ತೆ
epaperkannadaprabha.com

click me!