ಭಾರತ ಮಾತೆಯ ವೀರಪುತ್ರ ಭಗತ್ ಸಿಂಗ್ 111ನೇ ಜನ್ಮ ಜಯಂತಿ!

By Web DeskFirst Published Sep 28, 2018, 12:13 PM IST
Highlights

ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ 111ನೇ ಹುಟ್ಟುಹಬ್ಬ! ಮಹಾನ್ ಕ್ರಾಂತಿಕಾರಿಯನ್ನು ನೆನೆದ ದೇಶ! ಭಗತ್ ಸಿಂಗ್ ಜನ್ಮ ಜಯಮತಿ ಅಂಗವಾಗಿ ಪ್ರಧಾನಿ ಮೋದಿ ಟ್ವೀಟ್! ಭಗತ್ ಸಿಂಗ್ ಆದರ್ಶ ಸದಾಕಾಲಕ್ಕೂ ಭಾರತೀಯರಿಗೆ ಆದರ್ಶ      

ನವದೆಹಲಿ(ಸೆ.28): ‘ಮೇರಾ ರಂಗ್ ದೇ ಬಸಂತಿ ಚೋಲಾ..’ ಎಂದು ಹಾಡು ಹಾಡುತ್ತಾ, ಎದೆಯುಬ್ಬಿಸಿ ಆ ಮೂವರು ಯುವಕರು ಗಲ್ಲುಗಂಬ ಏರಿದಾಗ ಇಡೀ ದೇಶ ಅವರೊಂದಿಗೆ ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆ ಕೂಗಿತ್ತು. ಭಾರತ ಮಾತೆಯ ದಾಸ್ಯದ ಸಂಕೋಲೆಗಳನ್ನು ತೊಡೆದು ಹಾಕಲು ಆ ಮೂವರು ಯುವಕರು ಗಲ್ಲು ಹಗ್ಗಕ್ಕೆ ಮುತ್ತಿಟ್ಟಾಗಲೂ ದೇಶ ಅದೇ ಘೋಷಣೆ ಮೊಳಗಿಸಿತ್ತು. ‘ಇಂಕ್ವಿಲಾಬ್ ಜಿಂದಾಬಾದ್’.

1931 ಮಾರ್ಚ್ 31 ರಂದು ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿದ ಆ ಮೂವರು ಮಹಾನ್ ಕ್ರಾಂತಿಕಾರಿಗಳ ಪೈಕಿ ಓರ್ವನಾದ ಭಗತ್ ಸಿಂಗ್ ಗೆ ಇಂದು 111ನೇ ಹುಟ್ಟುಹಬ್ಬ.  ಈ ಮಹಾನ್ ಕ್ರಾತಿಕಾರಿಯ ಜೀವನ ಚರಿತ್ರೆ ಕುರಿತು ಇಲ್ಲಿದೆ ಮಾಹಿತಿ.

ಭಾರತದ ಕ್ರಾಂತಿಕಾರಿ ಚಳವಳಿಯ ಧ್ರುವತಾರೆ ಭಗತ್ ಸಿಂಗ್ ಅವರಿಗೆ ಇಂದು ಭರ್ತಿ 111 ವರ್ಷ. ಕೇವಲ ತಮ್ಮ 23ನೇ ವಯಸ್ಸಿನಲ್ಲೇ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಈ ಮಹಾನ್ ಸಮಾಜವಾದಿ ಕ್ರಾಂತಿಕಾರಿ, ಭಾರತದ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದವರು.

ಹುಟ್ಟು:

1907, ಸೆ.28 ರಂದು ಪಂಜಾಬ್ ನ ಲ್ಯಾಲ್ ಪುರ್ ಜಿಲ್ಲೆಯ ಭಂಗಾ ಗ್ರಾಮದಲ್ಲಿ ಸರ್ದಾರ್ ಕಿಶನ್ ಸಿಂಗ್ ಸಂಧು ಮತ್ತು ವಿದ್ಯಾವತಿ ಅವರ ಹಿರಿಯ ಪುತ್ರನಾಗಿ ಭಗತ್ ಸಿಂಗ್ ಜನಿಸಿದರು. ಚಿಕ್ಕಂದಿನಿಂದಲೇ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಮೈಗೂಡಿಸಿಕೊಂಡಿದ್ದ ಭಗತ್ ಸಿಂಗ್, ಮುಂದೆ ದಯಾನಂದ್ ಆಂಗ್ಲೋ-ವೇದಿಕ್ ಸ್ಕೂಲ್, ನ್ಯಾಶನಲ್ ಕಾಲೇಜ್, ಲಾಹೋರ್ ನ್ಯಾಶನಲ್ ಕಾಲೇಜಿನಲ್ಲಿ ಅಭ್ಯಾಸ ಮಾಡಿದರು. ಭಗತ್ ಸಿಂಗ್ ಅವರ ತಂದೆ ಕೂಡ ಸ್ವಾತಂತ್ರ್ಯ ಹೋರಾಟಗಾರರು. ಅಲ್ಲದೇ ಅವರ ಚಿಕ್ಕಪ್ಪ ಕೂಡ ಓರ್ವ ಕ್ರಾಂತಿಕಾರಿ.

 

ಹೆಚ್‌ಆರ್‌ಎ ಸೇರ್ಪಡೆ:

ನ್ಯಾಶನಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಭಗತ್ ಸಿಂಗ್ ದ್ರಶೇಖರ್ ಆಜಾದ್ ಅವರ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ ಸೇರಿ ಕ್ರಾಂತಿಕಾರಿ ಚಳವಳಿಯಲ್ಲಿ ಭಾಗವಹಿಸಿದರು. ಅಷ್ಟೇ ಅಲ್ಲ ಹೆಚ್‌ಆರ್‌ಎ ಅನ್ನು ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ಎಂದು ಮರು ನಾಮಕರಣ ಮಾಡಿದವರೂ ಭಗತ್ ಸಿಂಗ್ ಅವರೇ.

ಸ್ಯಾಂಡರ್ಸ್ ಹತ್ಯೆ:

ಮುಂದೆ ಸೈಮನ್ ಕಮೀಷನ್ ಭಾರತ ಪ್ರವೇಶಿಸಿ ನಡೆದ ಹೋರಾಟದಲ್ಲಿ ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರ ಮೇಲೆ ಪೊಲಿಸರು ಲಾಠಿ ಪ್ರಹಾರ ನಡೆಸಿದ್ದರು. ತೀವ್ರ ಏಟಿನಿಂದ ಲಾಲಾ ಲಜಪತ್ ರಾಯ್  ಇಹಲೋಕ ತ್ಯಜಿಸಿದರು. ಲಾಲಾ ಹತ್ಯೆಗೆ ಪ್ರತೀಕಾರವಾಗಿ ಸ್ಯಾಂಡರ್ಸ್ ಎಂಬ ಬ್ರಿಟೀಷ್ ಅಧಿಕಾರಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಗುಂಡಿಟ್ಟು ಹತ್ಯೆಗೈದ ಕ್ರಾಂತಿಕಾರಿಗಳಲ್ಲಿ ಪ್ರಮುಖರು ಭಗತ್ ಸಿಂಗ್, ಆಜಾದ್, ರಾಜಗುರು.

ಕಿವುಡನಿಗೆ ಕೇಳಿಸಲು ಜೋರು ಶಬ್ಧ ಮಾಡಲೇಬೇಕು:

1928 ರಲ್ಲಿ ಬ್ರಿಟೀಷ್ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಕಾರ್ಮಿಕ ಕಾನೂನು ಮತ್ತು ಇತರ ಜನವಿರೋಧಿ  ಕಾನೂನುಗಳನ್ನು ವಿರೋಧಿಸಿ ಭಗತ್ ಸಿಂಗ್ ಮತ್ತವರ ಸಂಗಡಿಗ ಭಟುಕೇಶ್ವರ್ ದತ್ ಸಂಸತ್ತಿನಲ್ಲಿ ಬಾಂಬ್ ಎಸೆದು ಶರಣಾದರು.

ಗಲ್ಲು ಹಗ್ಗಕ್ಕೆ ಮುತ್ತಿಟ್ಟ ವೀರರು:

ಅದರಂತೆ ಸುದೀರ್ಘ  ವಿಚಾರಣೆ ನಡೆದು ಸ್ಯಾಂಡರ್ಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 1931 ಮಾರ್ಚ್ 31 ರಂದು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಅಂದು ಇಡೀ ದೇಶ ಭಗತ್ ಸಿಂಗ್ ಮತ್ತು ಅವರ ಸಂಗಡಿಗರಿಗಾಗಿ ಕಂಬನಿ ಮಿಡಿದಿತ್ತು.

ಆದರೆ ಈ ಮೂವರು ಯುವ ಕ್ರಾಂತಿಕಾರಿಗಳ ಆದರ್ಶ, ಅವರು ತೋರಿಸಿಕೊಟ್ಟ ದಾರಿ ಇಂದಿಗೂ ಕೋಟ್ಯಾಂತರ ಭಾರತೀಯರಿಗೆ ದಾರಿದೀಪವಾಗಿದ್ದು, ಭಗತ್ ಸಿಂಗ್ ಮತ್ತವರ ಸಂಗಡಿಗರನ್ನು ಭಾರತ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.

शहीद-ए-आजम भगत सिंह को उनकी जयंती पर शत्-शत् नमन।

Shaheed Bhagat Singh's valour motivates millions of Indians across generations. I bow to this proud son of India on his Jayanti and join my fellow citizens in remembering his heroic deeds that contributed to India’s freedom.

— Narendra Modi (@narendramodi)

ಇನ್ನು ಭಗತ್ ಸಿಂಗ್ ಅವರ 111ನೇ ಜನ್ನ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಮಹಾನ್ ಕ್ರಾಂತಿಕಾರಿಯನ್ನು ನೆನೆದಿದ್ದಾರೆ. ಭಗತ್ ಸಿಂಗ್ ಅವರ ಆದರ್ಶ ಎಲ್ಲಾ ಕಾಲದಲ್ಲಿಯೂ ಭಾರತೀಯರಿಗೆ ದಾರಿದೀಪವಾಗಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

The great revolutionary and freedom fighter . 111 yrs aftr his birth he continues to inspire generations of Indians. 🇮🇳 pic.twitter.com/h59o0wfcy1

— Rajeev Chandrasekhar (@rajeev_mp)

ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಕೂಡ ಭಗತ್ ಸಿಂಗ್ ಜನ್ಮ ಜಯಮತಿಗೆ ಶುಭಾಷಯ ತಿಳಸಿದ್ದು, ಭಗತ್ ಸಿಂಗ್ ಈ ದೇಶ ಕಂಡ ಮಹಾನ್ ಕ್ರಾಂತಿಕಾರಿ ಎಂದು ಬಣ್ಣಿಸಿದ್ದಾರೆ.

ಭಗತ್ ಸಿಂಗ್ ಅಮರ್ ರಹೇ...ಇಂಕ್ವಿಲಾಬ್ ಜಿಂದಾಬಾದ್...

click me!