
ಜಾಗತಿಕ ಶ್ರೀಮಂತರ ನೂತನ ಪಟ್ಟಿ ಬಿಡುಗಡೆಯಾಗಿದ್ದು, ಅತೀ ಹೆಚ್ಚು ಬಿಲಿಯನರ್’ಗಳನ್ನು ಹೊಂದಿರುವ ಪಟ್ಟಿಯಲ್ಲಿ ಭಾರತವು ಜಗತ್ತಿನಲ್ಲಿ 4ನೇ ಸ್ಥಾನದಲ್ಲಿದೆ. ಈ ಬಾರಿ ಭಾರತವು 101 ಬಿಲಿಯನರ್’ಗಳನ್ನು ಹೊಂದುವ ಮೂಲಕ ನೂರರ ಗಡಿಯನ್ನು ಮೊದಲ ಬಾರಿಗೆ ದಾಟಿದೆ. ಭಾರತೀಯರ ಪೈಕಿ ರಿಲಯನ್ಸ್ ಮಾಲಕ ಮುಕೇಶ್ ಅಂಬಾನಿ ಮೊದಲನೇ ಸ್ಥಾನದಲ್ಲಿದ್ದಾರೆ.
ಫೋರ್ಬ್ಸ್ ಬಿಡುಗಡೆ ಮಾಡಿರುವ ‘ಜಾಗತಿಕ ಬಿಲಿಯನರ್- 2017’ ಪಟ್ಟಿಯಲ್ಲಿ 2043 ಮಂದಿಯ ಹೆಸರಿದ್ದು, ಅವರ ಒಟ್ಟು ಸಂಪತ್ತು 7.67 ಟ್ರಿಲಿಯನ್ ಯು.ಎಸ್. ಡಾಲರ್’ಗಳಷ್ಟಾಗುತ್ತದೆ. ಈ ಮೊತ್ತದಲ್ಲಿ ಕಳೆದ ಬಾರಿಗಿಂತ ಈ ಬಾರಿ ಶೇ.18ರಷ್ಟು ಹೆಚ್ಚಳವಾಗಿದೆ.
ಈ ಬಾರಿಯೂ ಮೈಕ್ರೊಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಮೊದಲನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಕಳೆದ 23 ವರ್ಷಗಳಲ್ಲಿ 18 ಬಾರಿ ಜಗತ್ತಿನ ಅತೀ ಶ್ರೀಮಂತನೆಂಬ ಹೆಗ್ಗಳಿಕೆಗೆ ಪಾತ್ರನಾಗಿರುವ ಗೇಟ್ಸ್, ಈ ಬಾರಿ ಸತತವಾಗಿ ನಾಲ್ಕನೇ ಬಾರಿ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಕಳೆದ ಬಾರಿ 75 ಬಿಲಿಯನ್ ಡಾಲರ್’ಗಳಷ್ಟಿದ್ದ ಅವರ ಸಂಪತ್ತು, ಈ ಬಾರಿ 86 ಬಿಲಿಯನ್ ಡಾಲರ್’ಗೆ ಏರಿಕೆಯಾಗಿದೆ.
ಬರ್ಕ್’ಶೈರ್ ಹ್ಯಾಥ್’ವೇಯ ಮಾಲಿಕ ವಾರನ್ ಬಫೆಟ್ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಸಂಪತ್ತು 75.6 ಬಿಲಿಯನ್ ಡಾಲರ್’ಗಳಷ್ಟಿವೆ.
ಅಮೇಝಾನ್ ಕಂಪನಿ ಮಾಲಿಕ ಜೆಫ್ ಬಿಝೋಸ್ ಸಂಪತ್ತಿನಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಈ ಬಾರಿ ತನ್ನ ಸಂಪತ್ತಿನಲ್ಲಿ 27.6 ಬಿಲಿಯನ್ ಡಾಲರ್’ಗಳನ್ನು ಹೆಚ್ಚಿಸಿಕೊಂಡಿರುವ ಅವರು 72.8 ಬಿಲಿಯನ್ ಡಾಲರ್’ ಸಂಪತ್ತಿನೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
ಫೇಸ್’ಬುಕ್ ಸ್ಥಾಪಕ ಮಾರ್ಕ್ ಜುಕರ್ಬರ್ಗ್ 11.4 ಬಿಲಿಯನ್ ಡಾಲರ್ ಸಂಪತ್ತು ಹೊಂದುವ ಮೂಲಕ 5ನೇ ಸ್ಥಾನದಲ್ಲಿದ್ದರೆ, ಮೆಕ್ಸಿಕೋ ಉದ್ಯಮಿ ಸ್ಲಿಮ್ ಹೇಳು 6ನೇ ಸ್ಥಾನದಲ್ಲಿದ್ದಾರೆ.
ದೇಶವಾರು ಬಿಲಿಯನರ್’ಗಳು:
ಕಳೆದ ಬಾರಿ 540 ಬಿಲಿಯನರ್’ಗಳನ್ನು ಹೊಂದಿದ್ದ ಅಮೆರಿಕಾ, ಈ ಬಾರಿಯೂ ಅತೀ ಹೆಚ್ಚು ಬಿಲಯನರ್’ಗಳನ್ನು (565) ಹೊಂದುವ ಮೂಲಕ ಮೊದಲನೇ ಸ್ಥಾನದಲ್ಲಿದೆ. ಬಳಿಕದ ಸ್ಥಾನಗಳಲ್ಲಿ ಚೀನಾ (319), ಜರ್ಮನಿ (114) ಹಾಗೂ ಭಾರತ (101) ದೇಶಗಳಿವೆ.
ಭಾರತದ ಬಿಲಿಯನರ್’ಗಳು:
ಭಾರತದಲ್ಲಿ ಬಿಲಿಯನರ್’ಗಳ ಸಂಖ್ಯೆ (101) ಮೊದಲ ಬಾರಿಗೆ 100ರ ಗಡಿಯನ್ನು ದಾಟಿದೆ. ಮುಕೇಶ್ ಅಂಬಾನಿ (23.2 ಬಿಲಿಯನ್ ಡಾಲರ್) ಹೊಂದುವ ಮೂಲಕ ಭಾರತದಲ್ಲಿ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದರೆ, ಜಾಗತಿಕವಾಗಿ 33ನೇ ಸ್ಥಾನದಲ್ಲಿದ್ದಾರೆ.
ಮುಕೇಶ್ ಸಹೋದರ ಅನಿಲ್ ಅಂಬಾನಿ 2.7 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ್ದು ಜಾಗತಿಕವಾಗಿ 745ನೇ ಸ್ಥಾನದಲ್ಲಿದ್ದಾರೆ.
16.4 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿರುವ ಅರ್ಸೆಲಾರ್ ಮಿತ್ತಲ್ ಮುಖ್ಯಸ್ಥ ಲಕ್ಷ್ಮಿ ಮಿತ್ತಲ್ ಭಾರತೀಯರ ಪೈಕಿ ಎರಡನೇ ಸ್ಥಾನದಲ್ಲಿದ್ದರೆ, ಜಾಗತಿಕವಾಗಿ 56ನೇ ಸ್ಥಾನದಲ್ಲಿದ್ದಾರೆ.
ಬಳಿಕದ ಸ್ಥಾನಗಳಲ್ಲಿ ವಿಪ್ರೋ’ನ ಅಜೀಮ್ ಪ್ರೇಮ್’ಜಿ (72), ಅದಾನಿ ಗ್ರೂಪ್’ನ ಗೌತಮ್ ಅದಾನಿ (250), ಬಜಾಜ್ ಗ್ರೂಪ್’ನ ರಾಹುಲ್ ಬಜಾಜ್ (544), ರಾಕೇಶ್ ಜುಂಜುನ್’ವಾಲಾ (939), ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಯನ್ ಮೂರ್ತಿ (1161), ಡಾಬರ್’ನ ವಿವೇಕ್ ಚಂದ್ ಬರ್ಮನ್ (1290), ಇನ್ಫೋಸಿಸ್’ನ ಇನ್ನೋರ್ವಾ ಸಹ-ಸಂಸ್ಥಾಪಕ ನಂದನ್ ನೀಲಕಣಿ (1290) ವೋಕಾರ್ಟ್ ಮುಖ್ಯಸ್ಥ ಹಾಬಿಲ್ ಖೊರಾಕಿವಾಲ (1567), ಆನಂದ ಮಹೀಂದ್ರಾ (1567) ಮೊದಲಾದವರು ಇದ್ದಾರೆ.
ವಿಶೇಷಗಳು:
3.5 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕ ಪಟ್ಟಿಯಲ್ಲಿ 544ನೇ ಸ್ಥಾನವನ್ನು ಪಡೆದಿದ್ದಾರೆ.
ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದಿಂದ ಜನಪ್ರಿಯವಾಗಿರುವ ಪೇಟಿಎಂ ಕಂಪನಿ ಮಾಲಿಕ ವಿಜಯ್ ಶೇಖರ್ 1.3 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿರುವ ಮೂಲಕ 1567ನೇ ಸ್ಥಾನದಲ್ಲಿದ್ದಾರೆ. ಪೇಟಿಎಂನಲ್ಲಿ ಈಗಾಗಲೇ 200 ಮಿಲಿಯನ್ ಮಂದಿ ನೊಂದಾಯಿಸಿಕೊಂಡಿದ್ದು, ಪ್ರತಿನಿತ್ಯ 5 ಮಿಲಿಯನ್ ವ್ಯವಹಾರಗಳು ನಡೆಯುತ್ತಿವೆ.
ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಯೋಗ ಗುರು ಬಾಬಾ ರಾಮದೇವ್ ಆಪ್ತ ಆಚಾರ್ಯ ಮಾಲಕೃಷ್ಣ ಮೊದಲ ಬಾರಿಗೆ ಕಾಣಿಸಿಕೊಂಡಿರುವುದು ವಿಶೇಷ. ಒಟ್ಟು 2.5 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದುವ ಮೂಲಕ ಅವರು 814ನೇ ಸ್ಥಾನದಲ್ಲಿದ್ದಾರೆ. ಪತಂಜಲಿ ಆಯರ್ವೇದ ಕಂಪನಿಯಲ್ಲಿ ಅವರು ಶೇ.97 ಪಾಲು ಹೊಂದಿದ್ದಾರೆ.
ಭಾರತೀಯ ಮಹಿಳಾ ಬಿಲಿಯನರ್’ಗಳು
ಜಾಗತಿಕ ಪಟ್ಟಿಯಲ್ಲಿ ಕಾಣಿಸಿಕೊಮಡಿರುವ ಭಾರತೀಯ ಮಹಿಳೆಯರ ಸಂಖ್ಯೆ ಕೇವಲ 4. ಓ.ಪಿ. ಜಿಂದಾಲ್ ಗ್ರೂಪ್ ಮುಖ್ಯಸ್ಥೆ ಸಾವಿತ್ರಿ ಜಿಂದಾಲ್ 5.2 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಮೂಲಕ ಅತೀ ಶ್ರೀಮಂತ ಭಾರತೀಯ ಮಹಿಳೆಯಾಗಿದ್ದು ಜಾಗತಿಕ ಪಟ್ಟಿಯಲ್ಲಿ 303ನೇ ಸ್ಥಾನದಲ್ಲಿದ್ದಾರೆ.
ಗಾದ್ರೆಜ್’ನ ಸ್ಮಿತಾ ಕೃಷ್ಣ ಗಾದ್ರೆಜ್ 814ನೇ ಸ್ಥಾನದಲ್ಲಿದ್ದರೆ, ಬಯೋಕಾನ್’ನ ಕಿರಣ್ ಮಝುಮ್ದಾರ್ ಶಾ (973) ಹಾಗೂ ಲೀನಾ ತಿವಾರಿ 1030ನೇ ಸ್ಥಾನದಲ್ಲಿದ್ದಾರೆ.
ಹೊಸಬರು:
ಜಾಗತಿಕ ಪಟ್ಟಿಯಲ್ಲಿ 195 ಹೊಸಬರು ಕಾಣಿಸಿಕೊಂಡಿದ್ದಾರೆ. ಚೀನಾದಿಂದ (76), ಹಾಗೂ ಅಮೆರಿಕಾದಿಂದ (25) ಹೊಸಬರು ಈ ಬಾರಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
<40 ವಯಸ್ಸು:
ಕಳೆದ ಬಾರಿ ಪ್ರಾಯ 40 ವರ್ಷ ದಾಟದ ಬಿಲಿಯನರ್’ಗಳ ಸಂಖ್ಯೆ 66 ಆಗಿದ್ದರೆ, ಈ ಬಾರಿ 56 ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.