ಒಂದು ಸಿಗರೇಟ್ ನಲ್ಲಿ ಸಾವಿರಾರು ರಾಸಾಯನಿಕಗಳು ಒಳಗೊಂಡಿರುತ್ತವೆ ಎನ್ನುವ ಅಂಶವೊಂದು ಬೆಳಕಿಗೆ ಬಂದಿದೆ.
ಬೆಂಗಳೂರು: ಕೆಎಸ್‌ಆರ್‌ಟಿಸಿಯು ಬಸ್‌ನಿಲ್ದಾಣಗಳಲ್ಲಿ ಧೂಮಪಾನ ನಿಷೇಧ, ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ, ತಂಬಾಕು ಉತ್ಪನ್ನಗಳ ಕುರಿತ ಜಾಹೀರಾತು ನಿಷೇಧ ಸೇರಿದಂತೆ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಕಳೆದ ಆರು ವರ್ಷಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಧೂಮಪಾನ ಸೇವನೆ ಪ್ರಕರಣಗಳಲ್ಲಿ ಸುಮಾರು 1.31 ಲಕ್ಷ ಜನರಿಂದ ಒಟ್ಟು 2.62 ಕೋಟಿ ರು. ದಂಡ ವಸೂಲಿ ಮಾಡಿದೆ ಎಂದು ಕೆಎಸ್‌ಆರ್‌ಟಿಸಿ ನಿರ್ದೇಶಕ (ಭದ್ರತೆ ಮತ್ತು ಜಾಗೃತಿ) ಡಾ.ಪಿ.ಎಸ್.ಹರ್ಷ ಹೇಳಿದರು.
ವಿಶ್ವ ತಂಬಾಕು ಮುಕ್ತ ದಿನಾಚರಣೆ ಅಂಗವಾಗಿ ಕೆಎಸ್‌ಆರ್‌ಟಿಸಿ ವತಿಯಿಂದ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ‘ತಂಬಾಕನ್ನು ದೂರವಿಡಿ-ನಿಮ್ಮ ಉಸಿರು ಕಾಪಾಡಿ’ ಜಾಗೃತಿ ಕಾರ್ಯಕ್ರಮಕ್ಕೆ ತಂಬಾಕು ಉತ್ಪನ್ನಗಳ ಮೇಲೆ ನೀರು ಸುರಿಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕೇವಲ ದಂಡ ವಿಧಿಸುವುದರಿಂದ ತಂಬಾಕು ಸೇವನೆ ತಡೆಯಲು ಸಾಧ್ಯವಿಲ್ಲ. ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಸಾರ್ವಜನಿಕರಿಗೆ ಮನಮುಟ್ಟಿಜಾಗರೂಕರನ್ನಾಗಿಸುವ ಕೆಲಸಗಳಾಗಬೇಕಾಗಿದೆ ಎಂದರು.
ಪ್ರತಿಯೊಂದು ಸಿಗರೇಟ್‌ನಲ್ಲೂ ಸುಮಾರು 4800ಕ್ಕೂ ಹೆಚ್ಚು ರಾಸಾಯನಿಕ ಅಂಶಗಳಿರುತ್ತವೆ. ದೇಶದಲ್ಲಿ ಪ್ರತಿ ವರ್ಷ ಸುಮಾರು 70 ಲಕ್ಷದಷ್ಟು ಜನರು ನೇರವಾಗಿ ತಂಬಾಕು ಸೇವನೆಯಿಂದ ಸಮಸ್ಯೆಗೆ ಒಳಗುತ್ತಿದ್ದಾರೆ. ಪರೋಕ್ಷವಾಗಿ 8ರಿಂದ 10 ಲಕ್ಷ ಜನರು ಪರಿಣಾಮ ಎದುರಿಸುತ್ತಿದ್ದಾರೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಜನರ ಆರೋಗ್ಯದ ಮೇಲೆ ಯುದ್ಧದಿಂದಾಗುವಷ್ಟೇ ದೊಡ್ಡ ಪರಿಣಾಮ ಪರೋಕ್ಷವಾಗಿ ಉಂಟಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ನಿರ್ದೇಶಕ (ಸಿಬ್ಬಂದಿ ಮತ್ತು ಪರಿಸರ) ಪಿ.ಆರ್.ಶಿವಪ್ರಸಾದ್, ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಜಿ.ಎನ್. ಲಿಂಗರಾಜು, ವಿಭಾಗೀಯ ಅಧಿಕಾರಿ ಇನಾಯತ್ ಭಾಗ್‌ಭಾನ್, ಆರೋಗ್ಯ ಇಲಾಖೆ ಉಪ ನಿರ್ದೇಶಕ ಡಾ.ವಿವೇಕ್ ದೊರೈ, ಡಾ.ಶ್ರೀದೇವಿ, ಡಾ.ಸಚಿನ್ ಸಿನ್ಹ ಮತ್ತಿತರರು ಉಪಸ್ಥಿತರಿದ್ದರು.