ಹರ್ಯಾಣ, ಮಹಾರಾಷ್ಟ್ರ ಚುನಾವಣೆ ಸೋತ ಕಾಂಗ್ರೆಸ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮೈತ್ರಿ ಪಕ್ಷ ಕಾಂಗ್ರೆಸ್ ವಿರುದ್ಧ ಗರಂ ಆಗಿದೆ. ಪರಿಣಾಮ ಇಂಡಿಯಾ ಒಕ್ಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ.
ನವದೆಹಲಿ(ನ.27) ಇಂಡಿಯಾ ಮೈತ್ರಿ ಒಕ್ಕೂಟ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಧಿಕಾರ ನೀಡಿದಿದ್ದರೂ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳಿಗೆ ಸ್ಥಾನಗಳನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಲೋಕಸಭೆ ಚುನಾವಣೆ ಬಳಿಕ ಇಂಡಿಯಾ ಒಕ್ಕೂಟ ಮತ್ತಷ್ಟು ಗಟ್ಟಿಗೊಂಡಿತ್ತು. ಆದರೆ ಕಳೆದ ಕೆಲ ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂಡಿಯಾ ಮೈತ್ರಿ ಪಕ್ಷಗಳಲ್ಲಿ ಕೆಲ ಅಸಮಾಧಾನ ಮೂಡಿಸಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಫಲಿತಾಂಶದಿಂದ ಕಂಗೆಟ್ಟಿರುವ ಕಾಂಗ್ರೆಸ್‌ಗೆ ತಲೆನೋವು ಹೆಚ್ಚಾಗಿದೆ. ಕಾಂಗ್ರೆಸ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿರುವ ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷ ತೃಣಮೂಲ ಕಾಂಗ್ರೆಸ್, ಪಶ್ಚಿಮ ಬಂಗಾಳ ಜನತೆ ಪರವಾಗಿ ಕಾರ್ಯನಿರ್ವಹಿಸುವುದಾಗಿ ಸ್ಪಷ್ಟಪಡಿಸಿದೆ.
ಕಾಂಗ್ರೆಸ್ ಪಕ್ಷದ ರಬ್ಬರ್ ಸ್ಟಾಂಪ್ ಆಗಲು ತೃಣಮೂಲ ಕಾಂಗ್ರೆಸ್ ಬಯಸುವುದಿಲ್ಲ. ಸಂಸತ್ತಿನಲ್ಲಿ ಕೆಲ ವಿಚಾರಗಳ ಕುರಿತು ತೃಣಮೂಲ ಕಾಂಗ್ರೆಸ್ ಧ್ವನಿಎತ್ತಲಿದೆ. ಇಲ್ಲಿ ಕಾಂಗ್ರೆಸ್ ಸೂಚನೆ, ಮನವಿಗೆ ಕಿವಿಗೊಡಲು ಸಾಧ್ಯವಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರ ಕುರಿತು ಧ್ವನಿ ಎತ್ತುವುದು ಬೇಕಾಗಿಲ್ಲ. ಆದರೆ ಟಿಎಂಸಿ ಪಶ್ಚಿಮ ಬಂಗಾಳ ಜನರ ಹಿತ ದೃಷ್ಟಿಯಿಂದ ಕಠಿಣ ವಿಷಯಗಳನ್ನು ಸಂಸತ್ತಿನ ಮುಂದಿಡಲಿದೆ ಎಂದು ಟಿಎಂಸಿ ಸ್ಪಷ್ಟಪಡಿಸಿದೆ.
ಸಂವಿಧಾನಕ್ಕೆ ಅಪಾಯ ಯಾರಿಂದ? ಕಾಂಗ್ರೆಸ್-ಬಿಜೆಪಿ ನಡುವೆ ಜಟಾಪಟಿ!
ಪಶ್ಚಿಮ ಬಂಗಾಳಕ್ಕೆ ಆರ್ಥಿಕ ಅನುಮೋದನೆ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಬೇಕಿರುವ ನಿಧಿ ಸೇರಿದಂತೆ ಹಲವು ವಿಚಾರಗಳನ್ನು ಟಿಎಂಸಿ ಮುಂದಿಡಲಿದೆ. ಕಾಂಗ್ರೆಸ್ ಹೇಳಿದಂತೆ ಕೇಳಲು ಸಾಧ್ಯವಿಲ್ಲ. ಇಲ್ಲಿ ಅಜೆಂಡಾ ಮುಖ್ಯವಲ್ಲ, ಟಿಎಂಸಿಗೆ ರಾಜ್ಯದ ಜನರ ಹಿತದೃಷ್ಠಿ ಮುಖ್ಯ ಎಂದು ಟಿಎಂಸಿ ಸ್ಪಷ್ಟಪಡಿಸಿದೆ. ಕಾಂಗ್ರೆಸ್ ಹಾಗೂ ತೃಣಮೂಲಕ ಕಾಂಗ್ರೆಸ್ ದೇಶದ ಮೈತ್ರಿ ಚೌಕಟ್ಟಿನಲ್ಲಿದ್ದರೂ ಪಶ್ಚಿಮ ಬಂಗಾಳದಲ್ಲಿ ಬದ್ಧವೈರಿಗಳು. 2019ರ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ತನ್ನ ಖಡಕ್ ನಿರ್ಧಾರ ಘೋಷಿಸಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಮೈತ್ರಿ ಭಾಗವಾಗಿದ್ದರೂ ಟಿಎಂಸಿ ಪ್ರತ್ಯಕವಾಗಿ ಸ್ಪರ್ಧಸಿತ್ತು. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲೂ ಟಿಎಂಸಿ ಪ್ರತ್ಯೇಕವಾಗಿ ಸ್ಪರ್ಧಿಸಿ ಗೆದ್ದಿದೆ.
ಕಾಂಗ್ರೆಸ್ ಹಾಗೂ ಟಿಎಂಸಿ ನಡುವಿನ ಮನಸ್ತಾಪ, ಗುದ್ದಾಟ ಹೊಸದೇನಲ್ಲ. ಪಶ್ಚಿಮ ಬಂಗಾಳದಲ್ಲಿ ಈ ಎರಡು ಪಕ್ಷಗಳು ಬದ್ದವೈರಿಗಳಾದರೂ ದೇಶದಲ್ಲಿನ ಮೈತ್ರಿಯಲ್ಲಿ ಒಗ್ಗಟ್ಟಾಗಿದೆ. 2019ರ ಲೋಕಸಭಾ ಚುನಾವಣೆಗೂ ಮೊದಲು ಇಂಡಿಯಾ ಮೈತ್ರಿಯೇ ಮುರಿದು ಬೀಳುವ ಹಂತಕ್ಕೂ ಇವರಿಬ್ಬರ ಜಗಳ ತಾರಕಕ್ಕೇರಿತ್ತು. ಆದರೆ ಬಳಿಕ ಎಲ್ಲವೂ ಸಮಾಧಾನಗೊಂಡರೂ ಹೋರಾಟ ಪ್ರತ್ಯೇಕವಾಗಿತ್ತು. ಇದೀಗ ಮತ್ತೆ ಮೈತ್ರಿಯಲ್ಲಿ ಭಿನ್ನಾಭಿಪ್ರಾಯ ಶುರುವಾಗಿದೆ.