ನಾನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಕರೆ ಮಾಡಿ ಯಾರು ಮುಂದಿನ ಸಿಎಂ ಎಂದು ನಿರ್ಧರಿಸಲು ಹೇಳಿದ್ದೇನೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಹೊಸ ಸಿಎಂ ಹೆಸರಿಸುವ ಬಿಜೆಪಿಯ ನಿರ್ಧಾರವನ್ನು ನಮ್ಮ ಶಿವಸೇನೆ ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಮ್ಮ ಕಡೆಯಿಂದ ಯಾವುದೇ ಸ್ಪೀಡ್ ಬ್ರೇಕರ್ ಇಲ್ಲ ಎಂದು ತಿಳಿಸಿದ ಮಹಾರಾಷ್ಟ್ರದ ಉಸ್ತುವಾರಿ ಮುಖ್ಯಮಂತ್ರಿ ಏಕನಾಥ್ ಶಿಂಧೆ
ಥಾಣೆ/ಮುಂಬೈ(ನ.28): ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಶಿವಸೇನೆ ನಾಯಕ ಏಕನಾಥ ಶಿಂಧೆ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ನಡುವೆ ನಡೆದಿದ್ದ ಹಗ್ಗಜಗ್ಗಾಟ ಮುಕ್ತಾಯದ ಹಂತಕ್ಕೆ ಬಂದಿದ್ದು, ಫಡ್ನವೀಸ್ ನೂತನ ಸಿಎಂ ಆಗುವುದು ಪಕ್ಕಾ ಆಗಿದೆ. ಈ ಕುರಿತು ಸ್ವತಃ ಶಿಂಧೆ ಅವರೇ ಬುಧವಾರ ಸ್ಪಷ್ಟ ಸುಳಿವು ನೀಡಿದ್ದಾರೆ.
ಈ ಬೆಳವಣಿಗೆಗೆ ಪೂರಕವಾಗಿ ಮಹಾರಾಷ್ಟ್ರದ ಮಹಾಯುತಿ ಒಕ್ಕೂಟದ ನಾಯಕರು ಗುರುವಾರ ದೆಹಲಿಗೆ ತೆರಳಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗುವ ಕಾರ್ಯಕ್ರಮ ನಿಗದಿಯಾಗಿದೆ. ಈ ಭೇಟಿ ಬಳಿಕ ನೂತನ ಸಿಎಂ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳ ಹೆಸರು ಘೋಷಣೆ ಮಾಡಲಾಗುವುದು. ಅದರಂತೆ ಫಡ್ನವೀಸ್ ಸಿಎಂ ಆಗಿ, ಎನ್‌ಸಿಪಿಯ ಅಜಿತ್ ಪವಾರ್ ಮತ್ತು ಶಿವಸೇನೆಯ ಏಕನಾಥ್ ಶಿಂಧೆ ಉಪಮುಖ್ಯಮಂತ್ರಿಯಾಗಿ ಘೋಷಿಸಲ್ಪಡಲಿ ದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ನಾಳೆ ರಾಜೀನಾಮೆ, ತೀವ್ರಗೊಂಡ ಸಿಎಂ ಆಯ್ಕೆ ಕಸರತ್ತು
ಶಿಂಧೆ 'ನಿರ್ಗಮನ' ನುಡಿ: ಸ್ವಕ್ಷೇತ್ರ ಥಾಣೆಯ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಂಧೆ, 'ನಾನು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಕರೆ ಮಾಡಿ ಯಾರು ಮುಂದಿನ ಸಿಎಂ ಎಂಬುದನ್ನು ನಿರ್ಧರಿಸಲು ಹೇಳಿದ್ದೇನೆ. ಅವರು ತೆಗೆದು ಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧ ಎಂದು ಭರವಸೆ ನೀಡಿದ್ದೇನೆ' ಎಂದರು. 'ಮುಂದಿನ ಮಹಾರಾಷ್ಟ್ರ ಸಿಎಂ ಹೆಸರಿಸುವ ಬಿಜೆಪಿಯ ನಿರ್ಧಾರವನ್ನು ನಮ್ಮ ಶಿವಸೇನೆ ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಮ್ಮ ಕಡೆಯಿಂದ ಸ್ಪೀಡ್ ಬ್ರೇಕರ್‌ಇಲ್ಲ' ಎಂದು ಶಿಂಧೆ ಸ್ಪಷ್ಟಪಡಿಸಿದರು.
'ನಾನು ಎಂದೆಂದಿಗೂ ಕೆಲಸಗಾರ. ನನ್ನ ಪ್ರಕಾರ 'ಸಿಎಂ' ಎಂದರೆ 'ಮುಖ್ಯಮಂತ್ರಿ' ಅಲ್ಲ 'ಕಾಮನ್ ಮ್ಯಾನ್'. ನಾನು ಮುಖ್ಯಮಂತ್ರಿ ಆಗಿದ್ದು ಜನಪ್ರಿಯತೆ ಗಳಿಸಲು ಅಲ್ಲ. ಮಹಾರಾಷ್ಟ್ರದ ಕಲ್ಯಾಣಕ್ಕಾಗಿ' ಎಂದು ಹೇಳಿದರು. ಈ ಮೂಲಕ ತಾವು ಮತ್ತೆ ಸಿಎಂ ಆಗಲ್ಲ. ಕಾಮನ್ ಮ್ಯಾನ್ ಮಾತ್ರ ಆಗುವ ಸುಳಿವು ನೀಡಿದರು. ಅಲ್ಲದೆ, ತಮ್ಮ ನಾಯಕತ್ವಕ್ಕೆ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ತುಂಬಾ ಸಹ ಕಾರ ನೀಡಿದರು ಎಂದು ಕೃತಜ್ಞತೆ ಸಲ್ಲಿಸಿದರು.
ನನಗೆ ನಿರಾಸೆ ಆಗಿಲ್ಲ:
'ತಮ್ಮ ನಾಯಕತ್ವದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯಗಳಿಸಿದರೂ 2ನೇ ಅವಧಿಗೆ ಸಿಎಂ ಸ್ಥಾನ ಸಿಗದೇ ಶಿಂಧೆ ನಿರಾಶೆಗೊಂಡಿದ್ದಾರೆ ಎಂಬ ವರದಿಗಳನ್ನು ಅವರು ತಳ್ಳಿ ಹಾಕಿದರು. 'ಅಂತಹದ್ದೇನೂ ಇಲ್ಲ. ನಾನು ಸಿಎಂ ಆಗಿದ್ದಾಗ ಬಿಜೆಪಿ ನನ್ನನ್ನು ಬೆಂಬಲಿಸಿದೆ ಎಂಬುದನ್ನು ಸ್ಮರಿಸಬೇಕು. ನಮಗೆ ಯಾರಿಗೂ ಬೇಜಾರಿಲ್ಲ. ಅಳುವುದೂ ಇಲ್ಲ. ನಾವೆಲ್ಲ ಮಹಾಯುತಿ ಕೂಟದ ಗೆಲುವಿಗೆ ಶ್ರಮಿಸಿದ್ದೇವೆ' ಎಂದರು.
ಮಹಾರಾಷ್ಟ್ರ ಚುನಾವಣೆ ಫಲಿತಾಂಶ: ಗೆಲುವು ಯಾರಿಗೆ ಮಹಾಯುತಿಗೋ ಅಘಾಡಿಗೋ ?
ಇಂದು ದಿಲ್ಲಿಯಲ್ಲಿ ಸಭೆ:
ಡಿಸಿಎಂ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗುರುವಾರ ದೆಹಲಿಯಲ್ಲಿ ಅಮಿತ್ ಶಾ ಅವರೊಂದಿಗೆ ಸಭೆ ಇದೆ ಮತ್ತು ಸರ್ಕಾರ ರಚನೆಯ ಎಲ್ಲಾ ಸಂಬಂಧಿತ ನಿರ್ಧಾರಗಳನ್ನು ಅಲ್ಲಿ ತೆಗೆದುಕೊಳ್ಳಲಾಗುವುದು' ಎಂದರು.
ಪ್ರಧಾನಿ ಮೋದಿ ನಿರ್ಧಾರ ಫೈನಲ್
ನಾನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಕರೆ ಮಾಡಿ ಯಾರು ಮುಂದಿನ ಸಿಎಂ ಎಂದು ನಿರ್ಧರಿಸಲು ಹೇಳಿದ್ದೇನೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಹೊಸ ಸಿಎಂ ಹೆಸರಿಸುವ ಬಿಜೆಪಿಯ ನಿರ್ಧಾರವನ್ನು ನಮ್ಮ ಶಿವಸೇನೆ ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಮ್ಮ ಕಡೆಯಿಂದ ಯಾವುದೇ ಸ್ಪೀಡ್ ಬ್ರೇಕರ್ ಇಲ್ಲ ಎಂದು ಮಹಾರಾಷ್ಟ್ರದ ಉಸ್ತುವಾರಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ.