ಐಟಿ ರಿಟರ್ನ್ಸ್ ಫೈಲ್ ಮಾಡುವಾಗ ನಾವು ಕಲಿಯುವ ಪಾಠಗಳು

By Adhil ShettyFirst Published Aug 24, 2017, 10:24 AM IST
Highlights

ಐಟಿ ರಿಟರ್ನ್ಸ್ (ಐಟಿಆರ್) ಫೈಲ್ ಮಾಡುವ ಅವಧಿ ಮುಗಿಯಿತಾದರೂ ತೆರಿಗೆ ಪಾವತಿದಾರರಿಗೆ ಕೆಲ ಉಪಯುಕ್ತ ಪಾಠಗಳಂತೂ ಸಿಗುತ್ತದೆ. ಇವು ಮುಂದಿನ ವರ್ಷಗಳಲ್ಲಿ ಬಹಳ ಉಪಯೋಗಕ್ಕೆ ಬರುತ್ತವೆ. ಈ ಪಾಠಗಳನ್ನು ನೀವು ಗಂಭೀರವಾಗಿ ಪರಿಗಣಿಸಿ ಪಾಲಿಸಿದರೆ, ಆದಾಯ ತೆರಿಗೆ ಇಲಾಖೆಯ ಹದ್ದಿನಗಣ್ಣಿಗೆ ನೀವು ಬೀಳುವುದನ್ನು ತಪ್ಪಿಸಿಕೊಳ್ಳಬಹುದು.

ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆ ಮಾಡುವುದು ಬಹಳ ಕ್ಲಿಷ್ಟಕರ ಹಾಗೂ ಸಂಕೀರ್ಣ ಕಾರ್ಯ. ಫೈಲ್ ಮಾಡುವಾಗ ಜಾಗರೂಕತೆಯಿಂದಿರಬೇಕು. ಸ್ವಲ್ಪ ತಪ್ಪು ಮಾಡಿದರೂ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಬಂದುಬಿಡುತ್ತದೆ. ಐಟಿ ನೋಟೀಸ್'ಗಳಿಗೆ ಸ್ಪಂದಿಸುವುದೂ ಒಂದು ತಾಂತ್ರಿಕ ಪ್ರಕ್ರಿಯೆ. ಆದರೆ, ರಿಟರ್ನ್ಸ್ ಫೈಲಿಂಗ್ ಮುಗಿದ ಬಳಿಕ ಯಾರೂ ಕೂಡ ಈ ಕೆಲಸಕ್ಕೆ ತಲೆಹಾಕುವುದಿಲ್ಲ.

ಐಟಿ ರಿಟರ್ನ್ಸ್ (ಐಟಿಆರ್) ಫೈಲ್ ಮಾಡುವ ಅವಧಿ ಮುಗಿಯಿತಾದರೂ ತೆರಿಗೆ ಪಾವತಿದಾರರಿಗೆ ಕೆಲ ಉಪಯುಕ್ತ ಪಾಠಗಳಂತೂ ಸಿಗುತ್ತದೆ. ಇವು ಮುಂದಿನ ವರ್ಷಗಳಲ್ಲಿ ಬಹಳ ಉಪಯೋಗಕ್ಕೆ ಬರುತ್ತವೆ. ಈ ಪಾಠಗಳನ್ನು ನೀವು ಗಂಭೀರವಾಗಿ ಪರಿಗಣಿಸಿ ಪಾಲಿಸಿದರೆ, ಆದಾಯ ತೆರಿಗೆ ಇಲಾಖೆಯ ಹದ್ದಿನಗಣ್ಣಿಗೆ ನೀವು ಬೀಳುವುದನ್ನು ತಪ್ಪಿಸಿಕೊಳ್ಳಬಹುದು.

ಈ ವರ್ಷದ ಐಟಿಆರ್ ಫೈಲಿಂಗ್ ಪ್ರಕ್ರಿಯೆಯಿಂದ ನೀವು ಕಲಿಯಬಹುದಾದ ಕೆಲ ಪ್ರಮುಖ ಪಾಠಗಳೇನು ಎಂಬುದನ್ನು ನೋಡೋಣ.

ತೆರಿಗೆ ಉಳಿತಾಯ ಹೂಡಿಕೆಯನ್ನು ಮುಂಚಿತವಾಗೇ ಯೋಜಿಸಿ:
ಕೊನೆ ಕ್ಷಣದ ತೆರಿಗೆ ಉಳಿತಾಯ ಹೂಡಿಕೆಯು ನಿಮಗೆ ಕಡಿಮೆ ರಿಟರ್ನ್ಸ್ ಕೊಡಬಹುದು. ಆದರೆ, ನೀವು ಮುಂಚಿತವಾಗಿ ಪ್ಲಾನ್ ಮಾಡಿದರೆ ಬಹಳ ಸುಲಭವಾಗಿ ತೆರಿಗೆ ಉಳಿಸಬಹುದು ಮತ್ತು ಆಕರ್ಷಕ ರಿಟರ್ನ್ ಪಡೆಯಬಹುದು. ಹಣಕಾಸು ವರ್ಷದ ಮೊದಲ ದಿನವೇ ನಿಮ್ಮ ಟ್ಯಾಕ್ಸ್ ಪ್ಲಾನಿಂಗ್ ಪ್ರಾರಂಭವಾಗಬೇಕು ಎಂಬುದು ಹಿಂದಿನ ಟ್ಯಾಕ್ಸ್ ಫೈಲಿಂಗ್'ನ ಅನುಭವದಿಂದ ನಿಮಗೆ ಗೊತ್ತಾಗಿರಬಹುದು. ಬಹಳ ಮುಂಚಿತವಾಗಿಯೇ ಟ್ಯಾಕ್ಸ್ ಪ್ಲಾನಿಂಗ್ ಮಾಡಿದರೆ, ನಿಮಗೆ ಹೂಡಿಕೆ ಮಾಡಲು ಸಾಕಷ್ಟು ಸಮಯ ಸಿಗುತ್ತದೆ. ನೀವು ದಿಢೀರನೇ ಹಣ ಹೊಂದಿಸುವ ಪ್ರಮೇಯ ಬರುವುದಿಲ್ಲ.

ದಾಖಲೆಗಳು ನಿಮ್ಮ ಬಳಿಯಲ್ಲೇ ಇರಲಿ: 
ನಿಮ್ಮ ಟ್ರಾನ್ಸಾಕ್ಷನ್ ವಿವರಗಳನ್ನು ದಾಖಲಿಸುವುದನ್ನು ರೂಢಿಸಿಕೊಳ್ಳಿ. ಆ ದಾಖಲೆಗಳು ನಿಮಗೆ ಯಾವಾಗ ಬೇಕಾದರೂ ಸಿಗುವಂತಿರಬೇಕು. ಐಟಿ ರಿಟರ್ನ್ ಫೈಲ್ ಮಾಡುವಾಗ ಅವು ನಿಮಗೆ ಉಪಯೋಗಕ್ಕೆ ಬರುತ್ತದೆ. ಕೊನೆ ಕ್ಷಣದ ಗೊಂದಲ, ಆತಂಕಗಳಿಂದ ನೀವು ಮುಕ್ತರಾಗಬಹುದು.

ನೋಟು ಅಮಾನ್ಯೀಕರಣ ಮತ್ತು ಜಿಎಸ್’ಟಿ ತೆರಿಗೆ ಪದ್ಧತಿ ಜಾರಿಗೆ ಬಂದ ಸಮಯದಲ್ಲೇ ಈ ವರ್ಷದ ಐಟಿಆರ್ ಫೈಲಿಂಗ್ ಅವಧಿ ಬಂದಿತ್ತು. ಡೀಮಾನಿಟೈಸೇಶನ್ ಅವಧಿಯ ವೇಳೆ ಬ್ಯಾಂಕ್ ಅಕೌಂಟ್’ನಿಂದ 2 ಲಕ್ಷ ರೂ ನಗದು ಡೆಪಾಸಿಟ್ ಮಾಡಲಾಯಿತೇ ಇಲ್ಲವೇ ಎಂಬುದನ್ನು ಡಿಕ್ಲೇರ್ ಮಾಡಲು ಸರಕಾರ ಎಲ್ಲಾ ತೆರಿಗೆದಾರರಿಗೆ ಸೂಚನೆ ನೀಡಿತ್ತು. ಎಲ್ಲಾ ವಹಿವಾಟು ದಾಖಲೆಗಳನ್ನು ಇಟ್ಟುಕೊಂಡಿದ್ದವರಿಗೆ ಕೆಲಸ ಸುಲಭವಾಯಿತು. ದಾಖಲೆಗಳಿಲ್ಲದವರಿಗೆ ಸಹಜವಾಗಿಯೇ ಆತಂಕ, ಗೊಂದಲಗಳು ಆವರಿಸಿದವು. ಐಟಿಆರ್ ಅವಧಿಯ ಕೊನೆಯ ದಿನದವರೆಗೂ ನೀವು ತಳ್ಳಿಕೊಂಡು ಹೋದರೆ ಹೀಗಾಗುತ್ತದೆ.

ನಗದು ವಹಿವಾಟಿನ ವಿವರ ಇಟ್ಟುಕೊಳ್ಳಿ:
ನೋಟು ಅಮಾನ್ಯೀಕರಣದ ನಂತರ ಸರಕಾರವು ನಗದು ವಹಿವಾಟಿಗೆ ಕಡಿವಾಣ ಹಾಕಿ ಡಿಜಿಟಲ್ ಟ್ರಾನ್ಸಾಕ್ಷನ್’ಗೆ ಪ್ರೋತ್ಸಾಹ ನೀಡುತ್ತಿದೆ. ನಿಮ್ಮ ಕ್ಯಾಷ್ ಟ್ರಾನ್ಸಾಕ್ಷನ್’ಗಳೆಲ್ಲವನ್ನೂ ನೆನಪಲ್ಲಿಟ್ಟುಕೊಳ್ಳುವುದು ಕಷ್ಟ. ಆದರೆ, ಐಟಿ ಇಲಾಖೆ ಮಾತ್ರ ನಿಮ್ಮ ದೊಡ್ಡ ಮೊತ್ತದ ನಗದು ವಹಿವಾಟುಗಳ ಮೇಲೆ ಸದಾ ಕಣ್ಣಿಟ್ಟೇ ಇರುತ್ತದೆ. ಹೀಗಾಗಿ, ನೀವು ನಿಮ್ಮೆಲ್ಲಾ ಕ್ಯಾಷ್ ಟ್ರಾನ್ಸಾಕ್ಷನ್’ಗಳ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಒಳ್ಳೆಯದು.

ಎಲ್ಲಾ ಬ್ಯಾಂಕ್ ಅಕೌಂಟ್’ಗಳನ್ನು ಘೋಷಿಸುವುದು:
ಚಾಲನೆಯಲ್ಲಿರುವ ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಘೋಷಿಸುವುದು ಈ ವರ್ಷದಿಂದ ಕಡ್ಡಾಯಗೊಳಿಸಲಾಗಿದೆ. ಅನೇಕ ಮಂದಿ ವಿನಾಕಾರಣ ಹಲವು ಬ್ಯಾಂಕ್ ಅಕೌಂಟ್’ಗಳನ್ನು ತೆರೆದುಬಿಡುತ್ತಾರೆ. ಆದರೆ, ವಹಿವಾಟು ನಡೆಸುವುದು ಕೆಲವೇ ಖಾತೆಗಳಲ್ಲಿ ಮಾತ್ರ. ತುಂಬಾ ಬ್ಯಾಂಕ್ ಖಾತೆಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟಕರವು ಹೌದು ಗೊಂದಲಕರವೂ ಹೌದು. ರಿಟರ್ನ್ಸ್ ಫೈಲ್ ಮಾಡುವಾಗ ನಿಮ್ಮ ಬ್ಯಾಂಕ್ ಖಾತೆಯ ವಾರ್ಷಿಕ ಪತ್ರ (ಸ್ಟೇಟ್ಮೆಂಟ್) ಬೇಕಾಗಿರುವುದರಿಂದ ನೀವು ಬ್ಯಾಂಕ್ ಖಾತೆಗಳ ಪ್ರಮಾಣವನ್ನು ಆದಷ್ಟೂ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ನಿಮಗೆ ಅನಗತ್ಯ ಗೊಂದಲವಾಗಬಹುದು.

ಹೊಸ ಐಟಿಆರ್ ನಿಯಮಗಳನ್ನು ತಿಳಿದಿರಿ: 
ಈ ವರ್ಷವಿರುವ ಐಟಿಆರ್ ನಿಯಮಗಳು ಮುಂದಿನ ವರ್ಷವೂ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನಿಯಮಗಳಲ್ಲಿ ಏನಾದರೂ ಬದಲಾವಣೆ ಆದರೆ ಐಟಿ ಇಲಾಖೆಯು ನೋಟಿಫಿಕೇಶನ್ ಕೊಡುತ್ತದೆ. ನೀವು ಇದರ ಬಗ್ಗೆ ಸದಾ ಗಮನ ಇಟ್ಟುಕೊಂಡಿರಬೇಕು. ಉದಾಹರಣೆಗೆ, ಕಳೆದ ವರ್ಷದ ನಿಯಮದ ಪ್ರಕಾರ ನಿಮ್ಮ ಬ್ಯಾಂಕ್ ಖಾತೆಗಳೆಲ್ಲವನ್ನೂ ಘೋಷಿಸುವುದು ಕಡ್ಡಾಯವಿರಲಿಲ್ಲ. ಆದರೆ, ಈ ವರ್ಷ ಅದನ್ನು ಕಡ್ಡಾಯಗೊಳಿಸಲಾಗಿದೆ. ಕಳೆದ ವರ್ಷ ಡೀಮಾನಿಟೈಸೇಶನ್’ಗೆ ಸಂಬಂಧಿಸಿದ ವಿವರಗಳನ್ನು ಕೊಡುವ ಪ್ರಮೇಯವಿರಲಿಲ್ಲ. ಈ ವರ್ಷ ಐಟಿ ರಿಟರ್ನ್ ಫೈಲ್ ಮಾಡುವಾಗ ಆ ವಿವರಗಳು ಬಹಳ ಮುಖ್ಯವಾಗಿದೆ.

ಕಲಿಕೆಯು ಒಂದು ನಿರಂತರ ಪ್ರಕ್ರಿಯೆ. ಇತ್ತೀಚಿನ ಐಟಿಆರ್ ಫೈಲಿಂಗ್ ಪ್ರಕ್ರಿಯೆಯಿಂದ ನೀವು ಪಾಠ ಕಲಿತಿದ್ದೇ ಆದಲ್ಲಿ ಐಟಿ ಇಲಾಖೆಯಿಂದ ದಂಡ ಬೀಳದಂತೆ ನೀವು ನೋಡಿಕೊಳ್ಳಬಹುದು. ನೀವು ಯಾವುದೇ ಮಾಹಿತಿಯನ್ನು ಮುಚ್ಚಿಡಲು ಪ್ರಯತ್ನಿಸಬೇಡಿ. ಹೊಸ ವಿಚಾರಗಳಿಗೆ ಮುಕ್ತವಾಗಿ ತೆರೆದುಕೊಳ್ಳಿ. ಸರಿಯಾದ ಸಮಯಕ್ಕೆ ನಿಮ್ಮ ಐಟಿಆರ್ ಫೈಲ್ ಮಾಡಿರಿ. ಜೊತೆಗೆ, ನೀವು ಫೈಲ್ ಮಾಡಿದ್ದು ಸರಿಯಾಗಿದೆಯಾ ಎಂಬುದನ್ನು ತಪ್ಪದೇ ಪರಿಶೀಲಿಸಿ.

- ಅಧಿಲ್ ಶೆಟ್ಟಿ,
ಸಿಇಒ, ಬ್ಯಾಂಕ್ ಬಜಾರ್

click me!