
ಗಂಗಾವತಿ (ಏ.28): ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷ ಆಡಳಿತ ನಡೆಸಿದ ಪ್ರಧಾನಿ ಮೋದಿ ಅವರು ರಾಷ್ಟ್ರಕ್ಕೆ ನೀಡಿದೆ ಕೊಡುಗೆ ಏನು? ವಿಶ್ವಗುರು ಎನಿಸಿಕೊಂಡಿರುವ ಮೋದಿ ಸಾಧನೆ ಎಲ್ಲಿದೆ ತೋರಿಸಿ ಎಂದರು. ದೇಶದಲ್ಲಿ ಯುವಕರಿಗೆ ಉದ್ಯೋಗ ಕೊಡುತ್ತೇನೆ ಎಂದು ಹೇಳಿದ್ದ ಮೋದಿ ಭರವಸೆ ಸುಳ್ಳಾಗಿದೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಮಣಿಪುರ ಗಲಭೆ ನಿಯಂತ್ರಣ, ಕೃಷಿಕರಿಗೆ ಯೋಜನೆ ನೀಡುವಲ್ಲಿ ವಿಫಲ, ಆರ್ಥಿಕ ಸಮಸ್ಯೆ ಪರಿಹರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು ತಮ್ಮ ಕ್ಷೇತ್ರ ಅಭಿವೃದ್ಧಿಪಡಿಸಿದ್ದರೂ ಮತದಾರರು ಈ ಹಿಂದೆ ಸ್ಪಂದಿಸಿರಲಿಲ್ಲ. ಈ ಕಾರಣಕ್ಕೆ ಅವರಿಗೆ ಆದ ನೋವಿನ ಬಗ್ಗೆ ಹೇಳಿ, ಕೊನೆಗೆ ನನಗೆ ಮಣ್ಣಿಗಾದರೂ ಬನ್ನಿ ಎಂದು ಭಾವುಕರಾಗಿ ಹೇಳಿದ್ದಾರೆ ಎಂದರು.
ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆಯನ್ನು ಮುಖ್ಯಮಂತ್ರಿ ಖಂಡಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಹಿಂದೆ ಉಡುಪಿಯಲ್ಲಿ ಮುಸ್ಲಿಂ ಸಮುದಾಯದವರು ಕೊಲೆಯಾದರೆ ಬಿಜೆಪಿ ಮೌನ ವಹಿಸಿತ್ತು. ಈಗ ಹುಬ್ಬಳ್ಳಿಯಲ್ಲಿ ಆದ ಘಟನೆ ಬಗ್ಗೆ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದರು.
ಮದುವೆ ಆಹ್ವಾನ ಪತ್ರಿಕೆಯಲ್ಲಿ ಮೋದಿ ಗೆಲ್ಲಿಸುವಂತೆ ಮುದ್ರಿಸಿದ್ದಕ್ಕೆ ಬಿತ್ತು ಕೇಸ್!
ನಮ್ಮ ದೇಶದ ಲೋಕಸಭಾ ಚುನಾವಣೆ ವಿಶ್ವದಲ್ಲೇ ಮಹತ್ವ ಪಡೆದಿದೆ. ಆದರೆ ಬಿಜೆಪಿ ಹಾಗೂ ಪ್ರಧಾನಿ ಚುನಾವಣಾ ಭಾಷಣಗಳಲ್ಲಿ ಪದೇ ಪದೇ ಮಟನ್, ಮಚಲಿ, ಮುಸ್ಲಿಂ ಮತ್ತು ಮಂಗಳಸೂತ್ರದ ಬಗ್ಗೆ ಚರ್ಚೆ ಮಾಡಿ ಜನರನ್ನು ಭಾವನಾತ್ಮಕ ಕೆರಳಿಸುತ್ತಿದ್ದಾರೆ. ಕ್ಷುಲ್ಲಕ ರಾಜಕಾರಣ ಮಾಡುತ್ತ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದರು, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ಕಾಂಗ್ರೆಸ್ ಯುವ ಮುಖಂಡ ಸರ್ವೇಶ್ ಮಾಂತಗೊಂಡ, ಮೂಸ್ಟೂರು ರಾಜಶೇಖರ್, ನಾಗರಾಜ್ ನಂದಾಪುರ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.