ಇನ್ನೂ ಇಬ್ಬರು ಮಕ್ಕಳ ಹತ್ಯೆಗೆ ಕೇರಳ ಸೈನೈಡ್‌ ಸೊಸೆ ಸಂಚು!

By Web DeskFirst Published Oct 10, 2019, 3:52 PM IST
Highlights

ಇನ್ನೂ ಇಬ್ಬರು ಮಕ್ಕಳ ಹತ್ಯೆಗೆ ಕೇರಳ ಸೈನೈಡ್‌ ಸೊಸೆ ಸಂಚು!|  ಕೇರಳದ ಜೋಲಿ ಶಾಜು ಇನ್ನೂ ಇಬ್ಬರು ಮಕ್ಕಳ ಹತ್ಯೆಗೂ ಸಂಚು ರೂಪಿಸಿದ್ದ ಮಾಹಿತಿ ಬಹಿರಂಗ

ಕಲ್ಲಿಕೋಟೆ[ಅ.10]: ಆಸ್ತಿಯ ಆಸೆಗಾಗಿ ಪತಿ, ಅತ್ತೆ, ಮಾವ ಸೇರಿ ಕುಟುಂಬದ 6 ಮಂದಿಯನ್ನು ಸೈನೈಡ್‌ ಬೆರೆಸಿ ಹತ್ಯೆ ಮಾಡಿದ್ದ ಕೇರಳದ ಜೋಲಿ ಶಾಜು ಇನ್ನೂ ಇಬ್ಬರು ಮಕ್ಕಳ ಹತ್ಯೆಗೂ ಸಂಚು ರೂಪಿಸಿದ್ದಳು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಕುಟುಂಬ ಸದಸ್ಯರ ಊಟಕ್ಕೆ ಸೈನೈಡ್‌ ಬೆರೆಸಿ ಹತ್ಯೆ ಮಾಡಿದಂತೆಯೇ ಕುಟುಂಬದಲ್ಲಿ ಇಬ್ಬರು ಮಕ್ಕಳ ಹತ್ಯೆಗೆ ಯೋಜಿಸಿದ್ದಳು. ವಿಷಯುಕ್ತ ಆಹಾರ ಸೇವನೆ ಬಳಿಕ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು.

‘ಸೈನೈಡ್‌ ಸೊಸೆ’ಗೆ ಕೇರಳದಲ್ಲಿ 6 ಜನ ಬಲಿ!

ಆದರೆ, ಅದೃಷ್ಟವಶಾತ್‌ ಮಕ್ಕಳು ಬದುಕಿ ಉಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಪ್ರಕರಣಗಳನ್ನು ದೃಢಪಡಿಸಲು ಅತ್ಯಾಧುನಿಕ ಲ್ಯಾಬ್‌ನಲ್ಲಿ ಸಾಕ್ಷ್ಯಗಳನ್ನು ಪರೀಕ್ಷೆಗೆ ಒಳಪಡಿಸಲು, ಇಲ್ಲವೇ ವಿದೇಶಿ ಲ್ಯಾಬ್‌ಗಳ ಸಹಾಯ ಪಡೆಯಲು ಉದ್ದೇಶಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದ ಪಿ. ಟಾಮ್‌ ಥಾಮಸ್‌ (66), ಅವರ ಪತ್ನಿ ಅಣ್ಣಮ್ಮ (57), ಪುತ್ರ ರಾಯ್‌ ಥಾಮಸ್‌ (40), ಟಾಮ್‌ ಅವರ ಸೋದರನ ಸೊಸೆ ಸಿಲಿ ಶಾಜು (44), ಆಕೆಯ 2 ವರ್ಷದ ಮಗಳು ಆಲ್ಪೈನ್‌, ಅಣ್ಣಮ್ಮ ಸೋದರ ಮ್ಯಾಥ್ಯೂ ಮಂಜದಿಯಿಲ್‌ (68) ಅವರು 2002ರಿಂದ 2016ರ ನಡುವೆ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದರು. ಈ ಎಲ್ಲರ ಸಾವಿಗೆ ಸಾಕ್ಷಿಯಾಗಿದ್ದವಳು ರಾಯ್‌ ಥಾಮಸ್‌ ಅವರ ಪತ್ನಿ ಜಾಲಿ ಥಾಮಸ್‌.

ಇತ್ತೀಚೆಗೆ ಈಕೆ ಕುಟುಂಬದ ಆಸ್ತಿಯೊಂದನ್ನು ಕಬಳಿಸಲು ನಕಲಿ ಉಯಿಲೊಂದನ್ನು ಮಾಡಿಸಿದ್ದಳು. ಇದು ಅಮೆರಿಕದಲ್ಲಿ ನೆಲೆಸಿರುವ ರಾಯ್‌ ಥಾಮಸ್‌ ಅವರ ಸೋದರ ರೋಜೋ ಅವರಿಗೆ ಗೊತ್ತಾಗಿತ್ತು. ಅವರು ಪೊಲೀಸರಿಗೆ ದೂರು ನೀಡಿದ್ದರು. ಆಗ ಪೊಲೀಸರಿಗೆ ಅನುಮಾನ ಮೂಡಲು ಆರಂಭಿಸಿತು. ಪತ್ನಿ ನಿಧನಾನಂತರ ಜಾಲಿ ಥಾಮಸ್‌ ಮೃತ ಸಿಲಿ ಶಾಜು ಅವರ ಪತಿ ಶಾಜು ಸ್ಕಾರಿಯಾ ಅವರನ್ನು ವರಿಸಿದ್ದಳು. ಜತೆಗೆ ನಕಲಿ ಉಯಿಲು ಮಾಡಿದ್ದಳು. ಪೊಲೀಸರು ಆಳಕ್ಕಿಳಿದಾಗ ಹೊಸ ಹೊಸ ಸಂಗತಿಗಳು ಬೆಳಕಿಗೆ ಬಂದವು.

ಜಾಲಿ ಥಾಮಸ್‌ ವಿಚಾರಣೆಗೆ ಕರೆಸಿದ ಪೊಲೀಸರು ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದರು. ಆಕೆ ನಿರಾಕರಿಸಿದಾಗ ಮೃತದೇಹಗಳನ್ನು ಹೊರತೆಗೆದು ಪರೀಕ್ಷೆಗೊಳಪಡಿಸಲು ನಿರ್ಧರಿಸಿದರು. ಅದರಂತೆ ಶುಕ್ರವಾರ ಎಲ್ಲ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಮಂಗಳೂರು ನ್ಯಾಯಾಲಯದಿಂದ ಸೈಕೋ ಕಿಲ್ಲರ್ ಗೆ ಮರಣ ದಂಡನೆ

ಪೊಲೀಸರಿಗೆ ಜಾಲಿ ಮೇಲೆ ಅನುಮಾನ ಮೂಡಲು ಮತ್ತೊಂದು ಕಾರಣ ಏನೆಂದರೆ, ಆಕೆಯ ಪತಿ 2011ರಲ್ಲಿ ಊಟ ಸೇವನೆ ಬಳಿಕ ನಿಧನರಾಗಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ಆ ಸಂದರ್ಭ ಪರಿಶೀಲನೆಗೆ ಒಳಪಡಿಸಿದಾಗ ಅವರ ದೇಹದಲ್ಲಿ ವಿಷ ಪತ್ತೆಯಾಗಿತ್ತು. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಭಾವನೆ ಕುಟುಂಬದಲ್ಲಿ ಮೂಡಿತ್ತು. ಕುಟುಂಬದ ಮರಾರ‍ಯದೆ ಹಾಳಾಗುತ್ತದೆ ಎಂಬ ಕಾರಣ ನೀಡಿ ರಾಯ್‌ ಅವರದ್ದು ಹೃದಯಾಘಾತ ಎಂದು ಬಿಂಬಿಸಲಾಗಿತ್ತು.

ಒಟ್ಟಿನಲ್ಲಿ ಇಡೀ ಪ್ರಕರಣದಲ್ಲಿ ಜಾಲಿ ಥಾಮಸ್‌ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಆಕೆ ಹಾಗೂ ಆಕೆಯ ಎರಡನೇ ಪತಿ ಮತ್ತು ಸೈನೈಡ್‌ ಪೂರೈಸಿದ್ದಾನೆ ಎನ್ನಲಾದ ಬಂಧುವನ್ನು ಪೊಲೀಸರು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಜಾಲಿ ಥಾಮಸ್‌ ಎಂಬ ಸೈನೈಡ್‌ ಸೊಸೆಯ ಹಣೆಬರಹ ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ.

click me!