ಆರ್‌ಟಿಇ ‘ತಿದ್ದುಪಡಿ’ ಎತ್ತಿಹಿಡಿದ ಹೈಕೋರ್ಟ್‌

By Web DeskFirst Published Jun 1, 2019, 7:52 AM IST
Highlights

ಆರ್‌ಟಿಇ ‘ತಿದ್ದುಪಡಿ’ ಎತ್ತಿಹಿಡಿದ ಹೈಕೋರ್ಟ್‌ | ಅಧಿಸೂಚನೆ ಮಾನ್ಯ ಮಾಡಿದ ನ್ಯಾಯಾಲಯ | ಹತ್ತಿರದಲ್ಲಿ ಸರ್ಕಾರಿ, ಅನುದಾನಿತ ಶಾಲೆಯಿದ್ದರೆ ಆರ್‌ಟಿಇ ಅನ್ವಯವಿಲ್ಲ ಎಂಬ ಆದೇಶ ಊರ್ಜಿತ
 

ಬೆಂಗಳೂರು (ಜೂ. 01): ನೆರೆಹೊರೆಯಲ್ಲಿ ಸರ್ಕಾರಿ, ಸ್ಥಳೀಯ ಪ್ರಾಧಿಕಾರಗಳ ಅಥವಾ ಅನುದಾನಿತ ಶಾಲೆಗಳು ಇದ್ದಲ್ಲಿ ಅಂತಹ ಕಡೆ ‘ಶಿಕ್ಷಣ ಹಕ್ಕು ಕಾಯ್ದೆ’ಯಡಿ (ಆರ್‌ಟಿಇ) ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

ಈ ಸಂಬಂಧ ‘ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು-2012ರ ನಿಯಮ 4ಕ್ಕೆ ತಿದ್ದುಪಡಿ ತಂದು ರಾಜ್ಯ ಸರ್ಕಾರ 2019ರ ಜ.30ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.

ಸರ್ಕಾರದ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ತಿರಸ್ಕರಿಸಿದ ಹಿರಿಯ ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ, ಸರ್ಕಾರದ ಅಧಿಸೂಚನೆ ಎತ್ತಿಹಿಡಿದಿದೆ.

ಸರ್ಕಾರದ ಅಧಿಸೂಚನೆ ಅಸಂವಿಧಾನಿಕ, ಅನಿಯಂತ್ರಿತ ಹಾಗೂ ದುರುದ್ದೇಶದಿಂದ ಕೂಡಿದೆ. ಕಾನೂನನ್ನು ಉಲ್ಲಂಘಿಸುತ್ತದೆ ಎಂಬುದನ್ನು ನ್ಯಾಯಾಲಯಕ್ಕೆ ಮನದಷ್ಟುಮಾಡಿಕೊಡುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ.

ಸಂವಿಧಾನದ ಪರಿಚ್ಛೇಧ 21-ಎ ಅಡಿ ಶಿಕ್ಷಣವು ಒಂದು ಮೂಲಭೂತ ಹಕ್ಕು ಎಂಬುದರಲ್ಲಿ ಯಾವುದೇ ಸಂದೇಶವಿಲ್ಲ. ಆದರೆ, ನೆರೆಹೊರೆಯಲ್ಲಿ ಸರ್ಕಾರಿ, ಸ್ಥಳೀಯ ಪ್ರಾಧಿಕಾರಗಳ ಮತ್ತು ಅನುದಾನಿತ ಶಾಲೆಗಳು ಲಭ್ಯವಿರುವಾಗ ಖಾಸಗಿ ಶಾಲೆಯಲ್ಲಿಯೇ ಪ್ರವೇಶ ಕಲ್ಪಿಸಬೇಕು ಎಂದು ಕೇಳುವ ಹಕ್ಕು ಅರ್ಜಿದಾರರಿಗೆ ಹಾಗೂ ಅಂತಹ ವಿದ್ಯಾರ್ಥಿಗಳಿಗೆ ಇಲ್ಲ. ಹೀಗಾಗಿ ಸರ್ಕಾರದ ತಿದ್ದುಪಡಿ ಕಾನೂನು ಅಸಾಂವಿಧಾನಿಕ ಹಾಗೂ ನಿರಂಕುಶವಾಗಿಲ್ಲ. ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಸರ್ಕಾರಿ ಶಾಲೆಗಳು ಅತಂತ್ರ:

ಒಂದೊಮ್ಮೆ ಅರ್ಜಿದಾರರ ಮನವಿ ಪುರಸ್ಕರಿಸಿದರೆ ಸರ್ಕಾರಿ, ಸ್ಥಳೀಯ ಪ್ರಾಧಿಕಾರಗಳ ಮತ್ತು ಅನುದಾನಿತ ಶಾಲೆಗಳ ಭವಿಷ್ಯ ಅತಂತ್ರವಾಗಲಿದೆ ಎಂಬುದಾಗಿ ಸರ್ಕಾರಿ ವಕೀಲರ ಮಂಡಿಸಿರುವ ವಾದ ಸಮಂಜಸವಾಗಿದೆ ಎಂದು ತಿಳಿಸಿದ ನ್ಯಾಯಪೀಠ ಮೂರು ಅರ್ಜಿಗಳನ್ನೂ ತಿರಸ್ಕರಿಸಿ ಆದೇಶಿಸಿದೆ.

ಪ್ರಕರಣವೇನು?

ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿದ್ದರೆ ಅಂತಹ ಕಡೆ ಆರ್‌ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶಕ್ಕೆ ಅವಕಾಶವಿಲ್ಲ ರಾಜ್ಯ ಸರ್ಕಾರ 2019 ರ ಜ.30ರಂದು ಅಧಿಸೂಚನೆ ಹೊರಡಿಸಿತ್ತು.

ಆ ಅಧಿಸೂಚನೆ ಪ್ರಶ್ನಿಸಿ ‘ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘ’ದ ಪ್ರಧಾನ ಕಾರ್ಯದರ್ಶಿ ಬಿ.ಎನ್‌.ಯೋಗಾನಂದ, ‘ಎಜುಕೇಷನ್‌ ರೈಟ್ಸ್‌ ಟ್ರಸ್ಟ್‌’ ನ ಟ್ರಸ್ಟಿಸಿ.ಸುರೇಶ್‌ ಕುಮಾರ್‌ ಸೇರಿ ಐವರು ಮತ್ತು ವಿಜಯನಗರದ ನಿವಾಸಿ ಜಿ.ಜಾನಕಿದೇವಿ ಸೇರಿ ಐವರು ಪ್ರತ್ಯೇಕ ಮೂರು ಪಿಐಎಲ್‌ ಸಲ್ಲಿಸಿದ್ದರು.

ಸರ್ಕಾರದ ತಿದ್ದುಪಡಿ ನಿಯಮ ಕೇಂದ್ರದ ‘ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಮೂಲ ಕಾಯ್ದೆ-2009’ಕ್ಕೆ ತದ್ವಿರುದ್ಧವಾಗಿದೆ. ಸಂವಿಧಾನದ ಪರಿಚ್ಛೇಧ 21-ಎ ಅನ್ನು ಉಲ್ಲಂಘಿಸುತ್ತದೆ. ರಾಜ್ಯದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ದೂರಿದ್ದ ಅರ್ಜಿದಾರರು, ರಾಜ್ಯ ಸರ್ಕಾರದ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿದ್ದರು.
 

click me!