ಶಾಲೆ ಶುರುವಾಗಿ ತಿಂಗಳಾದರೂ ಮಕ್ಕಳಿಗೆ ಪುಸ್ತಕವಿಲ್ಲ!

First Published Jul 10, 2018, 10:43 AM IST
Highlights

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ 19 ಹಾಗೂ ಕರ್ನೂಲ್‌ ಜಿಲ್ಲೆಯಲ್ಲಿ 50 ಶಾಲೆಗಳು, ತೆಲಂಗಾಣ ರಾಜ್ಯದ ಹೈದ್ರಾಬಾದ್‌, ಮೆಹಬೂಬ್‌ನಗರ ಹಾಗೂ ಮೆದಕ್‌ ಜಿಲ್ಲೆಗಳ 40 ಶಾಲೆಗಳು ಸೇರಿದಂತೆ ಒಟ್ಟು 100 ಕನ್ನಡ ಶಾಲೆಗಳು ಆಂಧ್ರ- ತೆಲಂಗಾಣದಲ್ಲಿವೆ. 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ಪೈಕಿ ಕೆಲವು 100 ವರ್ಷ ಪೂರೈಸಿದ ಕನ್ನಡ ಮಾಧ್ಯಮ ಶಾಲೆಗಳೂ ಸಹ ಇವೆ.

ಬಳ್ಳಾರಿ (ಜು. 10):  ಶಾಲೆಗಳು ಶುರುವಾಗಿ ತಿಂಗಳು ಕಳೆದಿದ್ದರೂ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳ 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಪ್ರಥಮ ಭಾಷಾ ಪಠ್ಯ ಪುಸ್ತಕಗಳು ಇನ್ನೂ ಪೂರೈಕೆಯಾಗಿಲ್ಲ.

ಇದು ಈ ವರ್ಷದ ಗೋಳಲ್ಲ. ಕಳೆದ ಅರವತ್ತು ವರ್ಷಗಳಿಂದಲೂ ಇರುವ ಸಮಸ್ಯೆ. ಸರಿಯಾದ ಸಮಯಕ್ಕೆ ಸಮರ್ಪಕ ಪಠ್ಯ ಪುಸ್ತಕಗಳನ್ನು ಕನ್ನಡ ಶಾಲೆಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ತೆಗೆದುಕೊಳ್ಳುತ್ತಿಲ್ಲ.

ಭೌತಿಕವಾಗಿಯಷ್ಟೇ ಆಂಧ್ರ ಹಾಗೂ ತೆಲಂಗಾಣದಲ್ಲಿದ್ದು ಕನ್ನಡ ಭಾಷೆ, ಸಂಸ್ಕೃತಿಯನ್ನು ಉಸಿರಾಡುತ್ತಿರುವ ಕನ್ನಡಿಗರು ತಮ್ಮ ಮಕ್ಕಳನ್ನು ತಮ್ಮ ಭಾಷೆಯಲ್ಲಿಯೇ ಓದಿಸಬೇಕು ಎಂಬ ಆಸೆಗೆ ರಾಜ್ಯ ಸರ್ಕಾರವೇ ತಣ್ಣೀರು ಎರಚುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಈ ವರ್ಷವೂ ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕ ಪೂರೈಸದೇ ಉದಾಸೀನತೆ ಮೆರೆದಿದೆ.

ಎಷ್ಟುಶಾಲೆಗಳು? ಮಕ್ಕಳೆಷ್ಟು?

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ 19 ಹಾಗೂ ಕರ್ನೂಲ್‌ ಜಿಲ್ಲೆಯಲ್ಲಿ 50 ಶಾಲೆಗಳು, ತೆಲಂಗಾಣ ರಾಜ್ಯದ ಹೈದ್ರಾಬಾದ್‌, ಮೆಹಬೂಬ್‌ನಗರ ಹಾಗೂ ಮೆದಕ್‌ ಜಿಲ್ಲೆಗಳ 40 ಶಾಲೆಗಳು ಸೇರಿದಂತೆ ಒಟ್ಟು 100 ಕನ್ನಡ ಶಾಲೆಗಳು ಆಂಧ್ರ- ತೆಲಂಗಾಣದಲ್ಲಿವೆ. 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ಪೈಕಿ ಕೆಲವು 100 ವರ್ಷ ಪೂರೈಸಿದ ಕನ್ನಡ ಮಾಧ್ಯಮ ಶಾಲೆಗಳೂ ಸಹ ಇವೆ.

1958ರಿಂದಲೂ ಕನ್ನಡ ಪಠ್ಯ ಪುಸ್ತಕಗಳಿಗಾಗಿ ಪ್ರತಿವರ್ಷ ಬೇಡುವಂತಾಗಿದೆ. ಈ ಹಿಂದೆ ಬಳ್ಳಾರಿಯ ವಿಧಾನಪರಿಷತ್‌ ಸದಸ್ಯ ಮೃತ್ಯುಂಜಯ ಜಿನಗಾ ಅವರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ 2014ರಲ್ಲಿ ಆಂಧ್ರಪ್ರದೇಶದ ಕನ್ನಡ ಶಾಲೆಗಳಿಗೆ ಪ್ರತಿವರ್ಷ ಪುಸ್ತಕಗಳ ಪೂರೈಕೆಯ ಅಧಿಕೃತ ಆದೇಶ ಹೊರಡಿಸಿತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. 2015-16ನೇ ಸಾಲಿನಲ್ಲಿ ಶೇ. 80ರಷ್ಟುಮಾತ್ರ ಪಠ್ಯ ಪುಸ್ತಕಗಳು ಪೂರೈಕೆಯಾದವು. 2017-18ರಲ್ಲಿ ಆಂಧ್ರಪ್ರದೇಶದ ಕನ್ನಡ ಶಿಕ್ಷಕರ ಸಂಘದ ನಿರಂತರ ಪ್ರಯತ್ನದಿಂದಾಗಿ ಪಠ್ಯಪುಸ್ತಕಗಳು ಕೈ ಸೇರಿದವು. ಈ ಬಾರಿ ಶೈಕ್ಷಣಿಕ ವರ್ಷ ಶುರುವಾಗಿದ್ದರೂ ಪಠ್ಯಪುಸ್ತಕ ಪೂರೈಕೆಗೆ ಪೂರಕ ಕ್ರಮಗಳಾಗಿಲ್ಲ.

ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣ:

ಕರ್ನಾಟಕ ಸರ್ಕಾರ ಪ್ರಥಮ ಭಾಷಾ ಪಠ್ಯ ಪುಸ್ತಕಗಳನ್ನು ಪೂರೈಸಲೂ ಹಿಂದೆ- ಮುಂದೆ ನೋಡುತ್ತಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರು ಇದೀಗ ಅನಿವಾರ್ಯವಾಗಿ ತೆಲುಗು ಮಾಧ್ಯಮ ಶಾಲೆಗಳತ್ತ ವಾಲುವಂತಾಗಿದೆ.

ಕನ್ನಡ ಭಾಷಿಕರು ಭೌತಿಕವಾಗಿಯಷ್ಟೇ ಆಂಧ್ರದಲ್ಲಿದ್ದಾರೆ. ಅವರ ಮಾತೃಭಾಷೆ ಕನ್ನಡವಾಗಿದೆ. ಕೊಡು-ಕೊಳ್ಳು ಸಂಬಂಧಗಳು ಕರ್ನಾಟಕದಲ್ಲಿವೆ. ಭಾಷಾ ಪ್ರೇಮಕ್ಕಾಗಿ ಅವರು ತೆಲುಗು ಶಾಲೆಗಳತ್ತ ಮನಸ್ಸು ಮಾಡಿಲ್ಲ. ಆಂಧ್ರ ಸರ್ಕಾರ ಸಾಕಷ್ಟುಸೌಲಭ್ಯಗಳನ್ನು ನೀಡುತ್ತಿದ್ದರೂ ಮಾತೃಭಾಷಾ ಪ್ರೇಮಕ್ಕಾಗಿ ಮಕ್ಕಳನ್ನು ಕನ್ನಡ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಧೋರಣೆಯಿಂದ ಬೇಸತ್ತು ತೆಲುಗು ಮಾಧ್ಯಮದತ್ತ ಅನಿವಾರ್ಯವಾಗಿ ತೆರಳುವಂತಾಗಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ ಎನ್ನುತ್ತಾರೆ ಕನ್ನಡ ಶಿಕ್ಷಕರ ಸಂಘದ ಪದಾಧಿಕಾರಿಗಳು.

ಕೋಟ್‌

ಪ್ರತಿ ವರ್ಷ ಕನ್ನಡ ಪಠ್ಯಪುಸ್ತಕಗಳಿಗಾಗಿ ಭಿಕ್ಷೆ ಬೇಡುವಂತಾಗಿದೆ. ರಾಜ್ಯ ಸರ್ಕಾರ 2014ರಲ್ಲಿ ಅಧಿಕೃತ ಆದೇಶ ನೀಡಿದ್ದರೂ ಸರಿಯಾಗಿ ಪಠ್ಯ ಪುಸ್ತಕಗಳು ಪೂರೈಕೆಯಾಗುತ್ತಿಲ್ಲ. ಡಿಡಿಪಿಐ ಕಚೇರಿಗೆ ತಿರುಗಾಟ ಮಾಡಿ ನಮಗೂ ಸಾಕಾಗಿದೆ. ಪಠ್ಯ ಪುಸ್ತಕಗಳ ಕೊರತೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಸ್ಥಿತಿ ಡೋಲಾಯಮಾನವಾಗಿದೆ.

- ಎಂ. ಗಿರಿಜಾಪತಿ, ಅಧ್ಯಕ್ಷರು, ಅನಂತಪುರ ಜಿಲ್ಲಾ ಕನ್ನಡ ಶಿಕ್ಷಕರ ಸಂಘ, ಡಿ.ಹಿರೇಹಾಳ್‌, ಆಂಧ್ರಪ್ರದೇಶ

-ಕೆ.ಎಂ. ಮಂಜುನಾಥ್‌

click me!