ಕರ್ನಾಟಕದಲ್ಲಿ ಪ್ರವಾಹಕ್ಕೆ 3000 ಕಿ.ಮೀ. ರಸ್ತೆ ನೆಲಸಮ!

By Web DeskFirst Published Aug 17, 2019, 10:46 AM IST
Highlights

ಪ್ರವಾಹಕ್ಕೆ 3000 ಕಿ.ಮೀ. ರಸ್ತೆ ನೆಲಸಮ! 2500 ಕಿ.ಮೀ. ಪುನರ್‌ ನಿರ್ಮಾಣ ಅನಿವಾರ್ಯ| ಸಂಚಾರ ಯೋಗ್ಯ ಸ್ಥಿತಿಗೆ ತರಲಿಕ್ಕೇ .2000 ಕೋಟಿ ಬೇಕು| ಶತಮಾನದ ಮಳೆಗೆ ರಾಜ್ಯದ ರಸ್ತೆಗಳು ಹಾಳು| ಬೆಳಗಾವಿಯಲ್ಲಿ ಭಾರಿ ನಷ್ಟ

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು[ಆ.17]: ರಾಜ್ಯದಲ್ಲಿ ಉಂಟಾಗಿರುವ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಸುಮಾರು 3,000 ಕಿ.ಮೀ. ಉದ್ದದ ರಸ್ತೆ ಹಾಳಾಗಿದ್ದು, 2,500 ಕಿ.ಮೀ. ರಸ್ತೆ ಸಂಪೂರ್ಣ ಪುನರ್‌ನಿರ್ಮಾಣ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಎರಡು ವಾರಗಳ ಕಾಲ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಸುರಿದ ಭಾರಿ ಮಳೆ ಮತ್ತು ಮಹಾರಾಷ್ಟ್ರ ಮಳೆಯಿಂದಾಗಿ ಉಂಟಾದ ಪ್ರವಾಹದಿಂದಾಗಿ ರಸ್ತೆಗಳ ಕಳಪೆ ಕಾಮಗಾರಿ ಬಣ್ಣ ಬಯಲಾಗಿದೆ. ರಾಜ್ಯದಲ್ಲಿರುವ 76,000 ಕಿ.ಮೀ. ಪ್ರಮುಖ ರಸ್ತೆಗಳ ನಿರ್ವಹಣೆಗಾಗಿಯೇ ಸರ್ಕಾರ ಪ್ರತಿ ವರ್ಷ 10 ಸಾವಿರ ಕೋಟಿ ರು. ವೆಚ್ಚ ಮಾಡುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ ವರ್ಷಕ್ಕೆ 1 ಸಾವಿರ ಕಿ.ಮೀ.ನಷ್ಟುಸರಾಸರಿ ರಸ್ತೆ ನಿರ್ಮಾಣ ಮಾಡುತ್ತದೆ. ರಸ್ತೆಗಳ ನಿರ್ವಹಣೆಗೆ ಹಣ ಹೊಂದಿಸುವುದಕ್ಕಾಗಿಯೇ ಹೆಣಗಾಡುವ ಪರಿಸ್ಥಿತಿ ಇದೆ. ಇದೀಗ 136 ಪ್ರಮುಖ ರಸ್ತೆಗಳ ಬರೋಬ್ಬರಿ 3,000 ಕಿ.ಮೀ. ಉದ್ದದ ರಸ್ತೆ ಹಾಳಾಗಿದ್ದು, 2,500 ಕಿ.ಮೀ. ಉದ್ದದ ರಸ್ತೆ ಪುನರ್‌ನಿರ್ಮಾಣ ಮಾಡುವ ಅನಿವಾರ್ಯತೆಗೆ ಸಿಲುಕಿದೆ. ಇದಲ್ಲದೆ ಸುಮಾರು 300 ಸೇತುವೆಗಳು ಹಾಳಾಗಿವೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ರಸ್ತೆಗಳನ್ನು ಸಂಚಾರಯೋಗ್ಯ ಸ್ಥಿತಿಗೆ ತರಲೂ ತಕ್ಷಣಕ್ಕೆ 1,500 ಕೋಟಿ ರು.ಗಳಿಂದ 2,000 ಕೋಟಿ ರು. ಅಗತ್ಯವಿದೆ. ಮರು ನಿರ್ಮಾಣಕ್ಕೆ ಸಾಕಷ್ಟುಹಣದ ಅಗತ್ಯವಿದೆ. ರಾಜ್ಯಾದ್ಯಂತ ರಸ್ತೆಗಳ ನಿರ್ವಹಣೆ ನೋಡಿಕೊಂಡು ಈ ರಸ್ತೆಗಳನ್ನು ಮರು ನಿರ್ಮಾಣ ಮಾಡಬೇಕಾಗುತ್ತದೆ. ಹೀಗಾಗಿ ಭಾರಿ ಪ್ರಮಾಣದ ಹಣಕಾಸು ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಬೆಳಗಾವಿಯಲ್ಲೇ 1,410 ಕಿ.ಮೀ.ರಸ್ತೆ ಹಾನಿ:

ಕಂದಾಯ ಇಲಾಖೆ ಮಾಹಿತಿ ಪ್ರಕಾರ, ಮಳೆ ಹಾಗೂ ಪ್ರವಾಹದಿಂದಾಗಿ 136 ಪ್ರಮುಖ ರಸ್ತೆಗಳಿಗೆ ಹಾನಿ ಉಂಟಾಗಿದೆ. ಆಗಸ್ಟ್‌ 8ರವರೆಗೆ ನಡೆದ ಪರಿಶೀಲನೆಯಲ್ಲಿ ಬೆಳಗಾವಿ ಜಿಲ್ಲೆಯ 1,410 ಕಿ.ಮೀ. ರಸ್ತೆ ಹಾಗೂ 211 ಸೇತುವೆಗಳು ಹಾನಿಗೆ ಒಳಗಾಗಿವೆ. 300ಕ್ಕೂ ಹೆಚ್ಚು ಕಿ.ಮೀ. ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿವೆ. ಉಳಿದಂತೆ ರಾಷ್ಟ್ರೀಯ ಹೆದ್ದಾರಿ -66 ಹಾಗೂ ರಾ. ಹೆದ್ದಾರಿ- 275 ಹಾಗೂ ರಾಜ್ಯ ಹೆದ್ದಾರಿ 91 (ವಿರಾಜಪೇಟೆ- ಮಾಕುಟ್ಟಾ) ಭಾರಿ ಹಾನಿಗೊಳಗಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ನೀರಿನ ಒತ್ತಡದಿಂದ ಕುಸಿದುಬಿದ್ದಿದೆ. ಒಂದು ವರ್ಷದ ಹಿಂದಷ್ಟೇ ನಿರ್ಮಿಸಿದ್ದ ಕುಳಗೇರಿ ಕ್ರಾಸ್‌ನಿಂದ ಕೊಣ್ಣೂರಗೆ ಹೋಗುವ ಮಾರ್ಗದಲ್ಲಿ ಹೆದ್ದಾರಿ ಕಿತ್ತು ಹೋಗಿದೆ ಎಂದು ತಿಳಿದುಬಂದಿದೆ.

ಬೆಳಗಾವಿ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಾಗಲಕೋಟೆಯಲ್ಲಿ ರಸ್ತೆಗಳು ಭಾರಿ ಹಾನಿಗೆ ಗುರಿಯಾಗಿವೆ. ಲೋಕೋಪಯೋಗಿ ಇಲಾಖೆ ರಸ್ತೆಗಳೇ ರಾಜ್ಯದಲ್ಲಿ ಶೇ.75 ರಷ್ಟುವಾಹನಗಳ ಸಂಚಾರಕ್ಕೆ ಸಂಪರ್ಕ ಕಲ್ಪಿಸುತ್ತವೆ. ಉಳಿದಂತೆ ಮಲೆನಾಡು, ಕರಾವಳಿ ಭಾಗದಲ್ಲಿ ಆರ್ಟಿರಿಯಲ್‌ ರಸ್ತೆಗಳೂ ಭಾರಿ ಪ್ರಮಾಣದಲ್ಲಿ ಹಾಳಾಗಿವೆ. ಹಾಸನ- ಮಂಗಳೂರು, ಮಡಿಕೇರಿ- ಮಂಗಳೂರು, ಶಿವಮೊಗ್ಗ- ಚಿಕ್ಕಮಗಳೂರು ಹೆದ್ದಾರಿಗಳು ಹಾಳಾಗಿವೆ. ಚಾರ್ಮಾಡಿ ಘಾಟ್‌, ಶಿರಾಡಿ ಘಾಟ್‌ನ ಹಲವೆಡೆ ರಸ್ತೆಯಲ್ಲಿ ಮಣ್ಣು ಕುಸಿತ ಉಂಟಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳಪೆ ಕಾಮಗಾರಿ ಆರೋಪ:

ಎರಡು ವಾರದಲ್ಲಿ ಸುರಿದ ಮಳೆಗೆ 3 ಸಾವಿರ ಕಿ.ಮೀ.ಗೂ ಹೆಚ್ಚು ಉದ್ದದ ರಸ್ತೆ ಹಾಳಾಗಿದೆ. ಜತೆಗೆ ವರ್ಷದ ಹಿಂದಷ್ಟೇ ನಿರ್ಮಿಸಿದ ರಸ್ತೆಗಳೂ ಹಾಳಾಗಿವೆ. ಹೀಗಾಗಿ ಕಳಪೆ ಕಾಮಗಾರಿ ನಡೆದಿರುವ ಹಾಗೂ ಅವೈಜ್ಞಾನಿಕ ವಿನ್ಯಾಸದಲ್ಲಿ ರಸ್ತೆ ನಿರ್ಮಾಣ ಮಾಡಿರುವ ಆರೋಪ ವ್ಯಕ್ತವಾಗಿದೆ.

ಮತ್ತೊಂದೆಡೆ, ಶತಮಾನದಲ್ಲೇ ಅತಿ ಹೆಚ್ಚು ಮಳೆ ಉಂಟಾಗಿದೆ. ಲೋಕೋಪಯೋಗಿ ಇಲಾಖೆಯು ಇಂಡಿಯನ್‌ ರೋಡ್‌ ಕಾಂಗ್ರೆಸ್‌ನ ನಿಯಮಾವಳಿಗಳ ಅಡಿಯಲ್ಲೇ ರಸ್ತೆ ನಿರ್ಮಾಣ ಮಾಡಿದೆ. ಇಂತಹ ಭಾರಿ ಮಳೆ ಉಂಟಾದರೆ ಯಾವ ರಸ್ತೆಗಳೂ ಉಳಿಯಲು ಸಾಧ್ಯವಿಲ್ಲ. ಭಾರಿ ಮಳೆಯಿಂದಲೇ ರಸ್ತೆಗಳು ಹಾಳಾಗಿವೆ ಎಂದು ಇಲಾಖೆ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

* ಪ್ರವಾಹ ಆಗಲಿ, ಭೂಕಂಪವೇ ಆಗಲಿ. ಪೂರ್ವ ಸಿದ್ಧತೆಯೊಂದಿಗೆ ನಾವು ರಸ್ತೆಗಳನ್ನು ನಿರ್ಮಿಸಬೇಕು. ಅಮೆರಿಕದಲ್ಲಿ ಇದಕ್ಕಿಂತ ದೊಡ್ಡ ಮಟ್ಟದ ಪ್ರವಾಹ ಆದರೂ ಇಷ್ಟುಪ್ರಮಾಣದ ರಸ್ತೆ ಹಾನಿಯಾಗಿಲ್ಲ. ಕೋಟ್ಯಂತರ ರು. ಸುರಿಯುವ ಮೊದಲು ಮಳೆ ನೀರು, ಪ್ರವಾಹ ತಡೆದುಕೊಳ್ಳುವ ನಿಟ್ಟಿನಲ್ಲಿ ರಸ್ತೆಗಳನ್ನು ವೈಜ್ಞಾನಿಕವಾಗಿ ವಿನ್ಯಾಸ ಮಾಡಬೇಕು. ರಸ್ತೆಗಳು ಹಾಳಾಗಿರುವುದಕ್ಕೆ ಕಳಪೆ ಕಾಮಗಾರಿಯೂ ಕಾರಣವಾಗಿರಬಹುದು.

- ಎಂ.ಎನ್‌. ಶ್ರೀಹರಿ, ರಸ್ತೆ ಮತ್ತು ಸುರಕ್ಷತೆ ತಜ್ಞ.

click me!