
ಬೆಂಗಳೂರು (ಮೇ.02): ‘ಒಎಲ್‌ಎಕ್ಸ್’ ಆ್ಯಪ್‌ನಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿ ನೆಪದಲ್ಲಿ ದುಷ್ಕರ್ಮಿಯೊಬ್ಬ ಹಣ ಪಾವತಿಸುವುದಾಗಿ ವೈದ್ಯೆಯ ಬ್ಯಾಂಕ್ ಖಾತೆಯಿಂದ ₹9.60 ಲಕ್ಷ ಎಗರಿಸಿರುವ ಆರೋಪದಡಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಣ ಕಳೆದುಕೊಂಡ ವಸಂತನಗರ ನಿವಾಸಿ ನೀತಿ ಮಥುರ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಶೋಕ ಕುಮಾರ್ ಎಂಬಾತನ ವಿರುದ್ಧ ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿ ಆತನ ಪತ್ತೆಗೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಏನಿದು ಪ್ರಕರಣ?: ವೃತ್ತಿಯಲ್ಲಿ ವೈದ್ಯೆಯಾಗಿರುವ ನೀತಿ ಮಥುರ್ ಅವರು ‘ಒಎಲ್‌ಎಕ್ಸ್’ ಆ್ಯಪ್‌ನಲ್ಲಿ ತಮ್ಮ ಗೃಹೋಪಯೋಗಿ ವಸ್ತುಗಳನ್ನು ಮಾರಾಟಕ್ಕೆ ಇರಿಸಿದ್ದರು. ಈ ಸಂಬಂಧ ಅಶೋಕಕುಮಾರ್ ಎಂಬಾತ ಏ.24ರಂದು ಸಂಜೆ ವಾಟ್ಸಾಪ್‌ನಲ್ಲಿ ನೀತಿ ಅವರನ್ನು ಸಂಪರ್ಕಿಸಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಇಚ್ಛಿಸಿರುವುದಾಗಿ ಸಂದೇಶ ಕಳುಹಿಸಿದ್ದಾನೆ. ಬಳಿಕ ಮುಂಗಡವಾಗಿ ಹಣ ಪಾವತಿಸಲು ಕ್ಯೂರ್‌ಆರ್ ಕೋಡ್ ಕಳುಹಿಸುವಂತೆ ಕೇಳಿದ್ದಾನೆ. ಅದರಂತೆ ನೀತಿ ಕ್ಯೂಆರ್ ಕೋಡ್ ಕಳುಹಿಸಿದ್ದಾರೆ.
ರಾಕ್ಷಸ ಪರಾರಿಯಾದ ಬಗ್ಗೆ ಪ್ರಧಾನಿ ಮೋದಿ ಹೇಳಲಿ: ರಾಹುಲ್ ಗಾಂಧಿ
ಆನ್‌ಲೈನ್ ಪಾವತಿಯ ಸೋಗ ಹಣ ಎಗರಿಸಿದ: ಕ್ಯೂಆರ್ ಕೋಡ್ ಬಳಸಿಕೊಂಡು ದುಷ್ಕರ್ಮಿ, ನೀತಿ ಅವರ ಬ್ಯಾಂಕ್ ಖಾತೆಯಲ್ಲಿ ತಲಾ ₹22 ಸಾವಿರದಂತೆ ಮೂರು ಬಾರಿ ಒಟ್ಟು ₹66 ಸಾವಿರ ಎಗರಿಸಿದ್ದಾನೆ. ಬಳಿಕ ನೀವು ಕಳುಹಿಸಿರುವ ಕ್ಯೂಆರ್ ಕೋರ್ಡ್ ಸರಿಯಿಲ್ಲ ಎಂದಿದ್ದು, ನೆಟ್ ಬ್ಯಾಂಕ್ ಆ್ಯಪ್‌ನಿಂದ ಹಣ ಪಾವತಿಸುವುದಾಗಿ ಹೇಳಿ ನೀತಿ ಅವರಿಂದ ನೆಟ್ ಬ್ಯಾಂಕ್ ಖಾತೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾನೆ. ಈ ವೇಳೆ ನೀತಿ ಅವರ ನೆಟ್ ಬ್ಯಾಂಕ್ ಖಾತೆಯಿಂದ ₹22 ಬಾರಿ ಒಟ್ಟು ಬರೋಬ್ಬರಿ ₹8.94 ಲಕ್ಷ ಎಗರಿಸಿದ್ದಾನೆ. ಕೆಲ ಸಮಯದ ಬಳಿಕ ನೀತಿ ಅವರ ಮೊಬೈಲ್‌ಗೆ ಹಣ ಕಡಿತದ ಬಗ್ಗೆ ಸಂದೇಶ ಬಂದಿದೆ. ಈ ವೇಳೆ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಬಳಿಕ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ