
ಬೆಂಗಳೂರು (ಮೇ.02): ಜೆಪಿ ನಗರ ಮೊದಲ ಹಂತದ ಆಕ್ಸ್‌ಫರ್ಡ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ವರ್ಗಾವಣೆ ಪ್ರಮಾಣ ಪತ್ರ ಬಯಸುವ ಮಕ್ಕಳಿಗೆ ಮುಂದಿನ ಶೈಕ್ಷಣಕ ವರ್ಷದ ಭಾಗಶಃ ಶುಲ್ಕ ಪಡೆಯುತ್ತಿರುವುದಾಗಿ ಕೆಲ ಪೋಷಕರು ಆರೋಪಿಸಿದ್ದಾರೆ. ತಮ್ಮ ಮಗುವಿನ ವರ್ಗಾವಣೆ ಪ್ರಮಾಣ ಪತ್ರ ನೀಡಲು ಈ ಶಾಲೆಯ ಪ್ರಾಂಶುಪಾಲರು ಇನ್ನೂ ಆರಂಭವೇ ಆಗದ 2024-25ನೇ ಸಾಲಿನ ಲೆಕ್ಕದಲ್ಲಿ ₹22,500 ಶುಲ್ಕ ಪಡೆದು ಟಿಸಿ ನೀಡಿರುವುದಾಗಿ ಈ ಶಾಲೆಯಲ್ಲಿ ಐದನೇ ತರಗತಿವರೆಗೆ ಓದಿದ ವಿದ್ಯಾರ್ಥಿನಿಯೊಬ್ಬರ ಪೋಷಕರಾದ ತಂದೆ ಭುಜಂಗರಾವ್ ಮತ್ತು ತಾಯಿ ಡಾ। ಪ್ರೀತಿ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಶಾಲೆಯ ಈ ಅಕ್ರಮವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಜೊತೆಗೆ ಕೇಂದ್ರ ಶಿಕ್ಷಣ ಇಲಾಖೆಗೂ ದೂರು ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಮಾಹಿತಿ ನೀಡಿದ ಡಾ। ಪ್ರೀತಿ ಅವರು, ಈ ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ನಮಗೆ ತೃಪ್ತಿ ತರದ ದೃಷ್ಟಿಯಿಂದ ನಮ್ಮ ಮಗುವನ್ನು ನಾವು 6ನೇ ತರಗತಿಗೆ ಬೇರೆ ಶಾಲೆಗೆ ಸೇರಿಸಲು ನಿರ್ಧರಿಸಿ ಏಪ್ರಿಲ್ 15ರಂದು ವರ್ಗಾವಣೆ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದೇವೆ. ನಂತರ ಎರಡು ಮೂರು ಬಾರಿ ಅಲೆದರೂ ಟಿಸಿ ಕೊಡದೆ ಸತಾಯಿಸಿದರು. ಬಳಿಕ ಶಾಲೆಯ ಪ್ರಾಂಶುಪಾಲರು ಈ ರೀತಿ ವರ್ಗಾವಣೆ ಬಯಸುವುದಾದರೆ ಅದನ್ನು ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸಬೇಕು.
ದೇವೇಗೌಡ್ರು ಪ್ಲಾನ್ ಮಾಡಿಯೇ ಪ್ರಜ್ವಲ್‌ನ ವಿದೇಶಕ್ಕೆ ಕಳ್ಸಿದ್ದಾರೆ: ಸಿಎಂ ಸಿದ್ದರಾಮಯ್ಯ
ಇಲ್ಲದಿದ್ದರೆ ಮುಂದಿನ ಸಾಲಿನ ದಾಖಲಾತಿ ಶುಲ್ಕ ಮತ್ತು ಒಂದು ಟರ್ಮಿನ ಇತರೆ ಶುಲ್ಕ ಪಾವತಿಸಬೇಕೆಂದು ನಾವು ಮೊದಲೇ ನಮ್ಮ ಶಾಲೆಯ ನಿಯಮದಲ್ಲಿ ತಿಳಿಸಿದ್ದೇವೆ. ಅದರಂತೆ ನೀವು ₹22,500 ಪಾವತಿಸಿದರೆ ಮಾತ್ರ ಟಿಸಿ ನೀಡುವುದಾಗಿ ಹೇಳಿದರು. ಇದರಿಂದ ಅನಿವಾರ್ಯವಾಗಿ ನಾವು ಅಷ್ಟೂ ಶುಲ್ಕ ಪಾವತಿಸಿ ಟಿಸಿ ಪಡೆದಿದ್ದೇವೆ. ಇದಕ್ಕೆ ಶಾಲೆಯವರು ರಸೀದಿಯನ್ನೂ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈ ರಸೀದಿಯನ್ನು ಆಧಾರವಾಗಿಟ್ಟುಕೊಂಡು ನಾವು ಈಗಾಗಲೇ ಎಕ್ಸ್ ಖಾತೆ ಮೂಲಕ ಕೇಂದ್ರ ಶಿಕ್ಷಣ ಇಲಾಖೆಗೆ ಟ್ಯಾಗ್ ಮಾಡಿ ದೂರು ನೀಡಿದ್ದೇವೆ. ಜೊತೆಗೆ ಸ್ಥಳೀಯ ರಾಜ್ಯ ಸರ್ಕಾರದ ಶಿಕ್ಷಣಾಧೀಕಾರಿಗಳು ಮತ್ತು ಉಪನಿದೇಶಕರಿಗೂ ದೂರು ನೀಡುತ್ತೇವೆ. ಸರ್ಕಾರ ಈ ಶಾಲೆಯ ಅಕ್ರಮ ಹಣ ವಸೂಲಿ ವಿರುದ್ಧ ಕ್ರಮ ಜರುಗಿಸಬೇಕೆಂದು ಡಾ.ಪ್ರೀತಿ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ