
ಬೆಂಗಳೂರು : ಖಾಸಗಿ ಶಾಲೆಗಳಲ್ಲಿ ಮನಸೋ ಇಚ್ಛೆ ವಿಧಿಸುತ್ತಿದ್ದ ಶುಲ್ಕಕ್ಕೆ ಕಡಿವಾಣ ಹಾಕಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಕೊನೆಗೂ ನಿರ್ಧರಿಸಿದೆ.
ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ (ಶಾಲಾ ಶುಲ್ಕ ನಿಯಂತ್ರಣ ಮತ್ತು ಡೊನೇಶನ್) ಅಧಿನಿಯಮ ಗಳು (ತಿದ್ದುಪಡಿ) - 2016 ಅಧಿಸೂಚನೆ ಪ್ರಕಟಿಸಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ನಿಯಮಗಳು ಜಾರಿಯಾಗಲಿವೆ. ನಿಯಮಗಳ ಪ್ರಕಾರ ಯಾವುದೇ ಶಾಲೆಗಳು ಪ್ರತಿ ವರ್ಷ ಗರಿಷ್ಠ ಶೇ.15 ಕ್ಕಿಂತ ಪ್ರವೇಶ ಶುಲ್ಕ ಹೆಚ್ಚಳ ಮಾಡುವಂತಿಲ್ಲ. ಶಾಲಾ ಸಿಬ್ಬಂದಿ ವೇತನ ಮತ್ತು ಶಾಲಾ ಖರ್ಚು ವೆಚ್ಚಗಳನ್ನು ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆಯಿಂದ ಭಾಗಿಸಿ ನಿಗದಿ ಮಾಡಬೇಕು ಎಂದು ತಿಳಿಸಿದೆ.
ಶಾಲಾ ಶುಲ್ಕ ನಿಯಂತ್ರಣ ಕಾಯ್ದೆಯು ಕೇಂದ್ರೀಯ ಪಠ್ಯಕ್ರಮ ಬೋಧಿಸುವ ಐಸಿಎಸ್‌ಇ, ಸಿಬಿಎಸ್‌ಇ ಮತ್ತು ರಾಜ್ಯ ಪಠ್ಯಕ್ರಮ ಬೋಧಿಸುವ ಶಾಲೆಗಳು ಸೇರಿದಂತೆ ಎಲ್ಲ ಖಾಸಗಿ ಶಾಲೆಗಳಿಗೂ ಅನ್ವಯಿಸಲಿದೆ. ಶುಲ್ಕ ನಿಗದಿ ಮಾಡಿರುವುದನ್ನು ಪೋಷಕರು ಮತ್ತು ಸಾರ್ವಜನಿಕರಿಗೆ ಮಾಹಿತಿ ದೊರೆಯುವಂತೆ ಶಾಲೆಯ ಅಧಿಕೃತ ವೆಬ್‌ಸೈಟ್ ಹಾಗೂ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಶಾಲಾ ನಿರ್ವಹಣಾ ವೆಚ್ಚವು 2500 ರು. ಮೀರುವಂತಿಲ್ಲ ಎಂದು ಸೂಚಿಸಿದೆ.
ಆದರೆ, ಖಾಸಗಿ ಶಾಲೆಗಳು ಶಾಲಾ ನಿರ್ವಹಣಾ ವೆಚ್ಚವನ್ನು ಕನಿಷ್ಠ ಐದು ಸಾವಿರ ರು. ಗಳಿಗೆ ನಿಗದಿ ಮಾಡುವಂತೆ ಅಹವಾಲು ಸಲ್ಲಿಸಿದ್ದವು. ಈ ಕುರಿತು ಪ್ರತಿಕ್ರಿಯಿಸಿರುವ ಖಾಸಗಿ ಶಾಲೆಗಳ ಒಕ್ಕೂಟ (ಕ್ಯಾಮ್ಸ್)ದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಸರ್ಕಾರವು ಉತ್ತಮ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದಲ್ಲಿ ಶುಲ್ಕ ನಿಯಂತ್ರಣಕ್ಕೆ ಮುಂದಾಗಿ ರುವುದು ಉತ್ತಮ ಬೆಳವಣಿಗೆ. ಇದು ಲಕ್ಷಾಂತರ ರು.ಗಳ ಡೊನೇಷನ್ ಪಾವತಿಸುತ್ತಿದ್ದ ಪೋಷಕರಲ್ಲಿ ನೆಮ್ಮದಿ ತಂದಿದೆ. ಮಾರ್ಗಸೂಚಿ ಪ್ರಕಾರ ಶಾಲೆಗಳು ಶುಲ್ಕ ನಿಗದಿ ಮಾಡುವ ಹೊಣೆಗಾರಿಕೆಯನ್ನು ಹೊಂದಿವೆ ಎಂದು ತಿಳಿಸಿದ್ದಾರೆ.
ಡೇರಾಗೆ ದೂರು ನೀಡಬಹುದು: 2018-19ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಶುಲ್ಕ ಪಾವತಿ ಯಾಗಿರುತ್ತದೆ. ಹೀಗಾಗಿ, ಸಂಬಂಧಪಟ್ಟ ಶಾಲೆಗಳ ಶುಲ್ಕ ನಿಗದಿ ಮಾಡಿರುವುದನ್ನು ಪೋಷಕರು ಪ್ರಶ್ನಿಸಬಹುದು. ಒಂದು ವೇಳೆ ಹೆಚ್ಚಿನ ಶುಲ್ಕ ಪಡೆದಿದ್ದಲ್ಲಿ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ (ಡೇರಾ)ಕ್ಕೆ ದೂರು ನೀಡಬಹುದು. ಈ ಸಂಬಂಧ ಯಾವುದೇ ಪೋಷಕರ ಸಂಘಟನೆಯ ಅನುಮತಿ ಕೇಳುವಅವಶ್ಯಕತೆ ಇಲ್ಲ. ನೇರವಾಗಿಯೇ ಇಲಾಖೆ ಆಯುಕ್ತರು ಅಥವಾ ಡೇರಾಗೆ ದೂರು ನೀಡಬಹುದು ಎಂದು ಹೇಳಿದೆ.
20 ವರ್ಷದಿಂದ ನೆನೆಗುದಿಗೆ: ಶಾಲಾ ಶುಲ್ಕ ನಿಯಂತ್ರಣ ನಿರ್ಧಾರವು ಕಳೆದ 20 ವರ್ಷದಿಂದ ನೆನೆಗುದಿಗೆ ಬಿದ್ದಿತ್ತು. ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಖಾಸಗಿ ಶಾಲೆ ಗಳು ಮನಸೋಇಚ್ಛೆ ಶುಲ್ಕ ವಿಧಿಸುತ್ತಿವೆ. ಅದರಲ್ಲಿಯೂ ರಾಜಧಾನಿ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಖಾಸಗಿ ಶಾಲೆಗಳ ಶುಲ್ಕ ಮಿತಿ ಮೀರಿದೆ. ಈ ಸಂಬಂಧ ಪ್ರತಿ ವರ್ಷ ಪೋಷಕರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಶಾಲಾ ಶುಲ್ಕ ನಿಯಂತ್ರಣಕ್ಕಾಗಿ ಸರ್ಕಾರವು 2015 ರಿಂದ ನಿರಂತರ ಪ್ರಯತ್ನ ಮಾಡುತ್ತಿದೆ. ಕರ್ನಾಟಕ ಶಿಕ್ಷಣ ಕಾಯ್ದೆ-1983 ಕ್ಕೆ ತಿದ್ದುಪಡಿ ತರುವ ಮೂಲಕ ಶಾಸಗಿ ಶಾಲೆಗಳ ಸಂಯೋ ಜನೆಯ ಮೇಲೆ ನಿಯಂತ್ರಣ ವಿಧಿಸಲು ಸಿದ್ಧತೆ ನಡೆಸಿತ್ತು. ಇದೀಗ ಅಂತಿಮವಾಗಿ ಜಾರಿಗೆ ತರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.