ರೇವಣ್ಣ ಖಾತೆಗೆ 15,790 ಕೋಟಿ ರು. ಹಣದ ಹೊಳೆ

By Web DeskFirst Published Feb 9, 2019, 8:39 AM IST
Highlights

ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಎರಡನೇ ಬಜೆಟ್‌ನಲ್ಲೂ ‘ಸೋದರನ ಮೇಲೆ ಪ್ರೀತಿ’ ತೋರಿಸಿದ್ದಾರೆ. ಎಚ್‌.ಡಿ.ರೇವಣ್ಣ ಅವರ ನಿರ್ವಹಣೆಯ ಲೋಕೋಪಯೋಗಿ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ 15,790 ಕೋಟಿ ಅನುದಾನ ನೀಡಿದ್ದಾರೆ. 

ಬೆಂಗಳೂರು :  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಎರಡನೇ ಬಜೆಟ್‌ನಲ್ಲೂ ‘ಸೋದರನ ಮೇಲೆ ಪ್ರೀತಿ’ ತೋರಿಸಿದ್ದಾರೆ. ಎಚ್‌.ಡಿ.ರೇವಣ್ಣ ಅವರ ನಿರ್ವಹಣೆಯ ಲೋಕೋಪಯೋಗಿ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ 15,790 ಕೋಟಿ ಅನುದಾನ ಹಂಚಿಕೆಯಾಗಿದೆ.

ಇದರಲ್ಲಿ ಹೊಸ ರಸ್ತೆಗಳ ಅಭಿವೃದ್ಧಿ ಮಾತ್ರವಲ್ಲದೆ ಹಳೆಯ ರಸ್ತೆ ಮತ್ತು ಸೇತುವೆಗಳಿಗೆ ತೇಪೆ ಹಾಕಲು ಮುಖ್ಯಮಂತ್ರಿಗಳು ಅಸ್ತು ಎಂದಿದ್ದಾರೆ. ಮಂಡ್ಯದ ‘ಕನಗನಮರಡಿ ಬಸ್‌ ದುರಂತ’ದ ಬಳಿಕ ಎಚ್ಚೆತ್ತಿರುವ ಮುಖ್ಯಮಂತ್ರಿಗಳು, ರಸ್ತೆಗಳ ಸುರಕ್ಷತೆಗೆ ಜಾಗ್ರತೆ ವಹಿಸಿದ್ದಾರೆ.

ವಿಶೇಷ ಅಂದರೆ ಕಳೆದ ಸಾಲಿನ ಬಜೆಟ್‌ನಂತೆ ಈ ಬಾರಿ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗೆ ಜಿಲ್ಲಾವಾರು ಹಂಚಿಕೆ ಆಗಿಲ್ಲ. ಇದೂ ಸಹ ರಾಜಕೀಯವಾಗಿ ವಿವಾದದಿಂದ ತಪ್ಪಿಸಿಕೊಳ್ಳುವ ತಂತ್ರಗಾರಿಕೆ ಎನ್ನಬಹುದು. ಇದರಿಂದ ಮುಖ್ಯಮಂತ್ರಿಗಳ ಸೋದರನ ವ್ಯಾಮೋಹ ಎಂಬ ಟೀಕೆಗೂ ಅವಕಾಶ ಕೊಟ್ಟಿಲ್ಲ. ಆಯವ್ಯಯದಲ್ಲಿ ಪ್ರಕಟಿತ ಸಾರ್ವತ್ರಿಕ ಯೋಜನೆಗಳನ್ನು ಆದ್ಯತೆ ಮೇರೆಗೆ ಜಿಲ್ಲಾವಾರು ಕೈಗೆತ್ತಿಕೊಳ್ಳಬಹುದು.

ಶಾಲಾ ಸಂಪರ್ಕ ಸೇತು ಅಡಿ 1317 ಕಿರುಸೇತುವೆ:

ಮಳೆಗಾಲದಲ್ಲಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭದ ವೇಳೆಗೆ ಆ ಪ್ರದೇಶದಲ್ಲಿ ‘ಶಾಲಾ ಸಂಪರ್ಕ ಸೇತು’ ಯೋಜನೆಯಡಿ’ 1,317 ಸಂಖ್ಯೆಯ ಕಿರು ಸೇತುವೆಗಳನ್ನು ನಿರ್ಮಿಸುವ ಯೋಜನೆ ರೂಪಿಸಿದ್ದಾರೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

ಈ ಯೋಜನೆಯ ಘಟ್ಟ-1ರಲ್ಲಿ 3,676 ಕಿ.ಮೀ. ಉದ್ದದ ರಸ್ತೆಗಳನ್ನು 4,500 ಕೋಟಿಗಳಲ್ಲಿ, ಘಟ್ಟ-2ರಲ್ಲಿ 2,633 ಕಿ.ಮೀ. ಉದ್ದದ ರಸ್ತೆಗಳನ್ನು .3,500 ಕೋಟಿಗಳಲ್ಲಿ ಹಾಗೂ ಘಟ್ಟ-3ರಲ್ಲಿ 1,601 ಕಿ.ಮೀ. ರಸ್ತೆಯನ್ನು 2 ಸಾವಿರ ಕೋಟಿಗಳಲ್ಲಿ ಒಟ್ಟಾರೆ 10 ಸಾವಿರ ಕೋಟಿ ವೆಚ್ಚದಲ್ಲಿ 7,940 ಕಿ.ಮೀ. ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಹಣ ಮೀಸಲಿಟ್ಟಿದ್ದಾರೆ. ರಸ್ತೆ ಮತ್ತು ಸೇತುವೆಗಳು ಸುಸ್ಥಿತಿಯಲ್ಲಿ ಇರಬೇಕಾದದ್ದು ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ರಸ್ತೆ ಮತ್ತು ಸೇತುವೆಗಳ ಸುಧಾರಣೆ ಮತ್ತು ನವೀಕರಣ ಕಾಮಗಾರಿಗೆ 5,690 ಕೋಟಿ ನೀಡಲಾಗಿದೆ. ರಸ್ತೆಗಳ ಪಕ್ಕದಲ್ಲಿ ಬರುವ ಕೆರೆಗಳು, ನಾಲೆಗಳು ಹಾಗೂ ಇತರೆ ಜಲಮೂಲಗಳ ಬಳಿ ಅಪಘಾತಗಳನ್ನು ತಡೆಗಟ್ಟಲು ಸುರಕ್ಷತಾ ಬ್ಯಾರಿಯರ್‌ಗಳನ್ನು ಅಳವಡಿಸಲು ಪ್ರಸಕ್ತ ಸಾಲಿನಲ್ಲೇ ಮೊದಲ ಹಂತದಲ್ಲಿ 100 ಕೋಟಿ ಅನುದಾನ ನೀಡಲಾಗಿದೆ.

ರಸ್ತೆ, ಸೇತುವೆ ಅಭಿವೃದ್ಧಿಗೆ ಹಣ ಕಡಿಮೆ

ಈಗ ನಿರ್ಮಾಣ ಬಳಕೆ ಸಾಮಗ್ರಿಗಳ ಬೆಲೆಗಳು ಏರಿಕೆಯಾಗಿವೆ. ಅದಕ್ಕೆ ಅನುಗುಣವಾಗಿ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿ ಮತ್ತು ನವೀಕರಣಕ್ಕೆ ಮೀಸಲಟ್ಟಿರುವ ಅನುದಾನವು ತೀರಾ ಕಲಡಿಮೆ. ಮೊದಲಿನಂತೆ ರಸ್ತೆಗಳ ನಿರ್ಮಾಣ ಸಾಧ್ಯವಿಲ್ಲ. ಇಂದು ಕನಿಷ್ಠ ಒಂದು ಕಿ.ಮೀ. ರಸ್ತೆಗೆ 1ರಿಂದ 3 ಕೋಟಿ ರು. ವೆಚ್ಚವಾಗುತ್ತದೆ. ಹಾಗೆ ರಸ್ತೆ ಬದಿಯ ಕೆರೆ, ನಾಲೆಗಳ ಸುರಕ್ಷತೆಗೆ ‘ಕ್ರಾಶ್‌ ಗಾರ್ಡ್‌’ಗಳ ಅವಳವಡಿಕೆಗೆ ಇನ್ನೂ ಹಣ ಅವಶ್ಯಕತೆ ಇತ್ತು. ರಾಜ್ಯದ ಬಹಳಷ್ಟುಹಳೆಯ ಸೇತುವೆಗಳು ಬಿದ್ದುಹೋಗುವ ಸ್ಥಿತಿಯಲ್ಲಿವೆ. ಸರ್ಕಾರದಲ್ಲಿ ಪ್ರಬಲವಾಗಿರುವವರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಸಿಗುತ್ತದೆ. ಹಾಗಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಕಾಮಗಾರಿಗಳು ರಾಜ್ಯ ವ್ಯಾಪ್ತಿಗೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರೋದಿಲ್ಲ.

-ಎಂ.ಬಿ.ಬಸವರಾಜ್‌, ನಿವೃತ್ತ ಮುಖ್ಯ ಅಭಿಯಂತರ, ಪಿಡಬ್ಲ್ಯುಡಿ

click me!