ಮಾರ್ಚ್ 1 ರಿಂದ ಪಿಯು ಪರೀಕ್ಷೆ, ನಕಲಿ ಪ್ರಶ್ನೆ ಪತ್ರಿಕೆ ಕಂಡರೆ ಏನ್ಮಾಡಬೇಕು?

By Web DeskFirst Published Feb 28, 2019, 8:27 PM IST
Highlights

ಮಾರ್ಚ್ 1 ರಿಂದ  ದ್ವಿತೀಯ ಪಿಯು ಪರೀಕ್ಷೆ  ಆರಂಭವಾಗಲಿದೆ. ಪರೀಕ್ಷೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು ಅಕ್ರಮ ತಡೆಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ.

ಬೆಂಗಳೂರು[ಫೆ. 28]  ಮಾರ್ಚ್ 1 ರಿಂದ 18 ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪ್ರತಿಕೆ ಸೋರಿಕೆ ತಡೆಯಲು ಪಿಯು ಬೋರ್ಡ್ ಸಕಲ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ.

ಒಟ್ಟು 6,73,606 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ 16,544 ವಿದ್ಯಾರ್ಥಿಗಳು ಕಡಿಮೆ ಇದ್ದಾರೆ. 

1,013 ಪರೀಕ್ಷಾ ಮತ್ತು 1,028 ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳನ್ನು ನಿಗದಿ ಪಡಿಸಲಾಗಿದ್ದು  ಪಿಯುನಲ್ಲಿ 34 ವಿಷಯಗಳು ಹಾಗೂ 5 ಎನ್​ಎಸ್​ಕ್ಯೂಎಫ್ ವಿಷಯಗಳ ಪರೀಕ್ಷೆಗಳು ನಡೆಯಲಿದೆ.  ಅಕ್ರಮ ತಡೆಯಲು 2  ಸಾವಿರಕ್ಕೂ ಅಧಿಕ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.

2nd PUC ಪರೀಕ್ಷೆ: ಆಗುಂಬೆ ಘಾಟ್ ರಸ್ತೆ ಸಂಚಾರ ನಿಷೇಧ ದಿನಾಂಕ ಮುಂದೂಡಿಕೆ

ಇನ್ನು ಈ ಬಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಆನ್‌ಲೈನ್ ಪ್ರವೇಶ ಪತ್ರಕ್ಕೆ ಪಿಯು ಬೋರ್ಡ್ ಅನುಮತಿ ನೀಡಿದೆ. ಮೌಲ್ಯಮಾಪನಕ್ಕಾಗಿ ರಾಜ್ಯಾದ್ಯಂತ 54 ಕೇಂದ್ರಗಳನ್ನ ವ್ಯವಸ್ಥೆ ಮಾಡಿಕೊಂಡಿದೆ. ಜೊತೆಗೆ ಪರೀಕ್ಷಾ ಕೇಂದ್ರಕ್ಕೆ ಡಿಜಿಟಲ್ ವಾಚ್‌ನ್ನ ನಿಷೇಧಿಸಿದ್ದು, ಅನಾಲಾಗ್ ವಾಚ್ ಬಳಸಲು ಸೂಚನೆ ನೀಡಿದೆ. ಇದರ ಜೊತೆಗೆ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕಣ್ಗಾವಾಲಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 200 ಮೀಟರ್ ಪ್ರದೇಶದವರೆಗೂ ಅಪರಿಚಿತ ವ್ಯಕ್ತಿಗಳ ಪ್ರವೇಶ ನಿಷೇಧಿಸಿದೆ.

ಒಂದೊಮ್ಮೆ ಪರೀಕ್ಷೆಗೂ ಮೊದಲೇ ಸಿಕ್ಕ ಪ್ರಶ್ನೆಪತ್ರಿಕೆಯನ್ನು ವಿದ್ಯಾರ್ಥಿಗಳು ವಾಟ್ಸ್​ಆಪ್ ಮೂಲಕ ಬೇರೆಯವರಿಗೆ ಕಳುಹಿಸಿದರೆ, ಅಂತಹವರನ್ನು ಬಂಧಿಸಲಾಗುವುದು. ಈ ಮೊದಲು ವಿದ್ಯಾರ್ಥಿಗಳ ಬಂಧನಕ್ಕೆ ಯಾವುದೇ ಅವಕಾಶ ಇರಲಿಲ್ಲ, 2017ರಲ್ಲಿ ಕಾನೂನು ತಿದ್ದುಪಡಿ ಮಾಡಲಾಗಿದೆ. ನಕಲಿ ಪ್ರಶ್ನೆಪತ್ರಿಕೆಗಳು ಸಿಕ್ಕಲ್ಲಿ ಪಿಯು ಸಹಾಯವಾಣಿ- 080 23083900-ಗೆ ದೂರು ನೀಡಲು ಕೋರಲಾಗಿದೆ. 

click me!