ರಾಜಕಾಲುವೆ ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆ: ಸಚಿವ ಕೆ.ಜೆ. ಜಾರ್ಜ್

Published : Sep 13, 2017, 12:50 PM ISTUpdated : Apr 11, 2018, 12:38 PM IST
ರಾಜಕಾಲುವೆ ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆ: ಸಚಿವ ಕೆ.ಜೆ. ಜಾರ್ಜ್

ಸಾರಾಂಶ

ಹೈಕೋರ್ಟ್ ಜಡ್ಜ್, ಇಬ್ಬರು ಮುಖ್ಯ ಎಂಜಿನಿಯರ್ ಸಮಿತಿ ರಚನೆ: ಜಾರ್ಜ್ | ರಾಜಕಾಲುವೆ ಅಭಿವೃದ್ಧಿ ಹೆಸರಿನಲ್ಲಿ ಹಣ ದುರ್ಬಳಕೆ, ಬಿಬಿಎಂಪಿಯ ಇತರೆ ಅಕ್ರಮ ತನಿಖೆ

ಬೆಂಗಳೂರು: ರಾಜಕಾಲುವೆ ಅಭಿವೃದ್ಧಿ ಹೆಸರಿನಲ್ಲಿ ಹಣ ದುರ್ಬಳಕೆ ಮತ್ತು ಬಿಬಿಎಂಪಿಯಲ್ಲಿನ ಇತರ ಅಕ್ರಮ ಕುರಿತು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಇಬ್ಬರು ಮುಖ್ಯಎಂಜಿನಿಯರ್ ಒಳಗೊಂಡ ಸಮಿತಿಯಿಂದ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ನಕಲಿ ಬಿಲ್, ರಾಜಕಾಲುವೆ ಅಕ್ರಮ ಹಾಗೂ ಇತರ ಅವ್ಯವಹಾರಗಳ ಬಗ್ಗೆ ಐಎಎಸ್ ಅಧಿಕಾರಿ ಕಟಾರಿಯಾ ಮತ್ತು ಸಿಡಿಐ ನೀಡಿರುವ ತನಿಖಾ ವರದಿಯನ್ನಾಧರಿಸಿ ಸಮಗ್ರ ತನಿಖೆ ನಡೆಸಲು ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಲಾಗಿದೆ. ಈ ಸಮಿತಿ ಇಂತಿಷ್ಟೇ ಅವಧಿಯಲ್ಲಿ ತನಿಖೆ ನಡೆಸಿ ವರದಿ ಕೊಡಬೇಕೆಂದು ಗಡುವು ನೀಡಿಲ್ಲ. ಆದರೆ ಆದಷ್ಟು ತ್ವರಿತವಾಗಿ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ವಿಶ್ವಾಸವಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 2006ರಿಂದ 2013ರ ವರೆಗೂ ₹664 ಕೋಟಿ ವೆಚ್ಚ ಮಾಡಲಾಗಿತ್ತು. ನಂತರ 2013ರಿಂದ 2015ರ ವರೆಗೂ ₹280 ಕೋಟಿ ವ್ಯಯ ಮಾಡಲಾಗಿದೆ. ನಂತರ 2015ರಿಂದ 2017ರ ವರೆಗೂ ₹711 ಕೋಟಿ ನೀಡಲಾಗಿದೆ. ಇದರಲ್ಲಿ ಬಹುತೇಕ ಹಣ ವೆಚ್ಚವಾಗಿದೆ. ಆದರೂ ರಾಜಕಾಲುವೆ ಸಮಸ್ಯೆ ತಪ್ಪಿಲ್ಲ. ಮಳೆ ಅವಾಂತರ ಹೆಚ್ಚಾಗುತ್ತಿದೆ ಎಂದರೆ ಇದಕ್ಕೆ ಅಕ್ರಮ ಕಾರಣವೇ? ಎನ್ನುವುದು ತಿಳಿಯುತ್ತಿಲ್ಲ. ಹಾಗೇನಾದರೂ ಅಕ್ರಮ ನಡೆದಿದ್ದರೆ, ನ್ಯಾಯಮೂರ್ತಿಗಳ ತನಿಖೆ ನಂತರವಷ್ಟೇ ಅಕ್ರಮ ತಿಳಿಯಬೇಕಾಗುತ್ತದೆ ಎಂದರು.

ರಾಜಕಾಲುವೆ ದುರಸ್ತಿ, ಅಭಿವೃದ್ಧಿಗಾಗಿ 2006ರಿಂದ ಈತನಕ ₹3000 ಕೋಟಿಗೂ ಹೆಚ್ಚಿನ ಹಣ ವ್ಯಯ ಮಾಡಿದ್ದರೂ ಸಮಸ್ಯೆ ಏಕೆ ಪರಿಹಾರವಾಗಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿ ಸಿದ ಸಚಿವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಹಣ ನೀಡಿರಲಿಲ್ಲ. ಈಗ ₹800 ಕೋಟಿ ನೀಡಿದ್ದೇವೆ. ಇದೇ ರೀತಿ ಪ್ರತಿ ವರ್ಷ ₹800 ಕೋಟಿಗಳನ್ನು ನೀಡಿದರೆ ಅನೇಕ ವರ್ಷಗಳ ನಂತರ ಸಮಸ್ಯೆ ಪರಿಹಾರವಾಗಲಿದೆ ಎಂದು ಸಚಿವರು ವಿವರಿಸಿದರು.

ಒಟ್ಟಾರೆ ನಗರದಲ್ಲಿ ರಾಜಕಾಲುವೆಗೆ ಸರ್ಕಾರಗಳು ಮಾಡಿರುವ ವೆಚ್ಚದ ಬಗ್ಗೆ ಸದ್ಯದಲ್ಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ಶ್ವೇತಪತ್ರ ಹೊರಡಿಸಲಾಗುವುದು. ಈ ಮೂಲಕ ಹಿಂದಿನ ಮತ್ತು ಈಗಿನ ಸರ್ಕಾರದ ಪಾತ್ರವನ್ನು ತಿಳಿಸಲಾಗುವುದು ಎಂದು ಜಾರ್ಜ್ ಪ್ರತಿಕ್ರಿಯಿಸಿದರು

ಬೆಂಗಳೂರು ಕಸ ಸಮಸ್ಯೆ ಮಾರ್ಚ್ ವೇಳೆಗೆ ಅಂತ್ಯ

ಬೆಂಗಳೂರಿನಲ್ಲಿ ತಲೆದೋರಿರುವ ಕಸ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಎಲ್ಲಾ ರೀತಿಯ ಕ್ರಮಕೈಗೊಂಡಿದೆ. ಮುಂದಿನ ಮಾರ್ಚ್ ವೇಳೆಗೆ ಎಲ್ಲಾ ಸಮಸ್ಯೆ ಪರಿಹಾರವಾಗಲಿದೆ ಎಂದು ಸಚಿವ ಜಾರ್ಜ್ ಹೇಳಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕಸ ವಿಲೇವಾರಿ ಮಾಫಿಯಾ ಹಿಡಿತದಲ್ಲಿದೆ ಎಂದು ಹೇಳಿದ್ದರು. ಆದರೆ ಅದನ್ನು ಸರಿಪಡಿಸಲು ಯತ್ನಿಸಲಿಲ್ಲ. ಅದೇ ನಮ್ಮ ಸರ್ಕಾರ ಈಗ ಕಸ ಸಮಸ್ಯೆಗೆ ಪರಿಹಾರ ಹುಡುಕಿದೆ. ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ರೈತರಿಗೆ ಕೊಡಲಾಗುತ್ತಿದೆ. ಇದೇ ರೀತಿ ಸುಮಾರು 7 ಕಡೆ ಘಟಕಗಳನ್ನು ಸ್ಥಾಪಿಸಲಾಗಿದೆ. ಕಸ ಹಾಕುವ ತಾಣಗಳನ್ನು ರದ್ದುಗೊಳಿಸಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲಾಗುತ್ತಿದೆ. ಒಟ್ಟಾರೆ ಕಸ ಸಮಸ್ಯೆ ಮಾರ್ಚ್ ವೇಳೆಗೆ ಪರಿಹಾರವಾಗಲಿದೆ ಎಂದು ಪ್ರತಿಕ್ರಿಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಾಸ ಯೋಗ್ಯವಾಗಿತ್ತಾ ಮಂಗಳ ಗ್ರಹ? ನೀರಿನಿಂದ ರೂಪುಗೊಂಡಿರುವ 8 ಅಸಾಮಾನ್ಯ ಗುಹೆ ಪತ್ತೆ
ಚಿತ್ರದುರ್ಗ: ಮದುವೆ ಮಾಡಲಿಲ್ಲವೆಂದು ಜಗಳ ಮಾಡಿ ಅಪ್ಪನನ್ನೇ ಕಬ್ಬಿಣ ರಾಡ್‌ನಿಂದ ಹೊಡೆದು ಕೊಂದ ಮಗ!